ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಡಾ|| ಜಿ.ಎಲ್.ಹೆಗಡೆ ಕುಮಟಾ

ಇಂದು ನಾನು ಇಷ್ಟಾದರೂ ಬರೆಯುತ್ತೇನೆಂದರೆ… ಮಾತನಾಡುತ್ತೇನೆಂದರೆ… ನನ್ನನ್ನು ಅತಿ ಹೆಚ್ಚು ಪ್ರಭಾವಿತಗೊಳಿಸಿದ ನನ್ನ ಮಾನಸಿಕ ಗುರು ಡಾ|| ಜಿ.ಎಲ್.ಹೆಗಡೆ. ಅದಕ್ಕೆ ಕಾರಣ. ನಾನು ಬಾಳಿಗಾ ಕಾಲೇಜಿನಲ್ಲಿ ಓದಿದವನಲ್ಲ. ಅವರು ನನಗೆ ನೇರವಾಗಿ ಒಂದೂ ಪಾಠ ಹೇಳಿಕೊಟ್ಟಿದ್ದಿಲ್ಲ. ಆದರೆ ನಾನು ಅವರ ವ್ಯಕ್ತಿತ್ವ, ಉಪನ್ಯಾಸ, ಬರವಣಿಗೆ ಹಾಗೂ ತಾಳಮದ್ದಲೆ ಅರ್ಥಗಾರಿಕೆಯಿಂದ ಸಾಕಷ್ಟು ಸ್ಫೂರ್ತಿಗೊಂಡವ. ಡಾ|| ಜಿ.ಎಲ್.ಹೆಗಡೆಯವರು ಕರುನಾಡಿನಲ್ಲಿ ಗುರುತಿಸಬಹುದಾದ ಮೇರು ವ್ಯಕ್ತಿತ್ವದ ಅದ್ಭುತ ವ್ಯಕ್ತಿ.
ಕುಮಟಾದ ಎ.ವಿ.ಬಾಳಿಗಾ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ನಿವೃತ್ತರಾಗಿರುವ ಡಾ|| ಜಿ.ಎಲ್.ಹೆಗಡೆಯವರು ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಒಟ್ಟಾರೆ ಕನ್ನಡ ಭಾಷೆಯ ಮೇಲೆ ಸಂಪೂರ್ಣ ಹಿಡಿತವಿರುವ ಸಂಪನ್ಮೂಲ ವ್ಯಕ್ತಿ. ಬಹುಮುಖ ಪ್ರತಿಭೆಯ ಡಾ|| ಜಿ.ಎಲ್ ಹೆಗಡೆಯವರು ಸಂಸ್ಕೃತವನ್ನೂ ಅರಗಿಸಿ ಕುಡಿದವರು. ಎಲ್ಲಕ್ಕಿಂತ ಹೆಚ್ಚಾಗಿ ಹಾಸ್ಯ ಪ್ರಜ್ಞೆ ಹೊಂದಿದ ವಾಸ್ತವದ ನೆಲೆಗಟ್ಟನ್ನು ಮೀರದ ಮಾತಿನ ಮಾಂತ್ರಿಕ ಅವರು.
