ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಜನಾರ್ದನ ಹರನೀರು

ಕೊಂಕು ತೆಗೆಯುವುದಕ್ಕೆ ಹತ್ತಾರು ಕಾರಣ ಸಿಗಬಹುದು. ದೂರು ಹೇಳುವುದಕ್ಕೆ ನೂರಾರು ಕಾರಣ ಸಿಗಬಹುದು. ರೇಗುವುದಕ್ಕಂತೂ ಸಾವಿರ ಕಾರಣ ಸಿಗಬಹುದು. ಆದರೆ ಯಾವ ವ್ಯಕ್ತಿ ತನ್ನಷ್ಟಕ್ಕೇ ತಾನು ಎದುರಿಗಿರುವವನ ಉದ್ದೇಶವನ್ನರಿತು ತಾನೂ ಕೋಪಗೊಳ್ಳದೇ ಅವನಿಗೂ ನೋವುಂಟುಮಾಡದೇ ಒಳ್ಳೆಯ ಕೆಲಸವನ್ನು ಜಾಣ್ಮೆಯಿಂದ ಮಾಡುತ್ತಾ ಹೋಗುತ್ತಾನೋ ಆತ ಸಮಾಜಕ್ಕೆ ಬೇಕಾದವನಾಗಿ ಬಹಳ ಕಾಲ ಬದುಕುತ್ತಾನೆ. ಒಂದು ವಸ್ತು ನನಗೆ ಖುಷಿ ಕೊಡುತ್ತದೆಂದು ತಂದರೆ ಅದು ನನಗೆ ಮಾತ್ರ ಖುಷಿ ಕೊಡಬಹುದು. ಬೇರೆಯವರು ತನಗಿದು ಖುಷಿ ಕೊಡುತ್ತದೆ ತೆಗೆಸಿಕೊಡಿ ಎಂದರೆ ಅದೆಲ್ಲಾ ಯಾಕೆ? ಉಪಯೋಗವೇ ಇಲ್ಲ….ಎಂದು ಅನಿಸಬಹುದು. ನಾವು ಮಾಡುವ ಕೆಲಸ ಕಾರ್ಯಗಳೂ ಅಷ್ಟೇ ಅದು ನಮಗಷ್ಟೇ ಖುಷಿ ಕೊಡುವಂತಿದ್ದರೆ ಅದು ಸೀಮಿತವ್ಯಾಪ್ತಿ ಹೊಂದಿದ್ದು ವೈಯಕ್ತಿಕ… ಸ್ವಾರ್ಥ ಅನಿಸುತ್ತದೆ. ನಾವು ಮಾಡುವ ಕೆಲಸದಿಂದ ಬಹಳಷ್ಟು ಜನ ಸ್ಫೂರ್ತಿ ಪಡೆವಂತಾದರೆ ಅದು ಸಮಾಜಮುಖಿ ಸತ್ಕಾರ್ಯ. ಅಂತಹ ವಿಭಿನ್ನ ದೂರದರ್ಶಿತ್ವದ, ಸದಾ ಹರಿಯುವ ನೀರೇ ಆದ ಜನಾರ್ದನ ಹರನೀರು ಅವರನ್ನು ನಿಮ್ಮೆದುರು ತರುವ ಪ್ರಯತ್ನ ನನ್ನದು.
ಸಂಜೀವಿನಿ ಪತ್ರಿಕೆಯ ಸಂಪಾದಕ, ಮೃದು ಮಾತಿನ ಸಜ್ಜನ, ಸಾಕ್ಷಿ ಬಳಗದ ರೂವಾರಿ, ಅತ್ಯುತ್ತಮ ಶಿಕ್ಷಕ ಮಿತ್ರ, ಉದಾತ್ತ ಚಿಂತನೆಯ ಅಪರೂಪದ ವ್ಯಕ್ತಿ, ಶೈಕ್ಷಣಿಕ ಚಿಂತನೆಯೇ ಉಸಿರಾಗಿರುವ ಸಂಪನ್ಮೂಲ ವ್ಯಕ್ತಿ, ಸರಳ ನಡೆ ನುಡಿಯ ಜನಾರ್ದನ್ ಸರ್ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಧಾರೇಶ್ವರ ಸಮೀಪದ ಹರನೀರಿನವರು. ಹೊನ್ನಾವರದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾರೆ.
