ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಪಿ.ಕೆ.ಹೆಗಡೆ ಹರಿಕೇರಿ
ಸಾವಿರ ಸಾವಿರ ಮದುವೆಗಳನ್ನು ಫ್ರೇಮಿಗಿಳಿಸಿದವರು ಇವರು. ಸಾವಿನ ಮನೆಯಲ್ಲೂ ಕೊನೆಗೆ ಇಡುವ ಒಂದು ಫೋಟೊಕ್ಕಾಗಿ ಇಡೀ ಊರು ಇವರನ್ನೇ ನೆಚ್ಚಿಕೊಂಡಿತ್ತು. ಸಾವಿರಾರು ಭಂಗಿಯ ಸಾವೇ ಇರದ ಸವಿ ನೆನಪುಗಳನ್ನು ಸೆರೆ ಹಿಡಿದ ಪಿ.ಕೆ.ಹೆಗಡೆ ಹರಿಕೇರಿಯವರಿಗೆ ಫೋಟೋ ಕೂಡ ಅವರ ನಾಮಧೇಯದ ಒಂದು ಭಾಗವೇ ಆಗಿ ಫೋಟೋ ಪಿ.ಕೆ.ಹೆಗಡೆಯವರು ಎಂದು ಕರೆಸಿಕೊಳ್ಳುವಂತಾಗುತ್ತದೆಂದರೆ ವೃತ್ತಿ ನಿಷ್ಠ ಛಾಯಾಗ್ರಾಹಕ ಊರಿಗೆ ಹೇಗೆ ಹೆಸರಾಗಬಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಅಂತಹ ಪಿ.ಕೆ.ಹೆಗಡೆ ಹರಿಕೇರಿಯವರನ್ನೇ ನನ್ನ ಅಕ್ಷರಗಳ ಫ್ರೇಮಿನಲ್ಲಿ ಸೆರೆ ಹಿಡಿಯುವ ಪ್ರಯತ್ನ ನನ್ನದು. ನನಗೆ ಗೊತ್ತು ಇದು ಅವರು ತೆಗೆಯುವ ಫೋಟೊಕ್ಕಿಂತ ಅಂದ ಬರುವುದಿಲ್ಲ.?
ಉದ್ದುದ್ದ ಹಲಗೆಗಳಂಥ ಮೊಬೈಲ್ ಇಲ್ಲ ಆವಾಗ. ಸರಿಯಾಗಿ ದೋಸೆಗೂ ಉದ್ದು ಕಾಣದ ದಿನಗಳು ಆಗ. ಕ್ಯಾಮರಾ ಎಂಬ ಹೆಸರೇ ಅಪರೂಪದ್ದು ಮತ್ತು ನಮ್ಮ ಪಂಚಗ್ರಾಮಕ್ಕೆ ಇದನ್ನು ಪರಿಚಯಿಸಿದ ಕೆಲವೇ ಕೆಲವು ಪುಣ್ಯಾತ್ಮರಲ್ಲಿ ನಮ್ಮ ಪಿ.ಕೆ.ಹೆಗಡೆಯವರು ಒಬ್ಬರು. ಆಗ ಈಗಿನಷ್ಟು ದುಡ್ಡು ತಿನ್ನುವ ಯೋಜನೆಗಳಿಲ್ಲ. ರೇಷನ್ ಕಾರ್ಡಿಗೊಂದು, ಪರೀಕ್ಷೆ ಹಾಲ್ ಟಿಕೆಟಿಗೊಂದು…..ಫೋಟೋ ಅವಶ್ಯವಾಗಿತ್ತು. ಅದೂ black and white ಫೋಟೊ. ಆ ಫೋಟೋಗಳನ್ನು ಹೊಡೆಸಿಕೊಳ್ಳುವುದಕ್ಕಾಗಿ ನಾವೆಲ್ಲ ಅರೆಅಂಗಡಿಯಲ್ಲಿದ್ದ ನಮ್ಮೂರ ಏಕೈಕ ಸ್ಟುಡಿಯೊ ಎಸ್.