ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಮಂಜುನಾಥ ದೇವಾಡಿಗ

ಮಾತಾಡುವುದಕ್ಕಿಂತ ಮೌನವೇ ಹೆಚ್ಚು ಇಷ್ಟವಾಗುತ್ತದೆನಗೆ. ಬೇರೆಯವರು ಚೆನ್ನಾಗಿ ಮಾತನಾಡುತ್ತಾನೆ…. ಎಂದು ಉಬ್ಬಿಸಿ ಉಬ್ಬಿಸಿ ಈಗ ಮೌನವೂ ಮಾತಾಗಿಬಿಟ್ಟಿದೆ.? ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಅಂದ ಹಾಗೆ ಮಾತಿನಿಂದ ನೊಂದ ದಿನಗಳೂ ಇವೆ. ಮಾತಿನಿಂದ ಹಲವಾರು ಜನರನ್ನು ಗಳಿಸಿದ್ದೂ ಇದೆ. ಇಂದು ನನ್ನ ಮಾತುಗಳನ್ನೇ ಅತಿಯಾಗಿ ಪ್ರೀತಿಸಿದ್ದ ನನ್ನೊಲವಿನ ಮಂಜುನಾಥ ದೇವಾಡಿಗರನ್ನು ನಿಮ್ಮೆದುರಿಗೆ ತಂದು ನಿಲ್ಲಿಸಬೇಕು.‌ ಅಕ್ಷರಗಳಿಗೆ ಅಂಥದ್ದೊಂದು ತಾಕತ್ತನ್ನು ಭಗವಂತನೇ ನನಗೆ ಕರುಣಿಸಬೇಕು.
ಕುಮಟಾದಲ್ಲಿ ಸಂಗೀತ ಶಿಕ್ಷಕಿಯಾಗಿ ಹಲವಾರು ವಿದ್ಯಾರ್ಥಿಗಳನ್ನು ಗಾನ ಪ್ರತಿಭೆಗಳಾಗಿ ಹೊರಹೊಮ್ಮಿಸುತ್ತಿರುವ ನಮ್ಮೂರಿನ ಶ್ರೀಮತಿ ಲಕ್ಷ್ಮಿ ಹೆಗಡೆ ಬೊಬ್ಬನಹೊಂಡ ಅವರು ನನ್ನನ್ನು ಆ ಸಂಗೀತ ಶಾಲೆಯ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಆ ಕಾರ್ಯಕ್ರಮದಲ್ಲಿ ಮಾತನಾಡಿ ವೇದಿಕೆ ಕೆಳಗಿಳಿದು ಬರುವ ಹೊತ್ತಿಗೆ ಸಭಾಂಗಣದ ಕೊನೆಯಲ್ಲಿ ನನಗೇ ಕಾಯುತ್ತಿರುವ ಹಾಗೆ ನಿಂತಿದ್ದ ವ್ಯಕ್ತಿಯೋರ್ವರು ಕೈ ಕುಲುಕಿ ಎಷ್ಟು ಚಂದ ಮಾತನಾಡುತ್ತೀರಿ ಸರ್….. ನಿಮ್ಮ ಮಾತುಗಳಿಂದ ಒಂದು ಕ್ಷಣ ದಂಗಾಗಿ ಹೋದೆ ಸರ್….