‌‌‌Teacher by choice and teacher by chance ಎಂಬ ಮಾತಿದೆ. ಇವರು ಮೊದಲನೇ ಗುಂಪಿನ ಅಡ್ಮಿನ್.? ಹೊನ್ನಾವರದಲ್ಲಿ ಬಹಳ ವರ್ಷಗಳ ಕಾಲ Block Resource Person ಆಗಿ ಸೇವೆ ಸಲ್ಲಿಸಿದ ಅನುಭವವಿರುವ ಜನಾರ್ದನ ಸರ್ ಯಾರನ್ನೂ ನೋಯಿಸದೇ ಮಾರ್ಗದರ್ಶಿಸಬಲ್ಲ ಒಬ್ಬ ಅತ್ಯುತ್ತಮ ಶಿಕ್ಷಕ. ಅಧಿಕಾರಿ ವೃಂದದಿಂದಲೂ ಪ್ರಶಂಸಿಸಲ್ಪಟ್ಟ ಅವರು ಅದಕ್ಕೆ ಯೋಗ್ಯರು ಕೂಡ. ಸದಾ ಶೈಕ್ಷಣಿಕ ಆಲೋಚನೆಗಳನ್ನು ತನ್ನ ಕಾರ್ಯವ್ಯಾಪ್ತಿಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವುದರ ಕುರಿತಾಗಿಯೇ ಚಿಂತಿಸುವ ಜನಾರ್ದನ ಸರ್ ಜಿಲ್ಲೆ, ನಾಡು, ರಾಷ್ಟ್ರ ಗುರುತಿಸಬಹುದಾದ ನಿಗರ್ವಿ, ಕ್ರಿಯಾಶೀಲ ಶಿಕ್ಷಕ.
‌‌‌ನಾನು 2011 ರಲ್ಲಿ ಮೌಲ್ಯಗಳು ಎಲ್ಲಿ ಸಿಗುತ್ತವೆ?! ಎನ್ನುವ ಪುಸ್ತಕವನ್ನು ಬರೆದು ಶಿಕ್ಷಕರ ದಿನಾಚರಣೆಯ ದಿನ ಬಿಡುಗಡೆಗೊಳಿಸಬೇಕೆಂದು ಬಯಸಿದೆ. ಹೊನ್ನಾವರಕ್ಕೆ ನಾನು ಬಂದು ಕೇವಲ ಎರಡೇ ತಿಂಗಳಾಗಿತ್ತು ಆಗ. ಹೀಗಾಗಿ ಅನೇಕ ಜನ ನನಗೆ ಪರಿಚಿತರಿರಲಿಲ್ಲ. ಜನಾರ್ದನ ಸರ್ ಅವರ ಹತ್ತಿರ ಫೋನಾಯಿಸಿ ಸರ್ ನೀವು ದಯವಿಟ್ಟು ನನ್ನ ಪುಸ್ತಕವನ್ನು ಪರಿಚಯಿಸಿಕೊಡಬೇಕೆಂದು ವಿನಂತಿಸಿಕೊಂಡೆ. ಮರು ಮಾತಾಡದ ಜನಾರ್ದನ ಸರ್ ಸಂತೋಷದಿಂದಲೇ ಒಪ್ಪಿಕೊಂಡು ನನ್ನ ಪುಸ್ತಕವನ್ನು ಸಾವಿರ ಜನರೆದುರಿಗೆ ಮುಕ್ತವಾಗಿ ಪರಿಚಯಿಸಿದರು. ಒಬ್ಬ ವ್ಯಕ್ತಿಗೆ ತಾನೇ ಶ್ರೇಷ್ಠ ಎನ್ನುವ ಭಾವನೆಯಿದ್ದರೆ ಅಥವಾ ಬೇರೆಯವರನ್ನು ಬೆಳೆಯಲು ಕೊಡಲೇ ಬಾರದೆನ್ನುವ ನಂಜಿದ್ದರೆ ಅವರು ಮೇಲಿಂದ ಮೇಲೆ ಪುಸ್ತಕವನ್ನು ಪರಿಚಯಿಸಿ ಧನಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಎದುರಿಗಿರುವವರ ಗಮನಕ್ಕೆ ತಂದು ಒಟ್ಟಿನಲ್ಲಿ……ಪ್ರೋತ್ಸಾಹಿಸುವ ದೃಷ್ಟಿಯಿಂದ ನೀವೂ ಇದನ್ನು ಓದಬಹುದು…. ??? ಎಂದು ಉಪಾಯವಾಗಿ ಮಾತನಾಡಬಹುದಿತ್ತು ಅಥವಾ ಸರ್ ನೀವು ಬೇರೆ ಯಾರನ್ನಾದರೂ ಹುಡುಕಿಕೊಳ್ಳಿ ನನಗೆ ಆ ಜವಾಬ್ದಾರಿ ಇದೆ….