ಕೊನೆಗೂ ಈ ಸತಿಸುತರೆಲ್ಲ
ಹೊರಟೇ ಹೋದರು
ಒಬ್ಬನೆ ನನ್ನವನಾದನೋ
ಅವನ ದಾಸ ನಾನು- ಕಬೀರ

ಗಂಟಿರುವವರೆಗೆ ನೆಂಟರು ಎಂಬುದನ್ನು ಈ ದೋಹೆ ಸೂಚ್ಯವಾಗಿ ಹೇಳುತ್ತದೆ. ನಂಬಿಕೊಂಡಿದ್ದ ಸತಿ ಸುತರೆಲ್ಲ ಕೊನೆಯಲ್ಲಿ ಬಿಟ್ಟು ಹೋದರು. ಆ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವನೊಬ್ಬನೇ ನನ್ನವನಾಗಿ ಉಳಿದವನು. ನಾನು ಅವನ ದಾಸ ಎಂದು ಸಂತ ಕಬೀರರು ಈ ದೋಹೆಯಲ್ಲಿ ಮಾರ್ಮಿಕವಾಗಿ ಇಂದಿನ ಸಾಮಾಜಿಕ ಪರಿಸ್ಥಿತಿಯ ಅನಾವರಣ ಮಾಡಿದ್ದಾರೆ.

ಬಂಧ ಕಳಚಿದ ಸಂಬಂಧ ಗಳೇ ಇಂದು ಎಲ್ಲಾ ಕಡೆ ಕಂಡುಬರುತ್ತಿದೆ. ಹಣ,ಆಸ್ತಿ,ಸಂಪತ್ತಿನ ಹಿಂದೆ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವೀಯ ಸಂಬಂಧಕ್ಕೆ ನೆಲೆ ಬೆಲೆ ಇಲ್ಲವಾಗಿದೆ. ಪ್ರೀತಿಯ ಬಂಧ ಕಳಚಿಕೊಳ್ಳುತ್ತಿದೆ. ಸ್ವಾರ್ಥದ ಅಬ್ಬರದಲ್ಲಿ ಉಬ್ಬರದಲ್ಲಿ ನಿಸ್ವಾರ್ಥ ಮನೋಭಾವ ಕೊಚ್ಚಿಹೋಗಿದೆ. ಇಂದು ಎಲ್ಲಾ ಸಂಬಂಧಗಳೂ ಸಂಪತ್ತಿನ ಅಡಿಪಾಯದ ಮೇಲೆ ನಿಂತಿದೆ. ಅದು ಕುಸಿದಾಗ ಸಂಬಂಧಗಳೂ ಕುಸಿದುಹೋಗುತ್ತವೆ. ಹಾಗಾಗಿಯೇ ಇಂದು ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಆಸ್ತಿಗಾಗಿ ಸಂಬಂಧಿಗಳಲ್ಲೇ ಕೊಲೆಯಾಗುತ್ತಿದೆ. ಗಂಡನನ್ನೇ ಕೊಲ್ಲುವ ಹೆಂಡತಿ, ಮಕ್ಕಳನ್ನು ಮಾರುವ ತಾಯಿ, ತಂದೆ ತಾಯಿಯರನ್ನು ಮನೆಯಿಂದ ಹೊರಹಾಕುವ ಮಕ್ಕಳು, ಹೀಗೆ ಅನಾಚಾರಗಳ ಸರಣಿಯೇ ನಡೆಯುತ್ತಿದೆ. ಇದಕ್ಕೆಲ್ಲ ಆಸ್ತಿ ಅಂತಸ್ತೇ ಕಾರಣ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಇರುವಷ್ಟು ಕಾಲ ದೇವನ ಸ್ಮರಣೆ ಮಾಡು ಅವನು ಮಾತ್ರ ಸದಾ ನಿನ್ನೊಂದಿಗೆ ಇರುವವನು ಎಂಬುದು ಕಬೀರರ ಹಿತನುಡಿ.

RELATED ARTICLES  "ಜಾಬಾಲಿಯವರ ನಾಸ್ತಿಕವಾದದ ಮಂಡನೆ"(‘ಶ್ರೀಧರಾಮೃತ ವಚನಮಾಲೆ’).

ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ…….‌‌.

ಹಣವಲ್ಲ ಶಾಶ್ವತವು ಬದುಕಿನಲ್ಲೆಂದೆಂದು
ಪ್ರಾಣ ಯೌವನವದುವು ಶಾಶ್ವತವು ಅಲ್ಲ
ಘ್ರಾಣಿಸದೆ ಬದುಕನ್ನು ಶಾಶ್ವತದ ಭ್ರಮೆಯಲ್ಲಿ
ತ್ರಾಣವಾಗಿಸು ಧರ್ಮ-ಭಾವಜೀವಿ

✍️ ಡಾ. ರವೀಂದ್ರ ಭಟ್ಟ ಸೂರಿ