ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಯುತ ಎಲ್ ಯು ಭಟ್ಟ

ಇಷ್ಟಿದ್ದವ ಅಷ್ಟುಂಟು ಎಂದು ತೋರಿಸುವ ಜಮಾನಾ ಇಂದು. ? ಅಷ್ಟಿದ್ದವ ಇಷ್ಟೂ ನಾನಲ್ಲ ಎಂದು ಬದುಕಿರುವ ನಮ್ಮ ಸರ್ ನ ನಿಮಗೆ ತೋರಿಸುತ್ತೇನೆ ಬನ್ನಿ. ಎಲ್ ಯು ಭಟ್ಟ ಸರ್. ಆಗಿನ ಕಾಲದಲ್ಲೇ ಸಂಸ್ಕೃತ, English, ಹಿಂದಿ ಸ್ನಾತಕೋತ್ತರ ಪದವಿ (M.A.) ಪಡೆದ, ಅಪಾರ ಸ್ಮರಣ ಶಕ್ತಿ ಹೊಂದಿದ, ಕಂಚಿನ ಕಂಠದ, ಬಾಯ್ಬಿಟ್ಟರೆ ಸುಭಾಷಿತದ ಹೊಳೆಯನ್ನೇ ಹರಿಸಬಲ್ಲ, “ಮುಂದೊಂದು ದಿನ ನೀನು ತತ್ವಜ್ಞಾನಿ ಆಗತ್ಯೋ” ಎಂದು ನನ್ನ ತಲೆಯ ಮೇಲೆ ಕೈಯೆಳೆದ ನನ್ನ ಪ್ರೀತಿಯ ಎಲ್ ಯು ಭಟ್ಟ ಸರ್ ಕುರಿತಾಗಿ ಎಷ್ಟೂ ಅಂತ ಬರೆಯಲಿ….?! ಏನೂ ಅಂತ ಬರೆಯಲಿ…?! ಈಗಿನ ಬಹುತೇಕ ವಿದ್ವಾಂಸರು ದ್ರವ, ಅನಿಲ ವಿದ್ವಾಂಸರು…. ?? ಘನ ವಿದ್ವಾಂಸರು ನಮ್ಮ ಸರ್.
ಶ್ರೀ ಕರಿಕಾನ ಪರಮೇಶ್ವರಿ ಪ್ರೌಢಶಾಲೆ ಅರೆಅಂಗಡಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಎಲ್.ಯು.ಭಟ್ಟರ ಊರು ಹೊನ್ನಾವರ ತಾಲ್ಲೂಕಿನ ಖಾಸಖಂಡ. ಅವರು ಕಾಸು ಮಾಡಿದರೋ ಬಿಟ್ಟರೋ ನಾಲ್ಕು ಕಾಸು ಸಂಪಾದಿಸಿಕೊಂಡು ಬದುಕು ನಡೆಸುವುದಕ್ಕೆ ಸಾವಿರ ಸಾವಿರ ವಿದ್ಯಾರ್ಥಿಗಳನ್ನು ಸ್ವಾವಲಂಬಿಯಾಗಿ ನಿಲ್ಲಿಸಿದ್ದಂತೂ ಸತ್ಯ.
ಸಂಸ್ಕೃತ ಪ್ರಥಮ ಭಾಷೆ ನಮ್ಮದು. ಅ, ಇ, ಉ, ಣ್….. ಋ ಲೃ ಕ್…….ಏ ಓ ಙ್…… ಐ ಔ ಚ್…..