ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಕರಿಸಿದವರಿಗಾಗಿ
ನಾನು ಬರೆದು ಸಂಭ್ರಮ ಪಟ್ಟೆ. ನೀವು ಓದಿ ಸಂಭ್ರಮಿಸಿದಿರಿ. ಕೆಲವರು ಮನೆಗೆಲಸದಲ್ಲಿ ಮಗ್ನರಾದರು. ಕೆಲವರು ಕೃಷಿಯ ಕಡೆ ಮುಖ ಮಾಡಿದರು. ಕೆಲವರು ನಾನಾ ಬಗೆಯ ಭಕ್ಷ್ಯ ಬೋಜ್ಯ ಮಾಡಿ ಮನೆಯಲ್ಲೇ ಕುಳಿತು ಟಿ.ವಿ ನೋಡಿದರು. ಕೆಲವರು ರಾಮಾಯಣ, ಮಹಾಭಾರತ ವೀಕ್ಷಿಸಿದರು. ಕೆಲವರು ಮನೆಯಲ್ಲೇ ಮಹಾಭಾರತ ಮಾಡಿ ತೋರಿಸಿದರು. ? ಕೆಲವರು ಕವಿತಾ ವಾಚನ, ಹಾಡುಗಾರಿಕೆ ಇನ್ನಿತರ ಹವ್ಯಾಸಗಳನ್ನು ಅಂತರ್ಜಾಲದ ಮೂಲಕ ಭಿತ್ತರಿಸುವ ಪ್ರಯತ್ನ ಮಾಡಿದರು. ಕೆಲವರು ಪುಸ್ತಕಗಳ ಮೇಲೆ ಕಣ್ಣಾಡಿಸಿದರು. ಕೆಲವರು ಹಪ್ಪಳ, ಸಂಡಿಗೆ ಮಾಡಿ ಮುಂದಿನ ವರ್ಷದ ತಯಾರಿ ನಡೆಸಿದರು. ಕೆಲವರು ಮಕ್ಕಳ ಜೊತೆ ಮಕ್ಕಳಾಗಿ ಆಡಿ ಕುಣಿದರು. ಕೆಲವರು ಸುದ್ದಿ ಪತ್ರಿಕೆಗಳನ್ನು ಒಂದೂ ಅಕ್ಷರ ಬಿಡದಂತೆ ಓದಿದರು. ಕೆಲವರು ನಗು, ತಮಾಷೆ, ಹಾಸ್ಯ, ಚಿತ್ರ ಬಿಡಿಸುವುದು, ಮುಂತಾದವುಗಳಲ್ಲಿ ಸಮಯ ಕಳೆದರು. ನನ್ನಂತವರು ಮೊಬೈಲ್ ಹಿಡಿದುಕೊಂಡೇ ಮೇಲೆ ಕೆಳಗೆ ಉಜ್ಜಿ ಉಜ್ಜಿ 24 ಗಂಟೆ ಕಳೆದರು. ಕೆಲವರು ತಮ್ಮ ಹಳ್ಳಿ ಮನೆಗಳಿಗೆ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡವರಂತೆ ಓಡಿದರು. ಕೆಲವರು ಅವರಾದರೂ ಆರಾಮಾಗಿರಲಿ ನಾನಂತೂ ಇದ್ದಲಿಯೇ ಇರುತ್ತೇನೆ ಎಂದು ಅಲ್ಲಲ್ಲಿಯೇ ನೋವು ನುಂಗಿ ಕುಳಿತರು. ಕೆಲವರು ಕುಂಭಕರ್ಣನ ಹಾಗೆ ನಿದ್ದೆ ಹೊಡೆದರು. ಆದರೆ ಇದೇ ಸಂದರ್ಭದಲ್ಲಿ ಹಲವಾರು ಜನ ನಮಗಾಗಿ ನಿಮಗಾಗಿ ಹಗಲಿರುಳೂ ದುಡಿದರು. ಅಂತಹ ವೈದ್ಯರು, ದಾದಿಯರು, ಪೋಲೀಸರು, ಸೈನಿಕರು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರು, ಸಫಾಯಿ ಕರ್ಮಚಾರಿಗಳು ಇವರ ಬಗೆಗಿಂದು ನನ್ನ ಅಕ್ಷರಗಳು ಸಮರ್ಪಿತವಾಗಬೇಕು.