ನಾನು. ನಿಜಕ್ಕೂ ಅದ್ಭುತ ಮಾತುಗಳು ಎಂದು ನನ್ನನ್ನು ಹೊಗಳಿ…. ನಾನು ಜನತಾ ವಿದ್ಯಾಲಯ ಮುರುಡೇಶ್ವರದಲ್ಲಿ ಟೀಚರ್ ಆಗಿದ್ದೇನೆ. ನನ್ನ ಹೆಸರು ಮಹೇಶ ನಾಯ್ಕ ಅಂತ. ನೀವು ನಮ್ಮ ಶಾಲೆಯ ಸುವರ್ಣ ಮಹೋತ್ಸವಕ್ಕೆ ಮುಖ್ಯ ಉಪನ್ಯಾಸಕರಾಗಿ ಬರಬೇಕು ಎಂದು ಆ ಕ್ಷಣವೇ ಆಹ್ವಾನವಿತ್ತರು. ಮಾತಾಡುವ ತೆವಲಿಲ್ಲದ ನಾನು ಕರೆದ ಕಡೆಯಲ್ಲೆಲ್ಲ ಹಾಗೆ ಸರಕ್ಕನೆ ಹೋಗುವ ಯೋಚನೆ ಮಾಡುವುದಿಲ್ಲ. ಆದರೂ ಅವರು ನನ್ನನ್ನು ಬಿಡಲಿಲ್ಲ. ಸುಮಾರು ಐದಾರು ಬಾರಿ ದೂರವಾಣಿ ಕರೆ ಮಾಡಿ ಸರ್ ಬರಲೇಬೇಕು…ಎಂದು ಒತ್ತಾಯಿಸಿದರು. ಆರನೇ ಬಾರಿ ಕರೆ ಮಾಡಿದಾಗ ಅವರಿಗೆ ನನ್ನ ಮಾತುಗಳು ತುಂಬಾ ಇಷ್ಟವಾಗಿವೆಯೆಂಬುದು ಪಕ್ಕಾ ಆಗಿ ಬರುತ್ತೇನೆಂದು ಒಪ್ಪಿಕೊಂಡೆ.
ಹಾಗೆ ಮುರುಡೇಶ್ವರ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವಕ್ಕೆ ಹೋದೆ. ನಾನು ಬಹು ಜನರಿಗೆ ಪರಿಚಿತ ವ್ಯಕ್ತಿಯಲ್ಲ. ಅಂತಹ ಪ್ರತಿಷ್ಠೆಯೂ ನನಗಿಲ್ಲ. ಅದಾಗಲೇ ಅಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಲಯನ್ ಕೈರನ್ ಸರ್ ಅವರ ಉಪನ್ಯಾಸವೂ ಇದ್ದುದರಿಂದ ಅವರೂ, ಶ್ರೇಷ್ಠ ಸಾಹಿತಿ ವಿಷ್ಣು ನಾಯ್ಕರೂ, ಪ್ರಖ್ಯಾತ ಕಲಾವಿದರಾದ ಶಿವಾನಂದ ಹೆಗಡೆ ಕೆರಮನೆಯವರೂ ಆಗಮಿಸಿದ್ದರು. ವೇದಿಕೆಯ ಮೇಲೆ ಭರ್ತಿ 25 ಜನ ಖ್ಯಾತನಾಮರಿದ್ದರು. ನಾನು ಮೂಲೆಯಲ್ಲೊಂದು ಕುರ್ಚಿ ಹಿಡಿದು ಬಡಪಾಯಿಯ ಹಾಗೆ ಕುಳಿತುಕೊಂಡೆ. ಮಹೇಶ ನಾಯ್ಕರನ್ನು ಬಿಟ್ಟರೆ ಉಳಿದವರಿಗೆ ನನ್ನ ಪರಿಚಯವಿರಲಿಲ್ಲ ಅಲ್ಲಿ. ರಾತ್ರಿಯಿಡೀ ಜಾಗರಣೆ ಮಾಡಿದ್ದ ಅಲ್ಲಿನ ಜನಕ್ಕೆ ನನ್ನ ಉಪನ್ಯಾಸ ಕೇಳುವಷ್ಟು ತಾಳ್ಮೆಯಿಲ್ಲ ಎಂಬುದು ನನಗೆ ಪಕ್ಕಾ ಗೊತ್ತಿತ್ತು. ಆದರೂ ಕೈರನ್ ಸರ್ 45 ನಿಮಿಷಗಳ ಉಪನ್ಯಾಸ ಮಾಡಿದ ಮೇಲೆ ನಾನೊಂದು 10 ನಿಮಿಷವಾದರೂ ಮಾತನಾಡಬೇಕೆಂಬ ಉತ್ಸಾಹ ಮೂಡಿದ್ದು ನನ್ನಲ್ಲಿ. ಆ ದಿನ 12 ಜನ ಭಾಷಣ ಮಾಡಿದ ಮೇಲೆ 13 ನೆಯವನಾಗಿ ಹಸಿದ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಕರೆಸಿದ ಮಹೇಶ ನಾಯ್ಕರ ಪ್ರೀತಿಗಾಗಿ 12 ನಿಮಿಷ ಮಾತನಾಡಿ ಬಂದೆ.
ಏತನ್ಮಧ್ಯೆ ಆ ವೇದಿಕೆಯಲ್ಲಿ ಕೆಂಪು ಕೋಟು ಧರಿಸಿ ಹತ್ತು ಬೆರಳಿಗೆ ಹತ್ತು ಉಂಗುರ ಧರಿಸಿ ಕೂಲಿಂಗ ಗ್ಲಾಸ್ ಹಾಕಿಕೊಂಡೇ ಕುಳಿತುಕೊಂಡಿದ್ದ ವ್ಯಕ್ತಿಯೋರ್ವರು ಪದೇ ಪದೇ ಮಧ್ಯ ಮಧ್ಯ ಬಂದು ಮಾಯ್ಕಿನಲ್ಲಿ ಏನೋ ಹೇಳಿ ಹೋಗುತ್ತಿದ್ದರು. ಅವರ ಧರ್ತಿ, ವರ್ಚಸ್ಸು ಕಂಡು ನಾನು ಇವರ್ಯಾರೋ ಅಸಾಮಾನ್ಯ ಕುಳ ಇರಬೇಕೆಂದು ಲೆಕ್ಕ ಹಾಕಿದೆ. ಮಧ್ಯ ಮಧ್ಯ ಕುಯ್ದುಕೊಂಡ ಆ ಗಡ್ಡಧಾರಿ ಮನುಷ್ಯ ಮುಂದಿನ ಎಂ.ಎಲ್.ಎ ಕ್ಯಾಂಡಿಡೇಟ್ ಇರಬಹುದು ಎನ್ನುವುದು ನನ್ನ ಮನಸ್ಸಿನ ಲೆಕ್ಕಾಚಾರವಾಗಿತ್ತು. ಅವರು ಹಾಗೆ ಆಚೀಚೆ ತಿರುಗಿ ಎಲ್ಲರ ಗಮನವನ್ನೂ ತಾನೇ ಸೆಳೆದು ಕೊಳ್ಳುವಾಗ…ನಾನು ಹಾಕಿಕೊಂಡ ಕೋಟೂ ಅವರೆದುರಿಗೆ ಡಿಮ್ ಎನಿಸುತ್ತಿತ್ತು ನನಗೆ. ಯಾವಾಗ ನನ್ನ ಮಾತು ಮುಗಿದು ಬೊಲೊ ಭಾರತ ಮಾತಾ ಕಿ ಜೈ ಎಂದು ಮತ್ತದೇ ಕುರ್ಚಿಯಲ್ಲಿ ಬಂದು ಕುಳಿತನೋ.. ಉಳಿದವರು ಕರ್ಚಿಪು ತೆಗೆದುಕೊಂಡು ಸಾವಕಾಶವಾಗಿ ಬೆವರು ಒರೆಸಿಕೊಳ್ಳುತ್ತಾ…..ಉಸ್ ಎಂದು ಏದುಸಿರು ಬಿಡುತ್ತಿದ್ದರು. ಇಷ್ಟು ಬೇಗ ಉಪನ್ಯಾಸ ಮುಗಿಯುತ್ತದೆಂದು ಅವರ್ಯಾರೂ ಅಂದುಕೊಂಡಿರಲಿಲ್ಲ.? ಈ ದೊಡ್ಡ ಕುಳ ತಕ್ಷಣಕ್ಕೆ ಎದ್ದು ಬಂದು ಎಲ್ಲರೆದುರಿನಲ್ಲೇ ನನ್ನ ಕೈ ಕುಲುಕಿ ಹೋದರು. ನಾನು ಅವರ ಮುಖ ನೋಡಲಿಲ್ಲ ಯಾಕೆಂದರೆ ಅವರ ಕೈಗಿದ್ದ ಬಂಗಾರದ ಸರಪಳಿ ಅಷ್ಟು ದಪ್ಪಗಿದ್ದು ಆನೆಯನ್ನು ಬಂಧಿಸುವಷ್ಟು ಬಲಯುತವಾಗಿತ್ತು.? ಸಂದೀಪ ಭಟ್ಟರೆ ಸೂಪರ್ ಹಂ ಅಂದರು.
