ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಕು|| ಅನನ್ಯಾ ರಾಜು ಶೆಟ್ಟಿ
ಗೆಲ್ಲುವವನು ಯಾವಾಗಲೂ ಗೆಲ್ಲುತ್ತಲೇ ಇರುವುದಕ್ಕೆ ಆಗುವುದಿಲ್ಲ. ಎವರೆಸ್ಟ್ ಶಿಖರ ಏರಿದವನು ಅಲ್ಲಿಯೇ ಮನೆ ಮಾಡಿಕೊಂಡು ಉಳಿಯುವುದಿಲ್ಲ. ಒಬ್ಬಾತ ಒಂದು ದಿನ ಜಯ ಸಾಧಿಸಿದರೆ ನಾಳೆ ಇನ್ಯಾರದ್ದೋ ಅದು. ಗೆಲುವು ಸದಾ ತನ್ನದೇ ಆಗಿರಬೇಕೆಂದು ಬಯಸುವುದೂ ಮೂರ್ಖತನ. ಕೆಲವರು ಸಾಯುವವರೆಗೂ ಮಕ್ಕಳಿಗೆ ಯಜಮಾನಿಕೆ ಬಿಟ್ಟುಕೊಡುವುದಿಲ್ಲ. ಬಿಟ್ಟುಕೊಡುವ ಕಾಲಕ್ಕೆ ಹಿರಿಯ ಮಗನಿಗೆ 70 ದಾಟಿರುತ್ತದೆ.?? ನಮ್ಮ ಗೆಲುವನ್ನು ಸಂತೋಷದಿಂದ ಇನ್ನೊಬ್ಬರಿಗೆ ಹಸ್ತಾಂತರಿಸುವುದರಲ್ಲಿ ಸಾರ್ಥಕತೆಯಿದೆ. ಅದಕ್ಕಾಗಿ ನನ್ನ ಪ್ರಯತ್ನ ಸಾಗಿಯೇ ಇರುತ್ತದೆ. ಏನೇ ಮಾಡಿ ಮಾಡದೆ ಇರಿ ಅನೇಕರ ಬಾಯಲ್ಲಿ ನೀವು ಹೊಕ್ಕಿ ಹೊರಬೀಳುತ್ತೀರಿ. ?? ಹೇಳುವವರಿಗೆ ಬಾಯಿ ಮುಚ್ಚಿಸಲಿಕ್ಕೆಂದೇ ಮಾಸ್ಕ ಬಂದಿದೆ.? ಆದರೂ ಅದರೊಳಗಿಂದಲೇ ಬೇರೆಯವರ ಬಗ್ಗೆ ಮಾತನಾಡುವುದನ್ನು ಮಂದಿ ಬಿಟ್ಟಿಲ್ಲ. ನನ್ನ ಮುಂದಿನ ವಾರಸುದಾರಳೊಬ್ಬಳನ್ನು ನಿಮಗಿಂದು ಪರಿಚಯಿಸಬೇಕು.
ಅನನ್ಯಾ ರಾಜು ಶೆಟ್ಟಿ. ನನ್ನ ಪ್ರೀತಿಯ ವಿದ್ಯಾರ್ಥಿನಿ ಇವಳು. ನ್ಯೂ ಇಂಗ್ಲೀಷ್ ಸ್ಕೂಲ್ ಹೊನ್ನಾವರದಲ್ಲಿ ಎಸ್ ಎಸ್ ಎಲ್ ಸಿ ಅಭ್ಯಾಸ ಮಾಡುತ್ತಿರುವ ಈಕೆ ಬಹುಮುಖ ಪ್ರತಿಭಾನ್ವಿತೆ. ತಂದೆ ರಾಜು ಹಾಗೂ ತಾಯಿ ಸುಹಾಸಿನಿಯವರ ಒಬ್ಬಳೇ ಮಗಳಾದ ಅನನ್ಯಾ ಛಲಗಾತಿ. ಬಡತನದ ಮಧ್ಯೆಯೂ ಅರಳುತ್ತಿರುವ ಪ್ರತಿಭಾ ಸಂಪನ್ನೆ.
ಮಾತನಾಡುವವರೆಲ್ಲಾ ಭಾಷಣಕಾರರಾಗಲಾರರು. ಬರೆಯುವವರೆಲ್ಲಾ ಸಾಹಿತಿಗಳೂ ಆಗಲಾರರು. ಮಾತನಾಡುವುದಕ್ಕೆ ಅಭಿವ್ಯಕ್ತಿಯ ಶೈಲಿ, ಸ್ಪಷ್ಟತೆ, ಧ್ವನಿ, ವಿಷಯ ಎಲ್ಲವೂ ಬೇಕು. ಅವುಗಳೆಲ್ಲವನ್ನೂ ದೈವೀದತ್ತವಾಗಿ ಪಡೆದುಕೊಂಡು ಬಂದ ನನ್ನ ನೆಚ್ಚಿನ ವಿದ್ಯಾರ್ಥಿನಿ ಅನನ್ಯಾ. ಸಾವಿರ ಜನರ ಸಭೆಯಲ್ಲೂ ತನ್ನ ನಿರೂಪಣೆಯ ಮೂಲಕ ಪ್ರೇಕ್ಷಕರ ಮನ ಸೆಳೆಯಬಲ್ಲ ಗತ್ತುಗಾರಿಕೆ ಅವಳಿಗಿದೆ.
