ಆತ್ಮೀಯ ಓದುಗರೇ… ನಮಸ್ಕಾರ .
ಕೊರೋನಾದಿಂದ ಉಂಟಾದ ಈ ಪರಿಸ್ಥಿತಿ ರಜೆನಾ,ಸಜೆನಾ, ಅವಕಾಶಾನಾ ? ಎಂದು ಮನದಲ್ಲಿ ಅಂದು ಸುಳಿದ ಒಂದು ಜಿಜ್ಞಾಸೆ ಈ ಬೆಳಕಿನೆಡೆಗೆ ಅಂಕಣ ಸಾಮಾಜಿಕ ಜಾಲತಾಣದ ಅಂಗಣಕ್ಕೆ ಬರಲು ಪ್ರೇರಣೆ ನೀಡಿತು. ಇಂದು ಅದಕ್ಕೆ ಸುವರ್ಣ ಸಂಭ್ರಮ. ನಿರಂತರವಾಗಿ ಐವತ್ತು ದಿನ ಬರೆದೆನೆಂದರೆ ಈಗ ನನಗೇ ನಂಬಲಾಗುತ್ತಿಲ್ಲ. ಈ ಸಂತೋಷದ ಕ್ಷಣದಲ್ಲಿ ಓದುಗರಾದ ನಿಮಗೆ ಮೊದಲಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಈ ಬೆಳಕಿನೆಡೆಗೆ ಅಂಕಣಕ್ಕೆ ತಮ್ಮ ಸತ್ವಾಧಾರ ಮೂಲಕ ಅವಕಾಶ ನೀಡಿ ಜೊತೆಯಾದವರು ಗೆಳೆಯ ಗಣೇಶ್ ಜೋಷಿ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು.
ಮೊದಲಿನಿಂದಲೂ ಕಬೀರರ ದೋಹೆ ಬಗ್ಗೆ ನನಗೊಂದು ಸೆಳೆತ ಅದನ್ನು ಕನ್ನಡದಲ್ಲಿ ವಿವರಣೆಯೊಂದಿಗೆ ಓದುಗರಿಗೆ ತಲುಪಿಸಬೇಕು ಎಂಬ ಮನದಾಸೆ ಪೂರೈಸಿದೆ. ಈವರೆಗಿನ ಐವತ್ತು ಲೇಖನಗಳನ್ನು ತಾವೆಲ್ಲ ಓದಿದ್ದೀರಿ ಎಂದು ಭಾವಿಸಿದ್ದೇನೆ. ಓದಿದ್ದರೆ ದಯವಿಟ್ಟು ನನ್ನ 9448028443 ನಂಬರಿಗೆ ಪ್ರತಿಕ್ರಿಯಿಸಿ. ನಿಮ್ಮ ಒಂದು ಪ್ರತಿಕ್ರಿಯೆ ನನಗೆ ಬರೆಯಲು ಮತ್ತಷ್ಟು ಪ್ರೇರಣೆ ನೀಡಬಹುದು. ನಿಮ್ಮ ಪ್ರತಿಕ್ರಿಯೆಯ ಮೂಲಕ ನನ್ನ ಅಕ್ಷರ ಕೃಷಿಗೆ ನೀರು ಗೊಬ್ಬರ ಪೂರೈಸಿ ಎನ್ನುವ ಮನದಾಳದ ಮಾತಿನೊಂದಿಗೆ ಸುವರ್ಣ ಸಂಭ್ರಮದ ಲೇಖನ ವನ್ನು ಓದುಗರಾದ ನಿಮಗೆ ಅರ್ಪಿಸುತ್ತಿದ್ದೇನೆ.
ಇಂದಿಗೆ ಈ ಅಂಕಣ ಮುಕ್ತಾಯವಾಗುತ್ತಿದೆ. ಓದಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೆ ಮತ್ತೊಮ್ಮೆ ವಂದಿಸಿ ಈ ಅಂಕಣ ಬರಹವನ್ನು ಕೃತಿ ಯಾಗಿಸುವ ನನ್ನ ಹಂಬಲಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾ ಐವತ್ತನೇ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ……….
ಮನದ ಕೊಳೆಯ ತೊಳೆ
ಮೈ ತೊಳೆದರೆ ಏನಾಯಿತು
ಮನದ ಕೊಳೆಯು ಹೋದೀತೆ
ಮನವನು ಮಥಿಸಿ ವಿವೇಚನೆ ನಡೆಸೆ
ಮನ ನಿರ್ಮಲವಹುದು -ಕಬೀರ.
