ಕಾಗೆಯ ಕಂಡರೆ ಓಡಿಸುವರು
ಕೋಗಿಲೆಯನು ನೀ ನೋಡು
ಮಧುರ ನಿನಾದವ ಕೇಳಿಸುತ.
ಜಗವ ಗೆದ್ದಿತಲ್ಲ- ಕಬೀರ
ಕಾಗೆಯನ್ನು ಕಂಡರೆ ಎಲ್ಲರೂ ಓಡಿಸುತ್ತಾರೆ. ಆದರೆ ಕೋಗಿಲೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ತನ್ನ ಮಧುರವಾದ ಸ್ವರದಿಂದ ಅದು ಇಡೀ ಜಗತ್ತನ್ನೇ ಗೆದ್ದಿದೆ. ಹಾಗೆಯೇ ನಾವು ಮಧುರವಾದ ಮಾತಿನಿಂದ ಜಗತ್ತನ್ನೇ ಗೆಲ್ಲಬಹುದು. ಎಂಬುದು ಕಬೀರರ ಅಭಿಮತ.
ಕಾಗೆ ಹಾಗೂ ಕೋಗಿಲೆ ರೂಪದಲ್ಲಿ ಒಂದೇ, ಆದರೆ ಕಾಗೆಯದು ಕರ್ಕಶ ಸ್ವರ ಕೋಗಿಲೆಯದು ಮಧುರ ಸ್ವರ. ಕೋಗಿಲೆ ತನ್ನ ಮಧುರ ನಿನಾದದಿಂದ ಎಲ್ಲರ ಮನ ಗೆದ್ದರೆ ಕಾಗೆಯನ್ನು ಎಲ್ಲರೂ ದೂರವಿಡುತ್ತಾರೆ. ಹಾಗೆಯೇ ಸಂಸ್ಕಾರವಿಲ್ಲದ ಮಾತು ನಮ್ಮನ್ನು ಸಮಾಜದಿಂದ ದೂರವಿಡುತ್ತದೆ. ಯಾರು ಸಂಸ್ಕಾರಹೀನರಂತೆ ಮಾತನಾಡುತ್ತಾರೋ ಅಂಥವರನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಯಾರ ಮಾತು ಸಂಸ್ಕಾರ ಪೂರ್ಣವಾಗಿರುತ್ತದೋ ಕೇಳಲು ಹಿತವಾಗಿರುತ್ತದೋ ಅಂಥವರನ್ನು ಸಮಾಜ ಗುರುತಿಸುತ್ತದೆ. ಗೌರವ ಭಾವದಿಂದ ಕಾಣುತ್ತದೆ ಹಾಗಾಗಿ ಮಾತು ಮುತ್ತಿನಂತಿರಬೇಕು. ಎಂಬುದು ಈ ದೋಹೆಯ ಭಾವಾರ್ಥ.
ಅದಕ್ಕೇ ಪ್ರಾಜ್ಞರು ಹೇಳಿದ್ದು ಹೊನಲಿನಂತಿರೆ ಮಾತು ಮನವೆರಡು ಬೆಸೆಯುವುದು ಅಂತ. ಮಾತು ಮನಸ್ಸುಗಳ ನಡುವಿನ ಸೇತುವೆಯಾಗಬೇಕು ಅದು ಗೋಡೆಯಾಗಬಾರದು ನಮ್ಮ ಮಾತು ಮತ್ತೊಬ್ಬರ ಮನ ನೋಯಿಸುವುದು ಬೇಡ ಬದಲಾಗಿ ಮನ ತುಂಬುವಂತಿರಲಿ.
ಮಾತಿನ ಕುರಿತು ಕವಿವಾಣಿಯೊಂದು ಹೇಳಿದ್ದು ಹೀಗೆ…………………………..
ಅನ್ಯರಾ ಗುಣವನ್ನು ಅರಿಯದೆಯೆ ನೀನೆಂದು
ಮುನ್ನ ನಿಂದಿಸಲದುವು ನಿನಗೆ ತರವಲ್ಲ.
ಚೆನ್ನವದು ಅರಿಯುವುದು ಮಾತನಾಡುವ ಮುನ್ನ
ಚಿನ್ನಒಪ್ಪುದು ಮಾತು -ಭಾವಜೀವಿ.
✍️ ರವೀಂದ್ರ ಭಟ್ಟ ಸೂರಿ