ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಕುಮಾರ ಆಂಜನೇಯ ನಾಯ್ಕ
ಈ ಹುಡುಗನನ್ನು ಮನದಣಿಯೆ ಒಮ್ಮೆ ನೋಡಿಕೊಂಡು ಬಿಡಿ. ಹೀರೊ……ಕಿಲಾಡಿ ಕಿಟ್ಟಪ್ಪ ಈತ. ಹೆಸರೇ ಆಂಜನೇಯ. ನನ್ನ 15 ವರ್ಷಗಳ ಸೇವಾವಧಿಯಲ್ಲಿ ನಾನು ನೋಡಿದ ಕೆಲವೇ ಕೆಲವು ಮಹಾನ್ ಕಿಲಾಡಿಗಳಲ್ಲಿ ಪ್ರಥಮ ಸ್ಥಾನ ಈತನಿಗೇ.?? ನನ್ನ ಪ್ರೀತಿಯ ಹುಡುಗ ಆಂಜನೇಯ ಯಾಕೋ ತುಂಬಾ ನೆನಪಾದ ಇಂದು.
ಶಿಕ್ಷಕ ವೃತ್ತಿಯೇ ಅಂತಹುದು. ನಮಗೆ ಸಾವಿರ ಸಾವಿರ ವಿದ್ಯಾರ್ಥಿಗಳು ಸಿಗುತ್ತಾರೆ. ದೇಶ ವಿದೇಶ ಸಂಚರಿಸಿದರೂ ನಮಗೆ ಸರ್…..ನಮಸ್ಕಾರ ಎನ್ನುವುದಕ್ಕೆ ಜನ ಕೊರತೆಯಾಗುವುದಿಲ್ಲ. ಚಿಕ್ಕ ಮಕ್ಕಳ ಒಡನಾಟದಿಂದ ನಮಗೆ ಅಷ್ಟು ಬೇಗ ವಯಸ್ಸಾಗುವುದೇ ಇಲ್ಲ. ಅದಕ್ಕೆ ನನಗೆ ಕೇವಲ 18 ವರ್ಷ ಎಂದು ಅಂದುಕೊಳ್ಳುತ್ತೇನೆ….. ಮೇಲಿಂದ ಮತ್ತೆ …..ಹದಿನೆಂಟಾದರೂ. ???
ಎಲ್ಲಾ ಮಕ್ಕಳೂ ಶಿಕ್ಷಕನಾದವನಿಗೆ ನೆನಪಿರುವುದಿಲ್ಲ. ಅತಿ ಬುದ್ಧಿವಂತ ಮಕ್ಕಳು, ಪ್ರತಿಭಾಶಾಲಿಗಳು…. ನೆನಪಿರಬಹುದು. ಇಲ್ಲವಾದಲ್ಲಿ ಅತಿ ಕಿಲಾಡಿಗಳು ನೆನಪಿರಬಹುದು. ಅತಿ ಬುದ್ಧಿವಂತ ಮಕ್ಕಳು ಅವರವರ ಬುದ್ಧಿವಂತಿಕೆಯಿಂದಲೇ ಬದುಕು ಕಟ್ಟಿಕೊಳ್ಳುತ್ತಾರೆ…. ಕೆಲವರು ನೆನಪಿಟ್ಟುಕೊಳ್ಳುತ್ತಾರೆ….ಮತ್ತೆ ಕೆಲವರು ಅವರಿಂದ ನನಗೇನೂ ಆಗಿಲ್ಲ ಎಂಬಂತೆ ವ್ಯವಹರಿಸುತ್ತಾರೆ. ಆದರೆ “ನೀನು ದಡ್ಡ ಶಿಖಾಮಣಿ, ನಿನಗೇನೂ ಬರುವುದಿಲ್ಲ, ಎಲಾ.. ನಿನ್ನ….ಎಂದು ವಿಪರೀತ ಬಯ್ದ ವಿದ್ಯಾರ್ಥಿಗಳು ವಿಧೇಯತೆಯಿಂದ ಬಹಳ ವರ್ಷಗಳ ಮೇಲೂ ನಮ್ಮನ್ನು ಸ್ಮರಿಸುತ್ತಾರೆ.
