ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಮತಿ ಶಾಂತಿ ಜಿ ಹೆಗಡೆ

ನಾನು ಮಾಡಿದ್ದು, ನಾನು ಬರೆದಿದ್ದು, ನಾನು ತಂದಿದ್ದು ಇವುಗಳನ್ನೆಲ್ಲಾ ಎಷ್ಟೋ ಸಲ ವಾಕ್ಯಗಳಲ್ಲಿ, ಮಾತುಗಳಲ್ಲಿ ಬಳಸಿದರೂ ಅಲ್ಲಿ ನಾನು ಎಂಬ ಪದಕ್ಕೆ ಅರ್ಥವಿಲ್ಲ ಎಂದು ಗೊತ್ತು ನನಗೆ. ನನ್ನನ್ನು ರೂಪಿಸಿದವರು ಬೇರೆಯವರೇ ಇರುವಾಗ ನಾನು ಎಂಬ ಪದ ಅರ್ಥ ಕಳೆದುಕೊಳ್ಳುತ್ತದೆ. ಮಾಲಕ್ಕೋರಂಥ ಗುರುಮಾತೆ ಸಿಗದಿದ್ದರೆ…ನಾನು ಎಂಬುವವ ಇಂದೂ ಜೋಡುಗೆರೆಯಲ್ಲಿ‌ ಶುದ್ಧ ಬರಹವನ್ನಷ್ಟೇ ಬರೆಯಲು ಸಾಧ್ಯವಾಗುತ್ತಿತ್ತು. ದೇವರು ಹಣೆಬರಹವನ್ನು ಬರೆಯುತ್ತಾನೆ ಎಂಬುದನ್ನು ನಾನು ಅರ್ಧ ನಂಬುತ್ತೇನೆ. ಯಾಕೆಂದರೆ ಅವನು ಉಳಿದರ್ಧ ಬರೆಯುವುದನ್ನು ಗುರುಗಳಿಗೇ ವಹಿಸಿದ್ದಾನೆ.? ಅವರೇನಾದರೂ ತಪ್ಪು ಬರೆದರೆ ತಲೆ ಎತ್ತಿ ನಿಲ್ಲುವುದಕ್ಕಾದೀತೇ ಹೇಳಿ?!
ನಮ್ಮ ಪ್ರೀತಿಯ ಮಾಲಕ್ಕೋರು ಇವರು. ದೊಡ್ಡ ದೇಹದ ದೊಡ್ಡ ಮನಸ್ಸಿನ ಅಕ್ಕೋರೆಂದರೆ ಇಂದೂ ನನಗೆ ಅಷ್ಟೇ ಅಕ್ಕರೆ. ತಮ್ಮ ಇಡೀ ವೃತ್ತಿ ಜೀವನದಲ್ಲಿ ಯಾರಿಗೂ ಬಕೆಟ್ ಹಿಡಿದುಕೊಂಡು ಬದುಕಿದವರಲ್ಲ ಇವರು. ಪ್ರಶಸ್ತಿ ಬರಲೆಂದು ಫೋಟೊ ಹೊಡೆಸಿಕೊಂಡವರಲ್ಲ ಇವರು. ಅಧಿಕಾರಿಗಳನ್ನು ಓಲೈಸಿ ಕೆಲಸದಿಂದ ನುಣುಚಿಕೊಂಡವರಲ್ಲ ಇವರು. ಯಾರೋ ಮಾಡಿದ ಕೆಲಸವನ್ನು ತಾನೇ ಮಾಡಿದ್ದೆಂದು ಕೊಚ್ಚಿಕೊಂಡವರಲ್ಲ ಇವರು. ಯಾರ ಮನೆ ಬಾಗಿಲಿಗೂ ತಿರುಗಿ ತನಗಿಂಥದೊಂದು ಕೆಲಸ ಮಾಡಿಕೊಡಿ ಎಂದು ಕಾಲು ಹಿಡಿದು ಕಣ್ಣೀರು ಹಾಕಿದವರಲ್ಲ ಇವರು. ಮಾಲಕ್ಕೋರು ಎಂದರೆ ಸ್ವಾಭಿಮಾನಿ. ಮಾಲಕ್ಕೋರು ಎಂದರೆ ಭಯ. ಮಾಲಕ್ಕೋರು ಎಂದರೆ ಕರುಣಾಮಯಿ. ಮಾಲಕ್ಕೋರು ಎಂದರೆ ಕಠಿಣ ಪರಿಶ್ರಮಿ. ಮಾಲಕ್ಕೋರು ಎಂದರೆ ಮಾಲಕ್ಕೋರೆ.?
ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿಯಲ್ಲಿ ಓದುವಾಗ ಇವರ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ಅವರು ಬಾಯಿ ತೆಗೆದರೆ ಅವರ ಧ್ವನಿ ಸರಿಸುಮಾರು ಒಂದು ಕಿ.ಮೀ ದೂರ ಕೇಳುತ್ತದೆ.? ಶಾಲೆಯಿಂದ ನಮ್ಮ ಮನೆ ಅದಕ್ಕೂ ಸಮೀಪ ಇರುವುದರಿಂದ ನಾನು ಮಾಡಿದ ಭಾನಗಡಿಗಳು ಮನೆಗೆ ಗೊತ್ತಾದರೆ ಎನ್ನುವ ಭಯ ನನ್ನನ್ನು ಕಾಡುತ್ತಿತ್ತು.? ಸುಸ್ಪಷ್ಟ ಮಾತಿನ, ಶಿಸ್ತಿನ ಜೀವಿ ನಮ್ಮ ಮಾಲಕ್ಕೋರು. ಅವರು ಬೇಕಾ ಬಿಟ್ಟಿ ಮಕ್ಕಳಿಗೆ ಬಾರಿಸಿದವರಲ್ಲ. ಏನ……… ಎಂದು ಒಂದು ಬಾರಿ ರಾಗ ಎಳೆದು ಕೂಗಿದರೆ ಇಡೀ‌ ಶಾಲೆಯೇ silent. ನಮಗಂತೂ ಒಂದ…..ಬರುವುದೊಂದು ಬಾಕಿ.?
ಮಾಲಕ್ಕೋರ ಕಣ್ಣಿಗೆ ಹೆದರಿದ್ದರಿಂದಲೋ ಏನೊ ಯಾರಾದರೂ ಇಂದಿಗೂ ಕಣ್ಣು ಬಿಟ್ಟರೆ ಓಡಿಹೋಗಿಬಿಡುವ ಅನಿಸುತ್ತದೆ.? ನಮ್ಮಕ್ಕೋರು ಸಂಸಾರದ ತಾಪತ್ರಯಗಳನ್ನೆಲ್ಲಾ ಮಕ್ಕಳ ಮೇಲೆ ತಂದು ಎರಚಿದವರಲ್ಲ. ವಿದ್ಯಾರ್ಥಿಗಳ ಮೇಲೆ ನಿಜವಾದ ಪ್ರೀತಿ ಕಾಳಜಿ ತೋರಿಸಿದವರು. ತಪ್ಪು ಕೆಲಸ ನಮ್ಮಿಂದ ಘಟಿಸಲೇ ಬಾರದು ಹಾಗೆ ವ್ಯವಸ್ಥೆ ಮಾಡಿದವರು. ಇಂಥ ಶಿಕ್ಷಕರು ವಿದ್ಯಾರ್ಥಿ ಜೀವನದಲ್ಲಿ ಅಷ್ಟು ಇಷ್ಟವಾಗುವುದಿಲ್ಲ. ಆದರೆ ಜೀವನದಲ್ಲಿ ಮುಂದೆ ಮರೆಯುವುದೇ ಇಲ್ಲ. ಬೇರೆ ಅಕ್ಕೋರಿಗಿಂತ ತಾನು ಹೆಚ್ಚಿಗೆ ಇಷ್ಟವಾಗಬೇಕೆಂಬ ಕಸರತ್ತು ನನ್ನಂತ ವಿದ್ಯಾರ್ಥಿಗಳಿಗೆ ಬಹುಬೇಗ ಅರ್ಥವಾಗಿ ಬಿಡುತ್ತದೆ.