ಈ ಜವಾಬ್ದಾರಿ ಇದೆ ಅಂತ ಸುಖಾಸುಮ್ಮನೆ ಹೇಳಬಹುದಿತ್ತು. ಆದರೂ ಸುದೀರ್ಘವಾದ ತಮ್ಮ ಪರಿಚಯದಲ್ಲಿ ಅವರು ನನ್ನ ಪುಸ್ತಕವನ್ನು ತಾನೇ ಬರೆದ ಪುಸ್ತಕ ಎಂಬಂತೆ ಜನರೆದುರು ತೆರೆದಿಟ್ಟರು. ಇದು ನನಗೆ ಮುಂದೆ ನೂರು ಪುಸ್ತಕ ಬರೆದು ಬಿಡುಗಡೆ ಮಾಡುವ ಅವಕಾಶ ಸಿಕ್ಕರೂ ನೆನಪಿರುತ್ತದೆ….ಮತ್ತು ನಾನವರಿಗೆ ಕೃತಜ್ಞನಾಗಿಯೇ ಇರುತ್ತೇನೆ.
ಜನಾರ್ದನ ಸರ್ ಹೊನ್ನಾವರದಲ್ಲಿ ಸಾಕ್ಷಿ ಎನ್ನುವ ಶಿಕ್ಷಕ ಬಳಗ ಕಟ್ಟಿ ನಾಡು ಅವರನ್ನು ತಿರುಗಿ ನೋಡುವಂತೆ ಮಾಡಿದರು. ಸಮಾನ ಮನಸ್ಕರ ಈ ಶಿಕ್ಷಕರ ಬಳಗ ತನ್ನದೇ ಆದ Wats app ಗ್ರೂಪ ಹೊಂದಿದ್ದು….ಕೇವಲ ನಾವಿನ್ಯಯುತ ಶೈಕ್ಷಣಿಕ ಚಟುವಟಿಕೆಗಳನ್ನು ಮಾತ್ರ ಉತ್ತೇಜಿಸುತ್ತದೆ. ಹಾಗೆಯೇ ಇಲಾಖಾ ಕಾರ್ಯಕ್ರಮಗಳನ್ನು ಪರಿಚಯಿಸುತ್ತದೆ. ತಿಂಗಳಿನಲ್ಲೊಂದು ಶನಿವಾರ ವಿಭಿನ್ನ ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ನಾಡಿನ ಅನೇಕ ಸಾಧಕರನ್ನು ಪರಿಚಯಿಸುತ್ತದೆ. ಬೇಸಿಗೆಯ ರಜೆಯಲ್ಲಿ ಕೂಡ ಮಕ್ಕಳ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸಿ ಅನೇಕ ಪ್ರತಿಭಾವಂತ ಶಿಕ್ಷಕರ ಮಾರ್ಗದರ್ಶನ ಮಕ್ಕಳಿಗೆ ಉಚಿತವಾಗಿ ಸಿಗುವಂತಹ ವ್ಯವಸ್ಥೆ ಮಾಡುತ್ತದೆ. ಜನಾರ್ದನ ಸರ್ ಸಾತ್ವಿಕ ನಿಸ್ವಾರ್ಥಿ ವ್ಯಕ್ತಿತ್ವದವರಾದುದರಿಂದಲೇ ಹಲವಾರು ಶಿಕ್ಷಕ ಮಿತ್ರರು ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಾರೆ. ಸಾಕ್ಷಿ ಆದರ್ಶವಾದ ಮತ್ತು ನಾಡಿಗೇ ಮಾದರಿಯಾದ ಶೈಕ್ಷಣಿಕ ಬಳಗ ಎಂಬುದರಲ್ಲಿ ಎರಡು ಮಾತೇ ಇಲ್ಲ. ನಿರಂತರ ಚಟುವಟಿಕೆಗಳಿಂದ ಸಾಕ್ಷಿ ಬಳಗ ಅನೇಕ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಹತ್ತಿರವಾಗಿ ಮುಕ್ತವಾದ ವೇದಿಕೆಯನ್ನು ಕಲ್ಪಿಸಿದೆ.