ನಮ್ಮ ಮೈಯನ್ನು ನಾವು ನಿತ್ಯ ತೊಳೆದು ಸ್ವಚ್ಛಗೊಳಿಸುತ್ತೇವೆ. ಆದರೆ ಇದರಿಂದ ಮನದ ಕೊಳೆ ಹೋಗಲಾರದು. ಮನಸ್ಸನ್ನು ಮಥಿಸಿ ವಿವೇಚನೆ ನಡೆಸಿದರೆ ಮನ ನಿರ್ಮಲವಾಗುವುದು. ಎಂದು ಕಬೀರರು ಈ ದೋಹೆಯಲ್ಲಿ ಹೇಳಿದ್ದಾರೆ.
ನಾವು ಹೊರಗಿನ ಸ್ವಚ್ಛತೆಗೆ ಬಹಳ ಮಹತ್ವ ಕೊಡುತ್ತೇವೆ. ನಮ್ಮ ದೇಹವನ್ನು ಸ್ವಚ್ಛಗೊಳಿಸಿ ಕೊಳ್ಳುತ್ತೇವೆ. ನಮ್ಮ ಮನೆ ಸುತ್ತಮುತ್ತಲ ಪರಿಸರ ಇದನ್ನೆಲ್ಲ ಸ್ವಚ್ಚಗೊಳಿಸುತ್ತಿರುತ್ತೇವೆ. ಆದರೆ ನಮ್ಮ ಅಂತರಂಗವನ್ನು ಸ್ವಚ್ಛಗೊಳಿಸುವೆಡೆಗೆ ನಾವು ಗಮನ ಕೊಡುವುದೇ ಇಲ್ಲ. ಮನದ ಕೊಳೆಯನ್ನು ಹಾಗೇ ಉಳಿಸಿಕೊಂಡು ಹೊರಗಿನ ಕೊಳೆ ತೊಳೆಯುತ್ತೇವೆ. ಮನವನ್ನು ಮಥಿಸಿ ವಿವೇಚನೆ ನಡೆಸಿದರೆ ನಮಗೆ ಸರಿ ತಪ್ಪಿನ ಅರಿವಾಗುತ್ತದೆ. ಆ ಅರಿವು ಮೂಡಿದಾಗ ನಮ್ಮಿಂದಾಗುವ ತಪ್ಪುಗಳು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಮನಸ್ಸು ಶುದ್ಧವಾಗುತ್ತದೆ. ಎಂಬುದು ಕಬೀರರ ಅಭಿಮತ. ಮನವ ಶೋಧಿಸಬೇಕು ನಿತ್ಯ ಅನುದಿನ ಮಾಡಿದ ಪಾಪ ಪುಣ್ಯದ ವೆಚ್ಚ ಎಂಬ ದಾಸವಾಣಿ ಹೇಳಿದ್ದು ಇದನ್ನೇ. ಪ್ರತಿದಿನ ನಾವು ನಮ್ಮ ಮನಸ್ಸನ್ನು ಶೋಧಿಸಬೇಕು ಅದರಿಂದ ನಮ್ಮ ಪಾಪ ಪುಣ್ಯದ ಲೆಕ್ಕ ಸಿಗುತ್ತದೆ ಎಂದು. ಸಿಂಹಾವಲೋಕನ ಅಭ್ಯಾಸ ರೂಢಿಸಿಕೊಳ್ಳೋಣ ಸಿಂಹ ಹೇಗೆ ತಾನು ನಡೆದು ಬಂದ ದಾರಿಯನ್ನು ಒಮ್ಮೆ ಅವಲೋಕಿಸುತ್ತಾ ಮುನ್ನಡೆಯುತ್ತದೆಯೋ ಹಾಗೆಯೇ ನಾವು ಕೂಡ ನಾವು ನಡೆದು ಬಂದ ದಾರಿಯನ್ನು ಪ್ರತಿನಿತ್ಯ ಒಮ್ಮೆಯಾದರೂ ಅವಲೋಕಿಸೋಣ. ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳೋಣ.
ಇದನ್ನೇ ಕವಿವಾಣಿಯು ಹೇಳಿದ್ದು ಹೀಗೆ ……
ಮೊದಲಾಗಿ ನೀಗೆಲ್ಲು ಪರಮ ಶತ್ರುಗಳನ್ನು.
ಬದಲಾಗಬಹುದದುವು ನಿನ್ನ ಜೀವನವು
ಕೆದಕದಿರು ಹೊರಗೆಲ್ಲ ಶತ್ರುವಿನಿರುವಿಕೆಗೆ
ಕದವ ತೆರೆ ನಿನ್ನರಿವ- ಭಾವ ಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