ಹಿಮದ ತಂಪು ತಂಪಲ್ಲ
ಚಂದ್ರನ ತಂಪು ತಂಪಲ್ಲ
ಸಾಧು ಸಜ್ಜನರ ದಿವ್ಯಸಂಗ
ತಂಪಿನಲು ತಂಪು -ಕಬೀರ.
ಹಿಮವು ತಂಪಾಗಿದ್ದರೂ ಅದರ ತಂಪು ತಂಪಲ್ಲ. ಚಂದ್ರನ ಬೆಳಕು ಹಿತವಾಗಿದ್ದರೂ ಅದು ತಂಪಲ್ಲ .ಆದರೆ ಸಾಧು ಸಜ್ಜನರ ದಿವ್ಯ ಸಂಗ ತಂಪಿನಲ್ಲೂ ತಂಪು ಎನ್ನುತ್ತಾ ಸಂತ ಕಬೀರರು ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬ ಮಾತನ್ನು ಈ ದೋಹೆಯ ಮೂಲಕ ಮತ್ತೊಮ್ಮೆ ನಮಗೆ ನೆನಪಿಸಿದ್ದಾರೆ.
ಹಿಮವು ತಂಪಾಗಿದ್ದರೂ ಅದು ಕೇವಲ ನಮ್ಮ ಬಾಹ್ಯಶರೀರಕ್ಕಷ್ಟೇ ತಂಪಿನ ಅನುಭವವನ್ನು ನೀಡುತ್ತದೆ. ಚಂದ್ರನ ಬೆಳಕು ಕೂಡ ನಮಗೆ ಹಿತವಾದ ಅನುಭವವನ್ನು ನೀಡುತ್ತದೆಯಾದರೂ ಅದು ಹೊರ ಶರೀರಕ್ಕೆ ಮಾತ್ರ. ಆದರೆ ನಮ್ಮ ಅಂತರಂಗ ಹಾಗೂ ಬಹಿರಂಗಕ್ಕೆ ತಂಪಿನ ಅಮೃತ ಸಿಂಚನವಾಗುವುದು ಸಾಧು ಸಜ್ಜನರ ದಿವ್ಯ ಸಂಗದಲ್ಲಿ ಮಾತ್ರ ಎಂಬುದು ಈ ದೋಹೆಯ ಭಾವಾರ್ಥ.
ನಾವು ಹೊರಗಿನ ತಂಪನ್ನಷ್ಟೇ ಅನುಭವಿಸುತ್ತೇವೆ. ಅದನ್ನೇ ಹಿತವೆಂದು ಭಾವಿಸುತ್ತೇವೆ. ನಮಗೆ ಕ್ಷಣಿಕ ಸಂತೋಷ ಕೊಡುವುದನ್ನು ನಾವು ತುಂಬಾ ಇಷ್ಟ ಪಡುತ್ತೇವೆ. ಆದರೆ ದೂರಗಾಮಿ ಪರಿಣಾಮ ಬೀರುವ ಶಾಶ್ವತ ಸುಖ ಸಂತೋಷದೆಡೆಗೆ ನಾವು ಗಮನ ಹರಿಸುವುದೇ ಇಲ್ಲ. ಅದನ್ನು ನಾವು ದೂರವಿಡುತ್ತೇವೆ. ಸಾಧು ಸಜ್ಜನರ ವಿಚಾರದಲ್ಲಿಯೂ ಹೀಗೆ, ನಾವು ಅವರ ಸಾಮಿಪ್ಯವನ್ನು ಬಯಸುವುದಿಲ್ಲ. ಅವರ ಹಿತನುಡಿಗಳು ನಮಗೆ ರುಚಿಸುವುದಿಲ್ಲ. ಸಾಧು ಸಜ್ಜನರ ಸಂಗ ಮಾಡುವುದೆಂದರೆ ಅದು ಪ್ರಯೋಜನಕ್ಕೆ ಬಾರದ್ದು ಎಂದು ಭಾವಿಸುತ್ತೇವೆ. ಆದರೆ ನಿಜವಾಗಿ ನಮ್ಮ ಅಂತರಂಗ ಬಹಿರಂಗದ ಒಳಿತಿರುವುದು ಸಾಧು ಸಜ್ಜನರ ಸಂಗದಲ್ಲಿ ಎಂಬುದನ್ನೇ ಮರೆತುಬಿಡುತ್ತೇವೆ. ಆದ್ದರಿಂದಲೇ ಕಬೀರರು ಒಳ್ಳೆಯವರ ಸಂಗ ಮಾಡು ನಿನಗೆ ಒಳಿತಾಗುತ್ತದೆ ಎಂಬುದನ್ನು ಸೂಚ್ಯವಾಗಿ ಈ ದೋಹೆಯ ಮೂಲಕ ಹೇಳಿದ್ದಾರೆ.
ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ……..
ಗುಣವಂತರೊಡನಾಡು ಕ್ಷಣ ಮಾತ್ರವಾದರೂ
ಮಣಿವಂತ ಗುಣವಿರಲಿ ಹಿರಿಯರನು ಕಾಣೆ
ಕ್ಷಣಿಕ ಸುಖವದು ನಿನಗೆ ದುರ್ಗುಣರ ಸಹವಾಸ
ಕ್ಷಣಮಾತ್ರದಲಿ ನಾಶ- ಭಾವಜೀವಿ
✍️ ಡಾ.ರವೀಂದ್ರ ಭಟ್ಟ ಸೂರಿ