ಕೆ.ಪಿ. ಸ್ಟೂಡಿಯೋಕ್ಕೆ ಬಹು ಸಂಭ್ರಮದಿಂದ ಹೋಗುತ್ತಿದ್ದೆವು. ಅಲ್ಲಿ ಹೋಗಿ ಬೆವರಿಳಿದು ನಿಂತಿದ್ದರೆ ನಮ್ಮ ಪಿ.ಕೆ. ಹೆಗಡೆಯವರು ಮುಖ ಒರೆಸಿಕೊಳ್ಳಿ. ಇಲ್ಲಿ ಪೌಡರ್ ಇದೆ ಸ್ವಲ್ಪ ಹಚ್ಚಿಕೊಳ್ಳಿ ಎಂದು pounds powder ಡಬ್ಬ ಕೊಡುತ್ತಿದ್ದರು. ಸ್ವಲ್ಪ ಹಚ್ಚಿಕೊಂಡು ಪರದೆಯ ಮುಂದೆ ಕುಳಿತುಕೊಂಡರೆ ಕೊಡೆಯ ಪಕ್ಕ ನಿಂತು ಒಂದು ಕಣ್ಣು ಮುಚ್ಚಿ ? ಪಿ.ಕೆ ಹೆಗಡೆಯವರು ಕ್ಲಿಕ್ ಎನ್ನುತ್ತಿದ್ದರು. ಒಂದೇ ಕ್ಲಿಕ್. ಕಣ್ಣು ಮುಚ್ಚಿದರೂ ಅದೇ….ಭೂತದ ಹಾಗೆ ಕಣ್ಣು ಬಿಟ್ಟರೂ ಅದೇ. ಯಾಕೆಂದರೆ ರೀಲ್ ಕ್ಯಾಮರಾ ಅದು…..?
ಒಂದು ವಾರ ಕಳೆದ ಮೇಲೆ ನಾವು ಮತ್ತೆ ಸ್ಟೂಡಿಯೋ ಕಡೆಗೆ ಅತ್ಯಂತ ಸಂತೋಷ ಹಾಗೂ ಕುತೂಹಲದಿಂದ ಧಾವಿಸುತ್ತಿದ್ದೆವು. ನಮ್ಮ ಫೋಟೋ ತೊಳೆದಿಟ್ಟಿದ್ದೀರೆ?! ಎಂದು ಕೇಳುತ್ತಿದ್ದೆವು. ಗಾಳಿ ಬೆಳಕುಗಳಿಲ್ಲದ ಒಂದು ಅತಿ ಚಿಕ್ಕ ಕೋಣೆಯಿಂದ ಹೊರಬಂದ ನಮ್ಮ ಪಿ.ಕೆಯವರು ನಮ್ಮ ಫೋಟೋಗಳನ್ನು ಹಿಡಿದು ಬಹಳ ಚೆನ್ನಾಗಿ ಬಂದಿದೆ ಎಂದು ಕೈಗಿತ್ತರೆ…..pounds powder effect ಬಹಳ ಚೆನ್ನಾಗಿ ತೋರುತ್ತಿತ್ತು ಆ black and white ಫೋಟೋದಲ್ಲಿ. ಹಾಗೆ ಫೋಟೋ ಹೊಡೆದು ನಮ್ಮನ್ನು ನಮಗೆ ಪರಿಚಯಿಸಿಕೊಟ್ಟ ಪಿ.ಕೆ.ಯವರು ಇಂದಿಗೂ ಹಾಗೆಯೇ ಇದ್ದಾರೆ. ತಲೆ ಮತ್ತು ಗಡ್ಡದ ಕೂದಲುಗಳು ಸ್ವಲ್ಪ ಬೆಳ್ಳಗಾಗಿದೆ ಎಂಬುದೊಂದನ್ನು ಬಿಟ್ಟರೆ ಅವರ ಮುಖ ಭಾವ ಸ್ವಲ್ಪವೂ ಬದಲಾಗಿಲ್ಲ.
