ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ರಾಜೇಶ ಭಂಡಾರಿ ಗುಣವಂತೆ

ನಾಯಕನಾಗಿ ಪಾತ್ರ ಮಾಡುವುದಾದರೆ ಡಾ|| ರಾಜಕುಮಾರರನ್ನು ಒಮ್ಮೆ ನೋಡಬೇಕು. ಖಳನಾಯಕನಾಗಿ ಪಾತ್ರ ನಿರ್ವಹಿಸುವುದಾದರೆ ವಜ್ರಮುನಿಯನ್ನೊ…. ಅಮರೀಶ ಪುರಿಯನ್ನೊ ಒಮ್ಮೆ ನೋಡಬೇಕು. ನಾಯಕನ ಪಾತ್ರ ಒಬ್ಬನಿಗೆ ಹೊಂದಿದರೆ ಮತ್ತೊಬ್ಬನಿಗೆ ಖಳನಾಯಕನ ಪಾತ್ರ ಹೊಂದುತ್ತದೆ. ಆದರೆ ಎರಡೂ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಒಬ್ಬ ಯುವ ಬಡಗುತಿಟ್ಟು ಕಲಾವಿದನೊಂದಿಗೆ ನಾನಿಲ್ಲಿ ಬಂದಿದ್ದೇನೆ. ರಾಜೇಶ ಭಂಡಾರಿ ಗುಣವಂತೆ ಇವರು ನನ್ನ ಇಂದಿನ ಅಕ್ಷರ ಅತಿಥಿ.
ಮಹಾನ್ ಮಹಾನ್ ಸಾಧನೆ ಮಾಡಿದ ಎಲ್ಲಾ ಯಕ್ಷಗಾನ ಕಲಾವಿದರನ್ನೂ ಗೌರವಪೂರ್ವಕವಾಗಿ ಕಾಣುತ್ತಾ ರಂಗದಲ್ಲಿ ಶ್ರಮವಹಿಸುವ ಉತ್ಸಾಹಿ ಯುವಕರಿಗೆ ನಾಲ್ಕಕ್ಷರ ಬರೆದು ಪ್ರೋತ್ಸಾಹ ನೀಡಬೇಕೆನ್ನುವ ಬಯಕೆ ನನ್ನದು. ಇದು ಅವರಿಗೆ ಮುಂದೂ ಯಕ್ಷಗಾನ ರಂಗಸ್ಥಳದಲ್ಲಿ ತನ್ನನ್ನು ಮೆಚ್ಚುವ ಸಾವಿರಾರು ಅಭಿಮಾನಿಗಳಿದ್ದಾರೆ ಎಂದು ಸ್ಫೂರ್ತಿ ನೀಡುವುದರ ಜೊತೆಗೆ ಮತ್ತೆ ಹೊಸದನ್ನು ಆವಿಷ್ಕರಿಸುವುದಕ್ಕೆ ಹುಮ್ಮಸ್ಸು ತುಂಬಬಲ್ಲದೆನ್ನುವ ಆಶಾವಾದ ನನ್ನದು.
‌‌‌‌ರಾಜೇಶ ಭಂಡಾರಿಯವರು ನನಗೆ ತುಂಬಾ ಇಷ್ಟದ ಕಲಾವಿದ. ಖಳನಾಯಕನ ಪಾತ್ರ ಮಾಡಿದಾಗೆಲ್ಲಾ ನನಗೆ ಅವರ ಮೇಲೆ ಕೆಟ್ಟ ಕೋಪ ಬರುತ್ತದೆ. ನನ್ನೊಳಗೆ ಸಿಟ್ಟು ಬಂತೆಂದರೆ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆಂದು ನಾನು ಭಾವಿಸುತ್ತೇನೆ. ಬಡಗುತಿಟ್ಟಿನ ಇತ್ತೀಚಿನ ಯುವ ಕಲಾವಿದರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲ ಯುವೋತ್ಸಾಹಿ ನಮ್ಮ ರಾಜೇಶ ಭಂಡಾರಿಯವರು. ಕಣ್ಣು ಕೋರೈಸುವ ನೃತ್ಯ, ಔಚಿತ್ಯಪೂರ್ಣವಾದ ಮಾತುಗಾರಿಕೆ, ಸಮಯೋಚಿತ ಮುಖವರ್ಣಿಕೆ, ಇವೆಲ್ಲವುಗಳಿಂದ ರಾಜೇಶ ಅವರು ತುಂಬಾ ಆಪ್ತವಾಗುತ್ತಾರೆ.
