ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ದಿ|| ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ

ದೇವರಿಗೆ ಸಂಪಿಗೆ ಹೂವೇರಿಸಿದರೂ ಆದೀತು. ಸೇವಂತಿಗೆ ಸಲ್ಲಿಸಿದರೂ ಆದೀತು. ಕಡೇಪಕ್ಷ ಮೋತಿಮಲ್ಲಿಗೆ ಹೂವಾದರೂ ನಡೆಯುತ್ತದೆ. ಸಲ್ಲಿಸುವ ಹೂವು ಯಾವುದು ಎಂಬುದಕ್ಕಿಂತ ಸಲ್ಲಿಸುವವನ ಭಕ್ತಿ ಎಷ್ಟು ಎಂಬುದೇ ಪ್ರಾಧಾನ್ಯ. ನಾನೇ ಬೆಳೆಸಿದ ಹೂವಾದರಂತೂ ಅದು ಮತ್ತೂ ಶ್ರೇಷ್ಠ. ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಯಕ್ಷಗಾನದ ಮೇರು ನಟ ರಸರಾಜ ಚಿಟ್ಟಾಣಿಯವರ ಬಗ್ಗೆ ಬರೆದವರು ಎಷ್ಟೋ…..ಅವರ ಪಾತ್ರಗಳನ್ನು ನೋಡಿ ಕಣ್ತುಂಬಿ ಕೊಂಡವರೆಷ್ಟೋ…. ನಮ್ಮೂರಿನವರೇ ಆಗಿ, ನಮ್ಮ ಸಂಬಂಧಿಯಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಚಿಟ್ಟಾಣಿ ಅಜ್ಜನಾಗಿ ನನ್ನ ಮೇಲೆ ಬೀರಿದ ಪ್ರಭಾವವನ್ನು ನಾನಿಂದು ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ನಾನು ಚಿಕ್ಕಂದಿನಿರುವಾಗಿನಿಂದ ನೋಡುತ್ತಾ ಬಂದವನು. ನನ್ನ ದೊಡ್ಡಪ್ಪಂದಿರಾದ ಶ್ರೀಯುತ ನಾರಾಯಣ ಭಟ್ಟ ಹಾಗೂ ಸುಬ್ರಹ್ಮಣ್ಯ ಭಟ್ಟ ಮೇಲಿನಗಂಟಿಗೆ…ಇವರು ಯಕ್ಷಗಾನ ಹಿನ್ನಲೆಯವರೇ ಆಗಿರುವುದರಿಂದ ಅವರ ಜೊತೆಗೆ ಎಷ್ಟೋ ಸಲ ಮನೆಗೆ ಬರುವವರು. ತಾಳಮದ್ದಲೆ, ಯಕ್ಷಗಾನ ಏನೇ ಆದರೂ ಅವರು ಹೊಸಾಕುಳಿಯ ಊರಿನ ಅಭಿಮಾನದಿಂದ ತಪ್ಪಿಸದೇ ಸಾಧ್ಯವಾದಷ್ಟೂ ಬರುತ್ತಿದ್ದರು. ಹೀಗಾಗಿ ಚಿಟ್ಟಾಣಿ ಅಜ್ಜನೆಂದರೆ ನಮಗೆ ಬಲುವೇ ಪ್ರೀತಿ.
