ಅಂತಹ ಧನವನು ಗಳಿಸಲು ಬೇಕು
ಪರಗತಿಗು ಆಗಬೇಕು
ಮರಳುವ ದಿನ ಅದ ಒಯ್ಯುವಾಗ
ಕಾಣರು ಅದನ್ಯಾರು- ಕಬೀರ.
ನಾವು ಸಂಪತ್ತನ್ನು ಗಳಿಸಬೇಕು. ಅದು ಎಂತಹ ಸಂಪತ್ತಾಗಿ ರಬೇಕು ಎಂದರೆ ಪರಗತಿಗೂ ಆಗುವಂತಿರಬೇಕು. ನಮ್ಮ ಅಂತಿಮ ಪಯಣದಲ್ಲಿ ಅದನ್ನು ನಾವು ಒಯ್ಯುವಾಗ ಅದು ಯಾರಿಗೂ ಕಾಣುವುದಿಲ್ಲ. ಎಂದು ಈ ದೋಹೆ ಹೇಳುತ್ತದೆ.
ನಾವು ಕೇವಲ ಇಹದ ಸುಖಕ್ಕಾಗಿ ಸಂಪತ್ತು ಗಳಿಸುತ್ತೇವೆ. ಆ ಸಂಪತ್ತಿನ ಸಂಗ್ರಹಕ್ಕಾಗಿ ಏನೇನೆಲ್ಲ ಮಾಡುತ್ತೇವೆ. ನಾವು ಸಂಗ್ರಹಿಸಿದ್ದು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತದೆ ಎಂಬಂತೆ ವರ್ತಿಸುತ್ತೇವೆ. ಆದರೆ ಅಂತಹ ಸಂಪತ್ತು ನಶ್ವರ ಎಂಬುದನ್ನು ಮರೆತುಬಿಡುತ್ತೇವೆ. ಶಾಶ್ವತವಾದ ಸಂಪತ್ತಿನ ಸಂಗ್ರಹಕ್ಕೆ ನಮ್ಮ ಮನಸ್ಸು ತುಡಿಯುವುದಿಲ್ಲ. ಹಾಗಾಗಿ ನಮ್ಮ ದುಡಿತವೇ ವ್ಯರ್ಥವಾಗುತ್ತದೆ. ನಾವು ಕೂಡಿಡುವ ಸಂಪತ್ತು ಇಹದಲ್ಲೂ ಪರದಲ್ಲೂ ನಮಗೆ ಒಳಿತನ್ನು ಮಾಡುವಂತಿರಬೇಕು. ನಾವು ಬದುಕಿರುವಾಗ ಅದು ನಮಗೂ ಜೊತೆಗೆ ಇತರರಿಗೂ ಉಪಯುಕ್ತವಾಗು ವಂತಿರಬೇಕು. ನಮ್ಮ ಅಂತಿಮ ಯಾತ್ರೆಯ ಕಾಲಕ್ಕೆ ನಾವು ಅದನ್ನು ಕೊಂಡೊಯ್ಯುವಾಗ ಅದು ಯಾರಿಗೂ ಕಾಣಲಾರದು. ಎಂದು ಸಂತ ಕಬೀರರು ಪುಣ್ಯವೆಂಬ ಸಂಪತ್ತನ್ನು ಸಂಗ್ರಹಿಸು ಎಂದು ಮಾರ್ಮಿಕವಾಗಿ ಈ ದೋಹೆಯ ಮೂಲಕ ನಮಗೆ ಹೇಳಿದ್ದಾರೆ.
ಬದುಕಿನಲ್ಲಿ ಮಾಡಿದ ಒಳಿತು ಸಾವಿನಲ್ಲೂ , ಸಾವಿನ ನಂತರದಲ್ಲೂ ನಮ್ಮ ಜೊತೆ ಇರುತ್ತದೆ. ಅದರಿಂದ ಇಹ ಪರಗಳಲ್ಲಿ ನಮಗೆ ಶ್ರೇಯಸ್ಸು ದೊರೆಯುತ್ತದೆ. ಎಂಬ ನೀತಿ ಇಲ್ಲಿದೆ.
ಅದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ…….
ಬಿಡಿಗಾಸನೆಣಿಸುತ್ತ ಬಿಡದೆಜೀವನ ಸ್ವಾರ್ಥ.
ಪುಡಿಗೈಯದಿರು ಬರಿದೆ ನಿನ್ನಿಡೀ ಬದುಕ.
ಕಡೆಗಣಿಸಿ ಅನ್ಯರನು ಮೆರೆದೆಯಾದರೆ ನೀನು
ಅಡಿ ತಪ್ಪದೇ ಇರದು -ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