ಅಷ್ಟಾಗಿ ವೇದಿಕೆ ಕೆಳಗಿಳಿದದ್ದೇ ಅವರು ನನ್ನನ್ನು ಬಿಡಲೇ ಇಲ್ಲ. ಹೋದಲ್ಲೆಲ್ಲ ನನ್ನನ್ನು ಹಿಂಬಾಲಿಸಿದರು. ಮಡದಿಯನ್ನು ಕರೆದು ಪರಿಚಯಿಸಿದರು. ತಾನೇ ಮುಂದಾಗಿ ನನಗೆ ಊಟ ಬಡಿಸಿದರು. ನನ್ನ ಮುಂದೆಯೇ ಕುರ್ಚಿ ಹಾಕಿಕೊಂಡು ಕುಳಿತು ಊಟ ಮಾಡಲಿಕ್ಕೂ ಬಿಡದವರಂತೆ ವಟ ವಟ ವಟ ಏನೇನೊ ಮಾತಾಡುತ್ತಲೇ ಇದ್ದರು. ಪಾಯಸ ಮೊಗೆ ಮೊಗೆದು ಹಾಕಿದರು. ಅಷ್ಟಾಗಿ ಪರಿಚಿತನಲ್ಲದ ವ್ಯಕ್ಯಿಯೋರ್ವ ಅತಿರಥ ಮಹಾರಥರನ್ನು ಉಪಚರಿಸುವುದನ್ನು ಬಿಟ್ಟು ನನ್ನ ಬಗೆಗೆ ಈ ತರದ ಕಾಳಜಿ ತೋರಿಸುತ್ತಿದ್ದರೂ ನನಗೆ ಮಾತ್ರ ಆ ಥರದ ಶ್ರೀಮಂತ ವ್ಯಕ್ತಿಗಳ ಸಹವಾಸ ಬೇಕಿರಲಿಲ್ಲ.
ಸಮಾರಂಭ ಮುಗಿಸಿ ಮನೆಗೆ ಬಂದೆ. ಬಂದರೂ ಆ ವ್ಯಕ್ತಿ ಮಾತ್ರ ನನ್ನ ಕಣ್ಣೆದುರೇ ಬರುತ್ತಿದ್ದ. ಮನೆಯವರಿಗೆಲ್ಲರಿಗೂ ವಿವರಿಸಿದೆ. ಮಜಾ ಇದ್ದಾರೆ ಅವರು ಎಂದಿದ್ದೆ ನಮ್ಮ ಮನೆಯಲ್ಲಿ. ಅಷ್ಟಾಗಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಕ್ಕೆ ಹೆದರುವ ನಾನು ಮಹೇಶ ನಾಯ್ಕರನ್ನು ಕೇಳಿದೆ. ಈ ವ್ಯಕ್ತಿ ಹೇಗೆ? ಎಂದು. ಅವರು ನನಗೆ ಅವರ ಹೆಸರು ಮಂಜುನಾಥ ದೇವಾಡಿಗ ಅಂತ. ಅವರದ್ದು ಮುರುಡೇಶ್ವರದಲ್ಲಿ ರೆಸ್ಟೊರೆಂಟ್ ಇದೆ. ಶಾಲೆಯೆಂದರೆ ಅವರಿಗೆ ಅಪಾರ ಅಭಿಮಾನ. ಹೀಗಾಗಿ ಸುವರ್ಣ ಮಹೋತ್ಸವಕ್ಕಾಗಿ ಹಗಲಿರುಳೂ ದುಡಿದು ಕೋಟಿಗೂ ಮಿಕ್ಕಿ ದೇಣಿಗೆ ಸಂಗ್ರಹಿಸಿ ಜನತಾ ವಿದ್ಯಾಲಯ ನಿಜವಾಗಿಯೂ ಜನತೆ ಮೆಚ್ಚುವಂತೆ ಮಾಡುವಲ್ಲಿ ಯಶಸ್ವಿಯಾದರು..ಎಂದು ಕಿರು ಪರಿಚಯ ನೀಡಿದರು.
