ನಾವು ಹಸಿವಿನಿಂದ ಕಂಗೆಟ್ಟಿದ್ದೇವೆ. ಹಸಿವಿನಲ್ಲಿ ಅನೇಕ ಬಗೆ. ನಮ್ಮ ಕಾಲ ಬೆರಳಿನಿಂದ ತಲೆಯ ಕೂದಲ ವರೆಗೆ ಪ್ರತಿ ಅಂಗಾಂಗಕ್ಕೆ ಒಂದೊಂದು ಹಸಿವಿದೆ. ಕಣ್ಣಿಗೆ ರೂಪದ ಹಸಿವು, ಕಿವಿಗೆ ಶಬ್ದದ ಹಸಿವು, ಮೂಗಿಗೆ ಪರಿಮಳದ ಹಸಿವು, ಕೈಗೆ ಕೆಲಸದ ಹಸಿವು, ಕಾಲಿಗೆ ಊರು ತಿರುಗುವ ಹಸಿವು, ಹೊಟ್ಟೆಗೆ ಅನ್ನದ ಹಸಿವು, ಹೃದಯಕ್ಕೆ ಭಾವದ ಹಸಿವು, ತಲೆಗೆ ಹಣ, ಅಧಿಕಾರ, ಅಂತಸ್ತಿನ ಹಸಿವು. ಹೀಗೆ ಹಲವಾರು ಬಗೆಯ ಹಸಿವಿನಿಂದ ನಾವು ಬಳಲುತ್ತಿದ್ದೇವೆ. ಅದರಲ್ಲೂ ಭಾವದ ಹಸಿವಂತೂ ಮನುಷ್ಯನಿಗೆ ಒಂದೇ ಅಲ್ಲ ಆ ಭಗವಂತನಿಗೂ ಇದೆ. ಅವನೂ ಕೂಡ ಭಕ್ತರ ಭಾವ ಬೇಕು ಎನ್ನುತ್ತಾನೆ. ನಮ್ಮ ಈ ಹಸಿವು ತಣಿಯಬೇಕು. ಅನ್ಯೋನ್ಯತೆ ಬರಬೇಕು. ಔದಾರ್ಯ ಪ್ರತಿಯೊಬ್ಬರಲ್ಲಿ ಹೊಮ್ಮಬೇಕು. ಬದುಕಿನಲ್ಲಿ ಎಲ್ಲರ ಜೊತೆ ಈ ಭಾವ ತಳೆದರೆ ನಿಜಕ್ಕೂ ಅದ್ಭುತ ಬದಲಾವಣೆ ಸಾಧ್ಯ. ಸಮಾಜದಲ್ಲಿ ಅಂತಹ ಬದಲಾವಣೆಯಾದರೆ ನಮಗೆ ಕೋರ್ಟು ಕಚೇರಿಯ ಅವಶ್ಯಕತೆ ಇರುವುದಿಲ್ಲ.

ಈ ಅನ್ಯೋನ್ಯತೆ , ಔದಾರ್ಯ ಹೇಗಿರಬೇಕೆಂದರೆ ರಾಮ ಭರತದಲ್ಲಿದ್ದಂತೆ ಇರಬೇಕು. ರಾಮ ಎಲ್ಲವನ್ನೂ ಭರತನಿಗೆ ಕೊಡುತ್ತೇನೆ ಎಂದ. ಭರತ ನನಗೆ ಯಾವುದೂ ಬೇಡವೆಂದ ಇಲ್ಲಿ ಸಮರ ವಿಲ್ಲ ಇದ್ದದ್ದು ಕೇವಲ ಸಮರಸ ಮಾತ್ರ. ಇಲ್ಲಿ ನನಗಿರಲಿ ಎಂಬ ಭಾವವಿಲ್ಲ ಇದ್ದದ್ದು ಕೇವಲ ನಿನಗಿರಲಿ ಎಂಬ ಭಾವ ಮಾತ್ರ. ಈ ನಿನಗಿರಲಿ ಎಂಬ ಭಾವ ಪವಿತ್ರವಾದ ಭಾವ ಆ ಭಾವಕ್ಕೆ ಅಭಾವವಾಗಬಾರದು. ಅಂತಹ ಭಾವ ನಮ್ಮಲ್ಲಿ ಮೂಡಬೇಕು.

