ಸಂತರ ಸೇವೆಯು ನಡೆಯದ ಮನೆಯು
ಅವಲಕ್ಷಣಗಳ ತಾಣ
ಆ ಮನೆ ಮಸಣಗಳೆಂದು ತಿಳಿದು
ಭೂತಗಳಾಡುವವು -ಕಬೀರ.
ಯಾವ ಮನೆಯಲ್ಲಿ ಸಂತರ ಸೇವೆಯು ನಡೆಯುವುದಿಲ್ಲವೋ ಅದು ಅವಲಕ್ಷಣಗಳ ತಾಣವಿದ್ದ ಹಾಗೆ. ಅಂತಹ ಮನೆಯನ್ನು ಸ್ಮಶಾನವೆಂದು ತಿಳಿದು ಭೂತಗಳು ಅಲ್ಲಿ ಆಡುತ್ತವೆ. ಎಂದು ಕಬೀರರು ಈ ದೋಹೆಯಲ್ಲಿ ಹೇಳುತ್ತಾರೆ.
ಮನೆಯೆಂದು ಅನ್ನಿಸಿಕೊಳ್ಳಬೇಕಾದರೆ ಅಲ್ಲಿ ಕೇವಲ ಕಟ್ಟಡವಿದ್ದರೆ ಮಾತ್ರ ಸಾಲದು. ಆ ಕಟ್ಟಡಕ್ಕೆ ಕೆಲವು ಶುಭ ಲಕ್ಷಣಗಳಿರಬೇಕು. ಅಷ್ಟೇ ಅಲ್ಲದೇ ಅಲ್ಲಿ ದೇವತಾಕಾರ್ಯಗಳು ಆಗಾಗ ನಡೆಯುತ್ತಿರಬೇಕು. ಬಂಧು-ಬಾಂಧವರು ಆಗಾಗ ಬಂದು ಹೋಗುತ್ತಿರಬೇಕು. ಹಿರಿಯರಿಗೆ ನೆಮ್ಮದಿಯ ವಾತಾವರಣವಿರಬೇಕು. ಮನೆ ಮಂದಿಯ ಮಧ್ಯೆ ಸೌಹಾರ್ಧಯುತ ವಾತಾವರಣವಿರಬೇಕು. ಮುಖ್ಯವಾಗಿ ಸಾಧು ಸಂತರ ಸೇವೆಗೆ ಮನೆ ಬಾಗಿಲು ಯಾವಾಗಲೂ ತೆರೆದಿರಬೇಕು. ಅಂತಹ ಮನೆ ಉತ್ತಮ ಲಕ್ಷಣವುಳ್ಳ ಮನೆ ಅನ್ನಿಸಿಕೊಳ್ಳುತ್ತದೆ. ಅಲ್ಲಿ ದೇವತೆಗಳು ನೆಲೆಸಿರುತ್ತವೆ ಎಂಬ ನಂಬಿಕೆ ಇದೆ.
ಹಾಗೆಯೇ ಈ ಯಾವ ಲಕ್ಷಣಗಳನ್ನೂ ಹೊಂದಿರದ ಮನೆ ಮನೆಯೆನ್ನಿಸಿಕೊಳ್ಳುವದಿಲ್ಲ. ಅದು ಅಶುಭಗಳ ನೆಲೆ ಎನ್ನಿಸಿಕೊಳ್ಳುತ್ತದೆ. ದುಷ್ಟ ಕಾರ್ಯಗಳು ನಡೆಯುವ ಮನೆ ಸ್ಮಶಾನ ಎನ್ನಿಸಿಕೊಳ್ಳುತ್ತದೆ. ಎಲ್ಲಿ ದೇವತಾರಾಧನೆ ನಡೆಯುವುದಿಲ್ಲವೋ , ಎಲ್ಲಿ ಹಿರಿಯರಿಗೆ ಗೌರವ ಸಿಗುವುದಿಲ್ಲವೋ, ಎಲ್ಲಿ ಹೆಣ್ಣನ್ನು ತುಚ್ಛವಾಗಿ ಕಾಣಲಾಗುತ್ತದೆಯೋ, ಎಲ್ಲಿ ಮಂಗಲ ಕಾರ್ಯಗಳಿಗೆ ಮಂಗಳ ಹಾಡಲಾಗಿದೆಯೋ ಅಲ್ಲಿ ಸ್ಮಶಾನ ಸದೃಶ ವಾತಾವರಣವಿರುತ್ತದೆ. ಹಾಗಾಗಿ ಭೂತಗಳು ಅಲ್ಲಿ ಬಂದು ಆಡುತ್ತವೆ ಎಂದು ಸಂತ ಕಬೀರರು ಮನೆಯಲ್ಲಿ ಉತ್ತಮ ವಾತಾವರಣವಿರಲಿ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಸಂತ ಸಜ್ಜನರ ಸಹವಾಸ ನಮಗೆ ಒಳಿತನ್ನು ಉಂಟು ಮಾಡುತ್ತದೆ. ಅವರ ಆಗಮನವೆಂದರೆ ಅದು ಒಳಿತಿನ ಆಗಮನ. ಆದ್ದರಿಂದ ಅವಕಾಶ ಸಿಕ್ಕಾಗ ಸಂತರನ್ನು ಮನೆಗೆ ಕರೆದು ಉಪಚರಿಸು ಎಂಬುದು ಈ ದೋಹೆಯ ಹಿತನುಡಿ.
ಇದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ……….
ತೀರ್ಥದಂತೆಯೆ ಮಾತು ಧರ್ಮಾತ್ಮರದು ನೋಡು.
ವ್ಯರ್ಥವಾಗದು ಅವರ ನಡತೆ ಸಹವಾಸ
ಸ್ವಾರ್ಥ ತುಂಬಿದ ಜಗದಿ ತೀರ್ಥವನು ನಾ ಕಾಣೆ
ತೀರ್ಥವಲ್ಲವೊ ನದಿಯು -ಭಾವಜೀವಿ
✍️ ಡಾ.ರವೀಂದ್ರ ಭಟ್ಟ ಸೂರಿ