ಬಾಪುಗೌಡ ಶಿವನಗೌಡ ಬುಡ್ಡಣಗೌಡರ ಎಂಬ ವಾಮನ ಮೂರ್ತಿಯ ಪರಿಚಯ ಕುಮಟಾದ ಬಹುತೇಕ ಎಲ್ಲರಿಗೂ ಇದೆ.ಆದರೆ ಇಷ್ಟು ಉದ್ದನೆಯ ಹೆಸರು ಹೇಳಿದರೆ ಎಲ್ಲರೂ ತಬ್ಬಿಬ್ಬಾಗಿ ಯಾರವರು ಎಂದೇ ಕೇಳುತ್ತಾರೆ. ಅದೇ ಬಿ ಎಸ್ ಬಿ ಗೌಡರು ಎಂದೇ ಹೋ ಗೊತ್ತು ಎನ್ನುತ್ತಾರೆ.ಕಳೆದ ನಲವತ್ತು ವರುಷಗಳ ತನಕ ಕುಮಟಾದ ನಿರ್ಮಲಾ ಕಾನ್ವೆಂಟ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿ ಮನೆಮಾತಾಗಿದ್ದಾರೆ.ಮೂಲತಃ ಉತ್ತರ ಕರ್ನಾಟದ ಗದಗ ದವರಾದ ಇವರು ಜನ್ಮ ಭೂಮಿ ಮತ್ತು ಕರ್ಮ ಭೂಮಿ ಎರಡನ್ನೂ ಅಪಾರವಾಗಿ ಪ್ರೀತಿಸುತ್ತಾರೆ.ನಲವತ್ತು ವರ್ಷಗಳ ಕಾಲ ಕುಮಟೆಯಲ್ಲಿ ಇದ್ದರೂ ಹುಟ್ಟೂರಿನ ಭಾಷಾ ಸೊಗಡನ್ನು ಅವರು ಮರೆತಿಲ್ಲ.ಕೆಲವೇ ಕಾಲ ಬೆಂಗಳೂರು ಹೋಗಿ ಬಂದ ಅನೇಕರು ಇವಾಗ ಆವಾಗ ಎಂದೆಲ್ಲಾ ಅಲ್ಲಿನ ಭಾಷೆಯನ್ನು ಅನುಕರಿಸುವವರು ಬಿ ಎಸ್ ಗೌಡರನ್ನು ನೋಡಿ ಕಲಿಯಬೇಕಿದೆ.
ಗೌಡರ ಅವರ ಪರಿಚಯ ನನಗೆ ಆದದ್ದು ನಾನು ಗಿಬ್ ಹೈಸ್ಕೂನಲ್ಲಿ ಶಿಕ್ಷಕನಾಗಿದ್ದ ವೇಳೆ. ಆಗ ಗೌಡರು ಹೊರಟ್ಟಿಯವರ ನೇತೃತ್ವದ ಶಿಕ್ಷಕ ಸಂಘದಲ್ಲಿ ಸಕ್ರಿಯವಾಗಿದ್ದ ಕಾಲ ಜೊತೆಗೆ ನನ್ನ ಹಿರಿಯ ಮಾರ್ಗದರ್ಶಕ ಗುರುಗಳಾದ ಎಂ ಆರ್ ಸರ್ ಅವರು ಹಾಗೂ ಬಹುತೇಕ ಗಿಬ್ ಸಂಸ್ಥೆಯ ಶಿಕ್ಷಕ ಸಮೂಹ ದವರು ಹೊರಟ್ಟಿ ಬೆಂಬಲಿಗರು.
ಅವರ ನಡುವೆ ಅವರೆಲ್ಲರ ಆಪ್ತನಾದ ನಾನು ಆರ್ ಎಸ್ ಎಸ್ ವಿಚಾರಧಾರೆಯ ಅಭ್ಯರ್ಥಿಯ ಪರ ಶಿಕ್ಷಕ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಹೊರಟಾಗ ಇದೇ ಗೌಡರು ಬಂದು ಹೊರಟ್ಟಿ ಅವರನ್ನು ಬೆಂಬಲಿಸಲು ಕೋರಿದ್ದರು. ನಾನು ಅದನ್ನು ಒಪ್ಪದಿದ್ದಾಗ ಬಹಳಷ್ಟು ಬುದ್ಧಿ ಹೇಳಿದ್ದರು.ಚುನಾವಣೆಯ ಸಂದರ್ಭದಲ್ಲಿ ಪರಸ್ಪರ ವಿರುದ್ಧ ನಿಲ್ಲುವ ನಾವುಗಳು ಅದು ಮುಗಿದ ಬಳಿಕ ಮತ್ತೆ ಮನೆಯ ಸದಸ್ಯರಂತೆ ಇದ್ದವರು.