ಜನಾರ್ದನ ಸರ್ ಸಂತ ಇಗ್ನೇಷಿಯಸ್ ಸಂಸ್ಥೆ ಹೊನ್ನಾವರ ಇವರು ಹೊರ ತರುವ ಸಂಜೀವಿನಿ ಪತ್ರಿಕೆಯ ಸಂಪಾದಕರು. ಅವರ ಬರಹಗಳು ತುಂಬಾ ಆಪ್ತ ಹಾಗೂ ಸಮಯೋಚಿತವಾದದ್ದು. ಮಕ್ಕಳಿಗೂ ಶಿಕ್ಷಕ ವೃಂದಕ್ಕೂ ಒಂದು ಸಾಹಿತ್ಯಿಕ ವೇದಿಕೆಯಂತಿರುವ ಈ ಪತ್ರಿಕೆಯನ್ನು ತುಂಬಾ ಅರ್ಥಪೂರ್ಣವಾಗಿ ಮತ್ತು ವರ್ಣರಂಜಿತವಾಗಿ ಹೊರತರುವಲ್ಲಿ ಅವರು ಸಾಕಷ್ಟು ಶ್ರಮ ವಹಿಸುತ್ತಾರೆ. ‘ಸಂಜೀವಿನಿ’ ತನ್ನ ಹೊಸತನ ಮತ್ತು ಹೊಸ ವಿಷಯಗಳಿಂದ ಓದುಗರಿಗೆ ಸಂಜೀವಿನಿಯೇ ಆಗಿದೆ.
ಜನಾರ್ದನ ಸರ್ ಮಕ್ಕಳನ್ನು ತುಂಬಾ ಕಾಳಜಿ ಹಾಗೂ ಪ್ರೀತಿಯ ಕಣ್ಣುಗಳಲ್ಲಿ ನೋಡುವ ಜನ. ಅವರಿಗಾಗಿ ತಾನು ಏನಾದರೂ ಮಾಡಬೇಕೆಂದೇ ಅವರು ನಿಂತಲ್ಲಿ ಕುಂತಲ್ಲಿ ಯೋಚಿಸುತ್ತಾರೆ. ಜಾತಿ, ಮತ, ಧರ್ಮ ಇವುಗಳ ಭೇದವಿಲ್ಲದೇ ಎಲ್ಲರ ಜೊತೆಗೂ ಸೌಹಾರ್ದಯುತವಾಗಿ ಬೆರೆಯುತ್ತಾರೆ. ಸಂಕುಚಿತ ಮನಸ್ಸಿನವರನ್ನೂ ತನ್ನ ವಿಶಾಲ ಹೃದಯದಿಂದ ಪರಿವರ್ತಿಸುವ ತಾಕತ್ತು ಅವರ ವ್ಯಕ್ತಿತ್ವಕ್ಕಿದೆ.
ಅಭಿಪ್ರಾಯ ಭೇದಗಳಿದ್ದರೂ ಅವರು ಅದನ್ನು ಇನ್ನೊಬ್ಬರಿಗೆ hurt ಆಗುವ ಹಾಗೆ ಮಾತನಾಡುವುದೇ ಇಲ್ಲ. ತನ್ನದೇ ಆದ ತತ್ವಗಳ ಅಡಿಯಲ್ಲಿ ಸರಳ ಸಜ್ಜನಿಕೆಯ ಬಾಳ್ವೆ ನಡೆಸುವ ಪ್ರತಿಭಾ ಸಂಪನ್ನ ನಮ್ಮ ಜನಾರ್ದನ ಸರ್. ಅವರ ಸ್ನೇಹ ಸರಳತನದಿಂದ ನಾನೂ ಸ್ಫೂರ್ತಿ ಪಡೆದವನಾದ್ದರಿಂದ ಅವರಿಗೆ ನಾನು ಋಣಿ.