ಡಾ|| ಜಿ.ಎಲ್ ಹೆಗಡೆಯವರನ್ನು ಕಂಡರೆ ನನಗೆ ಅಪಾರ ಗೌರವ. ಅವರ ಉಪನ್ಯಾಸ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಮೂರು ಸಾವಿರ ಜನರಿರಲಿ…ಮೂವತ್ತೇ ಜನ ಸೇರಿರಲಿ ಅವರು ಜನ ನೋಡಿ ಮಾತಾಡುವವರಲ್ಲ. ಒಂದು ನಿರ್ದಿಷ್ಟ ವಿಷಯದ ಮೇಲೆ ನಿರರ್ಗಳವಾಗಿ ಗಂಟೆಗೂ ಮೀರಿ ಮಾತಾಡಿದರೂ ಒಂದೇ ಒಂದು ನಿಮಿಷದಲ್ಲಿ ಅದು ಮುಗಿದುಹೋಯಿತು ಎನ್ನುವ ಹಾಗೆ ಇರುತ್ತದೆ ಅದು. ಪದ ಲಾಲಿತ್ಯದಲ್ಲಿ ಕಳೆದು ಹೋಗುತ್ತೇವೆ ನಾವು. ಅವರು ಅವರದೇ ಶೈಲಿಯಲ್ಲಿ ಮಾತನಾಡುತ್ತಾರೆ ವಿನಹ ಯಾರ ಅನುಕರಣೆಯೂ ಅಲ್ಲ. ಅವರನ್ನು ಯಾರಾದರೂ ಅನುಕರಿಸುತ್ತಾರೆಂದರೂ ಅದು ಬಹಳ ಕಷ್ಟ. ಪಾಂಡಿತ್ಯವೊಂದು ತುಂಬಿಕೊಂಡಿದ್ದರೆ ಸಾಲದು ಅದನ್ನು ಪ್ರಸ್ತುತಗೊಳಿಸುವಿಕೆ ಮಹತ್ವದ್ದಾಗಿರುತ್ತದೆ. ಕೆಲವರು ಪಂಡಿತೋತ್ತಮರು ವಿಷಯ ಮಂಡಿಸುವಾಗ ಮುಂದೆ ಕುಳಿತ ಶ್ರೋತೃಗಳು ಆಕಳಿಕೆ ಮೇಲೆ ಆಕಳಿಕೆ ತೆಗೆಯುತ್ತಿರುವುದನ್ನು ನೋಡಿದರೆ ನನಗೆ ನಗು ಬರುತ್ತದೆ. ?? ಆದರೂ ಪಂಡಿತೋತ್ತಮರು ಅವರ ಮಾತುಗಳನ್ನು ಮಾತ್ರ ನಿಲ್ಲಿಸುವುದೇ ಇಲ್ಲ. ಹತ್ತೇ ನಿಮಿಷ ಅವಕಾಶವಿದ್ದರೂ ಒಂದು ಗಂಟೆ ಹತ್ತು ನಿಮಿಷ ಕಸಿದುಕೊಂಡು ಮಾತನಾಡುವ ಪ್ರಕಾಂಡ ಪಂಡಿತರುಗಳ ಉಪನ್ಯಾಸ ರಸವೇ ಇಲ್ಲದ ಚುಯಿಂಗಮ್ ಹಾಕಿಕೊಂಡು ಬಾಯಾಡಿಸುತ್ತಿದ್ದಂತೆ.
ಡಾ|| ಜಿ.ಎಲ್. ಹೆಗಡೆಯವರು ಗೀತ ರಾಮಾಯಣದಲ್ಲಿ ವಾಲ್ಮೀಕಿಯಾಗಿ ಅಭಿನಯಿಸುವಾಗ ಸಾಕ್ಷಾತ್ ವಾಲ್ಮೀಕಿಯೇ ಆವಿರ್ಭವಿಸಿದ ಅನುಭವ. ಅವರು ಅನೇಕ ಕಿರುಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸಾಹಿತಿಗಳಾಗಿ ಅನೇಕ ಪುಸ್ತಕಗಳನ್ನು ಹೊರ ತಂದಿದ್ದಾರೆ. ಶ್ರೇಣಿಯವರ ಅರ್ಥಗಾರಿಕೆಯಿಂದ ಬಹಳ ಪ್ರಭಾವಿತಗೊಂಡ ಡಾ|| ಜಿ.ಎಲ್.ಹೆಗಡೆಯವರು ತಾಳಮದ್ದಲೆ ಅರ್ಥಗಾರಿಕೆಯಲ್ಲಿ ಎತ್ತಿದ ಕೈ. ರಾಮನಾದರೆ ರಾಮನನ್ನೇ ಗೆಲ್ಲಿಸುತ್ತಾರೆ. ರಾವಣನಾದರೆ ರಾವಣನದ್ದು ತಪ್ಪೇ ಇಲ್ಲ ಅನ್ನುವಂತೆ ಸಮರ್ಥಿಸುವ ಅವರ ವೈಚಾರಿಕತೆಗೆ ನನ್ನಲ್ಲಿ ಮಾತೇ ಇಲ್ಲ.