ಮಾಲಕ್ಕೋರು ತನ್ನ ಇಡೀ ವರ್ಗಕೋಣೆಯನ್ನು ಕೌಶಲ್ಯಪೂರ್ಣ ವಸ್ತುಗಳಿಂದ ತುಂಬಿಸುವವರು. ಮನೆಯಿಂದ ಹಾಲು ಮಜ್ಜಿಗೆ ತಂದು ಮಕ್ಕಳಿಗಾಗಿ ಊಟ ಬಡಿಸುವವರು. ಮಕ್ಕಳಿಗೇನಾದರೂ ಕೊಡಿಸಬೇಕೆಂದರೆ ತಾನೇ ಮುಂದಾಗಿ ನಿಲ್ಲುವವರು. ಹುಚ್ಚಾಡಿ ಕುಣಿದವರಲ್ಲ. ನಾಟಕ ಮಾಡಿದವರಲ್ಲ. ತನ್ನ ಪಾಠ ಪ್ರವಚನಗಳನ್ನು ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ಭೋದಿಸಿದವರು.
ನನಗೆ ಕಲಿಸಿದ ನನ್ನ ಪ್ರೀತಿಯ ಗುರುಮಾತೆಯ ಮುಂದೆ ಮಾತನಾಡುವ ಸಂದರ್ಭ ಸಿಕ್ಕಾಗೆಲ್ಲಾ ನಾನು ಅವರನ್ನು ನಮಸ್ಕರಿಸಿಯೇ ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೆ. ಮಾಲಕ್ಕೋರು ಯಾವುದೇ ಶಾಲೆಯಲ್ಲಿ ನಿವೃತ್ತಿ ಹೊಂದಿದರೂ ಅವರ ಬೀಳ್ಕೊಡುಗೆ ಸಮಾರಂಭವನ್ನು ನಾವು ಅದ್ದೂರಿಯಾಗಿ ಮಾಡಬೇಕೆಂದು ನಾನು ಅಕ್ಕ ಮಾತಾಡಿಕೊಂಡಿದ್ದೆವು. ಆದರೆ ಅವರು ಕೆಲಸ ಮಾಡುತ್ತಿದ್ದ ನೀಲ್ಕೋಡ ಶಾಲೆಯಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಅವರ ಬೀಳ್ಕೊಡುಗೆ ಸಮಾರಂಭ ಏರ್ಪಾಡಾಗಿತ್ತು. ನಾನು ತಕ್ಷಣಕ್ಕೇ ಮಾಲಕ್ಕೋರ ಬಗ್ಗೆ ಚಂದದ ಒಂದು ಲೇಖನ ಬರೆದು….ಅದನ್ನೇ ಆಮಂತ್ರಣ ಪತ್ರಿಕೆಯಾಗಿಸಿ ಮನೆ ಮನೆಗೂ ಕೊಡುವುದಕ್ಕೆ ಶ್ರೀಧರ ಪ್ರೆಸ್ ಹೊನ್ನಾವರದಲ್ಲಿ ಸುಮಾರು 300 ಪ್ರಿಂಟ್ ಮಾಡಿಸಿ ಅವರ ಸಹೋದ್ಯೋಗಿ ರೋಹಿಣಕ್ಕೋರಿಗೆ ಕೊಟ್ಟು ಬಂದಿದ್ದೆ. ಮಾಲಕ್ಕೋರಿಗೆ ಸನ್ಮಾನ ಮಾಡಿ ಗೌರವಿಸುವುದನ್ನು ನಾನೇ ನಿರೂಪಿಸಿ ಅವರಿಗೆ ಸನ್ಮಾನಿಸಿ ಬಂದಾಗ ಕೊಂಚ ಸಮಾಧಾನವಾಗಿದ್ದು ನನಗೆ.
ಮಾತೃ ಹೃದಯಿ ಮಾಲಕ್ಕೋರನ್ನು ಬೀಳ್ಕೊಡುವಾಗ ಸಭಾಂಗಣ ತುಂಬಿತ್ತು. ಎಲ್ಲರ ಕಣ್ಣಂಚುಗಳಲ್ಲೂ ನೀರು ಜಿನುಗುತ್ತಿತ್ತು. ಒಬ್ಬ ಶಿಕ್ಷಕನಾದವನಿಗೆ ಇದಕ್ಕಿಂತ ಬೇರೆ ಸೌಭಾಗ್ಯವಿಲ್ಲ. ನಾನು ಮಾಲಕ್ಕೋರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಬಿಡುವಾದಾಗೆಲ್ಲ ಅವರನ್ನು ಮಾತನಾಡಿಸಿ ಅವರ ಕೈಯಿಂದ ಒಂದು ಲೋಟ ಹಾಲು ಕುಡಿದು ಬಂದರೂ ನನಗದು ಒಂದು ವರ್ಷದ ಉತ್ಸಾಹ ತುಂಬುತ್ತದೆ.