ಯುದ್ಧರಂಗದಲ್ಲಿ ಸೇನಾಧಿಪತಿ ಯೋರ್ವ ಸಾಯುವ ಸ್ಥಿತಿಯಲ್ಲಿದ್ದ. ಇನ್ನೇನು ಪ್ರಾಣ ಬಿಡುತ್ತಾನೆ ಅನ್ನುವಾಗ ಸೈನಿಕನೋರ್ವ ನೀರು ತೆಗೆದುಕೊಂಡು ಬಂದ. ಸೇನಾಧಿಪತಿಗೆ ಕುಡಿಸಬೇಕು ಎನ್ನುವಾಗ ಆತ ಹೇಳಿದನಂತೆ “ನಾನಂತೂ ಸಾಯುತ್ತಿದ್ದೇನೆ. ಬಾಯಾರಿಕೆ ತಣಿಸಿಕೊಂಡು ಏನು ಮಾಡಲಿ? ನನ್ನ ಪಕ್ಕದಲ್ಲಿರುವ ಸೈನಿಕನಿಗೆ ನೀರಿನ ಅವಶ್ಯಕತೆ ಇದೆ ಆತ ಕೇಳುತ್ತಿದ್ದಾನೆ ಅವನಿಗೆ ಕುಡಿಸು” ಎಂದನಂತೆ. ಇದಕ್ಕಿಂತ ದೊಡ್ಡ ತ್ಯಾಗ ಯಾವುದಿದೆ. ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಇನ್ನೊಬ್ಬನ ಪ್ರಾಣ ಉಳಿಯಲಿ ಎಂಬ ಔದಾರ್ಯವಿದೆಯಲ್ಲ ಇದು ಅನನ್ಯ ತ್ಯಾಗ.

ಒಮ್ಮೆ ರಾಕ್ಷಸರು ಬ್ರಹ್ಮನಿಗೆ ದೂರು ಕೊಟ್ಟರು. ನಮಗೆ ಅನ್ಯಾಯವಾಗುತ್ತಿದೆ ದೇವತೆಗಳಿಗೆ ತೇಜೋ ಲೋಕ ನಮಗೆ ತಮೋ ಲೋಕ. ಅವರಿಗೆ ಊರ್ಧ್ವ ಲೋಕ ನಮಗೆ ಅಧೋಲೋಕ. ಅವರಿಗೆ ಸ್ವರ್ಗ ನಮಗೆ ಪಾತಾಳ. ಇದು ಸರಿಯಲ್ಲ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು. ಬ್ರಹ್ಮ ಈ ಸಮಸ್ಯೆಯನ್ನು ಬಗೆಹರಿಸಲು ಮಾತುಕತೆಗಾಗಿ ಒಂದು ಔತಣ ಕೂಟ ಏರ್ಪಡಿಸಿದ. ದೇವತೆಗಳು ಹಾಗೂ ರಾಕ್ಷಸರನ್ನು ಆಮಂತ್ರಿಸಿದ. ಔತಣ ಕೂಟ ಪ್ರಾರಂಭವಾಯಿತು. ಊಟದ ನಿಯಮವನ್ನು ಘೋಷಿಸಲಾಯಿತು. ಪ್ರತಿಯೊಬ್ಬರೂ ಕೈ ಬಗ್ಗಿಸದೇ ಊಟ ಮಾಡಬೇಕು ಎಂಬುದೇ ಆ ನಿಯಮವಾಗಿತ್ತು. ಇದನ್ನು ಕೇಳಿ ರಾಕ್ಷಸರಿಗೆ ಸಿಟ್ಟು ಬಂತು. ಕೈ ಬಗ್ಗಿಸದೇ ಊಟ ಮಾಡಲು ಹೇಗೆ ಸಾಧ್ಯ ಎಂದು