ಯಾವುದೇ ಒಂದು ವಸ್ತುವಿನ ಕುರಿತು ಹೆಚ್ಚು ಲಕ್ಷ್ಯ ಹೋಗುವುದು ಅದು ಇಲ್ಲದಿದ್ದಾಗ. ಯಾವುದೇ ಒಂದು ವಸ್ತುವಿನ ಬೆಲೆ ಗೊತ್ತಾಗುವುದು ಅದು ಅಭಾವವಾದಾಗ. ಬದುಕಿನಲ್ಲಿ ಹಲವು ಬಾರಿ ಯಾವುದು ಅತಿ ಮುಖ್ಯವೋ ಅದು ಗೌಣವಾಗುತ್ತದೆ. ಯಾವುದು ಗೌಣವಾಗಬೇಕಿತ್ತೋ ಅದು ಪ್ರಾಮುಖ್ಯತೆ ಪಡೆಯುತ್ತದೆ. ನಾವು ಕೆಲವು ಬಾರಿ ಯಾವುದಕ್ಕೆ ಅತಿ ಹೆಚ್ಚು ಗಮನ ನೀಡಬೇಕಾಗಿತ್ತೋ ಅದನ್ನು ಮರೆತುಬಿಡುತ್ತೇವೆ. ಅಂತಹ ಒಂದು ವಸ್ತುವೇ ಆಹಾರ. ನಾವು ಇದರ ಕುರಿತು ಗಮನ ಹರಿಸುವುದು ನಮ್ಮ ಆರೋಗ್ಯ ಹದಗೆಟ್ಟಾಗ ಮಾತ್ರ.

ಛಾಂದೋಗ್ಯ ಹೇಳುತ್ತದೆ ನಮ್ಮ ಅಂತರಂಗ ಬಹಿರಂಗವನ್ನು ರೂಪಿಸುತ್ತಿರುವುದು ಆಹಾರ ಎಂದು. ನಾವೇನಾಗಬೇಕೋ ಅದು ನಮ್ಮ ಕೈಯಲ್ಲೇ ಇದೆ. ಹೇಗೆಂದರೆ ಆಹಾರದ ಆಯ್ಕೆಯಿಂದ. ನಮ್ಮ ಆಹಾರ ಹೇಗಿರುತ್ತದೋ ಹಾಗೆ ನಮ್ಮ ಮನಸ್ಸಿರುತ್ತದೆ. ನಮ್ಮ ಉತ್ಥಾನ ಹಾಗೂ ಪತನ ಎರಡು ಆಹಾರದಲ್ಲೇ ಇದೆ. ತ್ರೈತೀಯದಲ್ಲಿ ಅನ್ನ ಪದಕ್ಕೆ ತಿನ್ನುತ್ತದೆ, ತಿನ್ನಲ್ಪಡುತ್ತದೆ ಎಂಬ ಎರಡು ಅರ್ಥವಿದೆ. ಆಹಾರವನ್ನು ಸರಿಯಾಗಿ ಬಳಕೆ ಮಾಡಿದರೆ ನಾವು ತಿನ್ನುತ್ತೇವೆ ಇಲ್ಲದಿದ್ದಲ್ಲಿ ಆಹಾರವೇ ನಮ್ಮನ್ನು ತಿನ್ನುತ್ತದೆ ಅದಕ್ಕೆ ಹಿಂದಿಯಲ್ಲಿ ಒಂದು ಮಾತಿದೆ. ದಾನೇ ದಾನೇ ಮೇ ಲಿಖಾ ಹೈ ಖಾನೆ ವಾಲಾ ಕಾ ನಾಮ್ ಅಂದರೆ ಪ್ರತಿಯೊಂದು ಧಾನ್ಯದಲ್ಲಿ ಅಥವಾ ಅಗಳಿನಲ್ಲಿ ತಿನ್ನುವವರ ಹೆಸರು ಬರೆದಿರುತ್ತದೆ ಎಂದು. ಹಾಗಾಗಿ ಆಹಾರದ ಆಯ್ಕೆ ಹಾಗೂ ಆಹಾರ ಸೇವನೆಯ ಕ್ರಮ ಸಮರ್ಪಕವಾಗಿರಲಿ.