ಹೊಸಾಕುಳಿಯ ಜಾತ್ರೆಯಾದರಂತೂ ಚಿಟ್ಟಾಣಿಯವರ ಯಕ್ಷಗಾನ ನೋಡಲು ಎಷ್ಟೋ ಊರುಗಳಿಂದ ನೆಂಟರಿಷ್ಟರು ಆಗಮಿಸುತ್ತಿದ್ದರು. ಅವರಿಗಿದು Home ground ಆದುದರಿಂದ ಉತ್ಸಾಹ ತುಸು ಹೆಚ್ಚು ಆ ದಿನ. ಟೆಂಟ್ ಫುಲ್ ಹೌಸ್. ಚಪ್ಪಾಳೆ, ಸಿಳ್ಳೆಗಳ ಸುರಿಮಳೆಗಳಿಂದ ರಾಮಚಂದ್ರ ಹೆಗಡೆಯವರು ತೊಯ್ದು ಹೋಗುತ್ತಿದ್ದರು. ಊರಿನವರ ಅಭಿಮಾನ ಪ್ರೀತಿಗೆ ಅವರು ಅಭಿನಯದ ಮೂಲಕವೇ ಋಣ ತೀರಿಸುವವರು. ಹೀಗಾಗಿ ಜೀವನದ ಕೊನೆಯ ಕ್ಷಣದವರೆಗೂ ಹೊಸಾಕುಳಿಯ ರಂಗಸ್ಥಳಕ್ಕೆ ಬಂದು ನಾಲ್ಕು ಹೆಜ್ಜೆಗಳನ್ನಾದರೂ ಹಾಕಲೇ ಬೇಕೆಂಬ ಹುರುಪು ತೋರಿದರವರು. ನನ್ನನ್ನೂ, ಅಕ್ಕಳನ್ನೂ ನನ್ನಪ್ಪ ಪ್ರತಿ ಜಾತ್ರೆಗೆ ಯಕ್ಷಗಾನ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಚಿಟ್ಟಾಣಿ ಅಜ್ಜನ ಕೌರವ, ಭಸ್ಮಾಸುರ, ಕೀಚಕ, ಕಂಸ, ಅಬ್ಭಾ…..ರೋಮಾಂಚನ ಎಂಬ ಶಬ್ದವೇ ಕಡಿಮೆಯೆನಿಸುತ್ತದೆ ನನಗೆ. ಅದರಲ್ಲೂ ಒಮ್ಮೆ ಶಬರಾರ್ಜುನ ಪ್ರಸಂಗ.. ಕರ್ಕಿ ಪಿ.ವಿ.ಹಾಸ್ಯಗಾರರ ಶಬರ, ಚಿಟ್ಟಾಣಿಯವರ ಅರ್ಜುನ….ರೋಚಕ ಸನ್ನಿವೇಶ ಅದು. ಅದೊಂದೇ ಯಕ್ಷಗಾನ ಸಾಕು ಜೀವಮಾನಕ್ಕೆ ಅನ್ನಿಸುವಷ್ಟು.
ನಾನು ಓದಿದ ಸಂತೇಗುಳಿ ಶಾಲೆಯಲ್ಲಿ ಎರಡನೇ ತರಗತಿಯನ್ನಷ್ಟೇ ಓದಿ ಶಾಲೆ ಬಿಟ್ಟ ಹುಡುಗನೋರ್ವ ಕುರಿತೋದದೆಯುಂ ಕಾವ್ಯ, ಪ್ರಯೋಗ…. ಪರಿಣತ ಮತಿಗಳ್ ಆದದ್ದು ಚೋದ್ಯದ ಸಂಗತಿ. ಎಷ್ಟೆಷ್ಟೋ ಉನ್ನತ ಅಧಿಕಾರಿಗಳ, ಮಂತ್ರಿ ಮಹೋದಯರ, ಮಠಾಧಿಪತಿಗಳ, ಸಾಹಿತಿಗಳ, ಕಲಾವಿದರ, ಅಭಿಮಾನದ ದೇವರಾಗಿದ್ದ ಚಿಟ್ಟಾಣಿ ಅಜ್ಜ…..ನಮ್ಮಂತಹ ಚಿಕ್ಕ ಮಕ್ಕಳನ್ನೂ ಕಡೆಗಣಿಸಿದವರಲ್ಲ. ಏನೋ ಶಂಭಟ್ಟನ ಮಾಣಿ…. ನೀ ಏನೋ ಭಯಂಕರ ಬರಿತ್ಯಡಲ ಮಾರಾಯ ಎಂದು ನನ್ನ ಹೆಗಲಿನ ಮೇಲೆ ಕೈ ಹಾಕುತ್ತಿದ್ದರು. ಅವರ ಅಸಾಮಾನ್ಯ ಜ್ಞಾಪಕ ಶಕ್ತಿಗೆ ಎಂಥವರೂ ಬೆರಗಾಗಬೇಕು.