ಅವರ ಶಿಸ್ತು, ಧರಿಸುವ ಧಿರಿಸು, ಮಾತನಾಡಿಸುವ ಪ್ರೀತಿ ಅಷ್ಟು ದೊಡ್ಡ ಮನುಷ್ಯರಾದರೂ ಸೌಹಾರ್ದಯುತವಾಗಿ ನಡೆದುಕೊಳ್ಳುವ ಪರಿ ಆದರ್ಶವಾದದ್ದು. ಅಮೃತವರ್ಷಿಣಿಯೆಂಬ ಅವರ ಮನೆಗಿಂತ ಅವರ ಮನಸ್ಸು ಮತ್ತೂ ದೊಡ್ಡದು. ಹೃದಯವಂತ ಡಾ|| ಜಿ.ಎಲ್.ಹೆಗಡೆಯವರು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಕೂಡ ಕೆಲಸ ಮಾಡಿದವರು. ಅನೇಕ ಯಕ್ಷಗಾನ ವಿಚಾರ ಸಂಕಿರಣಗಳನ್ನೂ, ತಾಳಮದ್ದಲೆ ಕೂಟಗಳನ್ನೂ, ಯಕ್ಷಗಾನ ಪ್ರದರ್ಶನಗಳನ್ನೂ ಏರ್ಪಡಿಸಿ ಬೆರಗಾಗುವ ಸಂಘಟನೆ ಮಾಡಿ ತೋರಿಸಿದವರು.
ಸ್ವತಃ driving ಮಾಡಿಕೊಂಡು ಅವರು ಸೊಂಯ್…. ಎಂದು ಬಂದು ನಿಂತರೆ ನನಗೆ ಸಾಹಸಸಿಂಹ ವಿಷ್ಣುವರ್ಧನ್ ನೆನಪಾಗುತ್ತಾರೆ. ತಮ್ಮದೇ ಆದ ಖದರ್ ಮೆಂಟೇನ್ ಮಾಡುವ ಜಿ.ಎಲ್ ಹೆಗಡೆಯವರ ಶಾಲು, ಅವರ ಪಂಚೆ, ಅವರ ಜುಬ್ಬ….ಆಹಾ ! ಅಮೋಘ! ಅದ್ಭುತ !
ನಾನು ಅವರ ಅಪ್ಪಟ ಅಭಿಮಾನಿ. ಡಾ|| ಜಿ.ಎಲ್ ಹೆಗಡೆಯವರು ನನ್ನನ್ನು ಅತ್ಯಂತ ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ನನ್ನ ಮೊದಲ ಪುಸ್ತಕಕ್ಕೆ ಮುನ್ನುಡಿ ಬರೆದುಕೊಟ್ಟವರೇ ಅವರು. ನನ್ನ ಮದುವೆಯ ಆರತಕ್ಷತೆಯ ದಿನ ಬಂದು ‘ಬದುಕಿನ ಸಾರ್ಥಕತೆ’ ಎಂಬ ವಿಷಯದ ಕುರಿತಾಗಿ ನಿರರ್ಗಳ ಒಂದೂವರೆ ಗಂಟೆ ಉಪನ್ಯಾಸ ಮಾಡಿ ನಮ್ಮೆಲ್ಲರನ್ನು ಹರಸಿದರು. ಅಂತಹ ಧರ್ತಿಯ ಮಾತುಗಾರಿಕೆಯನ್ನು ನಾನು ಇದುವರೆಗೂ ಕಂಡಿಲ್ಲ ಖಂಡಿತ.
ಡಾ|| ಜಿ.ಎಲ್. ಹೆಗಡೆಯವರು ಅಪ್ಪಟ ಆಸ್ತಿಕರು. ಅವರ ನಿಷ್ಠೆ, ಆಚರಣೆ, ಅನುಕರಣೀಯವಾದದ್ದು. ಅವರ ಶಿಷ್ಯ ಕೋಟಿಗೆ ಅವರು ಎಂದೂ ಮಿನುಗುವ ನಕ್ಷತ್ರ. ನಿದ್ದೆಯಲ್ಲಿದ್ದವನ್ನೂ ಎಬ್ಬಿಸಬಲ್ಲ ಅವರ ಪಾಠ ಪ್ರವಚನಗಳಿಂದ ಪ್ರಭಾವಿತರಾಗಿ ಬದುಕು ಕಟ್ಟಿಕೊಂಡ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಶ ವಿದೇಶಗಳಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಕುಮಟಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸಿದೆ.
