ಸೃಷ್ಟಿಯಲ್ಲಿ ಒಂದು ನಿಯಮವಿದೆ. ಎರಡು ವಸ್ತುಗಳ ನಡುವೆ ಸಂಪರ್ಕ ಏರ್ಪಟ್ಟಾಗ ಶಕ್ತಿ ಹೆಚ್ಚಿರುವಲ್ಲಿಂದ ಕಡಿಮೆ ಶಕ್ತಿ ಇರುವೆಡೆಗೆ ಪ್ರವಾಹ ಉಂಟಾಗುತ್ತದೆ. ಹರಿವು ಉಂಟಾಗುತ್ತದೆ. ಇದು ನಿಜವೇ ಆಗಿದ್ದರೆ ನಾವು ದೇವರೊಟ್ಟಿಗೆ ಸಂಪರ್ಕಕ್ಕೆ ಬಂದಾಗ ಅಲ್ಲಿಂದ ಶಕ್ತಿ ನಮ್ಮ ಕಡೆಗೆ ಹರಿಯಬೇಕು. ಯಾಕೆಂದರೆ ದೇವರು ಸರ್ವಜ್ಞ ನಾವು ಅಜ್ಞ, ಅವನು ಆನಂದಮಯ ನಾವು ದುಃಖಿಗಳು. ಅವನು ವಿಶ್ವವ್ಯಾಪಿ ನಾವು ಸೀಮಿತ. ಹಾಗಾಗಿ ದೇವರೊಟ್ಟಿಗೆ ಜೀವ ಸಂಪರ್ಕ ಮಾಡಿದಾಗ ಅಲ್ಲಿ ಶಕ್ತಿ ದೇವನಿಂದ ಜೀವನೆಡೆಗೆ ಪ್ರವಹಿಸುತ್ತದೆ. ದೇವರೊಡನೆ ಸಂಪರ್ಕ ಸಾಧಿಸಲು ನಮಗೆ ಅನೇಕ ಮಾರ್ಗಗಳಿವೆ. ಅವುಗಳೆಂದರೆ ಧ್ಯಾನ, ಸ್ತೋತ್ರ, ಯಜ್ಞ -ಯಾಗಾದಿಗಳು, ಪೂಜೆ. ಈ ಎಲ್ಲದರ ಉದ್ದೇಶವೊಂದೇ ಜೀವ ದೇವರ ನಡುವೆ ಸಂಪರ್ಕ ಸಾಧಿಸುವುದು.

ಏಕಲವ್ಯನ ಉದಾಹರಣೆಯನ್ನೇ ಗಮನಿಸಿ. ಆತ ದ್ರೋಣಾಚಾರ್ಯರಲ್ಲಿ ಧನುರ್ವಿದ್ಯೆ ಕಲಿಯ ಬಯಸಿದ. ಆದರೆ ಅವರು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಲಿಲ್ಲ. ಅನಿವಾರ್ಯವಾಗಿ ಏಕಲವ್ಯ ಏಕಾಂತದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದ. ಧನುರ್ವಿದ್ಯೆ ಒಲಿಯಿತು. ಇದು ಸಾಧ್ಯವಾದದ್ದು ಹೇಗೆ ಎಂದರೆ ಅಂತರಂಗ ಸಂಪರ್ಕದಿಂದ. ಆತ ದ್ರೋಣಾಚಾರ್ಯರ ಮೂರ್ತಿ ಧ್ಯಾನ ಮಾಡಿದ. ಅಲ್ಲಿ ಅಂತರಂಗಕ್ಕೆ ಅಂತರಂಗದ ಸಂಪರ್ಕ ವಾಯಿತು. ಧನುರ್ವಿದ್ಯೆ ದ್ರೋಣಾಚಾರ್ಯರಿಂದ ಏಕಲವ್ಯನಿಗೆ ಹರಿದು ಬಂತು. ಹರಿಯುವ ಕ್ರಮ ಹೀಗೆ. ಅದಕ್ಕೇ ಬಲ್ಲವರು ಹೇಳುವುದು ಹಿರಿದಾದ ವಸ್ತುವಿನ ಹಿರಿಮೆ ನಮಗೆ ಅರ್ಥವಾದರೆ ತಾನಾಗಿ ನಮ್ಮಲ್ಲಿ ಏನು ಭಾವ ಉಂಟಾಗುತ್ತದೆಯೋ ಅದು ಪೂಜೆ ಎಂದು.