ಜನ ಸಾಮಾನ್ಯ ಭಾಷೆ, ಅಹಂಕಾರವಿಲ್ಲದ ನಡೆ ನುಡಿ, ಸ್ನೇಹ ಪ್ರೀತಿಗಳನ್ನೇ ಆಸ್ತಿಯಾಗಿಸಿಕೊಂಡ ಚಿಟ್ಟಾಣಿ ರಾಮಚಂದ್ರಜ್ಜ ತನ್ನ ವ್ಯಕ್ತಿತ್ವದಿಂದಲೂ ಶ್ರೇಷ್ಠರೆನಿಸಿಕೊಂಡರು. ಒಮ್ಮೆ ನಮ್ಮ ಮನೆಯಂಗಳದಲ್ಲಿ ನನ್ನ ಪುಸ್ತಕ ಬಿಡುಗಡೆ ಸಮಾರಂಭ ನಡೆಯುವುದಿತ್ತು. ನಮ್ಮ ದೊಡ್ಡಪ್ಪ “ನಮ್ಮನೆ ಸಂದೀಪನ ಪುಸ್ತಕ ಬಿಡುಗಡೆ ಅಪ್ಪದಿದ್ದು ರಾಮಚಂದ್ರ ಬರವಲ..” ಎಂದು ಔಪಚಾರಿಕ ಕರೆಯೋಲೆ ನೀಡಿದ್ದರು. ಯಕ್ಷಗಾನದಲ್ಲಿ ಯಾವಾಗಲೂ ಅವಸರದಲ್ಲೇ ಇರುವ ಅವರಿಗೆ ನಾವು ಯಾವಾಗಲೂ ಒತ್ತಾಯ ಮಾಡಿದ್ದಿಲ್ಲ. ಹೀಗಾಗಿ ಅವರನ್ನು ನಾವು ಬರಬೇಕೆಂದು ವಿನಂತಿಸಿಕೊಂಡೇವಷ್ಟೇ. ಮಧ್ಯಾಹ್ನ ಸರಿಯಾಗಿ 3 ಕ್ಕೇನೇ ಪ್ರಾರಂಭವಾಗಬೇಕಿದ್ದ ಸಭೆಗೆ ನಮ್ಮ ಚಿಟ್ಟಾಣಿ ಅಜ್ಜ 2.45 ಕ್ಕೆ ಹಾಜರ್. ಪರಮಾಶ್ಚರ್ಯವಾಗಿ ಹೋಯಿತು ನನಗೆ. ಮೇರು ನಟನೋರ್ವ ತನ್ನ ಅವಸರದ ಕ್ಷಣಗಳ ನಡುವೆಯೂ ನಮ್ಮ ಮನೆಗೆ ಬಂದು ರಾತ್ರಿ 11 ರವರೆಗೆ ನಮ್ಮ ಜೊತೆಗೇ ಇದ್ದು ಅಧ್ಯಕ್ಷರಾಗಿ ಕಾರ್ಯಕ್ರಮ ಚಂದಗಾಣಿಸಿದರು. ಆ ದಿನ ಚಿಟ್ಟಾಣಿ ಅಜ್ಜ….. ಇದ್ದ ಚಿಕ್ಕ ವೇದಿಕೆಯಲ್ಲೇ ಕುಣಿದು ಹೆಜ್ಜೆ ಹಾಕಿ ಬಿಟ್ಟರು. ಸಂಭ್ರಮ ನಮಗೆ. ಅಂಥ ಖ್ಯಾತಿಯ ಉನ್ನತ ಶಿಖರವೇರಿದ ಚಿಟ್ಟಾಣಿ ಅಜ್ಜ ನಮ್ಮ ಮನೆಯಲ್ಲೇ ಊಟ ಮಾಡಿ ಮರೆಯಲಾರದಷ್ಟು ಸುದ್ದಿ ಹೇಳಿ ಕೊನೆಗೆ ನನ್ನ ಕಾರಿನಲ್ಲಿಯೇ ಮನೆವರೆಗೆ ತೆರಳಿದರು. ಮನೆಗೆ ಹೋಗುವವರೆಗೂ ಕಾರಿನ ಮೇಲೆ ಅವರದೇ ಮಾತು. ಎಂಥ ಮನುಷ್ಯ ಪ್ರೀತಿ ಅವರಿಗೆ.
ಚಿಟ್ಟಾಣಿಯವರ ಮನೆ…. ಅವರಿಗೆ ಬಂದ ಪ್ರಶಸ್ತಿಗಳ ಸ್ಮರಣಿಕೆ, ಫಲಕ, ಪದಕ, ಶಾಲು, ಹಾರಗಳಿಂದ ತುಂಬಿ ಹೋಗಿದೆ. “ಸಂದೀಪ ಒಂದಿಷ್ಟು ವರಲೆ ಬಂದೋಯ್ದು ಒಗದಿಕಿದ್ನ” ಹೇಳಿದಾಗ ನನಗೆ ನಿಜವಾಗಿಯೂ ಕರುಳು ಚುರುಕ್…..ಎಂದಿದ್ದು. ಎಷ್ಟೋ ಜನ ಅವರ ಮೇಲೆ ಪಿ.ಎಚ್.ಡಿ ಗ್ರಂಥ ಮಂಡಿಸಿದ್ದಾರೆ. ಲೇಖನ ಬರೆದಿದ್ದಾರೆ, ಕವಿತೆ ರಚಿಸಿದ್ದಾರೆ. ಚಿಟ್ಟಾಣಿಯವರ ಕನಸಾಗಿದ್ದ ಅವರ ಅಧ್ಯಯನ ಕೇಂದ್ರ ಹಾಗೂ ಸಭಾಂಗಣ ಇನ್ನೂ ಕೈಗೂಡಿಲ್ಲ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿ ಇನ್ನೂ ಇದೆ.