ಅನ್ನ ಉಳಿದರೆ ದಂಡ ವಾಗಬಾರದು ಎಂದು ತಿನ್ನುತ್ತೇವೆ. ಇದರಿಂದ ನಮ್ಮ ಆಯಸ್ಸು ದಂಡವಾಗುತ್ತದೆ ಎಂಬ ಅರಿವು ನಮಗಿರುವುದಿಲ್ಲ. ಹೊಟ್ಟೆ ಕೇಳಲಿ ಬಿಡಲಿ ನಾವು ತುಂಬುತ್ತಲೇ ಇರುತ್ತೇವೆ. ಎಲ್ಲ ಹಸಿವಿಗಿಂತ ನಮಗೆ ಹೊಟ್ಟೆಯ ಹಸಿವು ಹೆಚ್ಚು . ಅದಕ್ಕೆ ಕಗ್ಗದಲ್ಲಿ ಹೇಳಿದ್ದು ಉದರ ದೈವಕೆ ಜಗದೊಳು ಎದುರು ದೈವವದುಂಟೇ ಎಂದು ನಾವು ಹೊಟ್ಟೆ ಕೇಳಿದಷ್ಟು ಕೊಡಬಾರದು. ಕೊಟ್ಟರೆ ಅದಕ್ಕೆ ಮದ ಬರುತ್ತದೆ. ಅದು ಹದವಾಗಿರಬೇಕೆಂದರೆ ಆಹಾರದಲ್ಲಿ ಇತಿಮಿತಿ ಇರಲಿ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ೩)

ಮಾನವ ಶರೀರದಲ್ಲಿ ತಲೆಗೆ ಉತ್ತಮ ಅಂಗ ಎಂದು ಕರೆಯುತ್ತಾರೆ. ಅದನ್ನು ಮೇಲಿಟ್ಟ ಭಗವಂತ. ಮತ್ತೆಲ್ಲವನ್ನೂ ಕೆಳಗಿಟ್ಟ. ಇದರ ಅರ್ಥ ಜ್ಞಾನ ಮುಖ್ಯ ಎಂದು. ಆದರೆ ನಮಗೆ ಇಂದು ಹೊಟ್ಟೆ ಮುಖ್ಯವಾಗಿದೆ. ಉದಾಹರಣೆಗೆ ನಾವು ವಿದ್ಯಾಭ್ಯಾಸ ಮಾಡುತ್ತೇವೆ. ಅದು ನೌಕರಿಗಾಗಿ. ನೌಕರಿ ಏಕೆ ಎಂದರೆ ಹೊಟ್ಟೆಪಾಡಿಗಾಗಿ. ಹೀಗೆ ಪ್ರತಿಯೊಂದಕ್ಕೂ ಇಂದು ಹೊಟ್ಟೆಯೇ ಮುಖ್ಯವಾಗುತ್ತಿದೆ. ಹೊಟ್ಟೆ ನಿನ್ನಿಂದ ನಾ ಕೆಟ್ಟೆ ಎಂದಾಗಬಾರದು. ಹೊಟ್ಟೆಪಾಡಿಗಾಗಿ ಬದುಕದೆ ನಾವು ಅರಿವಿಗಾಗಿ ಜ್ಞಾನಕ್ಕಾಗಿ ಬದುಕಬೇಕು. ಕಗ್ಗ ಕವಿ ಹೇಳಿದಂತೆ ಹೊಟ್ಟೆ ಹೇಗೆ ಎಂದರೆ ಮದಿಸುವುದು ಆಧರಿಸೆ ,ಮಥಿಸುವುದು ನಿರಾಕರಿಸೆ, ಹದಗೊಳಿಸುವುದೆಂತೋ.? ಅಂದರೆ ಅದು ಕೇಳಿದಷ್ಟು ಕೊಟ್ಟರೆ ಅದಕ್ಕೆ ಮದ ನಿರಾಕರಿಸಿದರೆ ಅದು ಕುದಿಯುತ್ತದೆ ಇದನ್ನು ಹದದಲ್ಲಿ ಇಡುವುದು ಹೇಗೆ ಎಂಬ ಪ್ರಶ್ನೆ. ಆಹಾರವನ್ನು ಜಯಿಸುವವನು ಅಥವಾ ಹದದಲ್ಲಿ ಇರಿಸುವವನು ಜೀವನ ಗೆದ್ದವನು. ಬ್ರಹ್ಮಾಂಡವೇ ಅವನ ಮುಷ್ಟಿಯಲ್ಲಿ ಇದ್ದಂತೆ. ಅದಕ್ಕೆ ಆಹಾರ ನಿಯಮವನ್ನು ತಪಸ್ಸು ಎಂದಿದ್ದು.