ಮೊನ್ನೆ ಬೆಳ್ತಂಗಡಿಯಲ್ಲಿ ಕಾಲೇಜು ಉಪನ್ಯಾಸಕರಾಗಿರುವ ನಮ್ಮ ಗಪ್ಪಣ್ಣನಿಗೆ ಫೋನಾಯಿಸಿದ್ದೆ. ಉಭಯ ಕುಶಲೋಪಚಾರದ ನಂತರ ನಮ್ಮ ಅಣ್ಣ ನಿನ್ನ ಎಲ್ಲಾ ಲೇಖನಗಳನ್ನು ಓದಿರುವುದಾಗಿಯೂ ಒಂದು ದಿನ ನೀನು ಸಮಾಜದಲ್ಲಿ ಇಂಥ ಸಂಕಷ್ಟದ ಸಂದರ್ಭದಲ್ಲಿ ನೆರವಾದ ಬಂಧುಗಳಿಗೆ ಸಂಚಿಕೆಯನ್ನು ಮೀಸಲಿಡಬೇಕೆಂದು ಹೇಳಿದ. ಅವನ ಇಚ್ಛೆಯಂತೆ ನನ್ನ ಇಂದಿನ ಸಂಚಿಕೆಯನ್ನು ಹೃದಯಾಂತರಾಳದಿಂದ ರಾಷ್ಟ್ರ ಸೇವಕರಿಗಾಗಿ ಕೃತಜ್ಞತಾ ಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.
ಸಾವಿನ ಮನೆಯ ಕದ ತಟ್ಟುವುದಕ್ಕೆ ಹೋಗುತ್ತಿದ್ದೇವೇನೋ ಎಂಬ ಭಯ ವಿಶ್ವದ ತುಂಬ. ಸಾಲು ಸಾಲಾಗಿ ಬಿದ್ದ ಹೆಣಗಳು, ಉಸಿರಾಡುವುದಕ್ಕೂ ಕಷ್ಟವಾಗಿ ಬೀದಿ ಬೀದಿಯಲ್ಲಿ ನರಳಾಡುತ್ತಿದ್ದ ಜನಗಳು. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ ಜೀವ ಕಳೆದುಕೊಂಡ ಅನೇಕರು. ತಂದೆ, ತಾಯಿ, ಗಂಡ, ಹೆಂಡತಿ, ಮಕ್ಕಳನ್ನು ಕಳೆದುಕೊಂಡು ಗೋಳಿಡುವ ಹೃದಯಗಳು. ಅನಾಥರಾದ ಲಕ್ಷಾಂತರ ಜೀವಗಳು. ಹೋದ ನಮ್ಮವರು ಯಾವಾಗ ತಿರುಗಿ ಬರುತ್ತಾರೋ ಎಂದು ಕಾದು ಕುಳಿತ ಕಣ್ಣುಗಳು. ಕೈಯಲ್ಲಿ ಕಾಸಿಲ್ಲದೆ, ಸಿಕ್ಕ ಉದ್ಯೋಗವನ್ನೂ ಕಳೆದುಕೊಳ್ಳುವ ಭೀತಿಯಲ್ಲಿರುವ ಮಂದಿಗಳು. ಇಡೀ ವರ್ಷ ತುಂಬಾ ಶ್ರಮ ವಹಿಸಿ ತಮ್ಮದೇ ಮಕ್ಕಳಂತೆ ಬೆಳೆಸಿದ ಹೂವು, ಹಣ್ಣು, ತರಕಾರಿಗಳು ಕಣ್ಮುಂದೆ ಹಾಳಾಗುವುದನ್ನು ನೋಡಲಾಗದೆ ಕಣ್ಣೀರಿಟ್ಟ ರೈತರು. ಹೇಳಲೂ ಆಗದೇ ಬಿಡಲೂ ಆಗದೇ ಇಂದಲ್ಲ ನಾಳೆ ಸರಿಯಾದೀತೆಂದು ಒಪ್ಪತ್ತು ಊಟದಲ್ಲೆ ದಿನ ದೂಡಿದ ಬಡವರು,ನಿರ್ಗತಿಕರು. ಕೊರೊನಾ ಕೊರೊನಾ ಕೊರೊನಾ ಎಂದು ಇಡೀ ದಿನ ಸುದ್ದಿಯ ಮೇಲೆ ಸುದ್ದಿ ಭಿತ್ತರಿಸಿದ ಮಾಧ್ಯಮಗಳು. ಮನೆಯಿಂದ ಹೊರ ಬರಲಾಗದೇ ಕಿಟಕಿಯಲ್ಲೇ ಬೆಳಕನ್ನು ನೋಡಿದ ದಿನಗಳು. ಮುಂದೂಡಿದ ಮದುವೆ, ಉಮನಯನ, ಸಮಾರಂಭಗಳು. ಸೋತು ಹೋದೆವೆಂಬ ಭಾವ. ಸತ್ತು ಹೋದೇವೆಂಬ ಭಯ. ಕಂಡರಿಯದ ಕೊರೊನಾ ಎಂಬ ವೈರಸ್ಸಿನಿಂದ ಹೈರಾಣಾದ ರಾಷ್ಟ್ರಗಳು ಅದೆಷ್ಟೋ….