ಪಾಲಕರೂ ಅಷ್ಟೇ…. ತಮ್ಮ ಮಕ್ಕಳು ಬುದ್ಧಿವಂತರಾದರೆ ಅದಕ್ಕೆ ಅವರೇ ಕಾರಣ…ನಮ್ಮ ಮಗ/ಮಗಳು ಬಹಳ ಹುಷಾ…….ರಿ? ಎಂದು ಪದೇ ಪದೇ ಬಾಯ್ತುಂಬ ಹೇಳುತ್ತಾರೆ. ಒಂದು ವೇಳೆ ಮಕ್ಕಳು ಸ್ವಲ್ಪ ಹಿಂದುಳಿದರೂ ಮಾಸ್ತರ ಉಪಯೋಗಿಲ್ಲ. ಅಕ್ಕೊರಿಗೆ ಏನೂ ಬರುವುದಿಲ್ಲ ಅಂತ ಬಾಯ್ತುಂಬ ಬೊಬ್ಬೆ ಹೊಡೆಯುತ್ತಾರೆ. ?? ಹಾಗಂತ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ನನಗಂತೂ ಇದು ನಿತ್ಯ ತಮಾಷೆಯ ವಿಷಯ.
ನಾನು ಬಹಳ ದಿನಗಳಿಂದ ನಿರೀಕ್ಷಿಸಿದ್ದ ಹುಡುಗನಿಗೆ ಹೋದ ವರ್ಷ ನನ್ನ ನಂಬರ್ ಸಿಕ್ಕಿತಂತೆ. ಯಾವುದೋ ಬೇರೆ ರಾಜ್ಯದಿಂದ call ಮಾಡಿದ. ಸರ್…….ನಾನು ಅಂಜನೇಯ ಅಂದ. ಇಷ್ಟು ಹೇಳಿದ್ದೇ ನನಗೆ ಬಹಳ ಖುಷಿಯಾಗಿ ಹೋಯ್ತು. ಯಾರೋ ಮೋರಿಗಂಡಿ ಆಂಜನೇಯನೇನೊ…. ಅಂದೆ.?? ಸರ್…….ಅಂದ. ಪಾ….ಪ ನನ್ನ ಪ್ರೀತಿಯ ಹುಡುಗ ಎಷ್ಟೋ ವರ್ಷಗಳ ನಂತರ ಸರ್….ಹೇಗಿದ್ದೀರಿ?! ಎಂದು ವಿಚಾರಿಸುವದಕ್ಕಾಗಿ ಫೋನಾಯಿಸಿದ್ದ. ನನಗೆ ಅವನ ವಿದ್ಯಾರ್ಥಿ ಜೀವನದ ದಿನಗಳು ಸರಕ್ಕನೇ ಕಣ್ಮುಂದೆ ಸುಳಿದು ಹೋದವು.
ದಿನಕ್ಕೆ ಹತ್ತಾರು ಜಗಳ, ನೂರಾರು ಕಂಪ್ಲೆಂಟ್….ನಾನು ಪೋಲೀಸನೋ ಅಥವಾ ಶಿಕ್ಷಕನೋ ನನಗೇ confuse ಆಗುವಷ್ಟು. ಅದಕ್ಕೆ ಈ ಕುಲ ಪುತ್ರ ಆಂಜನೇಯನೇ ಕಾರಣ. ಕುಳ್ಳಗಿನ ದೇಹದ ಊಸಿದರೆ ಹಾರಿ ಹೋಗುವಂತಿದ್ದ ಈ ಪೋರ ಮಾಡುವ ದಾಂಧಲೆ ಒಂದೆರಡಲ್ಲ. ದಿನಾ ಅದೂ ಇದೂ. ಮಾತಿಗೂ ಅಷ್ಟೇ ಹುಷಾರಿ. ಕಲಿಕೆಯೋ ಸಾಧಾರಣದಿಂದ ಉತ್ತಮ. ? ವಾನರ ಶ್ರೇಷ್ಠ ಆಂಜನೇಯನೇ ತನ್ನ ಸಂಪೂರ್ಣ ಅವತಾರ ಎತ್ತಿ ಬಂದಂತೆ ತೋರುತ್ತಿತ್ತು ನನಗೆ. ಬಹಳ ಸವಾಲಾಗಿದ್ದ ಮನುಷ್ಯ ಆತ. ಕಿಲಾಡಿ ಎಂದರೆ ಮಹಾನ್ ಕಿಲಾಡಿ.
