ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಯುತ ಸುರೇಶ ಶೆಟ್ಟಿ ಹೊಸಾಕುಳಿ
ಬರೆಯುವ ಲೇಖನಿಗಿಂತ, ಭಾಷಣ ಮಾಡುವ ಬಾಯಿಗಿಂತ, ದುಡಿಯುವ ಮತ್ತು ನೀಡುವ ಕೈಗಳೇ ಶ್ರೇಷ್ಠ ಎನ್ನುವುದು ಮನಸ್ಸಿಗೆ ಆಗಾಗ ಬರುವ ವಿಷಯ. ಆದರೂ ಅವರವರ ಮಿತಿಯಲ್ಲಿ ಅವರವರಿಗೆ ಸಾಧ್ಯವಾದುದನ್ನು ಮಾಡುವುದರಲ್ಲೇ ಆತ್ಮತೃಪ್ತಿ ಎನ್ನುವುದು ಸಿಗುತ್ತದೆ. ಯಾರೋ ಮಾಡಿದರು ಎಂದು ನಾವು ಮಾಡುವುದೂ ಅಲ್ಲ. ಯಾರೋ ಮಾಡಿದ್ದನ್ನೇ ನಾವು ಮಾಡಬೇಕೆನ್ನುವುದೂ ಇಲ್ಲ. ಅವರವರ ವೃತ್ತಿ ಪ್ರವೃತ್ತಿಗಳ ಜೊತೆ ನಾಲ್ಕಾರು ಜನರಿಗೆ ಬೇಕಾದವರಾಗಿ ಬದುಕುವುದರಲ್ಲಿ ಸಾರ್ಥಕತೆಯಿದೆ. ವ್ಯಕ್ತಿಯ ಸೌಜನ್ಯವೇ ದೊಡ್ಡದು ಎನ್ನುವುದಕ್ಕೆ ನಮ್ಮೂರ ಪ್ರಥಮ ಪ್ರಜೆ ಸುರೇಶ ಶೆಟ್ಟರು ಉತ್ತಮ ಉದಾಹರಣೆ. ನನ್ನನ್ನು ಅಪಾರವಾಗಿ ಪ್ರೋತ್ಸಾಹಿಸುವ ಸುರೇಶ ಶೆಟ್ಟರ ಬಗೆಗೆ ಬರೆಯದೇ ಹೋದರೆ ನಾನು ಕೃತಘ್ನನಾದೇನು.
ಸುರೇಶ ಶೆಟ್ಟರು ನಮ್ಮ ಹೊಸಾಕುಳಿ ಗ್ರಾಮ ಪಂಚಾಯತದ ಪ್ರಸ್ತುತ ಅಧ್ಯಕ್ಷರು. ನಮ್ಮೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸದಸ್ಯರು. ಪ್ರಾಮಾಣಿಕ ಅಡಿಕೆ ವ್ಯಾಪಾರಸ್ಥರು. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ great human being.
