ಪ್ರೀತಿಸಿದರೆ ಇಂತಿರಬೇಕು
ಚಕೋರ ಚಂದ್ರಮರಂತೆ
ಕತ್ತು ಮುರಿದು ಕೆಳಬಿದ್ದರೂ
ಚಿತ್ತ ಚಂದ್ರನೆಡೆಗೆ – ಕಬೀರ.
ಪ್ರೀತಿಸಿದರೆ ಅದು ಚಕೋರ ಚಂದ್ರಮರಂತಿರಬೇಕು. ಕತ್ತು ಮುರಿದು ಕೆಳಕ್ಕೆ ಬಿದ್ದರೂ ಚಕೋರದ ಚಿತ್ತ ಚಂದ್ರನೆಡೆಗೆ ಇರುತ್ತದೆ. ಎಂದು ಈ ದೋಹೆಯಲ್ಲಿ ಸಂತ ಕಬೀರರು ಪ್ರೀತಿ ಎಂದರೆ ಹೇಗಿರಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಚಕೋರ ಒಂದು ಪಕ್ಷಿ. ಅದು ಬೆಳದಿಂಗಳನ್ನು ಸೇವಿಸಿ ಬದುಕುತ್ತದೆ ಎಂಬುದು ನಮ್ಮ ನಡುವಿನ ಒಂದು ನಂಬಿಕೆ. ಅದಕ್ಕೆ ಜೋನ್ನವಕ್ಕಿ ಎಂಬ ಹೆಸರೂ ಇದೆ. ಇದಕ್ಕೆ ಚಂದ್ರನೆಂದರೆ ತುಂಬ ಪ್ರೀತಿ. ಚಂದ್ರನ ಹಾಲು ಬೆಳದಿಂಗಳೆಂದರೆ ಪಂಚಪ್ರಾಣ. ಚಕೋರ ಚಂದ್ರಮರ ಪ್ರೀತಿ ಎಷ್ಟೆಂದರೆ ಚಕೋರ ಪಕ್ಷಿ ಕತ್ತು ಮುರಿದು ಸತ್ತು ಬಿದ್ದರೂ ಅದರ ಚಿತ್ತವೆಲ್ಲಾ ಚಂದ್ರನೆಡೆಗೆ ಇರುತ್ತದೆ. ಬದುಕಿನಲ್ಲೂ ಸಾವಿನಲ್ಲೂ ಅದರ ಪ್ರೀತಿ ಚಂದ್ರನಿಗೇ ಮೀಸಲು.
ಇಂದು ಪ್ರೀತಿ ಎಂಬ ಶಬ್ದ ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಅದು ದೈಹಿಕ ಸುಖಕಷ್ಟೇ ಸೀಮಿತವಾಗಿದೆ. ನಮ್ಮ ಸಂಸ್ಕೃತಿಯ ಜೀವಾಳವಾಗಿದ್ದ ತಾಯಿ ,ತಾಯ್ನಾಡು, ತಾಯ್ನುಡಿಯ ಪ್ರೀತಿ ಮಸುಕಾಗಿದೆ. ಇಂದಿನ ವೈಜ್ಞಾನಿಕ ,ಆಧುನಿಕ ಯುಗದಲ್ಲಿ ದೇಶ ದೇಶಗಳ ನಡುವಿನ ಅಂತರ ಕಡಿಮೆಯಾಗಿದ್ದರೂ ಮನಸ್ಸು ಮನಸ್ಸುಗಳ ನಡುವಿನ ಅಂತರ ಹೆಚ್ಚುತ್ತಿದೆ . ಸಂಬಂಧಗಳು ಬಂದ ಕಳಚಿಕೊಳ್ಳುತ್ತಿವೆ. ಈ ಒಂದು ಕಾಲಘಟ್ಟದಲ್ಲಿ ಚಕೋರ ಚಂದ್ರಮನ ಪ್ರೀತಿ ನಮಗೆ ಆದರ್ಶವಾಗಲಿ ಎಂಬುದು ಈ ದೋಹೆಯ ಆಶಯ.
ಇದನ್ನು ಕವಿವಾಣಿ ಯೊಂದು ಹೇಳಿದ್ದು ಹೀಗೆ………..
ಪ್ರೀತಿಯೆಂಬುದದನರಿನೀನು ಸರಿಯಾಗಿ
ನೀತಿ ಇರುವುದು ಅಲ್ಲಿ ಎಂಬರಿವು ಇರಲಿ
ರೀತಿಮೀರಲುಪ್ರೀತಿಮಾಡುವುದನಿಷ್ಟವನು
ಭೀತಿ ಆವರಿಸುವುದು -ಭಾವಜೀವಿ
✍️ ಡಾ.ರವೀಂದ್ರ ಭಟ್ಟ ಸೂರಿ