ಕುರುಕ್ಷೇತ್ರದಲ್ಲಿ ಉಭಯ ಸೇನೆಗಳ ನಡುವೆ ಯುದ್ದ ನಡೆಯುತ್ತಿದ್ದ ಸಂದರ್ಭ. ಧರ್ಮ ಅಧರ್ಮಗಳ ನಡುವಿನ ಈ ಸಮರದ ಮಧ್ಯೆ ಶ್ರೀಕೃಷ್ಣ ಅರ್ಜುನನಿಗೆ ಕೆಲವು ಯೋಗಗಳ ಕುರಿತು ಬೋಧಿಸುತ್ತಾನೆ. ಆಗ ಅರ್ಜುನ ಕೃಷ್ಣನಿಗೆ ” ಯೋಗಗಳು ಸ್ಥಿರ ಆದರೆ ನನ್ನ ಮನಸ್ಸು ಸ್ಥಿರವಲ್ಲ ಹಾಗಾಗಿ ನೀನು ಹೇಳಿದ ಯೋಗಗಳು ನನ್ನ ಮನಸ್ಸಿಗೆ ಸೇರುತ್ತಿಲ್ಲ” ಅಂದನಂತೆ. ಮನಸ್ಸೇ ಹಾಗೆ ಅದು ಚಂಚಲ. ಮನಸ್ಸು ಸ್ಥಿರವಾಗಿದ್ದರೆ ಅದನ್ನೇ ಯೋಗವೆನ್ನಬಹುದು.
ಒಂದು ನಾಯಿಯನ್ನು ಬಿಟ್ಟಿ ಟ್ಟರೆ ಅದು ಸುಮ್ಮನೆ ಇರುತ್ತದೆ. ಅದನ್ನೇ ಸದಾ ಕಟ್ಟಿ ಹಾಕಿ ಬಿಟ್ಟರೆ ಅದು ಹುಲಿಯಂತಾಗುತ್ತದೆ. ಹುಚ್ಚಾಪಟ್ಟೆ ಅದು ವಿಚಿತ್ರವಾಗಿ ವರ್ತಿಸುತ್ತದೆ. ಹಾಗೆಯೇ ಮನಸ್ಸು…. ಅದನ್ನು ನಿಯಂತ್ರಿಸ ಹೊರಟ ಹಾಗೆ ಅದು ವಿಚಿತ್ರ ವಿಚಿತ್ರವಾಗಿ ವರ್ತಿಸುತ್ತದೆ. ಮನಸ್ಸನ್ನು ಹಿಡಿದಿಡುವುದು ಎಂದರೆ ಗಾಳಿಯನ್ನು ಹಿಡಿದಿಟ್ಟಂತೆ. ಮನಸ್ಸಿನ ನಿಯಂತ್ರಣ ಸಾಧ್ಯವಿಲ್ಲ ಎಂಬ ನಿರಾಸೆ ಬೇಡ. ಅದು ಖಂಡಿತಾ ಸಾಧ್ಯವಿದೆ. ಅದು ವೈರಾಗ್ಯ ದಿಂದ ಅಥವಾ ಅಭ್ಯಾಸ ದಿಂದ.