ಅವರ ಮಾತುಗಳೆಂದರೆ Butterscotch ice cream ಇದ್ದಂತೆ. ನಡ ನಡುವೆ ಜಗೆಯುವುದಕ್ಕೂ ಏನಾದರೂ ಸಿಗುತ್ತದೆ. ಮಸ್ತ ಮಜಾ…. ನಗಿಸುತ್ತಾ ನಗಿಸುತ್ತಾ ಗಂಭೀರ ವಿಷಯ ಪ್ರಸ್ತುತ ಪಡಿಸುವ ಅವರ ಮಂಡನಾ ಶೈಲಿ ಅನನ್ಯ.
ನಮ್ಮ ಮನೆಯಂಗಳಕ್ಕೆ ಎರಡೆರಡು ಬಾರಿ ನಾನು ಅವರನ್ನು ಕರೆಸಿಕೊಂಡೆ. ನನ್ನಂತಹ ಬಡವನನ್ನೂ, ಸಾಮಾನ್ಯನನ್ನೂ ಬೆನ್ತಟ್ಟುವ ಅವರು ನನಗೆ ದೇವ ಸಮಾನರು. ಅಭಿಮಾನ ಹೆಚ್ಚಾಗಿ ಅತಿಶಯೋಕ್ತಿ ಎನಿಸಿದರೆ ಕ್ಷಮಿಸಿಬಿಡಿ. ಆದರೆ ಇದು ನಿಜ.
ಡಾ|| ಜಿ.ಎಲ್. ಹೆಗಡೆಯವರು ನೋವು ನುಂಗಿ ನಲಿವು ಹಂಚುವ ವ್ಯಕ್ತಿ. ಆಳವಾದ ಅಧ್ಯಯನ, ದೂರದರ್ಶಿತ್ವ, ವಾಸ್ತವ ಪ್ರಜ್ಞೆಯಿಂದ ಅವರು ಸಾವಿರಾರು ಅಭಿಮಾನಿ ಸ್ನೇಹಿತ ಬಳಗವನ್ನು ಹೊಂದಿದ್ದಾರೆ. ನಮ್ಮ ಮನೆಗೆ ಅವರು ಬಂದು ಕುಳಿತು ಹೋದದ್ದರಿಂದ ನನಗೆ ಇವತ್ತಿಗೂ ಒಳಿತಾಗುತ್ತಿದೆ ಎಂಬ ನಂಬಿಕೆ ನನ್ನದ್ದು. ಕ್ರಿಯಾಶೀಲತೆಗೆ, ನೇರ, ದಿಟ್ಟ ಅಭಿವ್ಯಕ್ತಿಗೆ ಅವರಿಗೆ ಅವರೇ ಸಾಟಿ.
ಕೆಲವು ಕಡೆ ನಾನು ಗಮನಿಸಿದ್ದೇನೆ. ಖ್ಯಾತನಾಮರು ಎಂದು ಕರೆಸುತ್ತಾರೆ. ಅವರಿಗೆ ಸಮಯಪ್ರಜ್ಞೆಯೂ ಇರದೇ ಚೀಟಿ ಕಳಿಸಿದರೂ ಗಂಟೆಗಟ್ಟಲೆ ಕೊರೆಯುತ್ತಾರೆ. ಯಾವುದೋ ವಿಷಯಕ್ಕೆ ಏನೆನೋ ತಗಲಾಕಿ ಬೇಕಾಬಿಟ್ಟಿ ನಾಲಿಗೆ ಓಡಿಸಿ ಮುಂದೆ ಕುಳಿತವರು ದಡ್ಡ ಶಿಖಾಮಣಿ ಎಂಬವರಂತೆ ವ್ಯವಹರಿಸಿ ಹೋಗಿ ಬಿಡುತ್ತಾರೆ. ಆದರೆ ಡಾ|| ಜಿ.ಎಲ್ ಹೆಗಡೆಯವರು ಮಾತಿಗೆ ನಿಂತರೆ ಹಾಗಲ್ಲ. ಆನೆ ಬಂದ ಹಾಗೆ ಅದು.?
