ನಿಂದಕರಿಗೊಂದು ಕುಟಿಯನು ಕಟ್ಟಿ
ಮನೆಮುಂದಿರಗೊಡಿರಿ
ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು – ಕಬೀರ

ನಿಮ್ಮನ್ನು ನಿಂದಿಸುವವರಿಗೆ ಮನೆಯೊಂದನ್ನು ಕಟ್ಟಿ ನಿಮ್ಮ ಮನೆಯ ಮುಂದೆ ಇರಲು ಬಿಡಿ. ಅವರು ನೀರು ಸಾಬೂನುಗಳಿಲ್ಲದೆ ನಿಮ್ಮನ್ನು ಸ್ವಚ್ಛಗೊಳಿಸುವರು. ಎಂದು ಕಬೀರರು ಈ ದೋಹೆಯಲ್ಲಿ ನಿಂದಕರಿರಬೇಕು ಎಂದು ಹೇಳುತ್ತಾರೆ.

ನಮ್ಮನ್ನು ಹೊಗಳುವವರೆಲ್ಲ ನಮ್ಮ ಒಳಿತನ್ನು ಬಯಸುವವರು ಎನ್ನುವ ಭಾವನೆ ನಮ್ಮಲ್ಲಿದೆ. ಹಾಗಾಗಿಯೇ ನಾವು ಅಂಥವರನ್ನು ಇಷ್ಟಪಡುತ್ತೇವೆ. ನಿಂದಕರು ನಮಗೆ ಕೆಡುಕು ಬಯಸುವವರು ಎಂದು ಅವರನ್ನು ದೂರವಿಡುತ್ತೇವೆ. ಇದು ಜಗದ ರೀತಿ. ಆದರೆ ಹೊಗಳುವವರು ತಮ್ಮ ಯಾವುದೋ ಸ್ವಾರ್ಥ ಸಾಧನೆಗಾಗಿ ಕಾಯುತ್ತಿರುತ್ತಾರೆ. ಸಾಧಿಸಿದ ಮೇಲೆ ನಮ್ಮನ್ನು ತೊರೆಯುತ್ತಾರೆ. ನಮ್ಮ ಮನಸ್ಸಿಗೆ ನೋವನ್ನುಂಟು ಮಾಡುತ್ತಾರೆ. ಆದರೆ ನಿಂದಕರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾ ನಾವು ಜಾಗೃತರಾಗಿರುವಂತೆ ಮಾಡುತ್ತಾರೆ. ನಮ್ಮಿಂದ ಮತ್ತೆ ಮತ್ತೆ ತಪ್ಪುಗಳಾಗದಂತೆ ಕಾಯುತ್ತಾರೆ. ನಮ್ಮ ನಡೆ ನುಡಿ ಗಮನಿಸುತ್ತಾ ನಮ್ಮ ತಪ್ಪುಗಳನ್ನು ಖಂಡಿಸುತ್ತಾ ಒಂದು ರೀತಿಯಲ್ಲಿ ಮಾರ್ಗದರ್ಶಕರಂತೆ ಕಾರ್ಯನಿರ್ವಹಿಸುತ್ತಾರೆ. ಆ ಕ್ಷಣದಲ್ಲಿ ನಮಗೆ ಅವರು ಕೆಟ್ಟವರಂತೆ ಕಂಡರೂ ಸೂಕ್ಷ್ಮವಾಗಿ ಆಲೋಚಿಸಿದಾಗ ಅವರು ನಮಗೆ ಒಂದು ರೀತಿಯಲ್ಲಿ ಒಳಿತನ್ನೇ ಮಾಡಿರುತ್ತಾರೆ. ಅದಕ್ಕೆ ಕಬೀರರು ನಿಂದಕರಿಗೊಂದು ಮನೆಯ ಕಟ್ಟಿ ನಿಮ್ಮ ಮನೆಯ ಮುಂದೆ ಇರಲು ಬಿಡಿ ಅವರು ನೀರು ಸಾಬೂನು ಇಲ್ಲದೆ ನಿಮ್ಮನ್ನು ಸ್ವಚ್ಛಗೊಳಿಸುತ್ತಾರೆ ಎಂದಿದ್ದು.

RELATED ARTICLES  ವಿದ್ಯೆ ಎನ್ನುವ ಬಹುದೊಡ್ಡ ಆಸ್ತಿ ವಿದ್ಯಾರ್ಥಿಗಳಿಸಿಕೊಳ್ಳಬೇಕು.

ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ………..

ಹತ್ತಿರದಿ ಇರಿಸಿಕೊ ನಿಂದಕರ ನೀನೆಂದು
ಎತ್ತಿ ತೋರ್ವರು ನಿನ್ನ ತಪ್ಪುಗಳನೆಲ್ಲ
ಮತ್ತೆ ಪಾಠವ ಕಲಿತು ಬದಲಿಸಿಕೊ ನಿನ್ನನ್ನು
ಕುತ್ತು ಎಂದಿಗು ಬರದು -ಭಾವಜೀವಿ.

RELATED ARTICLES  ರಂಗವಲ್ಲಿಯ ಮಹತ್ವ

✍️ ಡಾ.ರವೀಂದ್ರ ಭಟ್ಟ ಸೂರಿ