ನನ್ನದುಹೋಗುವುದೇನಿಲ್ಲ
ನಿನ್ನ ಬಿರುದಿಗೇ ಕುಂದು
ಶರಣಾದವನನು ತೊರೆದವನೆಂದು
ನಿನಗೆ ದೂರು ಬರುವುದು -ಕಬೀರ
ದೇವರನ್ನು ಕುರಿತು ಪ್ರೀತಿಯಿಂದಲೇ ಆಕ್ಷೇಪಿಸುವ ದೋಹೆ ಇದು. ನಾನಂತೂ ನಿನಗೆ ಶರಣು ಬಂದಿದ್ದೇನೆ. ನನ್ನ ಮನದ ಬೇಡಿಕೆಗಳನ್ನೆಲ್ಲ ನಿನ್ನ ಮುಂದೆ ಇಟ್ಟಿದ್ದೇನೆ. ನೀನು ಈಡೇರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ನನಗಾಗುವುದೇನಿಲ್ಲ. ನಿನ್ನ ಗೌರವಕ್ಕೇ ಚ್ಯುತಿ ಬರುತ್ತದೆ. ನಂಬಿ ಶರಣಾದವನನ್ನು ಕೈಬಿಟ್ಟವನು ಎಂಬ ಆರೋಪ ನಿನ್ನ ಮೇಲೆ ಕೇಳಿ ಬರುತ್ತದೆ. ಎಂದು ಆ ಭಗವಂತನನ್ನು ಪ್ರೀತಿಯಿಂದ ,ಆಪ್ತತೆಯಿಂದ, ಭಕ್ತಿಯಿಂದ ಪ್ರಾರ್ಥಿಸುವ ಅಪರೂಪದ ದೋಹೆಯಿದು.
ಆ ದಯಾಮಯ ನೀಡಲೆಂದೇ ಇರುವವನು. ನಮ್ಮ ಬದುಕಿಗೆ ಅಗತ್ಯವಾದುದನ್ನು ಅಗತ್ಯವಿದ್ದಾಗ ನೀಡುತ್ತಾನೆ ನಿಜ. ಆದರೆ ಅದನ್ನು ಪಡೆಯಲು ನಾವು ಯೋಗ್ಯರಾಗಿರಬೇಕು. ದೇವನಿಂದ ಅನುಗ್ರಹಿತ ರಾಗಲು ನಾವು ಕಾಯಾ ವಾಚಾ ಮನಸಾ ಶುದ್ಧವಾಗಿರಬೇಕು. ಬದುಕಿನ ನಿಯಮಕ್ಕೆ ಬದ್ಧರಾಗಿರಬೇಕು. ಯೋಗ್ಯತೆ ಇರುವಲ್ಲಿ ಯೋಗ ತಾನಾಗಿಯೇ ಬರುತ್ತದೆ. ಇದನ್ನು ಅರಿಯದೆ ನಾವು ಕೇಳಿಕೊಂಡಿದ್ದು ಕೈಗೂಡದಿದ್ದಾಗ ದೇವರನ್ನು ಹಳಿಯುತ್ತೇವೆ. ನಮ್ಮ ಹಳಿ ತಪ್ಪಿದ ಜೀವನ ಕ್ರಮವನ್ನು ಸರಿಪಡಿಸಿಕೊಳ್ಳದೆ ಆ ಭಗವಂತ ನಿಷ್ಕರುಣಿ , ಭೇದಭಾವ ಮಾಡುತ್ತಾನೆ ಎನ್ನುತ್ತಾ ಅವನ ಕುರಿತು ಇಲ್ಲಸಲ್ಲದ ಮಾತನಾಡುತ್ತೇವೆ. ಇದು ಸರಿಯಲ್ಲ. ಮೊದಲು ನಾವು ಸರಿಯಾಗೋಣ. ಸರಿ ದಾರಿಯಲ್ಲಿ ಸಾಗಿದರೆ ಆ ಭಗವಂತನ ಸಹಾಯ ದೊರಕೇ ದೊರಕುತ್ತದೆ ಎಂಬ ಭಾವಾರ್ಥ ಇಲ್ಲಿ ಅಡಕವಾಗಿದೆ.
ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ………..
ಕೊಟ್ಟಿಲ್ಲ ದಾನವನು ಜೀವನದಿ ಎಂದೆಂದು.
ಮುಟ್ಟಿಲ್ಲ ದೇವನನು ಪೂಜಿಸಲು ಎಂದು.
ಸಿಟ್ಟಿನಲಿ ಬಯ್ಯುವನು ದೇವನಲಿ ಹೊಣೆಯಿರಿಸಿ.
ಖೊಟ್ಟಿ ಜೀವನವದುವು- ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