ಮಾರನೆಯ ದಿನವೇ ನನಗೊಂದು ಅಪರಿಚಿತ ವ್ಯಕ್ತಿಯ ಮೆಸೇಜ್ ಬಂತು wats app ನಲ್ಲಿ. ಬೇರೆ ವೇಷ. ಅದೇ ಮಂಜುನಾಥ ದೇವಾಡಿಗರು. ದಿನಕ್ಕೊಂದು ತರಹದ ಗಡ್ಡ ಮೀಸೆಯ ವಿನ್ಯಾಸ. ದಿನಕ್ಕೊಂದು ರೀತಿಯ ಧಿರಿಸು. ಈ ವ್ಯಕ್ತಿ ಒಂಥರಾ totally different. ಆದರೆ ವ್ಯಕ್ತಿ ತೀರಾ ಹೃದಯವಂತ ಎಂಬುದು ನನಗೆ ಅವರ ಮಾತುಗಳಲ್ಲೇ ಪಕ್ಕಾ ಆಗಿತ್ತು. ಆದರೂ ಈ ದೊಡ್ಡ ಕುಳುವಾರು ನಮ್ಮಂತ ಬಡ ಮಾಸ್ತರಿಗಲ್ಲ ಎಂದು ನಾನು ಸುಮ್ಮನೇ ಇದ್ದೆ. ಹತ್ತು ಮೆಸೇಜ್ ಬಂದ ಮೇಲೆ ನನ್ನ ಮೊದಲ reply ಅವರಿಗೆ.
ಆದರೆ ಆ ವ್ಯಕ್ತಿ ಮಾತ್ರ ನನ್ನನ್ನು ಬಿಡಲೇ ಇಲ್ಲ. ದಿನಕ್ಕೆ ಹತ್ತು voice message. ಮಾಡುವವರು. ಸಂದೀಪ ಭಟ್ಟರೆ ನನಗೆ ಮೆಸ್ಸೇಜೆಲ್ಲ ಟೈಪ್ ಮಾಡುವುದಕ್ಕೆ ಬರುವುದಿಲ್ಲ …ಹೀಗಾಗಿ ಮಾತಾಡಿ ಕಳಿಸುತ್ತೇನೆ….ದಯವಿಟ್ಟು ತಪ್ಪು ತಿಳಿಬೇಡಿ…..ಹೀಗೆ ಏನೇನೊ ವಿಷಯ ವಿಚಾರ ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ಅವರು ಮಾಡಿದ ಪ್ರತಿಯೊಂದೂ ಕೆಲಸ ಕಾರ್ಯವನ್ನು ನನ್ನ ಜೊತೆಗೆ ಹಂಚಿಕೊಳ್ಳುವ ಅವರ ಉತ್ಕಟ ಆಕಾಂಕ್ಷೆ ನನಗೆ ಅವರ ಸ್ನೇಹಮಯಿ ಗುಣವನ್ನು ಮತ್ತಷ್ಟು ಪರಿಚಯಿಸುತ್ತಿತ್ತು. ಒಮ್ಮೊಮ್ಮೆ ಹತ್ತಾರು voice message ಗಳು ನನಗೆ ಕಿರಿಕಿರಿಯೆನಿಸಿದರೂ ಅವರ ಪ್ರೀತಿಗಾಗಿ ದಿನವೂ ಆಲಿಸುತ್ತಿದ್ದೆ. ದಿನ ಬಿಟ್ಟು ದಿನ call ಬರಲು ಪ್ರಾರಂಭವಾಯಿತು. ಮಂಜುನಾಥ ದೇವಾಡಿಗರು ಹತ್ತೇ ದಿನದಲ್ಲಿ ಹತ್ತು ವರ್ಷಗಳ ಸ್ನೇಹಿತರಂತೆ ಆಗಿ ಹೋದರು.
