ಆಡುವ ನುಡಿ ಇಂತಿರಬೇಕು
ಶಾಂತಿ ನೆಲೆಸಬೇಕು
ಇತರರ ಶಾಂತಿಗೆ ಶ್ರಮಿಸುತ ನಾವೇ
ಶಾಂತಿಯ ಪಡೆಯುವೆವು -ಕಬೀರ.
ನಾವು ಆಡುವ ಮಾತು ಅದು ಶಾಂತಿ ನೆಲೆಸಲು ಕಾರಣವಾಗಬೇಕು. ಇತರರ ಶಾಂತಿಗೆ ಶ್ರಮಿಸುತ್ತಾ ಶ್ರಮಿಸುತ್ತಾ ನಾವು ಶಾಂತಿಯನ್ನು ಪಡೆಯುತ್ತೇವೆ. ಎಂಬುದು ಕಬೀರರ ಅಭಿಮತ.
ಮಾತಿಗೆ ತುಂಬಾ ಮಹತ್ವವಿದೆ. ಅದು ಜಗಳಕ್ಕೆ ಕಾರಣವಾಗಬಹುದು ಅಥವಾ ಶಾಂತಿಗೆ ಕಾರಣವಾಗಬಹುದು. ಮಾತು ಮೃದುವಾಗಿದ್ದರೆ, ಕೇಳಲು ಹಿತವಾಗಿದ್ದರೆ, ಹೇಳುವುದನ್ನು ಪ್ರೀತಿಯಿಂದ ಮನಮುಟ್ಟುವಂತೆ ಹೇಳುತ್ತಿದ್ದರೆ ಅಂತಹ ಮಾತು ಸೌಹಾರ್ದತೆಯ ವಾತಾವರಣ ಸೃಷ್ಟಿಸುತ್ತದೆ. ಅದೇ ಮಾತು ಕಠಿಣವಾಗಿದ್ದರೆ ಕೊಂಕುನುಡಿ ಯಾಗಿದ್ದರೆ ಮನ ನೋಯಿಸುವಂತಿದ್ದರೆ ಅಲ್ಲಿ ಖಂಡಿತವಾಗಿ ವಾತಾವರಣ ಕದಡುತ್ತದೆ. ಅದು ದ್ವೇಷ ಅಸೂಯೆಗೆ ಕಾರಣವಾಗುತ್ತದೆ. ಹಾಗಾಗಿ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಇತರರಿಗೆ ಪ್ರಿಯವಾಗುವ ಹಿತವೆನಿಸುವ ಮಾತನಾಡುವುದರಿಂದ ಕೇವಲ ಇತರರಿಗೆ ಮಾತ್ರ ಸಂತೋಷವಾಗುವುದಿಲ್ಲ ಬದಲಾಗಿ ನಮಗೂ ಅದರಲ್ಲಿ ಸಂತೋಷವಾಗುತ್ತದೆ. ಕೇವಲ ನಾನೊಬ್ಬ ಸುಖಿಯಾಗಿದ್ದರೆ ಸಾಲದು ಎಲ್ಲರೂ ಸುಖಿ ಯಾಗಿರಬೇಕು ಎಂಬ ಬದುಕಿನ ಪಾಠ ಅಲ್ಲಿ ನಮಗೆ ಅರ್ಥವಾಗುತ್ತದೆ.
ಅದನ್ನು ಕವಿಯೊಬ್ಬ ಕಂಡಿದ್ದು ಹೀಗೆ …………………………
ಗುಡಿಯ ಶಿಲ್ಪವು ಚೆಂದ ಅಡಿಕೆ ತೋಟವು ಚಂದ ನಡೆ ನುಡಿಯು ಚಂದವಿರೆ ಗಂಧ ಸೂಸುವುದಯ್ಯ ಅಂತ. ನಿಮ್ಮ ಮಾತಿಗೊಂದು ಅರ್ಥವಿರಲಿ…ನಿಮ್ಮ ಮಾತಿ ಗೊಂದು ನೀತಿ ಇರಲಿ…ನಿಮ್ಮ ಮಾತಿಗೊಂದು ಪ್ರೀತಿ ಇರಲಿ… ನಿಮ್ಮ ಮಾತು ಕೇವಲ ಮನೆ ಕಟ್ಟುವಂತಿರದೇ ನಾಡು ಕಟ್ಟುವಂತಿರಲಿ. ಅದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ ………………….
ಒಲುಮೆ ಇರಲೆಂದೆಂದು ನಿನ್ನಯಾ ಮಾತಿನಲಿ.
ಬಲುಮೆ ಇದೆ ಅದರಿಂದ ಮಧುರ ಬಾಂಧವ್ಯ
ಕುಲುಮೆಯಂತಿರಲದುವು ಎಲ್ಲರನು ನೋಯಿಪುದು
ಗೆಲುವೆಂತು ಸಾಧ್ಯವದು-ಭಾವಜೀವಿ.
ಡಾ.ರವೀಂದ್ರ ಭಟ್ಟ ಸೂರಿ