ಬೀಜದೊಳಗೆ ಇದೆ ಎಣ್ಣೆ
ಹಾಲಿನೊಳಗೆ ಇದೆ ಬೆಣ್ಣೆ
ನಿನ್ನಯ ದೇವ ನಿನ್ನೊಳಗಿಹನೈ
ಕೈಲಾದರೆ ನೋಡೈ- ಕಬೀರ.
ಎಣ್ಣೆ ಬೀಜದೊಳಗೆ ,ಬೆಣ್ಣೆ ಹಾಲಿನೊಳಗೆ ಇರುತ್ತದೆ. ಹಾಗೆಯೇ ದೇವರು ನಿಮ್ಮೊಳಗೆ ಇರುತ್ತಾನೆ. ನಿಮ್ಮಿಂದ ಸಾಧ್ಯವಾದರೆ ನೋಡಿ. ಎಂಬುದು ಕಬೀರವಾಣಿ.
ಬೀಜದೊಳಗೆ ಎಣ್ಣೆ, ಹಾಲಿನೊಳಗೆ ಬೆಣ್ಣೆ ,ನಮ್ಮೊಳಗೆ ದೇವರು ಅವ್ಯಕ್ತವಾಗಿವೆ. ಅದು ವ್ಯಕ್ತವಾಗಬೇಕಾದರೆ ಅಲ್ಲಿ ನಮ್ಮ ಪ್ರಯತ್ನ ಅವಶ್ಯ. ಬೀಜದಿಂದ ಎಣ್ಣೆಯನ್ನು, ಹಾಲಿನಿಂದ ಬೆಣ್ಣೆಯನ್ನು ತೆಗೆಯುವುದು ಮನುಷ್ಯ ಪ್ರಯತ್ನದಿಂದ ಹೇಗೆ ಸಾಧ್ಯವೋ ಹಾಗೆ ನಮ್ಮೊಳಗಿನ ದೇವರನ್ನು ನೋಡುವುದೂ ಸಾಧ್ಯ . ಆದರೆ ಇಲ್ಲಿ ವಿಶೇಷ ಪ್ರಯತ್ನ ಅಗತ್ಯ.
ಅವ್ಯಕ್ತವಾಗಿರುವುದನ್ನು ವ್ಯಕ್ತಗೊಳಿಸಲು ಸಾಧನೆಯ ಹಾದಿಯಲ್ಲಿ ಸಾಗಬೇಕು. ನಮ್ಮೊಳಗಿರುವ ದೇವರನ್ನು ಕಾಣಬೇಕಾದರೆ ನಮ್ಮ ಅಂತರಂಗದ ಬಾಗಿಲನ್ನು ತೆರೆಯಬೇಕು. ಅದು ಅಷ್ಟು ಸುಲಭವಲ್ಲ . ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದಾಗ ಅಲ್ಲಿ ಪರಮಾತ್ಮನ ದರ್ಶನವಾಗುತ್ತದೆ. ಅದು ಪ್ರಾಪಂಚಿಕ ಮೋಹವನ್ನು ತ್ಯಜಿಸಿ ಭಕ್ತಿ ಮಾರ್ಗದಲ್ಲಿ, ಮುಕ್ತಿ ಮಾರ್ಗದಲ್ಲಿ ಸಾಗುವವರಿಗೆ ಮಾತ್ರ ಸಾಧ್ಯ. ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಹಾಗಾಗಿ ನಿನ್ನ ಕೈಲಾದರೆ ಒಳಗಿರುವ ದೇವನನ್ನು ನೋಡು ಎಂಬುದು ಈ ದೋಹೆಯ ಭಾವಾರ್ಥ.
ಇದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ……
ಹೂವಿನಲಿ ಪರಿಮಳವು ಎಳ್ಳಿನಲಿ ಎಣ್ಣೆಯು
ಅಗ್ನಿ ಕಟ್ಟಿಗೆಯಲ್ಲಿ ಹಾಲಿನಲಿ ತುಪ್ಪ
ಅಂತಿರುವ ನಿನ್ನಾತ್ಮ ಅದೃಶ್ಯ ರೂಪದಲಿ
ನಂಬಿಕೆಯೆ ಸಾಕಾರ -ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