ಕೆಲವರಿಗೆ ತನ್ನನ್ನು ತಾನು ಹೇಗಾದರೂ ಮಾಡಿ ತೋರಿಸಿಕೊಳ್ಳಬೇಕೆನ್ನುವ ಹಪಹಪಿಕೆ ಇರುತ್ತದೆ. ಇಷ್ಟು ಜನಪ್ರಿಯ ವ್ಯಕ್ತಿಯಾದರೂ ಜನಾರ್ದನ ಸರ್ ಸಭೆ ಸಮಾರಂಭಗಳಲ್ಲಿ ದೂರದಲ್ಲೆಲ್ಲೊ ಕುಳಿತು ಕಾರ್ಯಕ್ರಮ ಆಸ್ವಾದಿಸುತ್ತಾರೆ. ಶಿಬಿರ ನಿರ್ದೇಶಕರಾಗಿಯೂ ಗೊತ್ತು ಅವರಿಗೆ. ಶಿಬಿರಾರ್ಥಿಯಾಗಿಯೂ ಅವರು ಅದೇ ಸೌಜನ್ಯ ಮೆರೆಯುತ್ತಾರೆ. ಅನವಶ್ಯಕ ಮಾತುಗಳ ಮಳೆ ಸುರಿಸದ ಇನ್ನೊಬ್ಬರ ಟೀಕೆ ಟಿಪ್ಪಣಿಗಳನ್ನು ಬಾಯ್ತಪ್ಪಿಯೂ ಮಾಡದ, ಸಹಾಯ ಮಾಡುವ ಪರಿಸ್ಥಿತಿ ಬಂದರೆ ತಾನೇ ಮೊದಲಾಗಿ ನಿಲ್ಲುವ ಅತ್ಯುತ್ತಮ ಸಂಘಟಕ ಜನಾರ್ದನ ಹರನೀರು ಸಹನೆಯೇ ಮೂರ್ತಿವೆತ್ತ ಮನುಷ್ಯ.
ಗೌರವ, ಪುರಸ್ಕಾರಗಳು ಅವರನ್ನರಸಿಕೊಂಡು ಬರಲಿ. ಅದನ್ನು ಬಯಸುವವರು ಅವರಲ್ಲವಾದರೂ ಅವರು ಮಾಡುವ ನಿಷ್ಕಲ್ಮಶ ಕೆಲಸಕ್ಕೆ ಅದು ಇಲಾಖೆ ಸಮಾಜ ಕೊಡುವ ಉತ್ತೇಜನವಾಗಲಿ. ಅವರಿಂದ ಕಲಿತ ವಿದ್ಯಾರ್ಥಿಗಳು ಧನ್ಯರು. ತನ್ನ ಸುತ್ತಲಿರುವ ಎಲ್ಲರ ಮೇಲೂ ಬೆಳಕು ಚೆಲ್ಲುವ ಹಣತೆಯೋಪಾದಿಯಲ್ಲಿ ಅವರ ಕಾರ್ಯ ಸಾಗಿಯೇ ಇರುತ್ತದೆ. ಯಾವುದನ್ನೂ ನಿರೀಕ್ಷಿಸದ ನಿರಂತರ ಪ್ರಯತ್ನ ಮತ್ತು ಶೃದ್ಧೆಯನ್ನೇ ಉಸಿರಾಗಿಟ್ಟುಕೊಂಡ ಜನಾರ್ದನ ಸರ್ ನಮೆಲ್ಲಾ ಜನಕ್ಕೂ ಇಷ್ಟವಾಗುವ ವ್ಯಕ್ತಿ ಎಂಬುದು ನಿಸ್ಸಂಶಯ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಜನಾರ್ದನ ಸರ್ ಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಜನಾರ್ದನ ನಾಯ್ಕರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