ಗ್ರಂಥ ಗ್ರಂಥಗಳ ಓದಿದವನು       
ಪಂಡಿತನಲ್ಲ ಖಂಡಿತ
ಪ್ರೇಮವೆಂಬ ಎರಡಕ್ಷರವನು    
ಅರಿತವನೇ ಪಂಡಿತ- ಕಬೀರ                      

ದೊಡ್ಡ ದೊಡ್ಡ ಗ್ರಂಥಗಳನ್ನು ಓದಿದ ಮಾತ್ರಕ್ಕೆ ಆತನನ್ನು ಪಂಡಿತನೆನ್ನಲು  ಸಾಧ್ಯವಿಲ್ಲ. ಯಾರು ಪ್ರೀತಿ ಪ್ರೇಮವೆಂಬ ಎರಡಕ್ಷರವನ್ನು ಅರಿತಿರುತ್ತಾನೊ ಅವನೇ ನಿಜವಾದ ಪಂಡಿತ. ಎಂಬುದು ಕಬೀರರ ಅಭಿಮತ.

ಜ್ಞಾನವೆನ್ನುವುದು ಕೇವಲ ಪುಸ್ತಕದಲ್ಲಿಲ್ಲ.  ಅದು ಎಲ್ಲರೊಡನೆ ಬೆರೆತು ಬಾಳುವುದರಲ್ಲಿದೆ.  ಕೇವಲ ಪುಸ್ತಕ ಓದಿದ ಮಾತ್ರಕ್ಕೆ ಆತ ಮಹಾಜ್ಞಾನಿ ಆಗಲಾರ.  ಓದಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅರಿತು ಕೊಂಡವನೇ ನಿಜವಾದ ಜ್ಞಾನಿ ಎಂಬುದು ಈ ದೋಹೆಯ ಭಾವಾರ್ಥ.                 

ಬದುಕು ಅರ್ಥಪೂರ್ಣವಾಗುವುದು ಸಾರ್ಥಕ ಬದುಕನ್ನು ಬದುಕಿದಾಗ ಮಾತ್ರ.  *ಬದುಕಿರುವಾಗಲೇ ಜನರ ಬಾಯಲ್ಲಿ ಸಾಯದೆ ಸತ್ತ ಮೇಲೂ ಜನರ ಬಾಯಲ್ಲಿ ಬದುಕುವಂತಹ ಬದುಕು ನಮ್ಮ ದಾಗಬೇಕು*  ಅಂತಹ ಬದುಕು ನಮ್ಮದಾಗಬೇಕಾದರೆ ಅದು ಕೇವಲ ಪುಸ್ತಕ ಜ್ಞಾನದಿಂದ ಸಾಧ್ಯವಿಲ್ಲ ಬದಲಾಗಿ ಎಲ್ಲರ ಪ್ರೀತಿಗೆ ಪಾತ್ರರಾಗುವುದರಿಂದ ಅದು ಸಾಧ್ಯವಿದೆ.  ನಾವು ಕೇವಲ ನಮಗಾಗಿ ಬದುಕದೆ ಎಲ್ಲರಿಗಾಗಿ ಬದುಕಿದಾಗ ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ.  ಆದ್ದರಿಂದಲೇ ಪ್ರಾಜ್ಞರು ಹೇಳಿದ್ದು ವಿದ್ಯಾವಂತನಾಗುವುದಕ್ಕಿಂತ ಮೊದಲು ಹೃದಯವಂತನಾಗು ಎಂದು. 

ಇದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ……..‌‌‌‌. 

ಕತ್ತಲೆಯ ಸಂಘದಲಿ ಜ್ಯೋತಿಯನು  ಬೆಳಗಿಸಿರೆ
ಉತ್ತಮನು ಅವನೆನಲು ಮತ್ತೇನು ಬೇಡ   
ಬತ್ತಲಾರದ ಅಮೃತ ಅರಿವಿನಾ ಜ್ಯೋತಿಯನು‌ ಎತ್ತಿ ಹಿಡಿದವ ಜ್ಞಾನಿ -ಭಾವಜೀವಿ.

✍️ ಡಾ.ರವೀಂದ್ರ ಭಟ್ಟ ಸೂರಿ