ನಮ್ಮೂರಿನಲ್ಲಿ ಯಾವುದೇ ಮಂಗಳ ಕಾರ್ಯಗಳಿರಲಿ ಅದಕ್ಕೆ ಅವರನ್ನೇ ಫೋಟೊಕ್ಕಾಗಿ ಕರೆಸಲಾಗುತ್ತಿತ್ತು. ಅನೇಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಅವರು ಫೋಟೊದಲ್ಲಿ ಸೆರೆಹಿಡಿಯುತ್ತಿದ್ದರು. ಬಣ್ಣದ ಫೋಟೊಗಳು ಆಗ ಮಾತ್ರ ಕಾಣ ಸಿಗುತ್ತಿದ್ದುದರಿಂದ ನಮ್ಮ ಬಣ್ಣ ಹೇಗೆ ಎಂಬುದರ ಅರಿವಾಗುತ್ತಿತ್ತು. ನಮ್ಮೂರ ಹೆಣ್ಣು ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಸೀರೆ ಉಟ್ಟು ಜಾತಕದೊಟ್ಟಿಗೆ ಪಿ.ಕೆ.ಹೆಗಡೆಯವರು ಹೊಡೆದ ಫೋಟೊ ಕೊಟ್ಟು ಸಂಬಂಧ ಬೆಸೆಯ ಬೇಕಾಗಿತ್ತು. ಹೀಗಾಗಿ ಅದರ ಪುಣ್ಯವೂ ಪಿ.ಕೆ.ಹೆಗಡೆಯವರ ಪಾಲಿಗಿದೆ.?
ಪಿ.ಕೆ.ಹೆಗಡೆಯವರು ಕಳೆದ ಮೂರ್ನಾಲ್ಕು ದಶಕಗಳಿಂದ ಅದೇ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದು ಇಂದು ನಾಡು ಮೆಚ್ಚಿದ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವಿಡಿಯೋ ಚಿತ್ರೀಕರಣವನ್ನೂ ಮಾಡುವ ಪಿ.ಕೆಯವರು ಜನಜನಿತ ವ್ಯಕ್ತಿ. ನನ್ನ ಬದುಕಿನ ನಾನೇ ಹೊಡೆಸಿಕೊಂಡ ಮೊದಲ ಫೋಟೊ ಹೊಡೆದವರು ಅವರು.
ಪಿ.ಕೆ ಹೆಗಡೆಯವರದ್ದು ಬಹುಮುಖ ಪ್ರತಿಭೆ.ಒಳ್ಳೆಯ ಕೃಷಿಕರಾದ ಅವರು ಛಾಯಾಗ್ರಾಹಣದ ಜೊತೆಗೆ ಒಳ್ಳೆಯ ಮದ್ದಳೆ ವಾದಕರೂ ಕೂಡ. ಸುತ್ತಮುತ್ತಲಿನ ಅನೇಕ ತಾಳಮದ್ದಲೆ ಕೂಟಗಳಿಗೆ ಅವರು ಮದ್ದಳೆವಾದಕರಾಗಿ ಸೇವೆ ಸಲ್ಲಿಸುತ್ತಾರೆ. ಯಕ್ಷಗಾನ ಪ್ರಿಯರಾದ ಅವರು ಅನೇಕ ಯಕ್ಷಗಾನ ತರಬೇತಿಗಳಿಗೂ ಹೋಗಿ ಮದ್ದಳೆ ನುಡಿಸಿ ಬರುತ್ತಾರೆ. ಹಗಲು- ರಾತ್ರಿ ಎಡೆಬಿಡದ ಕಾರ್ಯಗಳ ನಡುವೆಯೂ ದಣಿವಾದಂತೆ ಕಾಣದ ಪಿ.ಕೆ.ಹೆಗಡೆಯವರು ಅಪರೂಪದ ಸಜ್ಜನ.