ಆಯುರ್ವೇದಾಚಾರ್ಯರೊಬ್ಬರು ಮರದ ಕೆಳಗೆ ಕುಳಿತಿದ್ದರು. ಮೇಲೆ ಪಕ್ಷಿಯೊಂದು ಹಾರಿ ಹೋಗ್ತಾ ಇತ್ತು. ಅದು ಕೋ ರುಕ್… ಕೊ ರುಕ್ ಎಂದು ಕೂಗ್ತಾ ಇತ್ತು. ಇವರು ದಿಗ್ಗನೆ ಎದ್ದರು. ಅವರಿಗೆ ಆಶ್ಚರ್ಯ. ಸಂಸ್ಕೃತದಲ್ಲಿ ಬಿಡಿಸಿದರೆ ಕಹಃ ಅರುಕ್ ಅಂದರೆ ರೋಗವಿಲ್ಲದವನಾರು? ಯಾರು ನಿರೋಗಿ? ಎಂಬ ಪ್ರಶ್ನೆ. ಇದಕ್ಕೆ ಉತ್ತರವಾಗಿ ಅವರು ಕೂಗಿ ಹೇಳಿದರಂತೆ ಹಿತ ಬುಕ್ ಮಿತ ಬುಕ್ ಎಂದು. ಅಂದರೆ ಹಿತವಾದ ಆಹಾರ ಸೇವಿಸುವವರು, ಮಿತವಾಗಿ ಎಷ್ಟು ಬೇಕೋ ಅಷ್ಟು ಸೇವಿಸುವವರು ಎಂದು. ಅಂದರೆ ನಮ್ಮ ಆಹಾರ ಶುದ್ಧವಾಗಿದ್ದರೆ ಚಿತ್ತ ಶುದ್ಧವಾಗಿರುತ್ತದೆ. ಚಿತ್ತ ಶುದ್ಧವಾಗಿದ್ದರೆ ನಾನಾರು ಎಂಬುದು ನೆನಪಾಗುತ್ತದೆ. ಅಂದರೆ ಆತ್ಮಜ್ಞಾನ ಉಂಟಾಗುತ್ತದೆ. ಆಹಾರದಿಂದ ಬದುಕಿನ ಪರಿಪೂರ್ಣತೆ ಇದೆ. ಅದರಿಂದಲೇ ಮೋಕ್ಷವಿದೆ. ನಮ್ಮ ಶರೀರವೆಂದರೆ ಅದು ಸಪ್ತಧಾತುಗಳ ಸಂಗಮ. ಇದರಲ್ಲಿ ಎಲ್ಲವೂ ಹದದಲ್ಲಿ ದ್ದಾಗ, ಸಮದಲ್ಲಿದ್ದಾಗ ಸ್ಥಿತಿ ಎನ್ನುತ್ತೇವೆ. ಅದಕ್ಕೆ ಮೂಲ ನಮ್ಮ ಆಹಾರ.

RELATED ARTICLES  ಪ್ರೀತಿ ಕುರುಡಾದರೆ ದ್ವೇಷ ಕಿವುಡಲ್ಲವೇ?

ಹಿಂದೆ ಪ್ರತಿಯೊಂದಕ್ಕೂ ಒಂದು ವ್ಯವಸ್ಥೆ ಇತ್ತು. ಯಾವ ಋತುವಿನಲ್ಲಿ ಯಾವ ಆಹಾರ ಸೇವಿಸಬೇಕು. ಯಾವ ಪ್ರದೇಶಕ್ಕೆ ಯಾವ ಆಹಾರ ಸೇವಿಸಬೇಕು. ಯಾವ ದೇಹ ಪ್ರಕೃತಿಯವರು ಯಾವ ಆಹಾರ ಸೇವಿಸಬೇಕು ಎಂದು. ಆದರೆ ಈಗ ಅದನ್ನೆಲ್ಲ ಪಾಲಿಸಲಾಗುತ್ತಿಲ್ಲ. ಆಹಾರದಲ್ಲೂ ಸ್ವೇಚ್ಛಾಚಾರ ಬಂದಿದೆ. ಅಂದಿನ ನಿಯಮವನ್ನು ಪಾಲಿಸಿದರೆ ನಮಗೆ ಇಹದಲ್ಲಿ ಮೋಕ್ಷ. ಇಲ್ಲದಿದ್ದರೆ ದೇಹ ರೋಗದ ಗೂಡು. ಇದನ್ನು ಮರೆಯದಿರೋಣ. ಆಹಾರ ಇದರ ಮೂಲ ಅರ್ಥ ಹೊರಗಿರುವುದನ್ನು ಯಾವ ಯಾವುದನ್ನು ಒಳಗೆಳೆದು ಕೊಳ್ಳುತ್ತೇವೆಯೋ ಅದೆಲ್ಲಾ ಆಹಾರ ಎಂದು ಬಾಯಿ ಅನ್ನವನ್ನು…ಮೂಗು ಸುಗಂಧವನ್ನು…. ಕಿವಿ ಶಬ್ದವನ್ನು….. ಕಣ್ಣು ದೃಶ್ಯವನ್ನು… ನಮ್ಮ ದೇಹದೊಳಕ್ಕೆ ತೆಗೆದುಕೊಳ್ಳುತ್ತದೆ. ಇವೆಲ್ಲ ಆಹಾರವೇ. ಇವೆಲ್ಲ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಹಾಗಾಗಿ ಒಳ ತೆಗೆದುಕೊಳ್ಳುವುದರಲ್ಲಿ ಶುದ್ಧತೆ ಇರಲಿ, ಬದ್ಧತೆ ಇರಲಿ.

✍️ ಡಾ.ರವೀಂದ್ರ ಭಟ್ಟ ಸೂರಿ