ಎಷ್ಟೆಲ್ಲ ಎತ್ತರಕ್ಕೇರಿದ ರಾಮಚಂದ್ರ ಹೆಗಡೆಯವರು ಸುತ್ತಮುತ್ತಲಿನ ಸಭೆ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಬಂದು ತಾನೊಬ್ಬ ಸಾಮಾನ್ಯನೆಂಬಂತೆ ಪ್ರೀತಿಯಿಂದ ಜನರ ಜೊತೆ ಬೆರೆಯುತ್ತಿದ್ದರು. ಚಿಟ್ಟಾಣಿಯೆಂದರೇ ಯಕ್ಷಗಾನ. ಯಕ್ಷಗಾನವೆಂದರೇ ಚಿಟ್ಟಾಣಿ ಎನ್ನುವಷ್ಟು ಪ್ರಖ್ಯಾತರಾದ ಚಿಟ್ಟಾಣಿಯವರ ಬಗ್ಗೆ ನಾನೆಷ್ಟೇ ಬರೆದರೂ ಪರಿಪೂರ್ಣವಾಗಲಾರದು. ಪ್ರೇಕ್ಷಕರ ಮನರಂಜಿಸಲು ಭಗವಂತನೇ ಕಲಾವಿದನಾಗಿ ಹುಟ್ಟಿ ಬಂದನೇನೋ ಎನ್ನುವ ಹಾಗಿತ್ತು ಅವರ ಪ್ರತಿಭೆ.
ಸಣ್ಣ ಪುಟ್ಟ ನನ್ನಂತಹ ಚೊಳಕಿಗಳೇ…. ಎಷ್ಟೋ ಪೊಳದೆ ಹಾರಿಸುವಾಗ ??? ಕುರ್ಚಿಯ ಮೇಲೆ ಕುಳಿತ ಕೆಲ ಸಣ್ಣ ಪುಟ್ಟ ಅಧಿಕಾರಿಗಳೂ ವಿಪರೀತ ದರ್ಪ ತೋರುವಾಗ, ನನಗೆ ಇವತ್ತಿಗೂ ಥಟ್ಟನೆ ಚಿಟ್ಟಾಣಿಯವರೇ ನೆನಪಾಗುತ್ತಾರೆ. ಎಂಥ ಸೌಜನ್ಯ ಅದು. ಅಭಿಮಾನಿಗಳು ಆ ಬಂಗಾರದ ಮನುಷ್ಯನಿಗೆ ಬಂಗಾರದ ಕಡಗವನ್ನೇ ಕೊಟ್ಟು ಸನ್ಮಾನಿಸಿದ್ದರು.
ನಾನು ಅತಿಹೆಚ್ಚು ಇವತ್ತಿಗೂ ನೆನಪು ಮಾಡಿಕೊಳ್ಳುವುದು ಅವರ ರಂಗಸ್ಥಳದ ಪ್ರವೇಶವನ್ನು. ನಿಧಾನವಾಗಿ ಪರದೆ ಸರಿಸಿ ಒಂದು ಕಿರುನಗೆ ಬೀರಿ ಅವರ ಮಿಂಚಿನ ಪ್ರವೇಶ ಆಗುತ್ತಿತ್ತು. ವರ್ತಮಾನದ ಕಲಾವಿದರೂ ಚಿಟ್ಟಾಣಿಯವರ ನೆನಪಿಗಾದರೂ ಅದನ್ನು ಅನುಸರಿಸಬೇಕು. ಬೇಗ ಓಡಿಬಂದು ಬೇಗ ಓಡಿ ಹೋಗುವುದಲ್ಲ. ??? ನಿಧಾನವೇ ಪ್ರಧಾನ. ಚಿಟ್ಟಾಣಿಯವರ ಹೆಜ್ಜೆ ಭಾರದ ಹೆಜ್ಜೆ. ತೂಕದ ಹೆಜ್ಜೆ.