‌‌‌‌‌‌‌ ಒಂದು ಕಾಲಕ್ಕೆ ಯಾಜಿಯವರು ಸಾಲಿಗ್ರಾಮ ಮೇಳದಿಂದ ತಾತ್ಕಾಲಿಕವಾಗಿ ನಿವೃತ್ತಿ ಬಯಸಿದಾಗ ಆ ಮೇಳದ ಯುವ ಕಲಾವಿದರೇ ಅದನ್ನು ಸಮರ್ಥವಾಗಿ ನಡೆಸಿದ್ದನ್ನು ನಾವು ಅಭಿಮಾನಿಗಳು ಇಂದಿಗೂ ಮರೆಯುವುದಿಲ್ಲ. ರಾಜೇಶ ಹಾಗೂ ಚಂದ್ರಹಾಸರ ಜೋಡಿ ರಂಗಸ್ಥಳಕ್ಕೆ ಪ್ರವೇಶ ಮಾಡಿತೆಂದರೆ ಅದೊಂದು ಹೊಸ ಝಲಕ್ ನಮ್ಮೆದುರು ತೆರೆದುಕೊಳ್ಳುತ್ತದೆ. ಒಬ್ಬರನ್ನೊಬ್ಬರು ಮೀರಿಸುವಂತೆ ಅವರು ನೃತ್ಯ ಮಾಡುತ್ತಿದ್ದರೆ ಮೈಮನ ರೋಮಾಂಚನಗೊಳ್ಳುತ್ತದೆ. ಯಾವ ಕ್ಷಣಕ್ಕೂ ರಂಗಸ್ಥಳದಲ್ಲಿ ಸೋಮಾರಿಯಾಗದ ರಾಜೇಶ ಭಂಡಾರಿಯವರು ಪಾತ್ರಕ್ಕೆ ನಿಜವಾಗಿ ಜೀವ ತುಂಬುತ್ತಾರೆ.
ಕೆಲವೊಂದು ಕಲೆಗಳು ಒಂದು ಸಮುದಾಯಕ್ಕೆ ಪಿತ್ರಾರ್ಜಿತ ಆಸ್ತಿಯಿದ್ದಂತೆ. ಭಂಡಾರಿ ಸಮುದಾಯ ನಾಡಿಗೆ ಪ್ರಖ್ಯಾತ ಮದ್ದಳೆ ವಾದಕರನ್ನು, ಚಂಡೆವಾದಕರನ್ನು, ತಬಲಾವಾದಕರನ್ನು, ಶಹನಾಯಿ ನುಡಿಸುವವರನ್ನು, ವಾದ್ಯದವರನ್ನೂ ಕೊಡುಗೆಯಾಗಿ ನೀಡಿದೆ. ಏತನ್ಮಧ್ಯೆಯೂ ಕಲಾವಿದರಾಗಿ ಪರಿಚಿತವಾದ ಕೆಲವೇ ಕೆಲವು ಮಹಾನ್ ಕಲಾವಿದರ ಸಾಲಿಗೆ ನಮ್ಮ ರಾಜೇಶ ಭಂಡಾರಿಯವರು ಸೇರುತ್ತಾರೆಂದರೆ ಅದು ಅತಿಶಯೋಕ್ತಿಯಲ್ಲ.
ಗುಣವಂತೆಯ ಶ್ರೀಯುತ ಮಂಜುನಾಥ ಭಂಡಾರಿ ಹಾಗೂ ರಾಧಾ ದಂಪತಿಯ ಮಗನಾಗಿ ಗುಣವಂತರ ಯಕ್ಷಗಾನ ಪರಂಪರೆಯ ಕೊಂಡಿಯಾದ ರಾಜೇಶರು ಭಾಗವತರಾದ ಶ್ರೀ ಕೃಷ್ಣ ಭಂಡಾರಿಯವರಿಂದ ಹೆಜ್ಜೆ ಕಲಿತವರು. ತನ್ನ ಮುನ್ನಡೆಗೆ ಕಾರಣರಾದ ಶ್ರೀ ಕಾಸರಕೋಡ ಶ್ರೀಧರ ಹೆಗಡೆಯವರನ್ನು ಅವರು ಮನಸಾ ಸ್ಮರಿಸುತ್ತಾರೆ. ದಿಟ್ಟ ಹೆಜ್ಜೆ ದಿಟ್ಟ ಮಾತಿನ ಮೋಡಿಗಾರರು ನಮ್ಮ ರಾಜೇಶ ಭಂಡಾರಿಯವರು.