ಇಂತಹ ಆಂಜನೇಯನನ್ನು ಹತ್ತಿರ ಕರೆದು ಒಮ್ಮೆ ಬೆನ್ನು ಸವರಿ ಚೆನ್ನಾಗಿ ಉಪದೇಶಿಸಿದ್ದೆ. ನಾನು ಹೇಳಿದ್ದಕ್ಕೆಲ್ಲ ನಾಳೆಯಿಂದ ಹಾಗೇ ಮಾಡುತ್ತೇನೆ….. ಎಂದು ಕೈಕಟ್ಟಿ ಗೋಣು ಅಲ್ಲಾಡಿಸುವವನು….
ಹಾಗೆಯೇ ಮಾಡುತ್ತಿದ್ದ. ???
ಈ ಹಾಗೆಯೇ ಮಾಡುತ್ತೇನೆ ಎನ್ನುವುದರ ಅರ್ಥ ನನಗೇ ಗೊತ್ತಾಗಲಿಲ್ಲ. ???
ಕೆಲವೊಮ್ಮೆ ಕೆಲವರಿಗೆ 250 mg ಮಾತ್ರೆ ತಾಗುವುದಿಲ್ಲ. ಹೀಗಾಗಿ 500 m.g ಎರಡು ಕೊಟ್ಟೆ. ತಾಗಲಿಲ್ಲ.? injection ಕೊಟ್ಟೆ ಊಹೂಂ…..ಶಾಲೆ ತಪ್ಪಿಸುವುದು ಜೋರಾಗಿ ಹೋಯ್ತು. ಪದೇ ಪದೇ ಬರದೇ ಹೋದಾಗ ನಾನು ನಮ್ಮ ಆಂಜನೇಯ ಎಲ್ಲಿ ಹೋದ ಎಂದು ತವಕಿಸುತ್ತಿದ್ದೆ. ಏನೇ ಹೇಳಲಿ….ಎಷ್ಟೇ ಬೀಳಲಿ ಅವನು ನನಗೆ ಅತ್ಯಂತ ಪ್ರೀತಿಯ ಮನುಷ್ಯ.? ಒಂದು ದಿನವಲ್ಲ…..ಪದೇ ಪದೇ ನಾಲ್ಕಾರು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದರು. 4-5 ಕಿ.ಮೀ ದೂರದಿಂದ ಅವರು ನಡೆದುಕೊಂಡು ಬರುವವರಾದ್ದರಿಂದ, ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕಾದುದರಿಂದ ಅವರಿಗೇನೋ ತೊಂದರೆ ಆಗಿರಬಹುದೆಂದು ನನ್ನ ಲೆಕ್ಕಾಚಾರ. ಅದೂ ಆ ಕಡೆ ಗಡಿಹಬ್ಬದ ಮೇಲೆ ಗಡಿಹಬ್ಬ. ಕೋಳಿ ಕೊಂಯ್ಕ ? ಸಾರು ಸೊಂಯ್ಕ. ??
ಆದರೆ ಮಾರನೆಯ ದಿನ ಬಂದ ವಿದ್ಯಾರ್ಥಿಗಳ ಗುಂಪು ನನ್ನ ಬೋಳಿಗೆ ಸರೀ ಎಣ್ಣೆ ಸವರುತ್ತಿತ್ತು. ಅವರು ಕೈ ಕಟ್ಟಿಕೊಂಡು ಬರದೇ ಹೋದದ್ದಕ್ಕೆ ಕಾರಣ ಹೇಳುವಾಗ ಎಂಥವರಿಗೂ ಅವರ ಮೇಲೊಂದು ಸಂಶಯ ಮೂಡುತ್ತಿರಲಿಲ್ಲ. ವಿಧೇಯತೆ ತುಂಬಿ ತುಳುಕುತ್ತಿತ್ತು.??
ಒಂದು ದಿನ ಮತ್ತೆ ಮೂವರ ಪತ್ತೆಯಿರಲಿಲ್ಲ. ಬೆಳಗಿನ ಎರಡು ಅವಧಿಗಳ ಬಳಿಕ ಹೊರಗೆ ಬಂದು ನಿಂತು ಕೊಂಡಿದ್ದೆ. ದೂರದಲ್ಲಿ ರಸ್ತೆಯ ಮೇಲೆ ಮೂವರು ಹುಡುಗರು….. ಅವರ ಹಿಂದೆ ಕೈಯಲ್ಲಿ ಕೋಲು ಹಿಡಿದು ಕೋಣಕ್ಕೆ ಬಾರಿಸಿದ ಹಾಗೆ ಬಾರಿಸಿಕೊಂಡು ಬರುತ್ತಿದ್ದ ಆಂಜನೇಯನ ಅಮ್ಮ…..ನನ್ನ ಸೂಕ್ಷ್ಮದರ್ಶಕದ ಕಣ್ಣಿಗೆ ಕಂಡರು. ಏನೋ ಎಡವಟ್ಟಾಗಿದೆ ಅಂತ ಪಕ್ಕಾ ಆಗಿತ್ತು ನನಗೆ. ಅಂತೂ ಅವರ ದಿಬ್ಬಣ ಶಾಲೆಯವರೆಗೂ ಬಂತು. ಆಂಜನೇಯನ ಅಮ್ಮನಿಗೆ ಬಿ.ಪಿ. ಫುಲ್ ರೈಸ್ ಆಗಿತ್ತು. ನನ್ನ ಮೇಲಲ್ಲ. ಮಕ್ಕಳ ಮೇಲೆ. ಏದುಸಿರು ಬಿಡುತ್ತಿದ್ದಳು. ನಾನು ತಾಳ್ಮೆಯಿಂದ ಅವರನ್ನು ತಣ್ಣಗಾಗಿಸಿದೆ. ಹುಡುಗರು ಮದುವೆ ಮನೆಯಲ್ಲಿ ಹಿಂದಿನ ಕಾಲದ ವಧು ನೆಲ ನೋಡುತ್ತಾ ನಿಂತಂತೆ ನಿಂತಿದ್ದರು. ಏನಾಯಿತೆಂದು ಆಂಜನೇಯನ ಅಮ್ಮನನ್ನು ಪ್ರಶ್ನಿಸಿದೆ. ” ಗುರೂಜಿ ಹುಡುಗರನ್ನೇ ಕೇಳಿ ಅಂತ ಅವರು.” ಹೇಳಿ ನೀವೇ ಹೇಳಿ ಪರವಾಗಿಲ್ಲ ಎಂದೆ.
ಪ್ರತಿದಿನ ಶಾಲೆಗೆ ಹೋಗುವುದಾಗಿ ಮನೆಯಿಂದ ಬ್ಯಾಗ್ ಹಾಕಿಕೊಂಡು ಯೂನಿಫಾರಂ ಸಮೇತ ಹೊರಡುವರಂತೆ. ಅಲ್ಲೆಲ್ಲೊ ಮೋರಿಗಂಡಿಯಲ್ಲಿ ಸಂಜೆಯವರೆಗೂ ಕ್ವಾರಂಟೈನ್ ಆಗಿದ್ದು ಸಂಜೆ ಶಾಲೆ ಬಿಡುವ ಸಮಯಕ್ಕೆ ಮತ್ತೆ ಮನೆಗೆ. ? ಆ ದಿನ ತರಗೆಲೆಗಳನ್ನು ತರುವುದಕ್ಕೆಂದು ಬಂದ ಆಂಜನೇಯನ ತಾಯಿಗೆ ಆ ಮೋರಿಗಂಡಿಯ ಸಮೀಪ ಕುಸು ಕುಸು ಪಿಸು ಪಿಸು ಮಾತು ಕೇಳಿದೆ. ?? ಓಬವ್ವನಿಗೆ ಕೋಟೆಯ ಕಿಂಡಿಯಲ್ಲಿ ಕೇಳಿದಂತೆ….?? ನೀರು ಹೋಗುವ ಕಾಲುವೆ ಇಳಿದು ಮೋರಿ ಗಂಡಿ ವೀಕ್ಷಿಸಿದರೆ….ವೀಕ್ಷಿಸಿದರೆ… ಮಕ್ಕಳು ಅಲ್ಲೇ ಇದ್ದಾರೆ. ?? ಕೋಲು ಮುರಿದವಳೇ ಸಕತ್ತಾಗಿ ಬಾರಿಸಿದ್ದಾಳೆ. ಬಾರಿಸಿಕೊಂಡೇ ದಿಬ್ಬಣ ಶಾಲೆಯವರೆಗೂ ಬಂದಿದೆ.