ಒಂದು ಪದ್ಯದ ಭಾವಾರ್ಥವನ್ನು ಸೂಕ್ಷ್ಮವಾಗಿ ಗಮನಿಸಿ ಯಾವೆಲ್ಲ ರೀತಿ ಅದನ್ನು ಅಭಿನಯಿಸಬಹುದೋ ಆ ಎಲ್ಲಾ ಸಾಧ್ಯತೆಗಳನ್ನು ಅವರು ಪ್ರೇಕ್ಷಕರ ಎದುರು ತೆರೆದಿಟ್ಟರು. ಜನ ನೋಡಿ ಲೆಕ್ಕ ಹಾಕಿ ಕುಣಿದವರಲ್ಲ. ಕೊನೆಗೆ ಟೆಂಟಿನ ಕಂಬ ಹುಗಿದವನಿಗಾದರೂ ಚಿಟ್ಟಾಣಿ ಕುಣಿದೇ ಕುಣಿಯುತ್ತಾನೆ ಎನ್ನುತ್ತಿದ್ದರು. ಎಂಥ ಸರಳತೆ ನೋಡಿ.
‌‌ನಾಡು ಎಂದೂ ಮರೆಯದ ಯಕ್ಷಗಾನ ಮೇರುನಟ ನಮ್ಮೂರಿನವರೆಂಬುದೇ ನಮ್ಮ ಹೆಮ್ಮೆ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗೆಗೆ ಎಷ್ಟು ಬರೆದರೂ ಕಡಿಮೆ. ನನ್ನಂತಹ ಸಾವಿರ ಜನರನ್ನು ತಕ್ಕಡಿಯ ಒಂದು ಬದಿಗಿಟ್ಟು ಚಿಟ್ಟಾಣಿಯವರನ್ನು ಇನ್ನೊಂದು ಬದಿಗೆ ಕುಳ್ಳಿರಿಸಿದರೆ ಅವರೇ ಭಾರವಾಗಿ ಬಿಡುತ್ತಾರೆ. ಸಾವಿರಾರು ಸಾರ್ವಜನಿಕ ಸನ್ಮಾನಗಳು ಅವರನ್ನು ಅರ್ಹವಾಗಿಯೇ ಅರಸಿಕೊಂಡು ಬಂದಿವೆ. ಕ್ರಿಕೆಟ್‌ ಗೆ ಸಚಿನ್ ದೇವರಾದ ಹಾಗೆ ರಾಮಚಂದ್ರ ಹೆಗಡೆಯವರು ಯಕ್ಷಗಾನಕ್ಕೆ ದೇವರು. ಅವರು ನಿತ್ಯ ಪ್ರಭೆ. ಅವಿಸ್ಮರಣೀಯ ಪ್ರತಿಭೆ. ಇಂದು ಅವರ ಮಕ್ಕಳಾದ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಶ್ರೀ ನರಸಿಂಹ ಚಿಟ್ಟಾಣಿ, ಮೊಮ್ಮಗ ಕಾರ್ತಿಕ ಚಿಟ್ಟಾಣಿಯವರು ಅವರ ಯಕ್ಷಪರಂಪರೆಯನ್ನು ಮುಂದುವರಿಸಿ ಅಭಿಮಾನಿಗಳ ಪಾಲಿಗೆ ಖುಷಿ ನೀಡುತ್ತಿದ್ದಾರೆ. ನಾನು ಪದೇ ಪದೇ ಚಿಟ್ಟಾಣಿಯವರನ್ನು ನೆನಪು ಮಾಡಿಕೊಳ್ಳುತ್ತೇನೆ ಎಂದರೆ ವಾಕ್ಯ ಸರಿಯಾಗುವುದಿಲ್ಲ. ಯಾಕೆಂದರೆ ನಾನವರನ್ನು ಮರೆತೇ ಇಲ್ಲ.??? ನಾನಲ್ಲ ಅವರ ಲಕ್ಷಾಂತರ ಯಕ್ಷಾಭಿಮಾನಿಗಳೂ ಕೂಡ.
ಸದ್ಗುರು ಶ್ರೀಧರರ ಆಶೀರ್ವಾದ ರಾಮಚಂದ್ರ ಹೆಗಡೆಯವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಸೃಷ್ಟಿಯು ಹೇಗೆ ಆಯಿತು?

ದಿ|| ರಾಮಚಂದ್ರ ಹೆಗಡೆಯವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

??????⚫⚪???????⚫⚪?????

RELATED ARTICLES  ಕೊಡುತ ಕೊಳುವ ಸಂತಸವ