ಹಾಗಾದರೆ ವೈರಾಗ್ಯವೆಂದರೇನು? ಎಲ್ಲವನ್ನೂ ತ್ಯಜಿಸುವುದೇ ? ಖಂಡಿತ ಅಲ್ಲ. ನಮ್ಮ ಮನಸ್ಸು ಇಷ್ಟವಾದಲ್ಲಿ ಓಡುತ್ತದೆ ಅದು ಆಕರ್ಷಣೆ, ಸೆಳೆತವಿದ್ದಲ್ಲಿ ಧಾವಿಸುತ್ತದೆ . ಅವೆಲ್ಲ ಬೇಡ ಅನ್ನಿಸುವುದು ವೈರಾಗ್ಯ. ಆ ವೈರಾಗ್ಯದಿಂದ ಮನಸ್ಸು ಸ್ಥಿರವಾಗುತ್ತದೆ. ಹಾಗಾಗಿ ಅಯೋಗ್ಯದಿಂದ ಯೋಗ್ಯ ದೆಡೆಗೆ ನಿಮ್ಮ ಮನಸ್ಸನ್ನು ತಿರುಗಿಸಿ. ಅದೇ ವೈರಾಗ್ಯ. ಪ್ರಪಂಚ ಸಪ್ಪೆ ಎನ್ನುವ ಭಾವ ಬೇಡ ಆದರೆ ಪ್ರಪಂಚಕ್ಕಿಂತ ಭಗವಂತ ಸಿಹಿ ಎಂಬ ಭಾವವಿರಲಿ. ಭೋಗ ಸಪ್ಪೆ ಎಂಬ ಭಾವ ಬೇಡ ಆದರೆ ಭೋಗಕ್ಕಿಂತ ತ್ಯಾಗ ಸಿಹಿ ಎಂಬ ಭಾವವಿರಲಿ. ಬಹಿರಂಗ ಸಪ್ಪೆ ಎಂಬ ಭಾವ ಬೇಡ ಆದರೆ ಬಹಿರಂಗಕ್ಕಿಂತ ಅಂತರಂಗ ಸಿಹಿ ಎಂಬ ಭಾವವಿರಲಿ. ಈ ಅಂಟು ಬಿಟ್ಟು ಆ ಅಂಟು ಹಿಡಿದುಕೊಳ್ಳಬೇಕು. ಇದು ಸಾಧ್ಯವಾದರೆ ಮನಸ್ಸು ಸ್ಥಿರವಾಗುತ್ತದೆ.
ಇದು ಕಷ್ಟಸಾಧ್ಯ ಎನ್ನುವವರಿಗೆ ಮನಸ್ಸನ್ನು ಸ್ಥಿರಗೊಳಿಸಲು ಇನ್ನೊಂದು ಉಪಾಯವಿದೆ. ಅದೇ ಅಭ್ಯಾಸ ಮನಸ್ಸಿಗೆ ಮೆಲ್ಲ ಮೆಲ್ಲಗೆ ಅಭ್ಯಾಸ ಮಾಡಿಸುವುದರಿಂದ ಚಂಚಲತೆ ಹೋಗಲಾಡಿಸಿ ಸ್ಥಿರತೆ ತರಲು ಸಾಧ್ಯ. ಮನಸ್ಸನ್ನು ಮರ್ಕಟ ಅಂತಾರೆ. ಆದರೆ ಆ ಮರ್ಕಟವನ್ನು ಪಳಗಿಸಿ ಸರ್ಕಸ್ ನಲ್ಲಿ ಆಟವಾಡಿಸುವುದನ್ನು ನೋಡಿದ್ದೇವೆ. ಅದು ಸಾಧ್ಯವಾದದ್ದು ಅಭ್ಯಾಸದಿಂದ. ಮರ್ಕಟವನ್ನು ಅಭ್ಯಾಸದಿಂದ ನಿಯಂತ್ರಿಸಲು ಸಾಧ್ಯ ಅಂತಾದರೆ ಮನಸ್ಸನ್ನು ಕೂಡ ನಿಯಂತ್ರಿಸಲು ಸಾಧ್ಯ . ನಾವು ಜನ್ಮ ತಾಳಿದ ನಂತರ ಮಾತನಾಡಲು, ಕುಳಿತುಕೊಳ್ಳಲು ,ನಡೆಯಲು ಮಲಗಲು, ಊಟ ಮಾಡಲು ಹೀಗೆ ಪ್ರತಿಯೊಂದನ್ನು ಕಲಿತಿದ್ದು ಅಭ್ಯಾಸದಿಂದ. ನಮ್ಮ ಇಡೀ ಬದುಕೇ ಅಭ್ಯಾಸ. ಯಾವುದನ್ನು ಮತ್ತೆ ಮತ್ತೆ ಮಾಡುತ್ತೇವೋ ಅದು ಸಾಧನೆಯಾಗಿ ಪರಿವರ್ತನೆಯಾಗುತ್ತದೆ.