ದುಡ್ಡು ಮಾಡುವ ಹವ್ಯಾಸ ಅಂಟಿಕೊಂಡಿತು….. ಅಂತಾದರೆ ತಲೆ ಮತ್ತೆಲ್ಲೂ ಓಡುವುದಿಲ್ಲ. ವ್ಯಾಪಾರ, ಬಂಗಾರ, ಭೂಮಿ ಖರೀದಿ, share business, insurance policy, ಬಡ್ಡಿಗೆ ಸಾಲ ನೀಡುವುದು, ಹೀಗೆ ಇಡೀ ದಿನ ಅವರು ಅದರಲ್ಲೇ ಮುಳುಗಿ ತಮ್ಮ ಮುಂದಿನ ತಲೆಮಾರಿಗೆ ಕೂಡಿಡುವುದರಲ್ಲೇ ಜೀವ ಮಾನ ಕಳೆದು ಬಿಡುತ್ತಾರೆ. ಕುಳಿತು ಉಣ್ಣುವುದಕ್ಕೆ ಸಕಲ ವ್ಯವಸ್ಥೆಯನ್ನೂ ತಮ್ಮ ಮಕ್ಕಳಿಗಾಗಿ ಮಾಡಿಟ್ಟು ಕೊನೆಗೂ ಮಕ್ಕಳ ಕಣ್ಣಲ್ಲಿ ಮಾತ್ರ ಶ್ರೇಷ್ಠ ಎನಿಸಿಕೊಳ್ಳುತ್ತಾರೆ….. ವಿನಹ ಮತ್ಯಾರೂ ಅವರಿಗೆ ಬೇಕಾಗಿರುವುದಿಲ್ಲ. ಕೆಲವರನ್ನಂತೂ ಕೊನೆಗೆ ಮಕ್ಕಳೂ ವಿರೋಧಿಸುತ್ತಾರೆ. ಆದರೆ ಆ ಎಲ್ಲಾ ದುಡ್ಡು ಮಾಡುವ ಸಾಧ್ಯತೆಗಳಿದ್ದೂ ಅದನ್ನು ತಾನು ಸಮಾಜಕ್ಕೂ ನೀಡಬೇಕೆನ್ನುವ, ಬಡವರ, ಸಹಾಯ ಯಾಚಿಸುವವರ ಕಷ್ಟಕ್ಕೆ ತಕ್ಷಣ ಸ್ಪಂದಿಸುವ ಒಬ್ಬ ಸಜ್ಜನ ಸ್ನೇಹಜೀವಿ ನಮ್ಮ ಸುರೇಶ ಶೆಟ್ಟರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಡ್ಡೇಬಾಳು ಸುರೇಶ ಶೆಟ್ಟರ ಊರು. ಅನೇಕ ವರ್ಷಗಳಿಂದ ಸುತ್ತಮುತ್ತಲಿನ ಅಡಿಕೆ ಬೆಳೆಗಾರರಿಂದ ಅಡಿಕೆ ಖರೀದಿಸಿ ಅದನ್ನು ಹೊರ ರಾಜ್ಯಗಳಿಗೂ ರಫ್ತು ಮಾಡುವ ಸುರೇಶ ಶೆಟ್ಟರು ಕಡು ಬಡತನದಿಂದ ಮೇಲೆದ್ದು ಬಂದ ಜನ ಅಂತ ನಮ್ಮ ತಂದೆಯವರು ಆಗಾಗ ಹೇಳುತ್ತಿರುತ್ತಾರೆ. ಒಪ್ಪತ್ತು ಉಂಡವ ಯೋಗಿ ಎರಡೊತ್ತು ಉಂಡವ ಭೋಗಿ ಮೂರೊತ್ತೂ ಉಂಬವನ ಹೊತ್ಕೊಂಡು ಹೋಗಿ….ಎಂಬಂತೆ ತಾನು ಒಪ್ಪತ್ತು ಉಂಡು ಇಂದು ಹಲವಾರು ಜನರಿಗೆ ಎರಡೊತ್ತು ಊಟ ಹಾಕಿಸುವಷ್ಟು ತಾಕತ್ತು ಬೆಳೆಸಿಕೊಂಡ ಸುರೇಶ ಶೆಟ್ಟರು ಸಹೃದಯಿ ಸುಗುಣವಂತ.