ನಮ್ಮ ಜಿ.ಎಲ್.ಹೆಗಡೆಯವರ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ. ಬರಿದೆ ಹೊಗಳಿ ಅಟ್ಟಕ್ಕೇರಿಸುವುದಿಲ್ಲ. ಅವರ ಒಂದಂಶ ನನಗೆ ಬಂದರೂ ನನ್ನ ಅಕ್ಷರಗಳು ಧನ್ಯತೆ ಹೊಂದುತ್ತವೆ. ಪ್ರಶಸ್ತಿ ಪ್ರತಿಷ್ಠೆಗಳಿಗಾಗಿ ಬಕೆಟ್ ಹಿಡಿಯದ, ಸರಳ, ಸುಂದರ, ಸ್ವಚ್ಛ ಜೀವನ ನಡೆಸಿ ಯುವಕರಿಗೆ ಮಾದರಿಯಾದ ಜಿ.ಎಲ್ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ. ಯಾರೋ ಏನೋ ಹೇಳುತ್ತಾರೆಂದು ಗೋಣು ಅಲ್ಲಾಡಿಸಿ ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಬಿಡುವವರಲ್ಲ ಅವರು. ಅವರಿಗೆ ಅವರದೇ ಆದ ತತ್ವ, ಸಿದ್ಧಾಂತಗಳಿವೆ.
ಬೇಕು ನಮಗೆ ಅಂಥವರು. ನೂರ್ಕಾಲ ನಮ್ಮನ್ನು ಸ್ಫೂರ್ತಿಗೊಳಿಸುವುದಕ್ಕಾಗಿ. ಮಾರ್ಗದರ್ಶಿಸುವುದಕ್ಕಾಗಿ. ಅವರಿಗೆ ನಾನು ಮಾಡಿದ್ದು ಏನೂ ಇಲ್ಲ. ಆದರೆ ಅವರು ನನ್ನ ಮೇಲೆ ಬೀರಿದ ಪ್ರಭಾವಕ್ಕೆ ಪಾರವೇ ಇಲ್ಲ. ನನ್ನ ಬೇಸರಕ್ಕೊಂದು ಮದ್ದು ಅವರು. ಅವರ photo ನನ್ನ ಗ್ಯಾಲರಿಯಲ್ಲಿ ಖಾಯಂ ಇದೆ. ನಾನೆಲ್ಲಿಗಾದರೂ ಉಪನ್ಯಾಸಕನಾಗಿ ಹೋದಾಗ ಮೊದಲು ಇಡಗುಂಜಿ ಮಹಾಗಣಪತಿಗೆ ಇಂದಿನ ದಿನ ಒಳ್ಳೆಯದಾಗಲಿ ಎಂದು ಕೈಮುಗಿಯುತ್ತೇನೆ. ಮತ್ತೆ ಮೊದಲಕ್ಷರ ಹೊರಡಿಸುವಾಗ ನನಗೆ ಡಾ|| ಜಿ.ಎಲ್.ಹೆಗಡೆಯವರೇ ನೆನಪಾಗುತ್ತಾರೆ. ಅವರಿಗೆ ಮನಸ್ಸಿನಲ್ಲೇ ಕೈ ಮುಗಿದು ಮುಂದುವರಿಯುತ್ತೇನೆ. ತೂಕದ ಮನುಷ್ಯರೊಬ್ಬರ ಬಗ್ಗೆ ತೂಕವಿಲ್ಲದ ಶಬ್ದಗಳನ್ನು ಬರೆಯಲಿಕ್ಕಾಗಲಿಲ್ಲ. ಅತಿಯೆನಿಸಿದರೆ sorry. ಆದರೆ ಅವಕಾಶ ಸಿಕ್ಕಾಗ ಅವರ ಮಾತುಗಳನ್ನು ತಪ್ಪದೇ ಎದುರು ಕುಳಿತು ಕೇಳಿ. ನಾನು ಬರೆದದ್ದೇ ಕಡಿಮೆ ಎನಿಸುತ್ತದೆ ಆಗ.
ಸದ್ಗುರು ಶ್ರೀಧರರ ಆಶೀರ್ವಾದ ಡಾ|| ಜಿ.ಎಲ್.ಹೆಗಡೆ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಗುರುಸೇವೆ , ಸಮಾಜಸೇವೆಯಲ್ಲಿ ಮಾದರಿಯಾಗಿ ರಾಜಗೋಪಾಲ ಕೈಪ್ಪಂಗಳ.

ಜಿ.ಎಲ್ ಹೆಗಡೆ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