ಧರ್ಮಾಂಗದ, ಕಂಸ, ಕುಶ, ಲವ, ಅಭಿಮನ್ಯು, ಸುಧನ್ವ, ಸುದರ್ಶನ, ಕಾರ್ತಿವೀರ್ಯ, ಕೃಷ್ಣ ಹೀಗೆ ಬಹುತೇಕ ಎಲ್ಲಾ ಪಾತ್ರಗಳನ್ನೂ ಮಾಡಿದ ರಾಜೇಶರು ಅವರದೇ ಆದ ಸ್ವಂತಿಕೆಯನ್ನು ರಂಗಸ್ಥಳದಲ್ಲಿ ತೋರ ಬಯಸುವವರು. ಪಾತ್ರ ಚಿಕ್ಕದಿರಲಿ ದೊಡ್ಡದಿರಲಿ ಬೇಸರಿಸದೇ ನಾಲ್ಕು ಪದ್ಯವಿದ್ದರೂ ನಾನೂರು ಜನರಿಂದ ಚಪ್ಪಾಳೆ ಗಿಟ್ಟಿಸಿಯೇ ತೆರಳುವವರು. ತನ್ನ ಪಾತ್ರದ ಮೇಲಿನ ಅವರ ಶೃದ್ಧೆ ಹಾಗೂ ಶ್ರಮ ನನಗೆ ತುಂಬಾ ಮೆಚ್ಚಿಗೆಯಾಗುತ್ತದೆ.
ಕಲೆಗೆ ಹಳಬರು ಹೊಸಬರೆಂಬುದಿಲ್ಲ. ಅವರವರ ವಯಸ್ಸಿಗೆ ಅವರವರ ವಯಸ್ಸಿನ ಜನ ಇಷ್ಟವಾಗಲೂ ಸಾಕು. ನಮ್ಮ ಹಿಂದಿನ ತಲೆಮಾರಿನವರು ಅವರು ಹೀಗೆ ಮಾಡುತ್ತಿದ್ದರು…ಹಾಗೆ ಮಾಡುತ್ತಿದ್ದರು….ಎನ್ನುವಾಗ ನಾವು ಅವರಿಗೆ ಚಕಾರವೆತ್ತುವುದಿಲ್ಲ. ಹೊಸ ತಲೆಮಾರಿನವರು ಹೀಗೆ ಮಾಡುತ್ತಾರೆ ಹಾಗೆ ಮಾಡುತ್ತಾರೆ ಎಂದು ಹೀಗಳೆದರೆ ನನಗೆ ತುಂಬಾ ಬೇಸರವಾಗುತ್ತದೆ. ಯಾಕೆಂದರೆ ಅಭಿರುಚಿಗಳು ತಲೆಮಾರಿನಿಂದ ತಲೆಮಾರಿಗೆ ಬದಲಾಗಬಹುದು. ಕಲಾವಿದರು ಕೂಡ. ಹೀಗಾಗಿ ಅವರ ಯಕ್ಷ ನೃತ್ಯ ಭಂಗಿಯನ್ನಾಗಲೀ….ಹೊಸ ಪ್ರಸಂಗಗಳ ಪದ್ಯವನ್ನಾಗಲೀ ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ. ಬೆಳೆಯಬೇಕು ಕಲೆಯೂ ಬೆಳೆಯಬೇಕು. ನಮ್ಮ ಅಭಿಮಾನದ ಕಲಾವಿದರೂ ಬೆಳೆಯಬೇಕು.
ರಾಜೇಶ ಅವರ ನೃತ್ಯ ನನಗೆ ತುಂಬಾ ಖುಷಿ ಕೊಡುತ್ತದೆ. ಅವರ ಹೆಜ್ಜೆ, ಗೆಜ್ಜೆ, ಅಭಿನಯ, ಪ್ರತಿಯೊಂದನ್ನೂ ನಾನು ಚಪ್ಪಾಳೆ ತಟ್ಟಿ ಅಭಿನಂದಿಸುತ್ತೇನೆ. ಅವರು ನಮ್ಮ ಹೊನ್ನೂರಿನ ಹೆಮ್ಮೆ ಎಂಬುದರಲ್ಲಿ ಎರಡು ಮಾತಿಲ್ಲ. ಚುರುಕಿನ ವ್ಯಕ್ತಿ ನಮ್ಮ ರಾಜೇಶರು. ಪದ್ಯವೊಂದಕ್ಕೆ 12-15 ನಿಮಿಷ ಕುಣಿದರೂ ಜೋರಾಗಿ ಶ್ವಾಸ ಬಿಡದೆ ಮತ್ತೆ ಮಾತಿಗೆ ತಯಾರಾಗುವ ಅವರ ಪ್ರಯತ್ನ ಶ್ಲಾಘನೀಯ.