ರಾಜನನ್ನು ಮೆಚ್ಚಿಸುವವ ದುರ್ಮತಿ ಅಂತ ಸುಭಾಷಿತವೊಂದು ಹೇಳುತ್ತದೆ. ರಾಜಾನಂ ಮಾನ್ಯತೇ ಪ್ರೀತಂ ಭೂಪಾಲಸ್ಯ ಸದುರ್ಮತಿಃ…..ಅಂತ. ಹಾಗೆ ನಮ್ಮೂರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಬಗೆಗೆ ಬರೆದು ಮುಂದೊಂದು ದಿನ ಉಪಕಾರ ಗಿಟ್ಟಿಸಿಕೊಳ್ಳುವ ಇರಾದೆಯೂ ನನ್ನದಲ್ಲ. ಅವರಿಗೂ ಅದರಿಂದ ತಲೆಯ ಮೇಲೆ ಎರಡು ಕೋಡು ಮೂಡುವುದೂ ಇಲ್ಲ. ತಾನು ಅಧ್ಯಕ್ಷರಾಗಿದ್ದೂ ಹಿರಿಯರು ಯಾರಾದರೂ ಅವರ ಚೇಂಬರ್ ಪ್ರವೇಶಿಸಿದರೆ ಎದ್ದು ನಿಂತು ಕೈ ಮುಗಿದು ಸ್ವಾಗತಿಸುವ ಅವರ ಸೌಜನ್ಯ ಅಪರೂಪವಾದದ್ದು. ಅಬಾಲ ವೃದ್ಧರನ್ನೂ ಮಾತನಾಡಿಸಿ ಅವರ ಜೊತೆ ಸ್ಪಂದಿಸುವ ಸುರೇಶ ಶೆಟ್ಟರು ಸಮಾಜ ಸೇವಕರೇ ಸರಿ. ಅವರ ಹತ್ತಿರ ಇಂಥದ್ದೊಂದು ಕೆಲಸ ಆಗಬೇಕೆಂದರೆ ಅದು ಅವರ ವ್ಯಾಪ್ತಿಯಲ್ಲಿ ಯಾರಿಗೂ ತೊಂದರೆ ಆಗದೇ ಆಗುವುದಾದರೆ ಕೈಯಲ್ಲಿ ಪೈಸಾ ಮುಟ್ಟದೇ ಆ ಕೆಲಸ ಮಾಡಿಕೊಡುತ್ತಾರೆ. ಬೇಕಾದರೆ ಅವರೇ ಕೈಯೆತ್ತಿ ಕೊಡುತ್ತಾರೆ.
ಊರಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ, ಶಾಲೆಯ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು ಇರಲಿ, ಯುವಕರು ಟೂರ್ನಮೆಂಟ್ ಅದೂ ಇದೂ ಅಂತ ಸಂಘಟಿಸಲಿ ಸುರೇಶ ಶೆಟ್ಟರು ದೊಡ್ಡ ಮೊತ್ತದ ಸಹಾಯ ನೀಡಿ ತಾನು ಏನೂ ಅಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತಾರೆ. ತನ್ನ ಹೆಸರನ್ನು ಹತ್ತಾರು ಬಾರಿ ಮೈಕಿನಲ್ಲಿ ಕೂಗಿ ಹೇಳಬೇಕೆಂದು ಬಯಸುವವರೂ ಅಲ್ಲ ಅವರು.