ಹ ಯ ವ ರ ಟ್ ಎಂದು ಮಾಹೇಶ್ವರ ಸೂತ್ರ ದಿಂದ ಪ್ರಾರಂಭಗೊಂಡ ನಮ್ಮ ಸಂಸ್ಕೃತ ಪಾಠದ ಮೊದಲ‌ ಇಟ್ಟಿಗೆಗಳನ್ನೇ ಭದ್ರವಾಗಿ ಜೋಡಿಸಿ ನೂರು ವರ್ಷಕ್ಕೂ ಮನೆ ಮುರಿಯದಂತೆ ಕಟ್ಟಿದ ಮಹಾನ್ ಮೇಧಾವಿ ನಮ್ಮ ಎಲ್ ಯು ಭಟ್ಟ ಸರ್. ಅವರು ಖರ್ಚೇ ಆಗದ ವಿದ್ವತ್ತಿನ ಕಣಜ. ಅವರ ತಲೆಯಲ್ಲಿ ಸಾವಿರ ಸಾವಿರ ಕಥೆಗಳಿವೆ, ಸುಭಾಷಿತಗಳಿವೆ, ನುಡಿಮುತ್ತುಗಳಿವೆ. ಪುಸ್ತಕವೇ ಬೇಡ ಅವರಿಗೆ. ಎಷ್ಟೋ ಪಾಠಗಳನ್ನು ಪುಸ್ತಕ ನೋಡದೆಯೇ ಬರಿಗೈಯಲ್ಲಿ ತರಗತಿಗೆ ಬಂದು ಕಲಿಸಿ ಹೋಗುತ್ತಿದ್ದರವರು.
ಎಲ್ ಯು ಭಟ್ಟರು ಸುಭಾಷಿತಗಳನ್ನು ಹೇಳುವ ಪರಿಯೇ ಅಮೋಘ, ಅದ್ಭುತ. ಕಂಚಿನ ಕಂಠ ಅವರದು. ದೊಡ್ಡದಾಗಿ ಅವರು ಶ್ಲೋಕಗಳನ್ನು ಹೇಳುತ್ತಿದ್ದರೆ ಎಂಥವರೂ ಮಂತ್ರ ಮುಗ್ಧರಾಗಬೇಕು. ಅವರು ಮೂರು ಸಲ ಹೇಳಿದರೆ ನಮಗೆ ಅದು ಕಂಠಸ್ಥವಾಗಿ ಬಿಡುತ್ತಿತ್ತು. ಸಂಸ್ಕೃತ ವ್ಯಾಕರಣವನ್ನು ಅವರು ಹೇಳಿಕೊಡುವ ರೀತಿ ಅನನ್ಯ. ಅವರು 8-10 ನೇ ತರಗತಿಯವರೆಗೆ ಬರೆಸಿದ ಸಂಸ್ಕೃತ ವ್ಯಾಕರಣ note book ನನ್ನ ಕಪಾಟಿನಲ್ಲಿ ಇನ್ನೂ ಭದ್ರವಾಗಿದೆ. ಕಳ್ಳರಿಗೂ ಸಿಗದಂತೆ ಅದನ್ನು ಇರಿಸಿದ್ದೇನೆ.? ಅವರು ಕಲಿಸುತ್ತಿದ್ದರೆ ನನಗೆ ರೋಮಾಂಚನ ಆಗುತ್ತಿತ್ತು. ಎಲ್ಲಿಂದ ಎಲ್ಲಿಗೋ ಹೋಗುವವರು….ಯಾವ್ಯಾವುದೋ ಉದಾಹರಣೆ, ಕಥೆ, ಹೇಳುವುದರೊಳಗೆ ಅವಧಿ ಹತ್ತೇ ನಿಮಿಷಕ್ಕೆ ಮುಗಿದು ಹೋದಂತೆ ಅನಿಸುತ್ತಿತ್ತು.
ನಾನಂಥ ಬುದ್ಧಿವಂತ ವಿದ್ಯಾರ್ಥಿ ಅಲ್ಲ. ವಿಧೇಯನಂತೂ ಪ್ರಾಮಾಣಿಕವಾಗಿ ಹೌದು. ಅವರ ಅವಧಿಯಲ್ಲಿ ಗಡ್ಡಕ್ಕೆ ಕೈಕೊಟ್ಟು ಬಿಟ್ಟ ಕಣ್ಣು ಬಿಟ್ಟ ಹಾಗೆ ನಾನು ಅವರನ್ನು ಗಮನಿಸುತ್ತಿದ್ದೆ. ಶೃದ್ಧೆಯಿಂದ ಆಲಿಸುತ್ತಿದ್ದೆ. ಅವರು ಏನಾದರೂ extra ಸಂಗತಿ ಹೇಳಿದರೆ ತಕ್ಷಣ note book ನ ಕೊನೆಯ ನಾಲ್ಕು ಪುಟಗಳಲ್ಲಿ ನಮೂದಿಸಿಕೊಳ್ಳುತ್ತಿದ್ದೆ. ನನಗೆ ಡೆಸ್ಕಿನ ಮೇಲೆ ಇಟ್ಟು ಬರೆಯುವುದು ಹೊಂದಾಣಿಕೆಯಾಗುತ್ತಿರಲಿಲ್ಲ. ನಾನು ಯಾವಾಗಲೂ ಡೆಸ್ಕಿನ ಅಡಿ ಭಾಗದಲ್ಲಿ ಕಾಲ ಮೇಲೆ ಇಟ್ಟು ಬರೆಯುತ್ತಿದ್ದೆ. ಒಂದು ದಿನ ಅವರಿಗೆ ನನ್ನ ಮೇಲೊಂದು ಸಂಶಯ ಮೂಡಿರಬೇಕು. ವಿನಾಕಾರಣ ಇವನು ಏನೇನೋ ಬರೆದುಕೊಳ್ಳುತ್ತಾನೆಂದರೆ ಅನ್ಯ ಚಟುವಟಿಕೆಗಳಲ್ಲಿ ಇವನ ಆಸಕ್ತಿಯಿರಬೇಕೆಂದುಕೊಂಡು ನನ್ನನ್ನು ತರಗತಿಯಲ್ಲಿ ಎದ್ದು ನಿಲ್ಲಿಸಿ ನನ್ನ note book ಪರಿಶೀಲಿಸಿದರು. ನಾನು ಕೊನೆಯಲ್ಲಿ ಅವರು ಹೇಳಿರುವ ವಿಶೇಷ ವಾಕ್ಯಗಳನ್ನು, ನುಡಿಮುತ್ತುಗಳನ್ನು ಗೀಚಿ ಬರೆದುಕೊಂಡಿದ್ದನ್ನು ಗಮನಿಸಿದರು. ತಲೆಯ ಮೇಲೆ ಕೈಯೆಳೆದು “ಮುಂದೊಂದು ದಿನ ತತ್ವಜ್ಞಾನಿ ಆಗುತ್ತಿ ನೀನು” ಎಂದು ಹೇಳಿ ಕುಳ್ಳಿರಿಸಿದರು. ದೇವರಿತ್ತ ಆಸಕ್ತಿಗೆ ದೇವರೇ ಗುರುವಾಗಿ ಬಂದ.
ಸಂಸ್ಕೃತ ನನ್ನ ಭಾಷಾ ಲಾಲಿತ್ಯವನ್ನು ಶ್ರೀಮಂತವಾಗಿಸಿತು. ಅವರಿಗೆ ಸಾವಿರ ಸುಭಾಷಿತ ಬಾಯಲ್ಲಿ ಬಂದರೆ ನನಗೂ ಈಗ 50 ಬಾಯಲ್ಲಿದೆ. ? ಯಾವುದೇ ಪದ ವಿಶ್ಲೇಷಣೆ, ದ್ವಂದ್ವ, ಸಮಸ್ಯೆಗಳಿಗೂ ತಕ್ಷಣದ ಪರಿಹಾರಕ್ಕೆ ನಾನು ಗುರುಗಳನ್ನೇ ಕೇಳಬೇಕು. ಅವರೊಮ್ಮೆ ವಿಕ್ರಮಾದಿತ್ಯ ಬೇತಾಳನ ಮೂಲ ಸಂಸ್ಕೃತ ಕಥೆಗಳನ್ನು ಸಂಸ್ಕೃತದಲ್ಲಿಯೇ ಪುಸ್ತಕ ನೋಡದೆಯೇ ಹೇಳಿದ್ದು ನನಗೆ ಪರಮಾಶ್ಚರ್ಯವಾಗುವಂತೆ ಮಾಡಿತ್ತು. ಪೌಡರ್ ಹಚ್ಚಿಕೊಂಡು ನಾಳೆ ಯಾವ ಸೀರೆ ಉಡಲಿ, ಲಿಪ್ ಸ್ಟಿಕ್ ಮ್ಯಾಚಿಂಗ್ ಇದೆಯೇ…. ಎಂಬ ಚಿಂತೆಯಲ್ಲೇ ಹೊತ್ತು ಕಳೆಯುವ ವರ್ತಮಾನದ ಗುರುಮಾತೆಯರನೇಕರು, ಹಾಗೂ ಯಾವ ಬೈಕ್ ತೆಗೆದುಕೊಳ್ಳಲಿ….ಎಲ್ಲಿ ಸೈಟ್ ಕೊಡುವುದಿದೆ ಎಂಬ ಚಿಂತೆಯಲ್ಲೆ ಮುದುಕಾಗುತ್ತಿರುವ ಗುರುಗಳನೇಕರಿಗೆ ನಮ್ಮ ಸರ್ ಪರಮ ಆದರ್ಶವಾಗಿ ನಿಲ್ಲುತ್ತಾರೆ. ಯಾಕೆಂದರೆ ಅವರದ್ದು ಒಂದೇ ಸ್ಟೈಲ್. ಐದಾರು ಅಂಗಿ, ನಾಲ್ಕಾರು ಜೊತೆ ಪ್ಯಾಂಟ್. ವಿದ್ಯೆಯೇ ಅವರಿಗೆ ಭೂಷಣ. ಅಲಂಕಾರ.