ಶೈಕ್ಷಣಿಕವಾಗಿ ಯಾವುದೇ ಚಟುವಟಿಕೆಗಳಿದ್ದರೂ ಅಲ್ಲಿ ಗೌಡರ ಉಪಸ್ಥಿತಿ ಇದ್ದೇ ಇರುತ್ತದೆ.ಉಪಾಧ್ಯಾರು ಭೀಷ್ಮರಂತೆ ಬಂದು ಎಲ್ಲವನ್ನೂ ನಿಭಾಯಿಸುತ್ತಾರೆ ಅವರಿಬ್ಬರ ಜೋಡಿ ಬಹುಕಾಲದ ತನಕ ತನ್ನ ಪ್ರಭಾವಲಯವನ್ನು ಬೀರಿದ್ದು ಸುಳ್ಳಲ್ಲ.
ಚಿದು ಅವರೇ,,, ಇದೊಂದ ವಿಚಾರ ಐತಿ ಅಂತಲೇ ಮಾತಿಗಿಳಿವ ಗೌಡರು ನನ್ನ ಕೊಂಕಣ ಸಂಸ್ಥೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದವರು.ಜಾನಕಿಪ್ರಭು ಪ್ರತಿಭಾ ಚೈತನ್ಯ ಕೇಂದ್ರದ ಚಿತ್ರಕಲಾ ವಿಭಾಗದ ಮಾರ್ಗದರ್ಶಕರಾಗಿ ಸೇವೆಸಲ್ಲಿಸಿದವರು.ಸಂಸ್ಥೆಯ ಶ್ರೇಷ್ಠ ಪ್ರಶಸ್ತಿಯಾದ ವಿನಯಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದವರು.
ಇದುವರೆಗೆ ಹಲವಾರು ಪುರಸ್ಕಾರಗಳು ಗೌಡರ ಹೆಗಲೇರಿದೆ ಮಕ್ಕಳು ಉತ್ತಮ ಉದ್ಯೋಗ ಸಂಪಾದಿಸಿದ್ದಾರೆ ಊರಲ್ಲಿ ಸಾಕಷ್ಟು ಜಮೀನು ಇದೆ ಧಾರವಾಡದ ಹೃದಯ ಭಾಗದಲ್ಲಿ ಸುಂದರ ಮನೆ ಇದೆ, ಆದರೆ ಎಂದೂ ಅಂಹಕಾರ ಗೌಡರ ಹೆಗಲೇರಲಿಲ್ಲ.
ಇಂದು ಮೇ ೩೦ ಅವರು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಬಳಿಕ ಹುಟ್ಟೂರಿಗೆ ಹೋಗಿ ನೆಲೆಸಲಿದ್ದಾರೆ.ನಲವತ್ತು ವರುಷ ಕರ್ಮಭೂಮಿ ಕುಮಟಾ ಬಿಟ್ಟುಹೋಗಲು ಚಡಪಡಿಸುತಿದ್ದಾರೆ.ಶಿಕ್ಷರ ವಲಯದಲ್ಲಿ ಬರುವ ದಿನಗಳಲ್ಲಿ ಹಿರಿಯ ಮಾರ್ಗದರ್ಶಕರ ಕೊರತೆ ಬಾಧಿಸಲಿದೆ.
ಗೌಡರ ಸಾವಿರಾರು ವಿದ್ಯಾರ್ಥಿಗಳು ಅವರ ಪ್ರೀತಿಯ ಸಹುದ್ಯೋಗಿ ಬಳಗ ಪಾಲಕ ವರ್ಗ ಎಲ್ಲರೂ ಅವರನ್ನು ಮನಸಿಲ್ಲದ ಮನಸ್ಸಿಂದ ಬೀಳ್ಕೊಡುತ್ತಿದೆ.ಹುದ್ದಾರರು ಹೇಳಿದ ಹಾಗಿ ಉಸುಕಿನ ನೆಲದಲ್ಲಿ ಕುಸುಬಿಯ ಬಿತ್ತಿದ ಗೌಡರ ವಿಶ್ರಾಂತ ಜೀವನಕ್ಕೆ ನಾನು ಅವರ ಆತ್ಮೀಯರಲ್ಲಿ ಒಬ್ಬನಾಗಿ ಶುಭಕೋರುತ್ತೇನೆ.
ಕರ್ಮಭೂಮಿ ಬಾ ಎಂದಾಗ ಅವರು ಬರುವರೆಂಬ ಭರವಸೆ ಇದೆ.
ಯಾಕೋ ಹಿಂದೆ ನಾಟಕದಲ್ಲಿ ಸಾಮಾನ್ಯವಾಗಿ ಹಾಡುವ ಹಾಡು…
ಬಿಟ್ಟು ಹೊಂಟ್ಯಲ್ಲೋ ನನ ಹಳ್ಲೀ ಹುಡುಗಾ ಒಣಗ್ಯಾವ ಹೂ ಬಳ್ಳಿ ಹಾಡು ನೆನಪಾಗ್ತಾ ಇದೆ.ಗೌಡರ ವಿಶ್ರಾಂತ ಜೀವನ ನಲಿವಿನಿಂದ ಕೂಡಿರಲಿ ಭಗವಂತ ಅವರಿಗೆ ಆಯುರಾರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುವೆ.
ಚಿದಾನಂದ ಭಂಡಾರಿ ಕಾಗಾಲ
ಶಿಕ್ಷಕ ಕೊಂಕಣ ಎಜುಕೇಶನ್ ಟ್ರಸ್ಟ ಕುಮಟಾ.