ಅದಾದ ಸ್ವಲ್ಪವೇ ದಿನಕ್ಕೆ ಮುರುಡೇಶ್ವರ ಹವ್ಯಕ ಸಭಾಭವನದಲ್ಲಿ ನನ್ನ ಮತ್ತೊಂದು ಉಪನ್ಯಾಸ. ಸುದ್ದಿ ತಿಳಿದ ದೇವಾಡಿಗರು ತಕ್ಷಣ ಅಲ್ಲಿಗೆ ಬಂದಿದ್ದರು… ನನ್ನ ಮಾತುಗಳನ್ನು ಕೇಳುವುದಕ್ಕಾಗಿ. ಆದರೆ ಒಮ್ಮೆ ನನಗೆ ಗುರುತೇ ಹತ್ತಲಿಲ್ಲ ಅವರದ್ದು. ಆ ದಿನ ಮತ್ತೆ change ಅವರು. ? ಅಯ್ಯೋ….ಅಯ್ಯೋ… ಅಯ್ಯೋ…. ಅವರ ಖದರೇ different.
ನನ್ನನ್ನು ಮತ್ತೆ ಜನತಾ ವಿದ್ಯಾಲಯಕ್ಕೆ ಕರೆಸಬೇಕೆಂಬುದು ಅವರ ಮನಸ್ಸಾಗಿತ್ತು. ಪ್ರತಿದಿನವೂ ಅವರ ಹತ್ತಾರು ಮೆಸೇಜ್….call ಗಳಿಂದ ಮಂಜುನಾಥ ದೇವಾಡಿಗರು ಒಬ್ಬ ಸಾಧ್ವಿ ಸಹೃದಯಿ ಮನುಷ್ಯ ಎಂಬುದು ಗೊತ್ತಾಯಿತು ನನಗೆ. ಸಂದೀಪ ಭಟ್ಟರೇ ಸ್ನೇಹಿತರೆಂದರೆ ಜೀವಕ್ಕೆ ಜೀವ ಕೊಡುವ ಮನುಷ್ಯ ನಾನು…. ಎಂದು ಹತ್ತಾರು ಬಾರಿ ಹೇಳುವಾಗೆಲ್ಲ…..ನಾನು pure veg ನಿಮ್ಮ ಜೀವವನ್ನು ಯಾವಾಗಲೂ ಕೇಳುವುದಿಲ್ಲ ಎಂದು ಮನಸ್ಸಿನೊಳಗೇ ಹೇಳಿಕೊಳ್ಳುತ್ತಿದ್ದೆ ನಾನು. ?
‌‌‌ ಇಂತಹ ರೆಸ್ಟೋರೆಂಟ್ ಮಾಲಿಕ, 24 ಗಂಟೆ ಬಿಡುವಿಲ್ಲದ ಆಗರ್ಭ ಸಿರಿವಂತ…..ಮುರುಡೇಶ್ವರ ತುಂಬಾ ಮಾಡಿದ ಸಾಮಾಜಿಕ ಕಾರ್ಯಗಳು ಒಂದಲ್ಲ ಎರಡಲ್ಲ. ಹೃದಯವಂತ ಮಂಜುನಾಥ ದೇವಾಡಿಗರು ಒಬ್ಬ ರಾಜಕಾರಣಿಯಲ್ಲ. ರಾಜಾ ಮನುಷ್ಯ. ಕೈಯೆತ್ತಿ ಕೊಡುವ ಉದಾರಿ. ಜೀನ್ಸ ಹಾಕಿಕೊಂಡೂ ಮೋರಿ ಸ್ವಚ್ಛಗೊಳಿಸಬಲ್ಲ……ಚಡ್ಡಿ ಹಾಕಿಕೊಂಡೂ ಮಂತ್ರಿಗಳ ಕೈ ಕುಲುಕಬಲ್ಲ….