ಕುಟಿಲ ವಚನವದು ಕೆಟ್ಟದು
ಮನ ವಿಷಮಯವಹುದು
ಸಾಧು ವಚನ ಪರಿಶುದ್ಧ ಮಧುರ
ಸುಧೆಯನೆ ಸುರಿಸುವುದು -ಕಬೀರ.

ಕುಟಿಲ ಮಾತು ಕೆಟ್ಟದ್ದು. ಅದರಿಂದ ಮನಸ್ಸು ವಿಷಮಯವಾಗುವುದು. ಒಳ್ಳೆಯ ಮಾತು ಪರಿಶುದ್ಧವಾಗಿದ್ದು ಮಧುರ ಸುಧೆಯನ್ನು ಹರಿಸುವುದು ಎಂದು ಸಂತ ಕಬೀರರು ಈ ದೋಹೆಯಲ್ಲಿ ಮಾತಿನ ಮಹತ್ವವನ್ನು ಹೇಳಿದ್ದಾರೆ.

ನಮ್ಮ ಮಾತು ಉತ್ತಮ ಭಾಷೆ ಹಾಗೂ ಉತ್ತಮ ಉದ್ದೇಶವನ್ನು ಹೊಂದಿರಬೇಕು. ಕೇಳುವವರ ಮನಸ್ಸನ್ನು ನೋಯಿಸದೆ ಪ್ರಫುಲ್ಲಗೊಳಿಸುವಂತಿರಬೇಕು. ಮನಸ್ಸು ಅರಳಿಸುವಂತಿರಬೇಕು. ಕೆರಳಿಸುವಂತಿರಬಾರದು. ಕೆಟ್ಟ ಮಾತು ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಸಮಾಜದಿಂದ ಸ್ನೇಹಿತರಿಂದ ನಮ್ಮನ್ನು ದೂರ ಮಾಡುತ್ತದೆ. ಕಲಹಕ್ಕೆ ಕಾರಣವಾಗುತ್ತದೆ. ಸಂಬಂಧಗಳು ಕೆಡುತ್ತವೆ. ದ್ವೇಷದ ವಾತಾವರಣ ಸೃಷ್ಟಿಯಾಗುತ್ತದೆ. ಆದ್ದರಿಂದ ಮಾತು ಹಿತವಾಗಿರಲಿ ಮಿತವಾಗಿರಲಿ ಎಂಬುದು ಈ ದೋಹೆಯ ಆಶಯ.

RELATED ARTICLES  ಸೇವೆಯಿಂದ ಆಗುವ ಸಾಧನೆ ಏನು? ಶ್ರೀಧರರು ಹೀಗೆ ಹೇಳಿದರು!

ಬಹಿರಂಗದ ಯುದ್ಧ ಮೊದಲು ಪ್ರಾರಂಭವಾಗುವುದು ಅಂತರಂಗದಲ್ಲಿ ಎಂಬ ಮಾತಿದೆ ಹಾಗಾಗಿ ನಾವು ಅಂತರಂಗವನ್ನು ಮೊದಲು ಶುದ್ಧವಾಗಿಟ್ಟುಕೊಳ್ಳಬೇಕು. ಅಂತರಂಗ ಶುದ್ಧವಾಗಿದ್ದರೆ ನಮ್ಮಿಂದ ಶುದ್ಧವಾದ ಮಾತುಗಳೇ ಹೊರಬರುತ್ತವೆ. ಅಂತರಂಗದಲ್ಲಿ ಕೊಳಕಿದ್ದರೆ ಹುಳುಕಿದ್ದರೆ ನಮ್ಮ ಮಾತಿನಲ್ಲೂ ಕೊಳಕು,ಹುಳುಕು ಹೊರಬರುತ್ತದೆ. ಇದು ಇತರರನ್ನು ಘಾಸಿಗೊಳಿಸುತ್ತದೆ. ಮಾತು ಮಾನವೀಯ ಸಂಬಂಧದ ನಡುವಿನ ಗೋಡೆ ಯಾಗದೆ ಸೇತುವೆಯಾಗಲಿ. ಅದು ಮನಸ್ಸು ಮನಸ್ಸುಗಳನ್ನು ಬೆಸೆಯಲಿ. ಅಂತಹ ಮಾತು ನಮ್ಮದಾಗಲಿ.

RELATED ARTICLES  ವೃತ್ತಿಶೂನ್ಯ ನಿರ್ವಿಕಲ್ಪವಾದ ನಮ್ಮ ಸ್ಥಿತಿಯಲ್ಲಿರದೇ ಕ್ಷುದ್ರ ಭಾವನೆ ಮಾಡುವದರಲ್ಲೇನು ಪ್ರಯೋಜನ?

ಇದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ…….

ಅತಿಯಾದ ಮಾತದುವು ಒಳಿತಲ್ಲಬಿಡುನಿನಗೆ
ಅತಿಯಾದ ಮೌನವದು ಹಿತವಲ್ಲ ಸತ್ಯ
ಅತಿ ಹೆಚ್ಚು ಮಳೆ ಬಿಸಿಲು ಹಿತತರದು ಜಗಕೆಲ್ಲ
ಇತಿಮಿತಿಯು ಹಿತವಹುದು -ಭಾವಜೀವಿ.

✍️ ಡಾ.ರವೀಂದ್ರ ಭಟ್ಟ ಸೂರಿ