ದಯೆ ಇರುವಲ್ಲಿದೆ ಧರ್ಮ
ಲೋಭವಿರುವಲ್ಲಿ ಪಾಪ
ಕ್ರೋಧದ ಬಳಿ ಮೃತ್ಯುವಿಹನು
ಕ್ಷಮೆ ಇರುವೆಡೆ ನೀನು- ಕಬೀರ.
ದಯೆಯೇ ಧರ್ಮದ ಮೂಲ. ದಯೆ ಇರುವಲ್ಲಿ ಧರ್ಮವಿರುತ್ತದೆ. ಲೋಭವಿರುವಲ್ಲಿ ಪಾಪ ವಿರುತ್ತದೆ. ಸಿಟ್ಟಿನ ಬಳಿ ಮೃತ್ಯು ಇರುತ್ತಾನೆ. ಹಾಗೆಯೇ ಕ್ಷಮೆ ಇರುವಲ್ಲಿ ದೇವರಿರುತ್ತಾನೆ. ಎಂಬುದು ಸಂತ ಕಬೀರರ ಅಭಿಮತ.
ದಯೆಯಿರಬೇಕು ಸಕಲ ಜೀವಿಗಳಲ್ಲಿ ಎಂಬ ನುಡಿ ನಮ್ಮ ಮೂಲ ಮಂತ್ರವಾಗಬೇಕು. ದಯೆ ಇರುವಲ್ಲಿ ಧರ್ಮವಿರುತ್ತದೆ. ದಯೆ ಇರುವಲ್ಲಿ ದಯಾಮಯನ ಕರುಣಾ ದೃಷ್ಟಿ ಇರುತ್ತದೆ. ಎಲ್ಲಿ ಲೋಭ ವಿದೆಯೋ ಅಲ್ಲಿ ಪಾಪ ನೆಲೆಸಿರುತ್ತದೆ. ಯಾರ ನೋವಿಗೂ, ಕಷ್ಟಕ್ಕೂ ಸ್ಪಂದಿಸದ, ಸಹಾಯ ಮಾಡದ ಕರುಣೆ ತೋರದವನು ಬೇರೆ ಪಾಪ ಮಾಡಬೇಕಿಲ್ಲ. ಮಾನವೀಯತೆ ಮರೆತ ಲೋಭಿಯನ್ನು ಪಾಪದ ಪರಿಣಾಮ ಕಾಡದೇ ಇರದು. ಹಾಗೆಯೇ ಕೋಪವಿರುವಲ್ಲಿ ಮೃತ್ಯು ಇರುತ್ತದೆ. ಕೋಪದ ಪರಿಣಾಮ ಘೋರವಾಗಿರುತ್ತದೆ. ಕೋಪಗೊಂಡ ವ್ಯಕ್ತಿ ತನ್ನ ಮನದ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಆತನ ನಡೆ ನುಡಿ ಅವನ ಹಿಡಿತದಲ್ಲಿರುವುದಿಲ್ಲ. ಅಲ್ಲಿ ಘೋರ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೋಪದ ಕೈಯಲ್ಲಿ ಬುದ್ಧಿ ಕೊಡಬಾರದು ಎನ್ನುತ್ತಾರೆ. ನಾವು ಕ್ಷಮಾ ಗುಣವನ್ನು ಹೊಂದಿರಬೇಕು. ಕ್ಷಮೆ ಇರುವಲ್ಲಿ ದೇವರಿರುತ್ತಾನೆ. ಅಂದರೆ ಅಲ್ಲಿ ಒಳಿತೇ ಇರುತ್ತದೆ ಎಂಬುದು ಈ ದೋಹೆಯ ಅರ್ಥ.
ಅದನ್ನು ಕವಿವಾಣಿ ಯೊಂದು ಹೇಳಿದ್ದು ಹೀಗೆ.
ಕೋಪದಿಂದಲಿ ಸಾವು ಪಾಪದಿಂದಲಿ ದುಃಖ
ತಾಪವದು ತಟ್ಟುವುದು ಪಾಪ ಭೀತಿಯಲಿ
ಪಾಪಿ ನೀನಾಗುವೆಯೋ ಪಾಪ ಕೃತ್ಯವ ಮಾಡೆ
ಶಾಪ ತಟ್ಟದೆ ಬಿಡದು -ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