ಕೂಗುತ್ತಾ ಎದ್ದು ಹೊರಟರು. ದೇವತೆಗಳು ಒಬ್ಬರಿಗೊಬ್ಬರು ಊಟ ಮಾಡಿಸುತ್ತಾ ಸಂತೋಷದಿಂದ ಹೊಟ್ಟೆ ತುಂಬಿಸಿಕೊಂಡರು. ಆಗ ಬ್ರಹ್ಮ ಹೇಳಿದ ಅಸುರರೇ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ. ನಿಮಗೆ ನಿಮ್ಮ ಹೊಟ್ಟೆಯ ಚಿಂತೆ ಆದರೆ ದೇವತೆಗಳಿಗೆ ಪರರ ಚಿಂತೆ. ನಿಮ್ಮದು ಸ್ವಾರ್ಥ ದೇವತೆಗಳದ್ದು ನಿಸ್ವಾರ್ಥ. ಹಾಗಾಗಿಯೇ ಅಲ್ಲಿ ಎಲ್ಲರ ಹೊಟ್ಟೆ ತುಂಬಿತು. ಅವರಿಗೆ ನೆಮ್ಮದಿ ದೊರಕಿತು. ದೇವತೆಗಳಲ್ಲಿ ಅನ್ಯೋನ್ಯತೆ ಇದೆ, ಔದಾರ್ಯವಿದೆ. ಆದ್ದರಿಂದಲೇ ಅವರಿಗೆ ನೆಮ್ಮದಿಯ ಜೀವನ ದೊರಕಿದೆ ಎಂದನಂತೆ .

ನಮಗೂ ಆಯ್ಕೆ ಇದೆ ಸ್ವಾರ್ಥ ಭಾವದ ರಾಕ್ಷಸರಾಗಬೇಕಾ ? ಅಥವಾ ನಿಸ್ವಾರ್ಥಿ ಭಾವದ ದೇವತೆಗಳಾಗಬೇಕಾ ? ಎಂದು. ನಾವು ಅನ್ಯೋನ್ಯ ಸೌಹಾರ್ದಕ್ಕೆ ಮಾಧ್ಯಮಗಳನ್ನು ಹುಡುಕಿ ಕೊಳ್ಳೋಣ. ನಮ್ಮನ್ನೆಲ್ಲ ನಿಯಂತ್ರಿಸುವ ಸೂತ್ರಧಾರನಿದ್ದಾನೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಯಾಕೆಂದರೆ ಕಷ್ಟ ಸುಖಗಳಲ್ಲಿ ಅವನ ನೆನಪು ನಮಗೆ ನೆಮ್ಮದಿ ನೀಡುತ್ತದೆ. ಈ ಭೂಮಂಡಲದಲ್ಲಿ ಜೊತೆ ಇರುವ ಜೀವಿಗಳ ಜೊತೆ ಜಗತ್ತನ್ನಾಳುತ್ತಿರುವ ಅಗೋಚರ ಶಕ್ತಿಯ ಜೊತೆ ಅನ್ಯೋನ್ಯ ಸಂಬಂಧವಿರಲಿ. ಅದು ನಮ್ಮೆಲ್ಲರ ನೆಮ್ಮದಿಗೆ ಕಾರಣವಾಗಲಿ. ಹಸಿವು ತಣಿದು ಅನ್ಯೋನ್ಯತೆಯ ಭಾವ ಬೆಳೆಯಲಿ. ಔದಾರ್ಯ ಪ್ರತಿಯೊಬ್ಬರಲ್ಲಿ ಹೊರಹೊಮ್ಮಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.