ಊರಿನಲ್ಲಿ ಮದ್ದಳೆ ಬಾರಿಸಿದ್ದಕ್ಕೆ ಅವರು ಒಂದೇ ಒಂದು ರೂಪಾಯಿ ಸ್ವೀಕರಿಸಿದ್ದಿಲ್ಲ. ಕೊಟ್ಟ ಕವರನ್ನು ಅವರಿಗೇ ವಾಪಸ್ ಕೊಟ್ಟು ಬರುವ ಅವರ ಔದಾರ್ಯ ನಿಜಕ್ಕೂ ಮಾದರಿ. ಎಷ್ಟೋ ವೇಳೆ ಅವರಿಗೆ ಖುಷಿ ಕೊಡುವ ಕಾರ್ಯಕ್ರಮ ಎನಿಸಿದರೆ ಉಚಿತವಾಗಿ ಇಡೀ ಕಾರ್ಯಕ್ರಮವನ್ನು ಸೆರೆ ಹಿಡಿದು ಕೊಟ್ಟದ್ದೂ ಇದೆ. ಜನ ಕೊಟ್ಟಷ್ಟು ತೆಗೆದುಕೊಂಡು ಅಷ್ಟೂ ಇಷ್ಟೂ ಎಂದು ಕ್ಯಾತೆ ತೆಗೆಯದ ಹೃದಯವಂತರು ನಮ್ಮ ಪಿ.ಕೆ.ಹೆಗಡೆಯವರು. ಅನೇಕ ಸದಭಿರುಚಿ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡ ಪಿ.ಕೆ.ಹೆಗಡೆಯವರು ಅಲರೌಂಡರ್ ವ್ಯಕ್ತಿತ್ವದವರು. ದೇವಾಲಯ, ಶಾಲೆ ಹೀಗೆ ಎಲ್ಲಾ ಕಡೆ ಅವರು ತಮ್ಮನ್ನು ತಾವು ನಿಸ್ವಾರ್ಥವಾಗಿ ತೊಡಗಿಸಿಕೊಳ್ಳುತ್ತಾರೆ.
ಒಮ್ಮೊಮ್ಮೆ ಕಾರ್ಯಕ್ರಮವನ್ನು ಸೆರೆಹಿಡಿಯುವಾಗ ಅವರಿಗೆ ತಿಂಡಿ ಆಯಿತಾ?! ಊಟ ಆಯಿತಾ?! ಎಂದು ವಿಚಾರಿಸುವವರೂ ಯಾರೂ ಇರುವುದಿಲ್ಲ. ಅವರು ಎಲ್ಲರ ಫೋಟೋ ತೆಗೆದು ಕೊಡುತ್ತಾರೆ. ಅವರದೇ ಫೋಟೊವನ್ನು ನಾವೊಂದು ತೆಗೆದುಕೊಡಲಾ ಎಂದು ಸೌಜನ್ಯಕ್ಕೂ ನಾವು ಕೇಳುವುದಿಲ್ಲ. ಛಾಯಾಗ್ರಾಹಣವನ್ನೇ ಬದುಕಾಗಿಸಿಕೊಂಡಿದ್ದ ಹಲವರಿಗೆ ಮೊಬೈಲ್ ಫೋನ್ ಬದುಕಿಗೆ ನಿಜವಾದ ಹೊಡೆತ ಕೊಟ್ಟರೂ ಅವರು ಗೌರವಯುತವಾದ ಬಾಳ್ವೆಯನ್ನೇ ಇವತ್ತಿಗೂ ಮಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿಯ ಕ್ಯಾಮರಾಗಳಲ್ಲಿ ಲಕ್ಷ್ಯಗೊಟ್ಟು ಸನ್ನಿವೇಶಗಳನ್ನು ಸೆರೆ ಹಿಡಿಯುವುದು ಅದ್ಭುತ ಕಾರ್ಯ. ಮರ ಹತ್ತಿಯೋ, ಕುರ್ಚಿ ಹತ್ತಿಯೋ, ಬೆಟ್ಟ ಹತ್ತಿಯೋ ಅವರು ಅಮೋಘ ಛಾಯಾಚಿತ್ರ ತೆಗೆದು ನೋಡುಗರಿಗೆ ಹಬ್ಬವಾಗಿಸುತ್ತಾರೆ.
