ಗರ್ವದಿ ಬೀಗದಿರೈ ನೀನು
ತೊರೆಯೈ ಅಪಹಾಸ್ಯವನು
ಜಲಧಿಯಲಿಹುದೈ ನಿನ್ನ ನೌಕೆ
ಏನು ಗತಿಯೊ ಜೋಕೆ- ಕಬೀರ
ಗರ್ವದಿ ಮೆರೆಯಬೇಡ. ಬೇರೆಯವರನ್ನು ಅಪಹಾಸ್ಯ ಮಾಡಬೇಡ. ನಿನ್ನ ನೌಕೆ ಸಮುದ್ರದಲ್ಲಿದೆ. ಅದರ ಗತಿ ಏನಾಗುವುದೋ… ಎಚ್ಚರವಿರಲಿ ಎಂದು ಕಬೀರರು ಈ ದೋಹೆಯಲ್ಲಿ “ನಾನು ಎಂಬ ಅಹಂಕಾರ ಬೇಡ” ಎನ್ನುವ ಸಂದೇಶವನ್ನು ನೀಡಿದ್ದಾರೆ.
ಹಣ ,ಅಧಿಕಾರ ,ಅಂತಸ್ತನ್ನು ತನ್ನದಾಗಿಸಿಕೊಂಡೆ ಎಂದು ಅಹಂಕಾರ ಪಡುವವರನ್ನು ನಾವು ನೋಡುತ್ತೇವೆ. ಆ ಅಹಂಕಾರದಲ್ಲಿ ಅವರು ತನಗಿಂತ ಕೆಳಗಿನವರನ್ನು ಕಂಡು ಅಪಹಾಸ್ಯ ಮಾಡುತ್ತಾರೆ. ತನ್ನ ಬದುಕಿನ ನೌಕೆ ಸಾಗರದ ಮಧ್ಯದಲ್ಲಿದೆ ಅದು ಅನಿಶ್ಚಿತ ಯಾವಾಗಬೇಕಾದರೂ ಮುಳುಗಬಹುದು ಎಂಬ ಸತ್ಯವನ್ನು ಮರೆತುಬಿಡುತ್ತಾರೆ. ನಾನು ಶಾಶ್ವತ ನಾನು ಗಳಿಸಿದ ಹಣ ,ಅಧಿಕಾರ ,ಅಂತಸ್ತು ಶಾಶ್ವತ ಎಂಬ ಭ್ರಮೆಯಲ್ಲಿ ಮೆರೆಯುತ್ತಾರೆ. ಬದುಕು ಅನಿಶ್ಚಿತ ಎಂಬ ಶಾಶ್ವತ ಸತ್ಯವನ್ನು ಮರೆಯುತ್ತಾರೆ. ಇದು ಸಲ್ಲ ಎಂಬುದು ಈ ದೋಹೆ ಸಾರುವ ನೀತಿ.
ಗರ್ವ ಪಡುವುದಿದ್ದರೆ ಒಳಿತಾದ ವಿಷಯಗಳ ಕುರಿತು ಗರ್ವ ಪಡು. ನಾನು ನನಗಾಗಿ ಮಾತ್ರವಲ್ಲದೆ ಎಲ್ಲರಿಗಾಗಿ ಬದುಕುತ್ತಿದ್ದೇನೆ ಎಂದು ಗರ್ವ ಪಡು. ನಾನು ನನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆಂದು ಗರ್ವ ಪಡು. ನನ್ನ ಸಂಪತ್ತಿನ ಒಂದು ಪಾಲನ್ನು ಒಳಿತಾದ ಕಾರ್ಯಕ್ಕೆ ಬಳಸುತ್ತಿದ್ದೇನೆ ಎಂದು ಗರ್ವ ಪಡು. ನಾನು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದೇನೆ ಎಂದು ಗರ್ವ ಪಡು. ಆದರೆ ಗರ್ವ ಪಡುವ ಮೊದಲು ಹಾಗೆ ಬದುಕಿ ತೋರಿಸು ಎಂಬುದನ್ನು ಈ ದೋಹೆಯು ಮಾರ್ಮಿಕವಾಗಿ ನಮ್ಮ ಮುಂದಿಟ್ಟಿದೆ.
ಇದನ್ನೇ ಕವಿ ವಾಣಿಯೊಂದು ಹೇಳಿದ್ದು ಹೀಗೆ……………
ಮದ ಬೇಡ ನನಗಾರು ಸರಿಸಾಟಿ ಇಹರೆಂದು.
ಹದವಿರಲಿ ನಿನ್ನ ನಡೆ ನುಡಿಗಳಲ್ಲಿ
ಎದೆಯುರಿಯಪಡದೆ ನೀ ಪರರ ಯಶ ಸ್ವೀಕರಿಸೆ
ಕದವ ತೆರೆವುದು ಜಗವು -ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ.