ದುಗುಡದಿ ಸ್ಮರಣೆಯ ಮಾಡುವರೆಲ್ಲ
ಸುಖದಲಿ ಸ್ಮರಿಸುವರಿಲ್ಲ
ಸುಖದಲು ಸ್ಮರಣೆಯ ಗೈದೊಡೆ
ದುಗುಡವೇಕೆ ಬಂದೀತು -ಕಬೀರ.

ಕಷ್ಟ ಬಂದಾಗ ನಾವು ದೇವರ ಸ್ಮರಣೆ ಮಾಡುತ್ತೇವೆ. ನಮಗೆ ಸುಖವಿದ್ದಾಗ ದೇವರನ್ನು ಸ್ಮರಿಸುವುದೇ ಇಲ್ಲ. ಅವನನ್ನು ಸ್ಮರಿಸಿದರೆ ನಮಗೆ ದುಗುಡವು ಎದುರಾಗದು ಎಂಬುದು ಕಬೀರರ ಅಭಿಮತ.

ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ನಮ್ಮ ನಡೆ ಇರುತ್ತದೆ. ಸಂಕಟ ಬಂದಾಗ ಮಾತ್ರ ನಮಗೆ ವೆಂಕಟರಮಣನ ನೆನಪಾಗುತ್ತದೆ. ಸಂಕಟದಿಂದ ಪಾರು ಮಾಡು ದೇವಾ ಎಂದು ಮೊರೆ ಹೋಗುತ್ತೇವೆ. ಆದರೆ ಸುಖದಲ್ಲಿ ಬದುಕು ಸಾಗುತ್ತಿರುವಾಗ ದೇವರ ಸ್ಮರಣೆ ಮಾಡಲು ನಮಗೆ ಸಮಯವಿರುವುದಿಲ್ಲ. ಆ ಸುಖ ನೀಡಿದವನು ಅವನು ಅವನ ಅನುಗ್ರಹವಿದ್ದರೆ ಮಾತ್ರ ಸುಖ ನೆಮ್ಮದಿ ನಮ್ಮ ಜೊತೆ ಇರಲು ಸಾಧ್ಯ ಎಂಬ ಅರಿವು ನಮಗೆ ಆಗುವುದೇ ಇಲ್ಲ. ಇದು ಸಾಧುವಲ್ಲ. ಕಷ್ಟ ಸುಖ ಎರಡರಲ್ಲೂ ದೇವರ ಸ್ಮರಣೆ ಮಾಡಿದರೆ ಅವನ ಕರುಣೆಯಿಂದ ನಮ್ಮ ಬದುಕು ಸುಸೂತ್ರವಾಗಿ ಸಾಗುತ್ತದೆ ಎಂಬುದು ಈ ದೋಹೆಯ ಭಾವಾರ್ಥ.

RELATED ARTICLES  ನಾವು ಯೋಗ್ಯಮಾರ್ಗದಲ್ಲಿ ನಡೆಯುತ್ತಿರುವಾಗ ಲೋಕಾಪವಾದ ಬಂದರೆ ಅದು ಭೂಷಣಾಸ್ಪದವೇ ಎಂದೆನ್ನಬೇಕು ಎಂದರು ಶ್ರೀಧರರು

ನಮ್ಮ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲು ಸಾವಿರ ನೆಂಟರು, ಬಂಟರು, ಸ್ನೇಹಿತರು ಎಲ್ಲಾ ಇರುತ್ತಾರೆ. ಆದರೆ ದುಃಖದಲ್ಲಿ, ಕಷ್ಟದಲ್ಲಿ ಅವರು ನಮ್ಮನ್ನು ತೊರೆಯುತ್ತಾರೆ. ಅವರೆಲ್ಲ ದೂರವಾದಾಗ ನಮಗೆ ಆ ದೇವರ ನೆನಪು ಬರುತ್ತದೆ. ಅಂತಹ ಸಂಕಷ್ಟದಲ್ಲಿ ಆ ದೇವನೊಬ್ಬನೇ ನಮಗೆ ಆಸರೆಯಾಗಿರುತ್ತಾನೆ. ಹಾಗಾಗಿ ನಮ್ಮ ಮರಣದವರೆಗೂ ಅವನ ಸ್ಮರಣೆ ಬಿಡಬಾರದು ಎಂಬ ಹಿತನುಡಿ ಈ ದೋಹೆಯಲ್ಲಿದೆ.

RELATED ARTICLES  ಶ್ರೀಧರರು ೧೯೫೦-೫೧ರ ಸುಮಾರಿಗೆ ಶ್ರೀ ದತ್ತಾಬುವಾ ರಾಮದಾಸಿಯವರಿಗೆ ಬರೆದ ಪತ್ರ

ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ…………..

ಅರಳಿ ಬರಲದು ಸ್ಮರಣೆ ನಿನ್ನ ಕೊರಳೊಳಗಿಂದ
ಹರಿದು ಬರಲದು ತರವು ನಿನ್ನ ಹಿತಕೆ
ಪರಿಸರಕೆ ಮಂಗಳವು ಪುಣ್ಯ ಫಲವದು ನಿನಗೆ
ಅರಿತು ಬಾಳುವದೊಳಿತು -ಭಾವಜೀವಿ.

✍️ ಡಾ.ರವೀಂದ್ರ ಭಟ್ಟ ಸೂರಿ