ಯಾರು ಕುಳಿತರೂ ವೈದ್ಯರು ಕುಳಿತುಕೊಳ್ಳಲಿಲ್ಲ. ದಾದಿಯರು, ಸೈನಿಕರು, ಪೋಲೀಸರು, ಅಧಿಕಾರಿ ವರ್ಗದವರು, ಸಫಾಯಿ ಕರ್ಮಚಾರಿಗಳು, ಆಶಾ ಕಾರ್ಯಕರ್ತೆಯರು, ಬ್ಯಾಂಕಿನವರು, ಔಷಧ ಅಂಗಡಿಯವರು, ಜನರಿಗಾಗಿ ಹಗಲಿರುಳೂ ಶ್ರಮಿಸಿದರು. ಮೈತುಂಬಾ ಪ್ಲಾಸ್ಟಿಕ್ ಚೀಲಗಳನ್ನು ಮುಚ್ಚಿಕೊಂಡು, ಮೂಗಿಗೆ ಮಾಸ್ಕ ಹಾಕಿಕೊಂಡು, ಬೆವರಿ ನೀರಿಳಿಯುವ ಸಂದರ್ಭವನ್ನೂ ಲೆಕ್ಕಿಸದೇ ಜೀವ ಉಳಿಸಿ ಎಂದು ಗೋಳಿಡುವ ಜೀವಗಳಿಗಾಗಿ ಜೀವಕ್ಕೆ ಜೀವ ಕೊಟ್ಟು ದುಡಿದ ವೈದ್ಯರು ದೇವರೆಂಬುದೆನ್ನು ಮತ್ತೊಮ್ಮೆ ಸಾಬೀತುಗೊಳಿಸಿದರು. ದಾದಿಯರು ನಿದ್ದೆಗೆಟ್ಟು ರೋಗಿಗಳ ಜೀವ ಉಳಿಸಲು ಪರದಾಡಿದರು. ಪೋಲೀಸರು ಬಿರು ಬಿರು ಬಿಸಿಲಿನಲ್ಲೂ ಜನರನ್ನು ನೋವಿನಿಂದ ಪಾರು ಮಾಡಲು ಒದ್ದಾಡಿದರು. ಅಂಬ್ಯೂಲೆನ್ಸ ಡ್ರೈವರ್ ಗಳು… ಸಾವನ್ನೇ ಹೊತ್ತು ಸ್ವರ್ಗಕ್ಕೆ ಪ್ರಯಾಣಿಸುತ್ತಿರುವಂತೆ ಕಂಡಿತು. ಆಶಾ ಕಾರ್ಯಕರ್ತೆಯರು ಮನೆ ಮನೆ ತಿರುಗಿ ಯೋಗ ಕ್ಷೇಮ ವಿಚಾರಿಸಿದರು. ಸೈನಿಕರು ರಾಷ್ಟ್ರ ರಕ್ಷಣೆಯ ಕಾರ್ಯವನ್ನು ಯಥಾವತ್ತಾಗಿ ಮುಂದುವರಿಸಿಯೇ ಇದ್ದರು. ತನ್ನ ಜೀವ ಉಳಿದರೆ ತಾನೆ ಬೇರೆಯವರಿಗೆ ಔಷಧ ಕೊಡುವುದು ಎಂದು ಬಾಗಿಲು ಹಾಕಿಕೊಂಡು ಕುಳಿತುಕೊಳ್ಳದ ಔಷಧ ಅಂಗಡಿಯವರು, ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಂಡ ಬ್ಯಾಂಕ ನೌಕರರು, ಸ್ವಚ್ಛತೆಯೇ ನಮ್ಮ ಉಸಿರೆಂದು ದುಡಿದ ಸಫಾಯಿ ಕರ್ಮಚಾರಿಗಳು ಇವರೆಲ್ಲರಿಂದ ನಮ್ಮವರ ಪ್ರಾಣ ಉಳಿಯುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಚೀನಾ, ಅಮೆರಿಕಾ, ಇಟಲಿಯಂತಹ ರಾಷ್ಟ್ರಗಳೇ ಕೊರೋನಾದ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇರುವಾಗ ನಮ್ಮ ಪ್ರಧಾನಿಯವರು ತೆಗೆದುಕೊಂಡ ದಿಟ್ಟ ನಿರ್ಧಾರ, ಜನ ನಾಯಕರು ಹಾಗೂ ಜನ ಸ್ಪಂದಿಸಿದ ರೀತಿ ಅವರ್ಣನೀಯ.