‌‌‌ ಎಲ್ ಯು ಭಟ್ಟ ಸರ್ ಬಗ್ಗೆ ನನಗೆ ಅಪಾರ ಗೌರವವಿದೆ. ಇಂದು ನಾನು ಇಷ್ಟಾದರೂ ಬರೆಯುವುದಕ್ಕೆ, ನಾಲ್ಕಾರು ಪ್ರದೇಶಗಳಿಗೆ ಹೋಗಿ ಭಾಷಣ ಬಿಗಿಯುವುದಕ್ಕೆ ನಮ್ಮ ಸರ್ ನನ್ನ ಮೇಲೆ ಬೀರಿದ ಪ್ರಭಾವವೇ ಕಾರಣ. ಸತ್ಯವಾಗಿ ಹೇಳುತ್ತೇನೆ. ಹಲವೊಮ್ಮೆ ವೇದಿಕೆಯ ಮೇಲೆ ಇಂಥದೊಂದನ್ನು ಹೇಳಬೇಕೆಂದುಕೊಂಡಿದ್ದೆಲ್ಲಾ ಮರೆತು ಹೋಗುತ್ತದೆ. ಎಲ್ ಯು‌ ಭಟ್ಟ ಸರ್ ಹೇಳಿದ ಯಾವುದೋ ಸುಭಾಷಿತ ಥಟ್ಟನೆ ನೆನಪಾಗಿ ಬಿಡುತ್ತದೆ. ?? ಮಾನ-ಪ್ರಾಣ ಉಳಿಯುತ್ತದೆ. ನನಗೂ ವಿದ್ವತ್ certificate ಇದೆ. ಆದರೆ ನಮ್ಮ ಸರ್ ಅಷ್ಟು ವಿದ್ವತ್ತಿಲ್ಲ. ??
ನಮ್ಮ ಸರ್ ನಂಥವರು ಸಿಗುವುದು ಬಹಳ ಅಪರೂಪ. Simple living and high thinking….ಅಂತ ಹೇಳಿದ್ದು ಅವರಂಥವರನ್ನು ನೋಡಿಯೇ ಇರಬೇಕು. ವರ್ಗಕೋಣೆಯನ್ನು ಪ್ರವೇಶಿಸಿದರೆ ಒಮ್ಮೊಮ್ಮೆ ಸಂಪೂರ್ಣ English, ಒಂದೊಂದು ದಿನ ಸಂಪೂರ್ಣ ಹಿಂದಿ. ಯಪ್ಪಾ…..??? ಒಂದೇ ಭಾಷೆಯನ್ನೇ ನೆಟ್ಟಗೆ ನಾಲ್ಕಕ್ಷರ ಮಾತಾಡದ ನಾವೇ ಇಂದು ಹಾರಾಡಿದ್ದು ಹೆಚ್ಚೆನಿಸುತ್ತದೆ ನನಗೆ.
ಅಪ್ಪಟ ಕೃಷಿಕರಾದ ನಮ್ಮ ಸರ್ ಶ್ರಮ ಜೀವಿಗಳು. ಇಡೀ ದಿನ ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಾ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಗ್ರಂಥಾಲಯ ಅವರು. ವಿಶ್ವಕೋಶ ಅವರು. ಅಂಥವರಿಂದ ಕಲಿತ ನಾವೇ ಧನ್ಯರು.