‌‌‌‌‌‌‌ ಕಲಿಯುವಿಕೆ ಎನ್ನುವುದು ನಿರಂತರವಾದದ್ದು. ಜೀವನದ ಕೊನೆಯ ಕ್ಷಣದವರೆಗೂ ಕಲಿಯುವುದಿರುತ್ತದೆ. ಕಲಿಯುವ ಮನಸ್ಸಿರಬೇಕಷ್ಟೇ. ಎದುರು ಪಾತ್ರಧಾರಿಗಳನ್ನು ಗೌರವಿಸುತ್ತಾ ಅವರ ಜೊತೆ ಜೊತೆಯಾಗಿ ಕಲಾವಿದ ತಾನೂ ಗೆಲ್ಲುವುದರೊಂದಿಗೆ ಪ್ರಸಂಗವನ್ನೂ ಗೆಲ್ಲಿಸಬೇಕಾಗುತ್ತದೆ. ರಾಜೇಶ ಭಂಡಾರಿಯವರು ಪಾತ್ರ ಚೌಕಟ್ಟನ್ನು ಮೀರದ ಒಬ್ಬ ಸಾಧಕ.
ಚಂದ್ರಹಾಸರ ಜೊತೆಗಿನ ಅವರ ಸ್ನೇಹ ಬಾಂಧವ್ಯ ನಮಗೆ ರಂಗಸ್ಥಳದಲ್ಲಿ ಬಹಳ ಆನಂದ ತರುತ್ತದೆ. ಲವ ಕುಶರೆಂದರೆ ಲವ ಕುಶರೇ…ಆರೋಗ್ಯಕರ ಸ್ಪರ್ಧೆ ಒಡ್ಡುತ್ತಾ ಪರಸ್ಪರ ಸಂಯೋಜಿತ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುವ ರಾಜೇಶ ಹಾಗೂ ಚಂದ್ರಹಾಸರು ತೂಕಡಿಸುವವರನ್ನೂ ಒಮ್ಮೆ ಎಬ್ಬಿಸುವುದು ಸುಳ್ಳಲ್ಲ. ಅವರು ಒಂದೇ ಒಂದು ದಿನ ಗೈರು ಹಾಜರಾದರೂ ಅವರ ಗೈರು ಎದ್ದು ಕಾಣುತ್ತದೆ.
‌‌‌‌‌ Youths are not useless they are used less. ಯುವಕರನ್ನು ಅತ್ಯಂತ ಪ್ರೀತಿಯಿಂದ ಹಿರಿಯರು ಆದರಿಸುತ್ತಾ ಮಾರ್ಗದರ್ಶಿಸುತ್ತಾ ಮುಂದೆ ಸಾಗಿದಾಗ ನಮ್ಮ ಹುಡುಗರು ಮುಂದೊಂದು ದಿನ ನಾಡು ಮೆಚ್ಚುವ ಶ್ರೇಷ್ಠ ಕಲಾವಿದರಾಗುವುದರಲ್ಲಿ ನಿಸ್ಸಂಶಯ.
ರಾಜೇಶ ಭಂಡಾರಿಯವರು ಉದಯೋನ್ಮುಖ ಪ್ರತಿಭೆ. ರಂಗಸ್ಥಳದ ಕೋಲ್ಮಿಂಚು ಅವರು. ಹೊಸ ಹೊಸ ಅಭಿನಯ ನೃತ್ಯ ಭಂಗಿಗಳನ್ನು ನಾವು ಅವರಿಂದ ನಿರೀಕ್ಷಿಸುತ್ತೇವೆ. ನಮ್ಮ ರಾಜೇಶರು ರಂಗಸ್ಥಳದ ರಾಜನಾಗಿ ಮೆರೆಯಲಿ. ಕಠಿಣ ಪರಿಶ್ರಮದಿಂದ ತನ್ನ ಸತ್ವಾತಿಶಯದಿಂದಲೇ ಸಮಾಜ ಗುರುತಿಸುವಂತಾದ ರಾಜೇಶರ ಮೇಲೆ ಕಲಾವಿದನಾಗಿ ನಮ್ಮ ಹೊನ್ನೂರಿನ ಕೀರ್ತಿಯನ್ನು ಹೆಚ್ಚಿಸುವ ಮಹತ್ತರ ಜವಾಬ್ದಾರಿ ಇದೆ. ಯೋಗ್ಯತಾವಂತರಾದ ಅವರನ್ನು ಮುಂದೊಂದು ದಿನ ಗೌರವ ಸನ್ಮಾನಗಳು ತಾನಾಗಿಯೇ ಅರಸಿಕೊಂಡು ಬರುತ್ತವೆಂಬುದು ನಿಸ್ಸಂದೇಹ.
‌ ‌‌ ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರಾಜೇಶ ಭಂಡಾರಿಯವರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಕದರೀಗುಡ್ಡದ ಈ ಮಂಜನಾಥೇಶ್ವರ ಲಿಂಗದ ಉದ್ಭವದ ಬಗ್ಗೆ ಶ್ರೀಧರ ನುಡಿ.

ರಾಜೇಶ ಭಂಡಾರಿಯವರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