ಗೊತ್ತಾಯಿತು ನಮಗೆ….. ಯಾರಿಲ್ಲದಿದ್ದರೆ ಏನಾಗುತ್ತದೆಂದು. ಗೊತ್ತಾಯಿತು ನಮಗೆ…… ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತಿದ್ದೇವೆಂದು. ಗೊತ್ತಾಯಿತು ನಮಗೆ….. ಪ್ರೀತಿ ಕಾಳಜಿಯ ಮಹತ್ವಗಳು ಏನೆಂದು. ಗೊತ್ತಾಯಿತು ನಮಗೆ….. ಪ್ರಾರ್ಥನೆಯೊಂದೇ ನಮ್ಮ ಬಳಿಯಿರುವ ಅಸ್ತ್ರವೆಂದು. ಗೊತ್ತಾಯಿತು ನಮಗೆ….. ತಿನ್ನುವ ತುತ್ತಿಗೆ ಎಷ್ಟು ಬೆಲೆಯೆಂದು. ಗೊತ್ತಾಯಿತು ನಮಗೆ….. ಅನವಶ್ಯಕ ಓಡಾಟಗಳು ಎಷ್ಟೆಂದು. ಗೊತ್ತಾಯಿತು ನಮಗೆ….. ಹಣವೊಂದೇ ಅಲ್ಲ ಮನುಷ್ಯನ ಗುಣ ಮುಖ್ಯ ಎಂದು. ಗೊತ್ತಾಯಿತು ನಮಗೆ…… ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯ, ಅಧಿಕಾರಗಳೆಲ್ಲ ಮುಖ್ಯವಲ್ಲವೆಂದು. ಗೊತ್ತಾಯಿತು ನಮಗೆ….. ನಮ್ಮ ಮನೆ ಎಲ್ಲಿ ಸೋರುತ್ತಿದೆಯೆಂದು. ಗೊತ್ತಾಯಿತು ನಮಗೆ…. ನಮ್ಮ ಗೋಡೆಗಳು ಎಲ್ಲಿ ಬಿರುಕು ಬಿಟ್ಟಿವೆಯೆಂದು. ಗೊತ್ತಾಯಿತು ನಮಗೆ….. ಏನು ಬೇಕು ಏನು ಬೇಡ ಎಂದು. ಗೊತ್ತಾಯಿತು ನಮಗೆ….. ಪ್ರಕೃತಿಯ ಮುಂದೆ ನಾವು ಏನೂ ಅಲ್ಲವೆಂದು. ಗೊತ್ತಾಯಿತು ನಮಗೆ…… ಕೊರೊನಾ ಒಂದು ವೇಳೆ ಬಂದು ಬಿಟ್ಟರೆ ನಮ್ಮವರೂ ನಮಗೆ ದೂರದಿಂದಲೇ ಟಾ ಟಾ ಹೇಳುತ್ತಾರೆಂದು. ಗೊತ್ತಾಯಿತು ನಮಗೆ…… ನಾವು ನಾವು ಎಂದು ಮೆರೆಯುವುದು ವ್ಯರ್ಥವೆಂದು.