ಒಬ್ಬ ವಿದೇಶಿ ಭಾರತಕ್ಕೆ ಬಂದ ಇಲ್ಲಿ ಮುನ್ನೂರು ಹೋಳಿಗೆ ತಿನ್ನುವವನನ್ನು ಕಂಡನಂತೆ. ಅವನಿಗೆ ಒಂದು ಆಲೋಚನೆ ಹೊಳೆಯಿತು. ಇವನನ್ನು ನಮ್ಮಲ್ಲಿಗೆ ಕರೆದೊಯ್ದು ಸರ್ಕಸ್ ಕಂಪನಿಯಲ್ಲಿ ಬಳಸಿಕೊಂಡರೆ ಉತ್ತಮ ಎಂದು. ವಿದೇಶಕ್ಕೆ ಕರೆದುಕೊಂಡು ಹೋದ ಮೊದಲ ದಿನದ ಸರ್ಕಸ್ ಪ್ರದರ್ಶನ…. ಹೋಳಿಗೆ ತಿನ್ನುವ ಪ್ರದರ್ಶನ ಆರಂಭವಾಯಿತು. ಐವತ್ತು ,ನೂರು, ನೂರೈವತ್ತು, ಇನ್ನೂರರವರೆಗೆ ಆತ ಹೋಳಿಗೆ ತಿಂದ . ನಂತರ ಸಾಧ್ಯವಾಗಲಿಲ್ಲ. ಪ್ರದರ್ಶನ ವಿಫಲವಾಯಿತು. ಮಾಲೀಕ ಕೇಳಿದ ಮುನ್ನೂರು ತಿನ್ನುತ್ತಿದ್ದವನು ಎರಡುನೂರಕ್ಕೆ ನಿಲ್ಲಿಸಿದೆಯಲ್ಲ ಏನಾಯ್ತು…? ಎಂದು. ಆತ ಹೇಳಿದನಂತೆ… ಹೌದು ನನಗೂ ಅರ್ಥವಾಗುತ್ತಿಲ್ಲ. ವೇದಿಕೆಗೆ ಬರುವಾಗ ಒಮ್ಮೆ ಪ್ರಯತ್ನಿಸಿಯೇ ಬಂದಿದ್ದೆ. ಆಗ ಮುನ್ನೂರು ತಿನ್ನಲು ಸಾಧ್ಯವಾಗಿತ್ತು….! ಎಂದನಂತೆ. ಮಾಲೀಕ ಸುಸ್ತು . ಅಂದರೆ ಆತ ಆ ದಿನ ಒಟ್ಟು ಐನೂರು ಹೋಳಿಗೆ ತಿಂದಿದ್ದ. ಇದು ಸಾಧ್ಯವಾದದ್ದು ಅಭ್ಯಾಸದಿಂದ. ನಿತ್ಯ ನಿರಂತರ ಅಭ್ಯಾಸ ಅಸಾಧ್ಯವಾದುದನ್ನು ಸಾಧಿಸಲು ಸಹಾಯ ಮಾಡುತ್ತದೆ.
