ಭಾವಾಭಿವ್ಯಕ್ತಿ…..
ಆತ್ಮೀಯ ಓದುಗರೇ……
ಮನದ ಭಾವ ಅಕ್ಷರ ರೂಪ ಪಡೆದು ಈ ಚಿಂತನ ಮಂಥನ ಅಂಕಣ ರೂಪುಗೊಂಡಿದೆ. ನನ್ನ ಬದುಕಿನಲ್ಲಿ ನಡೆದ ನಂಬಲಸಾಧ್ಯವೆನ್ನುವಂತಹ ಘಟನೆಗಳಲ್ಲಿ ತಮ್ಮ ಅನುಗ್ರಹ ರೂಪದ ಕಾರುಣ್ಯ ಹರಿಸಿ ನನ್ನ ಬದುಕಿಗೊಂದು ನೆಲೆ-ಬೆಲೆ ಬರುವಂತೆ ಆಶೀರ್ವದಿಸಿದ, ನನ್ನ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪ್ರವಚನ ಧಾರೆಗೆ ಲೇಖನ ರೂಪ ಕೊಡುವ ಒಂದು ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಶ್ರೀ ಸಂಸ್ಥಾನದವರ ಮಾತು ಎಂದರೆ ಅದೊಂದು ಮುತ್ತು. ಅಲ್ಲಿ ನಮ್ಮ ಬದುಕಿಗೆ ಬೇಕಾದ ಎಲ್ಲಾ ತತ್ವಗಳ ಸಾರವಿದೆ. ನಮ್ಮ ನಡೆಗೊಂದು ಮಾರ್ಗದರ್ಶನವಿದೆ. ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೇಕಾದ ಆದರ್ಶವಿದೆ. ನಮ್ಮನ್ನು ಸರಿದಾರಿಯಲ್ಲಿ ಮುನ್ನಡೆಸುವ ಬೆಳಕಿದೆ. ಅಂತಹ ಮಾತಿನ ಮುತ್ತುಗಳನ್ನು ಪೋಣಿಸಿ ಮಾಡಿದ ಸೊಬಗಿನ ಅಕ್ಷರಮಾಲೆ ನಾಳೆಯಿಂದ ನಿಮ್ಮೆಲ್ಲರ ಕೊರಳನ್ನು ಅಲಂಕರಿಸಲಿದೆ.
ಈ ಚಿಂತನ-ಮಂಥನ ಅಂಕಣವನ್ನು ನೀವೆಲ್ಲ ಇಷ್ಟಪಡುತ್ತೀರಿ ಎಂಬ ಭರವಸೆ ನನಗಿದೆ. ನಾಳೆ ಗುರುವಾರದಿಂದ ಪ್ರಾರಂಭವಾಗಲಿರುವ ಲೇಖನ ಮಾಲಿಕೆಗೆ ಶ್ರೀ ಗುರುಗಳ ಆಶೀರ್ವಾದವಿರಲಿ, ಓದುಗರಾದ ನಿಮ್ಮೆಲ್ಲರ ಪ್ರೀತಿ ವಿಶ್ವಾಸವಿರಲಿ ಎನ್ನುವ ಆಶಯಹೊತ್ತ ನುಡಿಗಳೊಂದಿಗೆ ನನ್ನ ಬೆಳಕಿನೆಡೆಗೆ… ಅಂಕಣಕ್ಕೆ ದೊರಕಿದ ನಿಮ್ಮೆಲ್ಲರ ಅಭಿಮಾನ, ಪ್ರೀತಿ, ವಿಶ್ವಾಸ ಚಿಂತನ-ಮಂಥನ ಅಂಕಣಕ್ಕೂ ದೊರಕಲಿ ಎನ್ನುತ್ತಾ ಅಂಕಣ ಬರಹಕ್ಕೆ ಸತ್ವಾಧಾರ ದಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸುತ್ತಿರುವ ಗೆಳೆಯ ಗಣೇಶ ಜೋಶಿಯವರನ್ನು ಸ್ಮರಿಸಿಕೊಳ್ಳುತ್ತಾ ನಾಳೆಯ ನಿರೀಕ್ಷೆಯೊಂದಿಗೆ ಇಂದು ಲೇಖನಿಗೆ ವಿರಾಮ ನೀಡುತ್ತಿದ್ದೇನೆ.
ವಂದನೆಗಳೊಂದಿಗೆ,
ನಿಮ್ಮವ.
ಡಾ.ರವೀಂದ್ರ ಭಟ್ಟ ಸೂರಿ.