ಮನಮೆಚ್ಚಿದ ಮಡದಿ, ಪ್ರತಿಭಾ ಸಂಪನ್ನ ಮಕ್ಕಳು. ಪಿ.ಕೆ.ಹೆಗಡೆ ಹರಿಕೇರಿಯವರು ಸ್ವಾಭಿಮಾನಿ ನಿಗರ್ವಿ ಸುಖಿ ಸಹೃದಯಿ. ಅವರ ಕ್ರಿಯಾಶೀಲ ಛಾಯಾಗ್ರಹಣದಿಂದ ನಮ್ಮ ನೆನಪುಗಳು ಇನ್ನೂ ಹಸಿರಾಗಿರುವುದಕ್ಕೆ ಸಾಧ್ಯವಾಗಿದೆ. ಅವಸರದಿಂದ ಹೇಗಾದರೂ ಮಾಡಿ ಮುಗಿಸುವ ಜಾಯಮಾನದವರಲ್ಲ ಅವರು. ಅವರದೇ ಆದ ಸಂಪೂರ್ಣ ಆಲೋಚನೆಯಲ್ಲಿ ಆಲ್ಬಂ ಒಂದು ರೆಡಿಯಾಗುತ್ತದೆ. ನನ್ನ ಮತ್ತು ಅಕ್ಕನ ಮದುವೆಗಳ, ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ಛಾಯಾಗ್ರಹಣ, ಚಿತ್ರೀಕರಣ ಅವರದ್ದೇ. ಬಡತನದ ಮಧ್ಯೆಯೂ ನಾವು ಕೊಟ್ಟಷ್ಟು ತೆಗೆದುಕೊಂಡು ನಮ್ಮ ಸುಂದರ ಫೋಟೊಗಳನ್ನು ಮುಂದಿನ ತಲೆಮಾರೂ ನೋಡುವಂತೆ ಮಾಡಿಕೊಟ್ಟ ಅವರಿಗೆ ನಾವು ಋಣಿ.
ಅನೇಕ ಜನರನ್ನು ನೋಡಿದ್ದೇನೆ. ಅವರಿಗೆ ಅವರ ಫೋಟೊ ತೆಗಿಸಿಕೊಳ್ಳುವುದಕ್ಕೆ ಬಹಳ ಖುಷಿ ಮತ್ತು ಆತುರವಿರುತ್ತದೆ. ಆದರೆ ತೆಗೆದವರ ಫೋಟೋ ತೆಗೆದು ಕೊಡಲಾ ಎಂದು ಕೇಳುವ ಸೌಜನ್ಯವಿರುವುದಿಲ್ಲ. ಹಾಗೆಯೇ ಸೆಲ್ಫಿ ಕ್ರೇಜಿನಲ್ಲಿ ಜೀವ ಕೊಡುವ ಯುವಕರಿಗೆ ಏನು ಹೇಳಬೇಕೊ….. ತಿಳಿಯುತ್ತಿಲ್ಲ. ಹೇಗೇಗೊ ಎಲ್ಲೆಲ್ಲೊ ಸಾವಿರಾರು ಫೋಟೊ ಕ್ಲಿಕ್ಕಿಸಿಕೊಳ್ಳುವ ನಾವು ಫೋಟೊ ತೆಗೆಯುವುದಕ್ಕೂ….. ಒಬ್ಬ expert photographer ಫೋಟೊ ತೆಗೆಯುವುದಕ್ಕೂ…… ಬಹಳ ವ್ಯತ್ಯಾಸವಿದೆ. ನಮ್ಮೂರ ಹೆಮ್ಮೆಯ ಛಾಯಾಗ್ರಾಹಕ ಪಿ.ಕೆ.ಹೆಗಡೆಯವರ ಪರಿಚಯದ ಮೂಲಕ ನಾನು ನಾಡಿನ ಎಲ್ಲಾ ಛಾಯಾಗ್ರಾಹಕ ಬಳಗಕ್ಕೆ ಹೃತ್ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ಸದ್ಗುರು ಶ್ರೀಧರರ ಆಶೀರ್ವಾದ ಶ್ರೀ ಪಿ.ಕೆ ಹೆಗಡೆಯವರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಪಿ.ಕೆ ಹೆಗಡೆಯವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