ಮಣ್ಣೆಂದಿತು ಕುಂಬಾರಗೆ
ಏತಕೆ ತುಳಿಯುವೆ ನನ್ನ
ಮುಂದೊಂದು ದಿನ ಬರಲಿಹುದು
ಆಗ ನಾ ತುಳಿಯುವೆ ನಿನ್ನ- ಕಬೀರ.

ಮಣ್ಣು ಕುಂಬಾರನಿಗೆ ಕೇಳಿತಂತೆ “ಏತಕ್ಕೆ ನನ್ನನ್ನು ತುಳಿಯುತ್ತಿರುವೆ. ಮುಂದೊಂದು ದಿನ ಬರಲಿದೆ ಆಗ ನಾನು ನಿನ್ನನ್ನು ತುಳಿಯುತ್ತೇನೆ” ಎಂದು.
ಸಂತ ಕಬೀರರು ಈ ದೋಹೆಯಲ್ಲಿ ಕುಂಬಾರನನ್ನು ಮಾಧ್ಯಮವಾಗಿಟ್ಟುಕೊಂಡು ಇಡೀ ಮಾನವ ಕುಲಕ್ಕೆ ಒಂದು ಉತ್ತಮವಾದ ಸಂದೇಶವನ್ನು ಕೊಟ್ಟಿದ್ದಾರೆ. ಬದುಕಿನುದ್ದಕ್ಕೂ ನಾವು ಈ ಪ್ರಕೃತಿಯನ್ನು ಬೇರೆ ಬೇರೆ ರೀತಿಯಲ್ಲಿ ವಿಕೃತಿಗೊಳಿಸುತ್ತೇವೆ. ಆದರೆ ಕೊನೆಯಲ್ಲಿ ಎಲ್ಲವನ್ನೂ ಬಿಟ್ಟು ಅದೇ ಪ್ರಕೃತಿಯಲ್ಲಿ ಮಣ್ಣಾಗುತ್ತೇವೆ. ಎಂಬುದೇ ಆ ಸಂದೇಶ.

RELATED ARTICLES  ಭಾವ ಭೋಜನ…..!

ಈ ಭೂಮಿ ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ‌. ಅದು ಭಗವಂತನು ನಮಗೆ ನೀಡಿದ ಭಿಕ್ಷೆ. ಅದನ್ನು ಅನುಭವಿಸುವಾಗ ನಮ್ಮ ಮಿತಿಯನ್ನು ದಾಟಬಾರದು. ಇದು ಕೇವಲ ಮಾನವರಿಗೆ ಮೀಸಲಾದ ಭೂಮಿಯಲ್ಲ. ಇಲ್ಲಿ ಕೋಟಿ ಕೋಟಿ ಜೀವಜಂತುಗಳು, ಮರಗಿಡಗಳು ಇವೆ. ಅವಕ್ಕೂ ಇಲ್ಲಿ ನಮ್ಮಷ್ಟೇ ಹಕ್ಕಿದೆ. ನಮ್ಮ ಸ್ವಾರ್ಥಕ್ಕಾಗಿ ಇತರರಿಗೆ ಕಷ್ಟಕೊಟ್ಟರೆ ಅದು ತಿರುಗಿ ನಮ್ಮನ್ನೇ ಬಾಧಿಸುತ್ತದೆ. ಬದುಕಿನಲ್ಲಿ ಏನೇ ಸಂಗ್ರಹಮಾಡಿದರೂ, ಎಷ್ಟೇ ಸಂಗ್ರಹ ಮಾಡಿದರೂ ಅಂತಿಮ ಯಾತ್ರೆಯ ಕಾಲಕ್ಕೆ ಯಾವುದೂ ಬರದು. ಕೊನೆಗೆ ಮಣ್ಣಿನಲ್ಲಿ ಮಣ್ಣಾಗುವೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಮಾರ್ಮಿಕವಾಗಿ ಈ ದೋಹೆ ನಮ್ಮ ಮುಂದಿಡುತ್ತದೆ.

RELATED ARTICLES  ಕೆಲಜನರು ಗುರುವಿನ ಮಹತ್ವವನ್ನು ಅರಿಯದೆ ತಮ್ಮ ಪ್ರಾಕೃತ ಬುದ್ಧಿಯಿಂದ ಕೆಲಸ ಮಾಡುತ್ತಿದ್ದಾರೆಂದು ಕಂಡುಬರುತ್ತಿದೆ ಎಂದರು ಶ್ರೀಧರರು.

ನಾವೆಲ್ಲರೂ ಕಾಲನ ವಶದಲ್ಲಿದ್ದೇವೆ. ನಮ್ಮ ಬದುಕು ಅವನ ನಿಯಂತ್ರಣದಲ್ಲಿದೆ. ಈ ಸತ್ಯದ ಅರಿವು ನಮ್ಮಲ್ಲಿದ್ದರೆ ನಮ್ಮ ಮಿತಿಯಲ್ಲಿ ನಾವಿರುತ್ತೇವೆ.

ಇದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ……..

ಕೂಡಿಡಲು ಧನಕನಕ ಆಡಲದಸತ್ಯವನು
ಮಾಡಿರಲು ಸಲ್ಲದಿಹ ಕಾರ್ಯವನು ನೀನು
ಕಾಡಿರಲು ಅನ್ಯರನು ಬಿಡುವುದೇ ನಿನ್ನನ್ನು
ಜಾಡಿಪುದು ಕಾಲವದು-ಭಾವಜೀವಿ.

ಡಾ.ರವೀಂದ್ರ ಭಟ್ಟ ಸೂರಿ