ಬರಲಿರುವ ದಿನಗಳೂ ಸುಲಭದ್ದಲ್ಲ. ಉದ್ಯೋಗ ಕಳೆದು ಹೋಗುವ ಭೀತಿಯಲ್ಲಿ ಜನರಿದ್ದಾರೆ. ದಿನ ನಿತ್ಯ ಬೀದಿ ಬದಿಯಲ್ಲಿ ನಿಂತು ತಿಂಡಿ ತಿನಿಸುಗಳನ್ನು ಮಾರುತ್ತಿದ್ದವರ ಪರಿಸ್ಥಿತಿ ಬೀದಿಗೆ ಬಂದು ಬಿದ್ದಿದೆ. ಅಗತ್ಯ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವ ಜನರ ಆಲೋಚನೆಯಿಂದ ಗೃಹ ಕೈಗಾರಿಕೆಗಳು ಮೂಲೆಗುಂಪಾಗುವ ಲಕ್ಷಣಗಳಿವೆ. ದಿನಗೂಲಿಗೆ ಹೋಗುವವರ ಪಾಡು ಹೇಳತೀರದ್ದು. ಅವರವರ ತಲೆಯ ಕೂದಲನ್ನು ಅವರವರೇ ಕತ್ತರಿಸಿಕೊಳ್ಳಲು ಕಲಿತರೆ ನಮ್ಮ ಕ್ಷೌರಿಕರೆಲ್ಲಿ ಹೋಗಬೇಕು?! ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆ ಯಾರಿಗೆ ಬೇಕು ಹೇಳಿ?!
ಇಟಲಿಯಂತಹ ರಾಷ್ಟ್ರ ಕೊರೊನಾದಿಂದ ಸರ್ವನಾಶ ಆಗುವ ಸಂದರ್ಭವನ್ನು ಟಿ.ವಿ.ಗಳಲ್ಲಿ ವೀಕ್ಷಿಸುವಾಗ ದೇವರೆ ನನ್ನ ಹೆಂಡತಿ, ಮಕ್ಕಳು, ತಂದೆ, ತಾಯಿಗಳಿಗೊಂದು ಏನೂ ಆಗದಿರಲಿ ಎಂಬ ಭಾವವೇ ನಮ್ಮೊಳಗೆ ಹೆಚ್ಚಾಗಿದ್ದು. ನಮ್ಮ ಶತ್ರುಗಳಿಗೆ ಇದು ಬಂದರೂ ಚಿಂತೆಯಿಲ್ಲ ಎಂದು ಒಳಗೊಳಗೇ ಅಂದುಕೊಂಡವರೂ ಇರಬಹುದು. ? ಆದರೆ ಕೆಲವು ಜನ ಬೆಳಗಾದರೆ ಜನ ಸೇವೆಗಾಗಿ ಹೊರಟು ನಿಲ್ಲುತ್ತಿದ್ದರು. ಅನೇಕರು ಫೋಟೊಕ್ಕಾಗಿ ದಿನಸಿ ಹಂಚಿದರೋ… ಹೃದಯ ಪೂರ್ವಕವಾಗಿ ಹಂಚಿದರೋ….ಅಂತೂ ಹಂಚಿದರಲ್ಲ…..ಅದು ದೊಡ್ಡ ಕೆಲಸ.