ಅವತ್ತಿನಿಂದ ನಮ್ಮ ಆಂಜನೇಯ ಮೋರಿಗಂಡಿ ಆಂಜನೇಯ ಆದ. ನಾನೂ ನಾಲ್ಕು ಬಾರಿಸಿದ್ದೆ ಆ ದಿನ. ಯಾಕೆಂದರೆ ಅವರು ನನ್ನ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಬಹಳಷ್ಟು ದಿನ ನನ್ನ ತಲೆಯನ್ನು ನುಣ್ಣಗೆ ಬೋಳಿಸಿ parachute ಎಣ್ಣೆ ಸವರಿದ್ದರು. ???
ಅವತ್ತು ನಮ್ಮ ಆಂಜನೇಯನಿಗೆ ದೀರ್ಘಕಾಲಿಕ ಉಪನ್ಯಾಸ ಮಾಡಿದೆ. ಏನನಿಸಿತೋ ಪಾಪ ಅವನಿಗೆ. ಮುಂದೆ ಈ ಥರದ ತಪ್ಪು ಅವನಿಂದ ಘಟಿಸಲೇ ಇಲ್ಲ. ಆಂಜನೇಯ ರಾಮನನ್ನು ನೆಚ್ಚಿಕೊಂಡಂತೆ ನನ್ನನ್ನು ನೆಚ್ಚಿಕೊಳ್ಳುತ್ತಿದ್ದ. ನಾನು ಹೇಳಿದ ಕೆಲಸವನ್ನು ಶೃದ್ಧೆಯಿಂದ ಮಾಡುತ್ತಿದ್ದ. ನೂರಾರು ವಿದ್ಯಾರ್ಥಿಗಳ ನಡುವೆಯೂ ನನ್ನ ಬಾಯಿಂದ ಪದೇ ಪದೇ ಮೋರಿಗಂಡಿ ಆಂಜನೇಯ ಎಲ್ಲೋದ್ನೋ…. ಅಂತಾನೇ ಬರುತ್ತಿತ್ತು. ಅಷ್ಟು ಆಪ್ತವಾಗಿದ್ದ ಅವನು. ಅವನನ್ನು ಶತಾಯ ಗತಾಯ ಒಳ್ಳೆಯ ವ್ಯಕ್ತಿ ಮಾಡಬೇಕೆಂಬ ಅಭಿಲಾಷೆ ನನ್ನದು. ಒಳ್ಳೆಯ ಗಾಳಿ ಹಾಕುತ್ತಿದ್ದೆ ಅವನಿಗೆ. ವ್ಯಕ್ತಿ ಬದಲಾಗಿ ಹೋದ.
ಆಂಜನೇಯ ಸುಧಾರಿಸಿದ. ಬಿಚ್ಚಿದ ಬಾಲವನ್ನು ಸುತ್ತಿ ಮಡಚಿಟ್ಟ. ? ಅಭ್ಯಾಸದಲ್ಲೂ ಮುಂದೆ ಬಂದ. no complaints. ಹೀಗಾಗಿ ನಮ್ಮ ಪೋಲೀಸ್ ಠಾಣೆ ಮತ್ತೆ ಶಾಲೆಯಾಗಿ convert ಆಯ್ತು. ನಮ್ಮ ಹುಡುಗ ಹಾಡು ಹೇಳುವದರಲ್ಲಿ ಬಹಳ ಫೇಮಸ್. ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ವಿಜೇತನಾದ. ಮಾತಿನ ಮಲ್ಲ ಆಂಜನೇಯ ಇಂದು ಉಡುಪಿಯಲ್ಲಿ electrician ಆಗಿ ಪ್ರಾಮಾಣಿಕ ಬಾಳ್ವೆ ಮಾಡುತ್ತಾನೆ.