RELATED ARTICLES  "ದೈವೀ ವಿಚಿತ್ರಾಗತಿಃ"-( ‘ಶ್ರೀಧರಾಮೃತ ವಚನಮಾಲೆ’).

ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ

ಯಾರು ಹಣವಂತನೋ ಅವನೇ ಉತ್ತಮ ಕುಲದವನು. ? ಅವನೇ ಪಂಡಿತನು. ? ಅವನೇ ಗುಣವಂತನು. ? ಅವನೇ ಉತ್ತಮ ಮಾತುಗಾರನು. ? ಅವನೇ ಸುಂದರನು.? ಹೀಗೆ ದುಡ್ಡಿದ್ದವನೇ ದೊಡ್ಡಪ್ಪ…. ಎಂಬುದು ನನಗೆ ಅನೇಕ ವೇದಿಕೆಗಳಲ್ಲಿ ಅನುಭವಕ್ಕೆ ಬರುತ್ತದೆ. ಇದು ನನಗೆ ಅವರು 8 ನೇ ತರಗತಿಯಲ್ಲಿ ಇಂದಿಗೆ 23 ವರ್ಷಗಳ ಹಿಂದೆ ಹೇಳಿಕೊಟ್ಟಿರುವ ಸುಭಾಷಿತ. ಅಂದು ಓದಿದ ಮೇಲೆ ಮತ್ತೆ ನಾನೆಂದೂ ಅದನ್ನು ಕಂಠಸ್ಥಗೊಳಿಸುವ ಪ್ರಯತ್ನ ಮಾಡಿಲ್ಲ. ಗುರುಲೀಲೆ.
ಬರೀ ಬಾಯ್ಮಾತಿನಲ್ಲಿ ಹೇಳುವುದಷ್ಟೇ ಅಲ್ಲ…..ಅವರ ಕಾಲು ಹಿಡಿದು ಕೈಮುಗಿಯಬೇಕೆನಿಸುತ್ತದೆ. ಅವರು ತೋರಿದ ಶೃದ್ಧೆ ಕಾಳಜಿ…ಇಂದು ನಾಲ್ಕು ಜನ ನನ್ನ ಹೆಸರು ಹೇಳುವಂತೆ ಮಾಡಿದೆ. ಸಂಸ್ಕೃತ ಮಾತ್ರ ಹೇಳಿ ಕೊಟ್ಟವರಲ್ಲ ಅವರು ಸುಸಂಸ್ಕೃತವಾಗಿ ಬದುಕುವುದನ್ನೂ ಹೇಳಿಕೊಟ್ಟವರು. ಅವರ ಒಂದಂಶ ಬಂದರೂ ಸಾಕು ಜೀವನ ಸಾರ್ಥಕ.

RELATED ARTICLES  ಚರ್ಮದಂಗಡಿ (ಕವನ)

ಗುರುವೋ ಬಹವಃ ಸಂತಿ ಶಿಷ್ಯ ವಿತ್ತಾಪಹಾರಕಾಃ

ಗುರುವೋ ವಿರಲಾಃ ಸಂತಿ ಶಿಷ್ಯ ಚಿತ್ತಾಪಹಾರಕಾಃ

ನನ್ನ ಚಿತ್ತ ಅಪಹರಿಸಿದವರೂ ಅವರೇ….ನನ್ನ ಮನಸ್ಸಿನ ತಾಪ ಕಡಿಮೆಗೊಳಿಸಿದವರೂ ಅವರೇ.
ಸದ್ಗುರು ಶ್ರೀಧರರ ಆಶೀರ್ವಾದ ಎಲ್ ಯು ಭಟ್ಟ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಎಲ್ ಯು ಭಟ್ಟ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94496 26321

??????⚫⚪???????⚫⚪?????