ನಾನು ಒಮ್ಮೆ ಗಾನ- ದಾನ- ಯಾನ ಕಾರ್ಯಕ್ರಮ ಮಾಡಿ 100 ಬಡ ವಿದ್ಯಾರ್ಥಿಗಳಿಗೆ ನಾನೂ English ಕಲಿಯಬೇಕು ಸರ್…. ಎಂಬ ಪುಸ್ತಕ ಕೊಡಲು ಉತ್ಸುಕನಾಗಿದ್ದೆ. ಸ್ನೇಹಿತರೂ ನಮ್ಮ ಗ್ರಾಮ ಪಂಚಾಯತ ಅಧ್ಯಕ್ಷರೂ ಆದ ಸುರೇಶ ಶೆಟ್ಟರಿಗೆ ಆಮಂತ್ರಿಸಿದೆ. ಆದರೆ ಅವರು ಆ ಸಂದರ್ಭಕ್ಕೆ ಉತ್ತರ ಪ್ರದೇಶ ಪ್ರಯಾಣಕ್ಕೆ ಹೊರಟಿದ್ದರು. ನಾನು ಊರಿನಲ್ಲಿಯೇ ಇರುವುದಾದರೆ ಬನ್ನಿ ನನಗೆ ನೀವು ಬಂದರೆ ಬಹಳ ಖುಷಿಯಾಗುತ್ತದೆ ಎಂದು ಹೃದಯ ಪೂರ್ವಕವಾಗಿ ಹೇಳಿದೆ. “ಸಂದೀಪ ಸರ್….. ನಾನು ಇಲ್ಲೇ ಇದ್ದರೆ ಖಂಡಿತ ಮುಂದಾಗಿ ಬರುತ್ತಿದ್ದೆ ಆದರೆ ಪ್ರಯಾಣ ಮುಗಿಸಿ ಬಂದ ತಕ್ಷಣ ನಿಮ್ಮನ್ನು ಕಾಣಲು ಬಂದೇ ಬರುತ್ತೇನೆ. ನೀವು ಹೇಗೆ ಕಾರ್ಯಕ್ರಮ ಸಂಘಟಿಸಿದ್ದೀರಿ ಎಂದು ಕೇಳಬೇಕು ನನಗೆ…..” ಎಂದರು. ಅಷ್ಟು ಹೇಳಿ ಸುಮ್ಮನಾಗಲಿಲ್ಲ ಅವರು ಸಂದೀಪ ಸರ್ ನನ್ನ ಸಲುವಾಗಿ 25 ಮಕ್ಕಳಿಗೆ ಪುಸ್ತಕ ಕೊಡಿ….ಎಂದರು. ಬರೀ ಬಾಯ್ಮಾತಿಗಷ್ಟೇ ಹೇಳದೇ ಹೊರ ರಾಜ್ಯದ ಪ್ರವಾಸ ಮುಗಿಸಿ ಬಂದವರು ನೇರ ನಮ್ಮ ಮನೆಗೇ ಬಂದು ಚಹಾ ಕುಡಿದು ಕಾರ್ಯಕ್ರಮ ಹೇಗಾಯಿತೆಂದು ಕೇಳಿ ನನ್ನ ಉಳಿದ ಪುಸ್ತಕಗಳನ್ನೂ ತಮ್ಮ ಮನೆಯವರಿಗಾಗಿ ಒಯ್ದರು. ಅರೆಕ್ಷಣ ಬಿಡುವಿಲ್ಲದ ಮನುಷ್ಯನೊಬ್ಬ ಈ ರೀತಿ ಸ್ಪಂದಿಸುವ ಪರಿ ನನಗೆ ಅವರ್ಣನೀಯ ಅನುಭವ ಉಂಟು ಮಾಡಿತು. ಒಂದೇ ಒಂದು ಪುಸ್ತಕವನ್ನೂ ಕೊಂಡು ಓದದೇ ನಿಮ್ಮ ಎಲ್ಲಾ ಪುಸ್ತಕಗಳನ್ನು PDF ಮಾಡಿ wats app ಗೆ ಹಾಕಿ ನಾನು ಈಗ ಖಾಲಿ ಇದ್ದೇನೆ… ಓದಬೇಕು…. ಎನ್ನುವವರ ಮುಂದೆ ಇಂಥದ್ದೊಂದು ಪ್ರೋತ್ಸಾಹಿಸುವ ಜೀವ ನನಗೆ ವಿಶೇಷವಾಗಿ ಕಾಣುತ್ತದೆ.
