ಮಾಡುವುದನೆಲ್ಲ ಮಾಡಿದ ಮೇಲೆ
ಈಗೇತಕೆ ಪರಿತಾಪ….?
ಬೇವಿನ ಮರವನು ಬೆಳೆಸಿದ ಮೇಲೆ
ಮಾವು ದೊರಕುವುದೇ-ಕಬೀರ.
“ಬಿತ್ತಿದಂತೆ ಬೆಳೆ” , “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತುಗಳನ್ನು ನೆನಪಿಸುವ ದೋಹೆ ಇದು. ಮಾಡುವುದನ್ನೆಲ್ಲ ಮಾಡಿ ಆ ಮೇಲೆ ಪರಿತಾಪ ಪಟ್ಟರೆ ಏನು ಪ್ರಯೋಜನ. ಬೇವಿನ ಮರವನ್ನು ಬೆಳೆಸಿ ಮಾವು ಬೇಕೆಂದರೆ ಅದು ಸಿಗುವುದು ಸಾಧ್ಯವೇ ಎಂಬುದು ಕಬೀರರ ಪ್ರಶ್ನೆ.
ನಮ್ಮ ವರ್ತನೆಯೇ ಹಾಗೆ. ತಪ್ಪು ಒಪ್ಪುಗಳನ್ನು ಪರಾಮರ್ಶಿಸದೇ ಮಾಡಬೇಕೆನಿಸಿದ್ದನ್ನು ಮಾಡಿ ಮುಗಿಸುತ್ತೇವೆ. ಆಮೇಲೆ ಅದರ ಪರಿಣಾಮ ವ್ಯತಿರಿಕ್ತವಾದಾಗ ಪರಿತಾಪ ಪಡುತ್ತೇವೆ. ನಮಗೆ ಯಾಕಾದರೂ ಇಂತಹ ಪರಿಸ್ಥಿತಿ ಬಂತೋ ? ಅಂತಾ ಗೋಳಿಡುತ್ತೇವೆ. ಆ ಘೋರ ಪರಿಣಾಮಕ್ಕೆ ಕಾರಣ ನಾವೇ ಎಂಬುದನ್ನು ಮರೆತುಬಿಡುತ್ತೇವೆ. ಮಾವಿನ ನಿರೀಕ್ಷೆ ಮಾಡುವ ನಾವು ಬೆಳೆದದ್ದು ಬೇವಿನ ಮರ ಎಂಬುದು ಆ ಕ್ಷಣಕ್ಕೆ ನಮ್ಮ ಅರಿವಿನ ಪರಿಧಿಗೆ ಬರುವುದಿಲ್ಲ. ಆದ್ದರಿಂದ ಉತ್ತಮ ಕೆಲಸ ಮಾಡಿ ಉತ್ತಮ ಫಲ ಪಡೆ ಎಂಬ ನೀತಿ ಇಲ್ಲಿ ಅಡಕವಾಗಿದೆ.
ಇದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ………
ಕೂಡುವುದು ದುರ್ಬುದ್ಧಿ ಕೇಡಿನಾ ಕಾಲಕ್ಕೆ
ಮೂಡುವುದು ಮನದಲ್ಲಿ ಬೇಡದಿಹ ಚಿಂತೆ
ಕಾಡುವುದು ನಿನ್ನನ್ನು ಬಿಟ್ಟು ಬಿಡದಲದುವು
ಮಾಡುವುದನಿಷ್ಟವನು-ಭಾವಜೀವಿ.
ನಮಗೆ ಕೆಡುವ ಕಾಲಕ್ಕೆ ದುರ್ಬುದ್ಧಿ ಬಂದು ಕೂಡುತ್ತದೆ. ಮನಸ್ಸಿನ ತುಂಬ ಬೇಡವಾದ ಚಿಂತೆಗಳೇ ತುಂಬಿಕೊಳ್ಳುತ್ತವೆ. ಅದರಿಂದಾಗಿ ನಾವು ತಪ್ಪುಗಳನ್ನು ಮಾಡುತ್ತೇವೆ. ಅದರ ಕೆಟ್ಟ ಪರಿಣಾಮ ನಂತರದಲ್ಲಿ ನಮ್ಮನ್ನು ಕಾಡುತ್ತದೆ. ಇದು ಖಂಡಿತಾ….ಹಾಗಾಗಿ
ಕಾಡಿ ಬದುಕದೇ ಕೂಡಿ ಬದುಕು.
✍️ ಡಾ.ರವೀಂದ್ರ ಭಟ್ಟ ಸೂರಿ