ನಾನು ಕಾರ್ಯಕ್ರಮ ಮಾಡಿದಾಗೆಲ್ಲ ನನಗೆ ಸಂಘಟನೆ ಮಾಡಿ ಬಂದವರನ್ನು ಸ್ವಾಗತಿಸುವ ಕಾರ್ಯವಷ್ಟೇ. ಅನನ್ಯಾ ನಿರೂಪಣೆ ಮತ್ತು ವೇದಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಹಾಗಾಗಿ ನನಗೆ ನನ್ನ ಮುಂದಿನ ರಾಯಭಾರಿಯನ್ನು ನಿಮಗೆ ಪರಿಚಯಿಸುವುದಕ್ಕೆ ಖುಷಿಯಾಗುತ್ತದೆ.
ಅನನ್ಯಾಳ ತಂದೆ ಶ್ರೀಯುತ ರಾಜು ಶೆಟ್ಟಿ ಮೂಲತಃ ರಂಗಭೂಮಿ ಕಲಾವಿದರು. ನಾಟಕಗಳಲ್ಲಿ ಅಭಿನಯಿಸುವವರು. ಅವರ ಗುಣಗಳೂ ಕೆಲವು ಮಗಳಿಗೆ ಅನುವಂಶೀಯವಾಗಿ ಹರಿದು ಬಂದಿರಬಹುದು. ಅನನ್ಯಾ ಮುಂದೆ ಒಬ್ಬ ಅತ್ಯುತ್ತಮ ನಿರೂಪಕಿಯಾಗಿ ಹೆಸರು ಮಾಡುತ್ತಾಳೆಂಬುದು ನನ್ನ ನಿರೀಕ್ಷೆ.
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಲದು. ಕಲಿಯುವ ಸತತ ಆಕಾಂಕ್ಷೆ, ಮತ್ತು ಗುರುಗಳ ಮೇಲೆ ಶೃದ್ಧೆಯೂ ಅಗತ್ಯ. ಮನೆಯಲ್ಲೇ ಮಾಸ್ತರರನ್ನೂ ಅಕ್ಕೋರನ್ನೂ ಯದ್ವಾ ತದ್ವಾ ಬಯ್ಯುವ ಸಂಸ್ಕಾರವಿದ್ದರೆ ಮಕ್ಕಳು ಉದ್ಧಾರವಾದಂತೆ.? ಕೆಲವೊಮ್ಮೆ ಮಕ್ಕಳಿಗೆ ಅರ್ಥವಾಗದಿದ್ದಾಗ ಅದಕ್ಕೆಲ್ಲಾ ಮಾಸ್ತರರೇ ಹೊಣೆ ಎಂದು ಜರೆಯುವ ಪಾಲಕರನ್ನು ಕಂಡು ತಮಾಷೆಯೆನಿಸುತ್ತದೆ ನನಗೆ. ವಿದ್ಯಾ ವಿನಯೇನ ಶೋಭತೆ ಎಂದಿದ್ದು ಸುಮ್ಮನೇ ಅಲ್ಲ.
ಅನನ್ಯಾ ಶಾಲೆಯಲ್ಲಿ ಕೂಡ ಹೆಚ್ಚಿನ ಅಂಕ ಗಳಿಸುವ ಸತತಾಭ್ಯಾಸಿ. ಯಕ್ಷಗಾನ ಕಲಿತು ಅಭಿನಯಿಸುವ ಅವಳ ರಂಗ ಪ್ರೌಢಿಮೆ ಮೆಚ್ಚುವಂತಹುದು. ನಾಟಕಗಳಲ್ಲಿ ಕೂಡ ಬಹಳ ಚೆನ್ನಾಗಿ ಅಭಿನಯಿಸುವ ಅವಳು ಮುಂದೆ ಕುಳಿತ ಪ್ರೇಕ್ಷಕರಿಂದ ಶಹಭಾಸ್ ಎನಿಸಿಕೊಳ್ಳುವುದು ಗ್ಯಾರಂಟಿ. ಅವಳು ಹರಿಶ್ಚಂದ್ರನ ಕಥೆಯನ್ನು ಹೇಳುತ್ತಿದ್ದರೆ ನನಗೇ ಕಣ್ಣಲ್ಲಿ ನೀರು ತುಂಬುತ್ತಿತ್ತು. ಇಂತಹ ವಿಧೇಯ ವಿದ್ಯಾರ್ಥಿನಿ ಅನನ್ಯಾ ನಾನೊಂದು ಕಾರ್ಯ ನಿರ್ವಹಿಸಲು ಹೇಳಿದರೆ ಆಗುವುದಿಲ್ಲ ಎಂದವಳೇ ಅಲ್ಲ.
ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅನನ್ಯಾ ಪ್ರತಿ ವರ್ಷ ವಾರ್ಷಿಕೋತ್ಸವದಲ್ಲೂ ವಿಭಿನ್ನವಾದ ಹಾಗೂ ವಿಶೇಷವಾದ ನೃತ್ಯಾಭಿನಯ ಮಾಡಿ ಜನಮನ ಸೂರೆಗೊಳ್ಳುತ್ತಿದ್ದಳು. ಕಲಿಸುವ ನಮಗೂ ನಮ್ಮ ವಿದ್ಯಾರ್ಥಿಗಳು ಗೌರವ ತೋರಿದಾಗ ಸಾಧನೆ ಮಾಡಿದಾಗ ಸಂತೋಷವೆನಿಸುತ್ತದೆ.
ನನಗೆ ನನ್ನ ಎಲ್ಲಾ ವಿದ್ಯಾರ್ಥಿಗಳು ಇಂಜನಿಯರೋ, ಡಾಕ್ಟರೋ ಆಗಬೇಕೆಂಬ ನಿರೀಕ್ಷೆಯಿಲ್ಲ. ನನ್ನ ನಿರೀಕ್ಷೆಯಿದ್ದರೂ ಆಗುವುದಲ್ಲ ಬಿಡಿ.??? ಸಮಾಜದಲ್ಲಿ ಯಾವುದೇ ಒಳ್ಳೆಯ ಉದ್ಯೋಗವನ್ನರಸಿ… ಅದರಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಅವರು ಕೆಲಸ ಮಾಡುವಂತಾಗಬೇಕು. ಅಪ್ಪ ಅಮ್ಮನಿಗೆ ಹೊರೆಯಾಗಿ ಬದುಕದೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಚಟಗಳ ದಾಸರಾಗದೇ ಸಮಯದ ಸಂಪೂರ್ಣ ಸದುಪಯೋಗ ಪಡೆದುಕೊಂಡು ನಾಲ್ಕು ಜನರಿಗೆ ಬೇಕಾದವರಾಗಿ ಬದುಕಬೇಕು. ನಮ್ಮ ಅನನ್ಯಾಳ ಅಂಕಗಳ ಮೇಲೆ ನನ್ನ ನಿರೀಕ್ಷೆಯಿಲ್ಲ. ಅವಳು ಸುಂದರವಾಗಿ ಹೇಗೆ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾಳೆ ಎಂಬುದನ್ನು ನಾನು ಕಾಯುತ್ತೇನೆ.
ಅನನ್ಯಾ ಎಂದೇ ಹೆಸರಿಟ್ಟ ತಂದೆ ತಾಯಿಗಳ ನಿರೀಕ್ಷೆ ಅವಳಿಂದ ಸುಳ್ಳಾಗುವುದಿಲ್ಲ. ಬಡತನ ಎನ್ನುವುದು ಬದುಕಿನ ಸಾಧನೆಯ ನಿಜವಾದ ಸ್ಫೂರ್ತಿ. ಅವಳ ಶ್ರೇಯಸ್ಸಿಗೆ ನಾನೂ ಮಾರ್ಗದರ್ಶಿಸಬೇಕು. ಅವರ ಕುಟುಂಬ ನನ್ನ ಮೇಲಿಟ್ಟ ಅಭಿಮಾನ ವಿಶ್ವಾಸಕ್ಕೆ ನಾನು ಆಭಾರಿ. ಪದ್ಮಶ್ರೀ ಚಿಟ್ಟಾಣಿಯವರಿಂದಲೂ ಶಹಭಾಸ್ ಗಿಟ್ಟಿಸಿಕೊಂಡ ನನ್ನೊಲವಿನ ವಿದ್ಯಾರ್ಥಿನಿ ಗುರುವಾದ ನನಗೂ ಗೌರವ ತಂದುಕೊಟ್ಟಿದ್ದಾಳೆ. ಅವಳಿಂದ ಇದಕ್ಕೂ ಹೆಚ್ಚಿನ ಸಾಧನೆಯನ್ನು ನಾನು ಬರ ಕಾಯುತ್ತೇನೆ.
ಸದ್ಗುರು ಶ್ರೀಧರರ ಆಶೀರ್ವಾದ ಅನನ್ಯಾ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಅನನ್ಯಾಳಿಗೆ ನನ್ನ ಶುಭಾಶೀರ್ವಾದಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???