ಆತನ ತಾಯಿ ಒಂದು ದಿನ ಬಂದು ನನ್ನ ಮಗನ ಪಾಲಿನ ದೇವರು ನೀವು ಎಂದು ಒಂದು ಪ್ಲಾಸ್ಟಿಕ್ ಡಬ್ಬದ ತುಂಬ ಬೆಲ್ಲ ತಂದು ಬೇಡವೆಂದರೂ ಒತ್ತಾಯಿಸಿ ಕೊಟ್ಟು ಕೈ ಮುಗಿದಳು. ಅಂಥ ಆಂಜನೇಯ ಇವತ್ತಿಗೂ ನನ್ನ ಪ್ರೀತಿಯ ಶಿಷ್ಯ.
ಇಂಥ ಅನೇಕ ಶಿಷ್ಯ ಬಳಗ ಇದೆ ನನಗೆ. ಒಬ್ಬೊಬ್ಬರಂದು ಒಂದೊಂದು different crime story.??? ಅವರೇ ನನ್ನ ಅನ್ನದಾತರು. ಹೀಗಾಗಿ ನನಗೆ ಎಷ್ಟು ಮಕ್ಕಳೆಂದು ಕೇಳಿದರೆ ಸಾವಿರಾರು ಎಂದೇ ನಾನು ಹೇಳುತ್ತೇನೆ.
ಆಂಜನೇಯ ನನ್ನನ್ನರಸಿ ಮತ್ತೆ ಸಂಪರ್ಕಕ್ಕೆ ಬಂದ. ಕಿಲಾಡಿ ಕಿಟ್ಟಪ್ಪ ತಲೆಯನ್ನೆಲ್ಲ ಸ್ಪೈಕ್ ಮಾಡಿ ಸ್ಟೈಲ್ ಕಿಂಗ್ ಆಗಿದಾನೆ. ಏನಾದರೂ ಭಾನಗಡಿ ಮಾಡಿ ಸಿಕ್ಕಿ ಬಿದ್ದರೆ ಯಾರೋ ನಿನಗೆ ಕಲಿಸಿದವರು?! ಎಂದು ಯಾರಾದರೂ ಕೇಳಿದ್ದೇ ಆದರೆ ಪಕ್ಕಾ ನನ್ನದೇ ಹೆಸರು ಹೇಳುತ್ತಾನೆ ಹುಡುಗ. ???
ನನ್ನ ಆಂಜನೇಯನ ನಾಮಸ್ಮರಣೆಯಿಂದ ಜನ್ಮ ಪಾವನವಾಯಿತು. ಮನೆಯಲ್ಲಿ ಆಂಜನೇಯನ ಪಾರಾಯಣ ಮಾಡುವುದಕ್ಕೆ ನನಗೆ ಪುರುಸೊತ್ತು ಕಡಿಮೆ ಇರುವುದರಿಂದ ಶಾಲೆಯಲ್ಲಿಯೇ ನನ್ನ ಹತ್ತಿರ ಹೆಚ್ಚು ಬಾರಿ ಕರೆಸಿಕೊಂಡ ಭಗವಂತ ಎಂದು ನಾನಾದರೂ ಅಂದುಕೊಳ್ಳುತ್ತೇನೆ.
ಮೋರಿ ಸಿಕ್ಕಾಗೆಲ್ಲ ಮೊದಲು ನೆನಪಾಗುವ ಕಿಲಾಡಿ ಕಿಂಗ್ ಆಂಜನೇಯ ನನ್ನ ಆ ದಿನಗಳನ್ನು enjoyable ಮಾಡಿದ್ದಾನೆ. ಹೀಗಾಗಿ ಅವನಿಗೆ ಬಣ್ಣ ತುಂಬಿದವನು ನಾನಲ್ಲ. ಅವನೇ ನನ್ನ ಬದುಕಿಗೆ ಬಣ್ಣ ತುಂಬಿದವನು.
ಸದ್ಗುರು ಶ್ರೀಧರರ ಆಶೀರ್ವಾದ ಆಂಜನೇಯ ಹಾಗೂ ಅವನ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಆಂಜನೇಯನಿಗೆ ನನ್ನ ಪ್ರೀತಿ ಪೂರ್ವಕ ಆಶೀರ್ವಾದಗಳು
✍ಸಂದೀಪ ಎಸ್ ಭಟ್ಟ