ದೊಡ್ಡವರಾದರೆ ಏನು ಬಂತು?
ಕರ್ಜೂರದ ಮರದಂತೆ
ದಾರಿಗನಿಗೆ ನೆರಳಿನಿತೂ ಇಲ್ಲ
ಹಣ್ಣೂ ಬಲು ದೂರ -ಕಬೀರ

ದೊಡ್ಡವರು ಎನ್ನಿಸಿಕೊಂಡರೇನು ಪ್ರಯೋಜನ? ಅವರು ಕರ್ಜೂರದ ಮರದಂತೆ. ಆ ಮರ ದಾರಿಹೋಕರಿಗೆ ನೆರಳನ್ನೂ ನೀಡಲಾರದು, ಹಣ್ಣೂ ಕೈಗೆಟುಕಲಾರದು. ಹಾಗೆಯೇ ಈ ದೊಡ್ಡವರು.. ..! ಎಂಬುದು ಕಬೀರರ ಈ ದೋಹೆಯ ಸಾರ.

ಸಂಪತ್ತಿನಿಂದ, ವಿದ್ಯೆಯಿಂದ, ಅಧಿಕಾರದಿಂದ ದೊಡ್ಡವರಾಗಲು ಸಾಧ್ಯವಿಲ್ಲ. ಬದಲಾಗಿ ಅದರ ಸದ್ಭಳಕೆಯಿಂದ ದೊಡ್ಡವರೆನ್ನಿಸಿಕೊಳ್ಳಲು ಸಾಧ್ಯ. ಎಲ್ಲವನ್ನೂ ಹೊಂದಿದ್ದು ಯಾರಿಗೂ ಉಪಯೋಗವಿರದಂತಿದ್ದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲ. ಅಂತಹ ದೊಡ್ಡತನ ಬೇಡ ಎಂಬುದು ಕಬೀರರ ಅಭಿಮತ.

RELATED ARTICLES  ಶ್ರೀಧರರು ಶ್ರೀ ವೆಂಕಟರಮಣ ಶಾಸ್ತ್ರಿಯವರಿಗೆ ಸಂಸ್ಕೃತದಲ್ಲಿ ಬರೆದ ಪತ್ರ

ನಿಜವಾಗಿ ದೊಡ್ಡವರೆನ್ನಿಸಿಕೊಳ್ಳಲು ಹೃದಯವಂತಿಕೆ ಮುಖ್ಯ. ಯಾರಿಗೆ ಬಡವರ ಕಷ್ಟ ಕಾಣುತ್ತದೋ, ಯಾರಿಗೆ ಇನ್ನೊಬ್ಬರ ನೋವು ಅರ್ಥವಾಗುತ್ತದೋ, ಯಾರಲ್ಲಿ ಮಾನವೀಯತೆ ಸದಾ ಜಾಗೃತವಾಗಿರುತ್ತದೋ, ಯಾರಲ್ಲಿ ಶ್ರೀಮಂತಿಕೆಯೊಂದಿಗೆ ಹೃದಯವಂತಿಕೆ ಇರುತ್ತದೋ, ಯಾರಿಗೆ ಗುರು,ಹಿರಿಯರು,ದೇವರ ಕುರಿತು ಭಕ್ತಿ ಶೃದ್ಧೆ ಇರುತ್ತದೋ, ಯಾರಲ್ಲಿ ವಿದ್ಯೆಯೊಂದಿಗೆ ವಿನಯವಿರುತ್ತದೋ ಅಂತವರು ಎಲ್ಲರ ದೃಷ್ಟಿಯಲ್ಲಿ ದೊಡ್ಡವರೆನ್ನಿಸಿಕೊಳ್ಳುತ್ತಾರೆ.

RELATED ARTICLES  ಪ್ರಕೃತಿಯ ಸಂದೇಶ

ಈ ಯಾವ ಒಳ್ಳೆಯ ಅಂಶಗಳನ್ನು ಹೊಂದಿರದೇ ಕೇವಲ ಹಣ,ವಿದ್ಯೆ,ಅಧಿಕಾರ ಇದೆಯೆಂದು ದೊಡ್ಡವನು ನಾನು ಎಂದು ಅಹಂಕಾರ ಪಟ್ಟರೆ ಅದು ದೊಡ್ಡವರ ದಡ್ಡತನ ಎನ್ನಿಸಿಕೊಳ್ಳುತ್ತದೆ. ಹಾಗಾಗಿ ಮೊದಲು ಹೃದಯ ವಂತರಾಗಿ ಎಂಬುದು ಈ ದೋಹೆಯ ಸಂದೇಶ.

ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ…………

ಅಡ್ಡಗೋಡೆಯನೆಲ್ಲ ಕುಟ್ಟಿ ಕೆಡಹುತ ನಡೆದು
ದೊಡ್ಡವನು ನೀನಾಗು ದಡ್ಡನಾಗದೆಯೇ
ಬಡ್ಡಿ ಸಹಿತದಿ ಅದುವು ತಿರುಗಿ ದೊರೆವುದು ನಿನಗೆ
ಸೆಡ್ಡುಹೊಡೆಯಲೊ ನೀನು-ಭಾವಜೀವಿ

ಡಾ.ರವೀಂದ್ರ ಭಟ್ಟ ಸೂರಿ