ಒಬ್ಬ ಸಾಹುಕಾರನಲ್ಲಿ ಎಪ್ಪತ್ತು ಒಂಟೆಗಳಿದ್ದವು. ರಾತ್ರಿ ಅವುಗಳನ್ನು ಕಟ್ಟಿ ಹಾಕುವಾಗ ಒಂದು ಹಗ್ಗ ಕಾಣಲಿಲ್ಲ . ಆತನಿಗೆ ಚಿಂತೆ ಏನು ಮಾಡುವುದು..? ಎಂದು. ಕೆಲಸದವನು ಹೇಳಿದನಂತೆ ಏನೂ ತೊಂದರೆಯಿಲ್ಲ ಕಟ್ಟಿದಂತೆ ನಟಿಸಿದರಾಯಿತು ಎಂದು. ಹಾಗೇ ಮಾಡಿದರಂತೆ ನಂತರ ಬೆಳಿಗ್ಗೆ ಅರವತ್ತೊಂಬತ್ತು ಒಂಟೆಗಳ ಹಗ್ಗ ಬಿಚ್ಚಿದಾಗ ಅವೆಲ್ಲಾ ಹೊರಹೋದವು. ಹಗ್ಗ ಕಟ್ಟದ ಒಂಟೆ ಅಲ್ಲೇ ಉಳಿಯಿತು. ಮಾಲೀಕನಿಗೆ ಆಶ್ಚರ್ಯ…! ಇದೇನಿದು..? ಎಂದು. ಕೆಲಸದವನು ಹೋಗಿ ಹಗ್ಗ ಬಿಚ್ಚಿದಂತೆ ನಟಿಸಿದನಂತೆ. ಒಂಟೆ ಹೊರಟುಹೋಯ್ತು. ಇದು ಅಭ್ಯಾಸ ಬಲ.
ಮನಸ್ಸನ್ನು ಕೂಡ ಹೀಗೆ ಮಾಡಬಹುದು. ನಿತ್ಯ ನಿರಂತರವಾಗಿ ಅಭ್ಯಾಸ ಮಾಡಿಸುತ್ತಾ ಹೋದರೆ ಅದನ್ನು ಸ್ಥಿರಗೊಳಿಸುವುದು ಖಂಡಿತಾ ಸಾಧ್ಯ . ವೈರಾಗ್ಯದಿಂದ ಆಗದಿದ್ದರೆ ಅಭ್ಯಾಸದಿಂದ ಮನಸ್ಸು ನಿಯಂತ್ರಿಸಿ ಆದರೆ ಅಭ್ಯಾಸದ ಬಗ್ಗೆ ವೈರಾಗ್ಯ ಬೇಡ ಅಭಿರುಚಿ ಇರಲಿ. ಈ ಸಂಸಾರದ ಗೊಂದಲ ಹಾಗೂ ದುಃಖ ಕೂಪದಲ್ಲಿ ನಮ್ಮನ್ನು ಹಾಕುವಾಗ ಭಗವಂತ ಅಭ್ಯಾಸ ಎಂಬ ಏಣಿಯನ್ನು ನಮಗೆ ಕೊಟ್ಟಿದ್ದಾನೆ. ಹಾಗಾಗಿ ವೈರಾಗ್ಯವೆಂಬ ವಿಮಾನ ಸಿಗದಿದ್ದರೂ ನಿಮಗೆ ಅಭ್ಯಾಸ ವೆಂಬ ಸೋಪಾನ ಸಿಕ್ಕೇ ಸಿಗುತ್ತದೆ. ಅದನ್ನು ಬಳಸಿ ಒಳ್ಳೆಯದನ್ನು ಅಭ್ಯಾಸ ಮಾಡಿ. ಕೆಟ್ಟ ಅಭ್ಯಾಸ ವಿದ್ದರೆ ಬಿಟ್ಟು ಬಿಡಿ. ಇದು ಕೇವಲ ಮಾತನಾಡುವ ವಿಷಯವಲ್ಲ ಮಾಡುವ ವಿಷಯ. ಹಾಗಾಗಿ ಇಂದಿನಿಂದಲೇ ಒಳ್ಳೆಯ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಜೀವನದಲ್ಲಿ ಅನುಷ್ಠಾನಕ್ಕೆ ತನ್ನಿ. ಸಂಪೂರ್ಣ ಲಾಭ ಪಡೆದುಕೊಳ್ಳಿ.
✍️ ಡಾ.ರವೀಂದ್ರ ಭಟ್ಟ ಸೂರಿ