ವಿಭಿನ್ನ ಬಗೆಯ ವ್ಯಕ್ತಿತ್ವದ ಶ್ರೇಷ್ಠ ಮನುಷ್ಯ. ಮಕ್ಕಳ ಜೊತೆ ಮಕ್ಕಳಾಗಿ, ಹಿರಿಯರ ಜೊತೆ ಹಿರಿಯನಾಗಿ, ಬೆರೆಯುವ ದೇವಾಡಿಗರು ಮುರುಡೇಶ್ವರ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದವರಂತೆ. ಪ್ರತಿ ದಿನದ ಪ್ರತಿ ಕ್ಷಣದ ಸಂಗಾತಿಯಾಗಿ ಹೋದರವರು. “ನೀವು ಮತ್ತೆ ಬರಬೇಕು….. ನಾನು ನಿಮ್ಮ ಮಾತುಗಳನ್ನು ಕೇಳಬೇಕು” ಎಂದು ಕನಿಷ್ಠ ನೂರಾರು ಬಾರಿ ಹೇಳಿರಬೇಕು…..ಮನುಷ್ಯ.
ದಿನಕ್ಕೊಂದು wats app profile. ಗಂಡ ಹೆಂಡತಿಯಿಬ್ಬರೂ made for each other. ಯಾವ ಹೀರೋ ಹೀರೋಯಿನ್ ಗೂ ಕಡಿಮೆಯಲ್ಲ ಅವರು. ಬದುಕನ್ನು ಬಿಂದಾಸಾಗಿ ಕಳೆವ ಅವರ ಮೇಲೆ ಯಾರ ಕಣ್ಣೂ ಬೀಳದಿರಲಪ್ಪ ಎನ್ನುತ್ತಿತ್ತು ನನ್ನ ಮನಸ್ಸು. ಎಂತೆತಹ ಫೋಸು. ದಿನಕ್ಕೆ ಹತ್ತಾರು ಭಂಗಿಗಳ ಛಾಯಾ ಚಿತ್ರಗಳು. ಮಂಜುನಾಥ ದೇವಾಡಿಗರು ಪ್ರತಕ್ಷವಾಗದ ದಿನಗಳೇ ಇಲ್ಲವಾಗಿ ಹೋದವು ಬರಬರುತ್ತಾ…..
ಮೈಸೂರು ಸೇರಿದ್ದೆ ಐದು ದಿನಗಳ ತರಬೇತಿಗಾಗಿ. ನಿಷ್ಠಾ ತರಬೇತಿಯ ಮೂರನೇ ದಿನ ಅದು. ಬೆಳಿಗ್ಗೆ 8.45 ಕ್ಕೆ ಪ್ರಾರಂಭವಾದ ತರಬೇತಿ ರಾತ್ರಿ 9 ರವರೆಗೆ. ವಿಪರೀತ ತಲೆ ನೋವು ಬಂದಿತ್ತು. ಬೆಳಿಗ್ಗೆಯಿಂದ ಮೊಬೈಲ್ ಸೈಲೆಂಟಿನಲ್ಲಿತ್ತು. ಸಾವಿರಾರು ಮೆಸೇಜ್ ವಾಟ್ಸ ಆಪ್ ಗೆ ಬಂದು ಬಿದ್ದಿತ್ತು. ಅದರಲ್ಲಿ ಐದಾರು ಮಂಜುನಾಥ ದೇವಾಡಿಗರದ್ದೇ……ಯಾರ ಮೆಸೇಜ್ ನೋಡುವ ತಾಳ್ಮೆಯೂ ಅಂದು ನನಗಿರಲಿಲ್ಲ. clear all messages ಕೊಟ್ಟುಬಿಟ್ಟೆ…… ಹಾಗೆ ಮಾಡಿ ಹೊರಗೊಮ್ಮೆ ಹೋಗಿ ಬರೋಣ ಎಂದು ರಸ್ತೆಗಿಳಿಯುವಷ್ಟರಲ್ಲಿ ಮಹೇಶ ನಾಯ್ಕರ ಫೋನ್ ರಿಂಗಣಿಸಿತ್ತು.‌ ಅಪರೂಪದ ಅವರ call ತಿರಸ್ಕರಿಸಲಾಗಲಿಲ್ಲ‌ ನನ್ನ ಹತ್ತಿರ.