ಸಮಾಜದ ತಿರಸ್ಕಾರವನ್ನು ಮೆಟ್ಟಿ ನಿಂತೂ ಮೆಚ್ಚಿ ಬದುಕಿದ ಮಾಲಕ್ಕೋರ ಮನೆಯವರೂ ಬಂಗಾರದ ಪದಕ ಗಳಿಸಿದ ಅತ್ಯುತ್ತಮ ಬಸ್ ಚಾಲಕರು. ಮಗಳು ಭಾಗ್ಯ ನಿಜಕ್ಕೂ ಭಾಗ್ಯವಂತೆ. ಛಲವಾದಿ, ಉತ್ಸಾಹಿ, ಮಾಲಕ್ಕೋರು ಇವತ್ತಿಗೂ ಗಟ್ಟಿ.
ಮಾಲಕ್ಕೋರ ಪ್ರೀತಿ ಕಾಳಜಿಯಿಂದ ಮಿಂದವ ನಾನು. ಅವರು ನನ್ನ ಬಗೆಗೆ ತೋರಿದ ಕಾಳಜಿಯೇ ನನ್ನ ಹೆಸರನ್ನು ನಾಲ್ಕಾರು ಜನರಿಗೆ ಪರಿಚಯಿಸಿದೆ. ಅಕ್ಕೋರ ಬಗೆಗಿನ ಧನ್ಯತಾ ಭಾವ ನನಗೆ ಕೊನೆಯುಸಿರಿನ ತನಕವೂ ಇರುತ್ತದೆ. ಅವರ ಬಗೆಗೆ ಬರೆಯುವುದಕ್ಕೆ ಅಕ್ಷರಗಳು ಸೋಲುತ್ತವೆ.
ಮನ ಮೆಚ್ಚುವಂತೆ ಕಾರ್ಯವೆಸಗುವವರು ಜನ ಮೆಚ್ಚುವುದಕ್ಕಾಗಿ ಕಾಯುವುದಿಲ್ಲ. ಕೃಷಿ, ಪಶು ಸಂಗೋಪನೆ, ಭೋದನೆ ಇವು ಮೂರೂ ಮಾಲಕ್ಕೋರು ನನಗೆ ಪ್ರೀತಿಯಿಂದ ಕಲಿಸಿದ ಪಾಠ. ಆ ಆಸಕ್ತಿಯೇ ನನ್ನ ಬೇಸರವನ್ನು ದೂರ ಮಾಡುತ್ತದೆ. ತನ್ನ ಧ್ವನಿಯಿಂದ ಎಂಥವರನ್ನೂ ಸೆಳೆಯಬಲ್ಲ ಮಾಲಕ್ಕೋರು ವಿದ್ಯಾರ್ಥಿಗಳ ಪಾಲಿಗೆ ಶ್ರೇಷ್ಠ ಗುರುಮಾತೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಸಹೋದ್ಯೋಗಿಗಳು, ಬಾಡಿಗೆದಾರರು, ತನ್ನ ಸುತ್ತಲಿನ ಎಲ್ಲಾ ಸಂಬಂಧಿಗಳನ್ನೂ ಕಲ್ಪವೃಕ್ಷದಂತೆ ಪೊರೆದ ಮಾತೆಗೆ ಜಯವಾಗಲಿ. ಜಯವಾಗುತ್ತಲೇ ಇರಲಿ.
ಸದ್ಗುರು ಶ್ರೀಧರರ ಆಶೀರ್ವಾದ ಮಾಲಕ್ಕೋರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಕವಿ ದೇವಿ ದಾಸ ವಿರಚಿತ ಶ್ರೀ ಕೃಷ್ಣ ಸಂಧಾನ ಪೌರಾಣಿಕ ಯಕ್ಷಗಾನ ಪ್ರದರ್ಶನ

ಮಾಲಕ್ಕೋರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