ಸುಖ ಸಂತೋಷದ ದಿನಗಳು ಮತ್ತೆ ಮರಳಲಿ. ಬಟ್ಟೆಗಳು ಧೂಳು ಹಿಡಿಯುತ್ತಿವೆ. ಮೇಕಪ್ಪಿಲ್ಲದ ಮುಖವನ್ನು ನೋಡಲಾಗುತ್ತಿಲ್ಲ. ಕೂದಲು ಒಂದು ಕಡೆಗೆ ಉದ್ದ ಇನ್ನೊಂದು ಕಡೆಗೆ ಗಿಡ್ಡ. ಬಂಗಾರದ ನೆಕಲೇಸು, ವಜ್ರದ ಉಂಗುರ, ಮುತ್ತಿನ ಹಾರ, ಹವಳದ ಓಲೆ, ಪಾಟಲೆ ಬಳೆಗಳನ್ನು ನಾವು ನಾವೇ ಹಾಕಿಕೊಂಡು ನೋಡುತ್ತಿರುವುದಕ್ಕೆ ಆಗುವುದಿಲ್ಲ. ಸೀರೆಗಳಂತೂ ಕಪಾಟಿನಲ್ಲಿ ಮಡಿಚಿಟ್ಟಿದ್ದು ಹಾಗೆಯೇ ಇವೆ. ನಾನು ದುಡಿದದ್ದು ಜೀವಮಾನಕ್ಕೆ ಸಾಲುವುದಿಲ್ಲ……ತಿಂಗಳು ಕಳೆಯಬಹುದಷ್ಟೆ…. ಬರವಣಿಗೆ ಸಂತೋಷ ಕೊಡಬಹುದಾದರೂ ಹೊಟ್ಟೆ ತುಂಬಿಸುವುದಿಲ್ಲ. ಹೆಂಡತಿ ಮಕ್ಕಳನ್ನು ತೊರೆದು ಯಾವ್ಯಾವುದೋ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಹಸಿದ ಹೊಟ್ಟೆಗಳಿಂದ ನರಳುವ ನಮ್ಮ ಜನರಿಗಾಗಿ ಭಾಗ್ಯದ ಬಾಗಿಲು ತೆರೆಯಬೇಕು. ಕೊರೊನಾದಿಂದ ನಮ್ಮವರ ಜೀವ ಹಾನಿಯಾಗಿ ಕಣ್ಣೀರಿಡುವಂತೆ ಆಗದಿರಲಿ. ಲಾಠಿ ಬೀಸಿದರೂ ಕಷ್ಟ. ಬೀಸದಿದ್ದರೂ ಕಷ್ಟ…..ಪೋಲೀಸರಿಗೂ ಅಕ್ಕ ತಂಗಿ ಅಣ್ಣ ತಮ್ಮಂದಿರಿದ್ದಾರೆ. ಅವರಿಗಾಗಿ ನಾವು ಎದ್ದು ನಿಂತು ನಮಸ್ಕಾರ ಸಲ್ಲಿಸೋಣ. ಚಪ್ಪಾಳೆ ಹೊಡೆಯೋಣ. ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸಿ ನಮ್ಮವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ.
ಸ್ವಾಭಿಮಾನದಿಂದ ಬದುಕಲು ಇಷ್ಟಪಡುವವರು ಯಾರ ಬಳಿಯೂ ಬೇಡುತ್ತಿಲ್ಲ. ಹಾಗಂತ ಆರ್ಥಿಕ ಅಡಚಣೆಯ ಮಾನಸಿಕ ವೇದನೆ ಸುತ್ತಲಿರುವವರ ಮೇಲೆ ಆಗುತ್ತಿರುವುದು ಸುಳ್ಳಲ್ಲ. ಯಾರದೋ ಜೀವ ಉಳಿಸುವುದಕ್ಕಾಗಿ ನಾನು ನನ್ನ ಮನೆಯವರನ್ನು ಬಿಟ್ಟು ಕೊಡುವುದಕ್ಕೆ ಮನಸ್ಸಾಗುವುದಿಲ್ಲ. ಬಾಗಿಲಿಂದ ಹೊರ ಹೊಂಟರೆ ಇಂದು ಮರಳಿ ಬರುತ್ತಾರೆನ್ನುವ ಧೈರ್ಯ ನಮ್ಮವರ ಬಳಿ ಉಳಿದಿಲ್ಲ. ಕಾರಿನಲ್ಲಿಯೋ….ರೈಲು ಭೋಗಿಯಲ್ಲಿಯೋ, ಹೊಟೆಲ್ ಕೋಣೆಗಳಲ್ಲಿಯೋ ಕ್ವಾರೆಂಟೈನ್ ಆಗಿ ಮುದ್ದಾದ ತಮ್ಮದೇ ಮಕ್ಕಳನ್ನೂ ಮನೆಯವರನ್ನೂ ನೋಡಲಾಗದೇ ಕೊನೆಗೆ ಯಾರೂ ಇಲ್ಲದ ಅನಾಥರಂತೆ ಶವ ಸಂಸ್ಕಾರಕ್ಕೂ ಗತಿಯಿಲ್ಲದವರಂತೆ ಹೋಗುತ್ತಿರುವ ಸಾಮಾಜಿಕ ಕಾರ್ಯಕರ್ತರುಗಳನ್ನು ನೋಡಿ ಹೆಮ್ಮೆಯೂ ಆಗುತ್ತದೆ. ಸಂಕಟವೂ ಆಗುತ್ತದೆ. ನಾವೇ…. ನಮ್ಮ ಮನೆಯವರೇ…. ಅದನ್ನು ಅನುಭವಿಸುವುದಕ್ಕೆ ಸಿದ್ಧರಿದ್ದೇವಾ?! ಕಷ್ಟ. ಕಷ್ಟ.