ಮಾತನಾಡಿದರೆ…….

ಮಾತನಾಡಿದರೆ…….

ಮಾತನಾಡಿದರೆ…..

ಅವರು ಹೇಳಿದ್ದು ಇಷ್ಟು….

ನಿಮ್ಮನ್ನು ಅಪಾರ ಅಭಿಮಾನದಿಂದ ನೋಡುತ್ತಿದ್ದ ಮಂಜುನಾಥ ದೇವಾಡಿಗರು ಇನ್ನಿಲ್ಲ..???? ‌

ಹೃದಯವಂತನಿಗಂದು ಹೃದಯಾಘಾತವಾಯಿತು.

ಹೃದಯದಿಂದ ಪ್ರೀತಿಸಿದ ನನಗೂ ಘಾತವಾಯಿತು.

ಕತ್ತಲಿನಲ್ಲಿ ಧ್ವನಿ ಹೊರಬಾರದಂತೆ ಕಣ್ಣೀರಾದದ್ದು ನನ್ನ ಚಾದರಕ್ಕಷ್ಟೇ ಗೊತ್ತಾಯಿತಂದು.

ಮಾತು ಬೇಡ ನನಗೆ…..
ಇವತ್ತಿಗೂ ಮೌನವೇ ಪ್ರೀತಿ.

ಅರವತ್ತು ದಿನಗಳ ಗೆಳೆಯನ ಪ್ರೀತಿಯನ್ನು ಅಷ್ಟು ಬೇಗ ಕಳೆದುಕೊಂಡಿದ್ದಕ್ಕಾಗಿಯೇ ಈಗ ಈ ಅಂಕಣ ಪ್ರಾರಂಭಿಸಿದೆ. ಇದ್ದಾಗಲೇ ಹೇಳಿ ಬಿಡಬೇಕು ಎಲ್ಲವನ್ನೂ………ನನಗನಿಸುತ್ತದೆ ಇದರ ಪ್ರೇರಕ ಶಕ್ತಿ ಅವರೇ…

ಮತ್ತೆ ಇಂತಹವರನ್ನು ನನಗೆ ಪರಿಚಯಿಸಿ ನೋವು ಕೊಡಬೇಡ….ಎಂದು ಭಗವಂತನ ಮುಂದೆ ಬೇಡಿಕೊಳ್ಳುತ್ತೇನೆ. ಅವರ ಶೃದ್ಧಾಂಜಲಿ ಸಭೆಗೆ ಹೋಗಿ ಮನಸ್ಫೂರ್ತಿ ಮಾತಾಡಿ ಬಂದಿದ್ದೇನೆ.

ಅವರ ಮನೆಯವರು ಕೊಟ್ಟ ಕೈಗಡಿಯಾರ ನನ್ನ ಬಳಿ ಜೋಪಾನವಾಗಿ ಇದೆ. ಕಣ್ಣೀರೇ ಸಾಕ್ಷಿಯಾಗಿ ಮಂಜುನಾಥ ದೇವಾಡಿಗರ ಬಗೆಗೆ ಬರೆದೆ. ಇಂದಿದ್ದರೆ ಅವರು ನಾನು ಬರೆದ ಪ್ರತಿಯೊಬ್ಬರಿಗೂ phone ಮಾಡಿ wish ಮಾಡುತ್ತಿದ್ದರು.

ನಾನೂ ಅವರಿಗೆ voice message ಕಳಿಸಬೇಕು……ಕೇಳಲಿಕ್ಕೆ ಅವರೇ ಇಲ್ಲವಲ್ಲ.

ಮಾತು ಕೇಳಬೇಕೆಂದು ನನ್ನನ್ನು ಮನೆಯಂಗಳಕ್ಕೆ ಹೀಗೆ ಕರೆಸಿಕೊಳ್ಳಬಾರದಿತ್ತು ನೀವು. ಈ ವಿಷಯದಲ್ಲಿ ನಿಮ್ಮನ್ನು ನನ್ನ ಮನಸ್ಸು ಕ್ಷಮಿಸುವುದಿಲ್ಲ.

ಸಾಕು.??

ಒಂದೇ ದಿನಕ್ಕೆ ನೂರು ಜನ್ಮಕ್ಕೆ ಸಾಕಾಗುವಷ್ಟು ಊಟ ಬಡಿಸಿದಿರಿ ನನಗೆ…..
‌‌‌‌‌‌‌‌
ಸದ್ಗುರು ಶ್ರೀಧರರ ಆಶೀರ್ವಾದ ದಿ.ಮಂಜುನಾಥ ದೇವಾಡಿಗರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಮಂಜುನಾಥ ದೇವಾಡಿಗರಿಗೆ ನನ್ನ ಅಕ್ಷರ ಭಾಷ್ಪಾಂಜಲಿ

✍ಸಂದೀಪ ಎಸ್ ಭಟ್ಟ