ಸಂತೇಗುಳಿ ಎಂಬ ಹೆಸರಷ್ಟೆ ಇತ್ತು ನಮ್ಮೂರಿಗೆ. ಆದರೆ ಅಲ್ಲಿ ಸಂತೆಯಿರಲಿಲ್ಲ. ಸೋಮವಾರ ಸಂತೆ ಪ್ರಾರಂಭಿಸಿ ನಮ್ಮೂರ ಜನಕ್ಕೆ ತರಕಾರಿಗಾಗಿ ದೂರ ಅಲೆಯುವುದನ್ನು ತಪ್ಪಿಸಿದ ಕೀರ್ತಿ ಅವರದ್ದು. ತಾನು ದುಡಿದಿದ್ದನ್ನು ಸ್ವಲ್ಪ ಮಾತ್ರವಾದರೂ ಸಮಾಜಕ್ಕೆ ನೀಡಬೇಕು. ಅದರಿಂದ ಅನೇಕರು ನಮ್ಮನ್ನು ಹರಸುತ್ತಾರೆ ಎನ್ನುವ ಅವರ ಔದಾರ್ಯ ಎಷ್ಟು ಜನರಿಗೆ ಇರುತ್ತದೆ ಹೇಳಿ?!
ಕೆಲವೇ ದಿನಗಳ ಹಿಂದೆ ನನಗೊಂದು ರಾಜ್ಯಮಟ್ಟದ ಪುರಸ್ಕಾರ ಬಂತು. ಸನ್ಮಾನ ಸ್ವೀಕರಿಸಿ ಮನೆಗೆ ಮರಳಿದ ಮಾರನೇ ದಿನವೇ ನನಗೆ ಅಧ್ಯಕ್ಷರು ಫೋನಾಯಿಸಿದರು…… ನಾಳೆಯೇ ನಾವು ಚಿಕ್ಕದೊಂದು ಸಮಾರಂಭ ಮಾಡಿ ನಿಮಗೊಂದು ಅಭಿನಂದನೆ ಸಲ್ಲಿಸುವವರಿದ್ದೇವೆ…. ಹೊಸಾಕುಳಿಯ ಕೀರ್ತಿಯನ್ನು ಹೊಸಪೇಟೆಯ ತನಕ ಒಯ್ದವರು ನೀವು ಎಂದು ನನ್ನನ್ನು ಕರೆದು ನಾನು ಕಲಿತ ಶಾಲೆಯಲ್ಲಿಯೇ ಸಾರ್ವಜನಿಕರೆದುರು ಆತ್ಮೀಯವಾಗಿ ಗೌರವಿಸಿದರು. ಇದು ನನಗೆ ಸಿಕ್ಕ ಅತ್ಯುನ್ನತ ಗೌರವ ಎಂದೆನಿಸಿತು.
ಸುರೇಶ ಶೆಟ್ಟರು ನನ್ನನ್ನು ಮಾತ್ರ ಹೀಗೆ ಕಾಣುವವರಲ್ಲ. ನಮ್ಮ ಊರಿನ ದೇವಸ್ಥಾನದ ಕಾರ್ಯಕ್ರಮಗಳಿರಲಿ, ಭಜನಾ ಸಪ್ತಾಹಗಳಿರಲಿ, ಯಕ್ಷಗಾನ, ಸಂಗೀತ, ಕ್ರೀಡಾ ಚಟುವಟಿಕೆ ಯಾವುದೇ ಇರಲಿ ಅದು ನಮ್ಮೂರಿನ ಕಾರ್ಯಕ್ರಮ ಎಂದೇ ಮುಂದಾಗಿ ಸ್ಪಂದಿಸುತ್ತಾರೆ. ಎಷ್ಟೇ ಅವಸರದಲ್ಲಿದ್ದರೂ ನಾನೊಮ್ಮೆ ಕಂಡರೆ ನಗುಬೀರಿ ಮಾತನಾಡಿಸದೇ ಹೋಗುವ ಜನವೇ ಅಲ್ಲ ಅವರು.
ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸ್ನೇಹಿತರಿದ್ದಾರೆ. ಅವರಿಂದ ಉಪಕೃತರಾದವರಿದ್ದಾರೆ. ಅವರ ಗ್ರಾಹಕರಿದ್ದಾರೆ….ಎಲ್ಲರಿಗೂ ಅವರು ಬೇಕಾದವರಾಗಿಯೇ ಇದ್ದಾರೆ. ದಿನಕ್ಕೊಂದು ಧಿರಿಸು ಧರಿಸಿ ಹೋಗಬಲ್ಲ ಸಾಮರ್ಥ್ಯವನ್ನು ದೇವರು ಅವರಿಗೆ ಕೊಟ್ಟಿದ್ದಾನೆ ಆದರೆ ನಮ್ಮ ಸುರೇಶ ಶೆಟ್ಟರ ನಡೆ, ನುಡಿ ಬಹಳ ಸರಳ.
ಕೊರೋನಾ ಬಂದು lock down ಘೋಷಿಸಿದ ಕೆಲವೇ ದಿನಗಳಲ್ಲಿ ಊರಿನಲ್ಲೊಂದು Wats app ಗ್ರೂಪ ರಚಿಸಿ ಪ್ರತಿ ಮನೆ ಮನೆಗಳಿಗೂ ತರಕಾರಿ, ದಿನಸಿ ಯೋಗ್ಯ ದರದಲ್ಲಿ ಸಿಗುವ ವ್ಯವಸ್ಥೆ ಅವರಿಂದ ಸಾಧ್ಯವಾಯ್ತು. ತಾನೂ ಕುಟುಂಬ ಸಮೇತ ತೆರಳಿ ಅನೇಕ ಕುಟುಂಬಕ್ಕೆ ತನ್ನ ಸ್ವಂತ ದುಡಿಮೆಯ ಹಣದಿಂದ ದಿನಸಿ ವಿತರಿಸಿದರು. ಹೀಗಾಗಿ ಸಂಕಷ್ಟದ ದಿನಗಳೂ ನಮಗೆ ಭಾರ ತಗ್ಗಿಸಿದ್ದು ಸುಳ್ಳಲ್ಲ. ನನ್ನ ಬರಹಗಳ ಅಪ್ಪಟ ಅಭಿಮಾನಿ ಅವರು.
ಮನ ಮೆಚ್ಚಿದ ಮಡದಿ, ವಿದ್ಯಾವಂತ ಮಗ, ಮಗಳು, ಚಂದದ ಮನೆ, ಸ್ವರ್ಗ ಸದೃಶ ಜೀವನ ಅವರ ಶ್ರಮಕ್ಕೆ ಭಗವಂತನಿತ್ತ ಅನುಗ್ರಹ. ಹಿರಿಕಿರಿಯರನ್ನು ಅಪಾರ ಅಕ್ಕರೆಯಿಂದಲೇ ಮಾತನಾಡಿಸುವ ಸುರೇಶ ಶೆಟ್ಟರು ನನ್ನ ಅಭಿಮಾನದ ಪುಟಗಳಲ್ಲಿ ಅಚ್ಚೊತ್ತಿದವರು. ನನ್ನನ್ನು ಗೌರವಿಸುವ ಅವರಿಗೆ ಅದನ್ನಲ್ಲದೇ ಬೇರೆನನ್ನು ನೀಡಿಯೇನು ನಾನು?! ಅವರು ಅಧ್ಯಕ್ಷರಾಗಿ ಇದ್ದರೂ ಸೈ….ಇಲ್ಲದಿದ್ದರೂ ಸೈ ನನ್ನ ಅಂತರಂಗ ಅವರಿಗಾಗಿ ಮಿಡಿಯುತ್ತದೆ. ನನ್ನ ನಿತ್ಯ ಪ್ರಾರ್ಥನೆಯ ಒಂದು ಭಾಗ ಅವರು. ಅವರಿಗೆ ಜಯವಾಗಬೇಕು. ಜಯವಾಗುತ್ತಲೇ ಇರಬೇಕು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸುರೇಶ ಶೆಟ್ಟರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಸುರೇಶ ಶೆಟ್ಟರಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