ಅಲ್ಲಿ ಬೆಳೆಯುವ ಕಂದಮ್ಮಗಳು ವೈದ್ಯರಾದ ಅಪ್ಪನಿಗೆ ಬಹುದೂರದಿಂದ ಗೇಟಿನಾಚೆಯೇ ಟಾ ಟಾ ಬೈ ಬೈ ಹೇಳುತ್ತಿವೆ. ಅಪ್ಪ ಮತ್ತೆ ನಮ್ಮನ್ನು ನೋಡುವುದಕ್ಕೆ ಮರಳಿ ಬರಲಾರ ಎಂಬುದೂ ಗೊತ್ತಿಲ್ಲ ಆ ಮುಗ್ಧ ಮನಸ್ಸುಗಳಿಗೆ. ಅಮ್ಮ ಯಾವಾಗ ಬರುತ್ತಾಳೆಂದು ದಾದಿಯ ಮಗಳೊಬ್ಬಳು ಇಲ್ಲಿ ಕೇಳುತ್ತಿದ್ದಾಳೆ. ರಾತ್ರಿಯಾದರೂ ಬರದ ಆರಕ್ಷಕ ಪತಿಗಾಗಿ ಪತ್ನಿ ಬಾಗಿಲು ಬಡಿಯುವುದನ್ನೇ ಕಾಯುತ್ತಿದ್ದಾಳೆ. ಮಗ, ಮಗಳು ಬರಲಿಲ್ಲವೆಂದು ವೃದ್ಧ ತಂದೆ ತಾಯಿಗಳು ಬರಕಾಯುತ್ತಿವೆ. ಸಹಿಸಲಾರದ ವಾಸನೆಯ ನಡುವೆಯೂ ತಮ್ಮ ಇಡೀ ಜನ್ಮವೇ ಇದು ಎಂದು ಮುನ್ಸಿಪಾಲ್ಟಿ ಕಾರ್ಮಿಕರು ದುಡಿಯುತ್ತಿದ್ದಾರೆ…..ತಿಂಡಿ ತಿನಿಸುಗಳನ್ನು ಹೊತ್ತು ತರುವ ಅಪ್ಪ ಅಮ್ಮ ಸೋತು ಹೋದ ಮುಖ ಹೊತ್ತು ಭಾರವಾದ ಹೃದಯದೊಂದಿಗೆ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ನಾನಿಲ್ಲಿ ಬದುಕಿಗೆ ಬಣ್ಣ ತುಂಬುತ್ತಿದ್ದೇನೆ.?????? ನೋವು ಸಂಕಟಗಳನ್ನು ಮರೆಯುವ ಪ್ರಯತ್ನವಿದಷ್ಟೇ….. ಕ್ಷಮೆಯಿರಲಿ……..?
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಕೊರೊನಾ ಸಂಕಷ್ಟದ ದಿನಗಳಲ್ಲಿ ನೆರವಿಗೆ ಬಂದ ಪ್ರತಿಯೊಬ್ಬರಿಗೂ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ವೈದ್ಯರಿಗೆ, ದಾದಿಯರಿಗೆ, ಆರಕ್ಷಕರಿಗೆ, ಸಫಾಯಿ ಕರ್ಮಚಾರಿಗಳಿಗೆ, ದಿನಸಿ ಅಂಗಡಿಯವರಿಗೆ, ಔಷಧ ಸರಬರಾಜುದಾರರಿಗೆ, ಬ್ಯಾಂಕ ಉದ್ಯೋಗಿಗಳಿಗೆ, ನೆರವಾದ ಪ್ರತಿಯೊಬ್ಬರಿಗೂ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದೊಮ್ಮೆ ಅವರನ್ನು ಅಭಿನಂದಿಸೋಣ
??????⚫⚪???????⚫⚪?????