ರಾಜನ ಆಸ್ಥಾನ . ಅಲ್ಲಿಗೊಬ್ಬ ಬಹುರೂಪಿ ಬರುತ್ತಾನೆ. ಬೇರೆ ಬೇರೆ ವೇಷ ಮಾಡಿ ಮೆಚ್ಚಿಸುವುದೇ ಆತನ ಕೆಲಸ. ಆತ ರಾಜನ ಎದುರು ಗೋವಿನ ಅಭಿನಯ ಮಾಡುತ್ತಾನೆ. ರಾಜ ಆತನಿಗೆ ಪೀತಾಂಬರ ಹೊದಿಸಿ ಗೌರವಿಸುತ್ತಾನೆ. ಆ ವೇಳೆಯಲ್ಲಿ ಎದುರುಗಡೆ ವೀಕ್ಷಿಸುತ್ತಿದ್ದ ಗೋಪಾಲ ಕನೊಬ್ಬ ಚಿಕ್ಕ ಕಲ್ಲನ್ನೆತ್ತಿ ಗೋವಿನ ವೇಷದಲ್ಲಿರುವ ಬಹುರೂಪಿಯ ಮೇಲೆ ಹಾಕುತ್ತಾನೆ. ನಿಜವಾದ ಗೋವು ಅಂತಹ ಸಂದರ್ಭದಲ್ಲಿ ಮೈಯ ಯಾವ ಭಾಗದ ಮೇಲೆ ಬಿತ್ತೋ ಆ ಭಾಗವನ್ನಷ್ಟೇ ಅಲ್ಲಾಡಿಸುತ್ತದೆ. ಅದು ಗೋವಿನ ವಿಶೇಷ. ಗೋವಿನ ವೇಷದ ಬಹು ರೂಪಿಯೂ ಹಾಗೇ ಮಾಡುತ್ತಾನೆ. ಇದು ನಿಜವಾದ ವೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಗೋಪಾಲಕ ತನ್ನ ಮೈಮೇಲಿದ್ದ ಹರಕು ಕಂಬಳಿಯನ್ನೇ ಬಹುರೂಪಿಗೆ ಹೊದೆಸುತ್ತಾನೆ. ಬಹುರೂಪಿ ಕಂಬಳಿಯನ್ನು ಮೈ ಮೇಲಿಟ್ಟುಕೊಂಡು ರಾಜಕೊಟ್ಟ ಪೀತಾಂಬರವನ್ನು ತೆಗೆಯುತ್ತಾನೆ. ರಾಜನಿಗೆ ಕೋಪ ಬರುತ್ತದೆ ಆಗ ಬಹುರೂಪಿ ಹೇಳುತ್ತಾನೆ ಪ್ರಭು…… ಕ್ಷಮಿಸಿ, ನಿಮ್ಮ ಪೀತಾಂಬರಕ್ಕೆ ಪೇಟೆಯ ಕ್ರಯ ಜಾಸ್ತಿ ಇರಬಹುದು. ಆದರೆ ಗೋಪಾಲಕನ ಕಂಬಳಿಯ ಹಿಂದೆ ಅರಿಯುವಿಕೆ ಇದೆ. ಪರೀಕ್ಷೆಯಿದೆ. ಆತ ಅರಿತು,ಪರೀಕ್ಷಿಸಿ ಬಹುಮಾನ ಕೊಟ್ಟಿದ್ದಾನೆ. ಇಲ್ಲಿ ಬಹುಮಾನದ ಹಿಂದಿರುವ ಭಾವಕ್ಕೆ ಬೆಲೆ. ಎಂದು. ಪೂಜೆ ಕೂಡ ಹಾಗೇ ಇರಬೇಕು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಇದು ಎಷ್ಟು ದೊಡ್ಡ ಪ್ರಪಂಚ. ಅನಂತ ಅಂತರಾಳಗಳು. ಆದರೂ ಎಲ್ಲಾ ಒಂದು ವ್ಯವಸ್ಥೆಯಲ್ಲಿದೆ. ಇದರ ಸೃಷ್ಟಿ ಮಾಡಿದವರಿಗೆ ಗೌರವ ಸಲ್ಲಬೇಕು. ವಸ್ತುವಿನ ದೊಡ್ಡತನ ಅರ್ಥವಾಗಬೇಕಾದರೆ ನಮಗೆ ಅಂತಹ ದೃಷ್ಟಿ ಬೇಕು. ಸೃಷ್ಟಿ ಸುಂದರವಾಗಿದೆ ಆದರೆ ಅದನ್ನು ನೋಡಲು ನಮಗೆ ದೃಷ್ಟಿಯ ಕೊರತೆ. ಹಾಗಾಗಿ ದೃಷ್ಟಿ ಸರಿಪಡಿಸಿಕೊಳ್ಳಬೇಕು. ದೃಷ್ಟಿ ಸುಂದರವಾದರೆ ಸೃಷ್ಟಿಯೂ ಸುಂದರವಾಗುತ್ತದೆ. ಈ ಅದ್ಭುತ ಸೃಷ್ಟಿಯನ್ನು , ಅದನ್ನು ಸೃಷ್ಟಿಸಿದ ಸೃಷ್ಟಿಕರ್ತನನ್ನು ಅಂತಃಕರಣ ಪೂರ್ವಕವಾಗಿ ಪೂಜಿಸುವ ಭಾವ ನಮ್ಮದಾಗಿರಬೇಕು. ಪೂಜೆಯಲ್ಲಿ ಅಂತಃಕರಣ ಮುಖ್ಯ ಉಪಕರಣವಲ್ಲ ಅಂತಃಕರಣಪೂರ್ವಕ ಪೂಜೆಯಲ್ಲಿ ಉಪಕರಣದ ಅಗತ್ಯವಿಲ್ಲ. ಬೆಲೆಬಾಳುವ ಉಪಕರಣವಿದ್ದು ಅಲ್ಲಿ ಅಂತಃಕರಣವಿಲ್ಲದಿದ್ದರೆ ಆ ಪೂಜೆಗೆ ಬೆಲೆ ಇಲ್ಲ. ಬೇಡರ ಕಣ್ಣಪ್ಪ ಬಾಯಿಯಲ್ಲಿ ನೀರು ತುಂಬಿಕೊಂಡು ಬಂದು ಶಿವಲಿಂಗಕ್ಕೆ ಅಭಿಷೇಕ ಮಾಡಿದ. ಹಸಿ ಮಾಂಸ ನೈವೇದ್ಯ ಮಾಡಿದ. ದೇವರನ್ನು ಸ್ವಚ್ಛಗೊಳಿಸಲು ಪಾದರಕ್ಷೆಯಿಂದ ತಿಕ್ಕಿದ. ಈ ಪೂಜೆಯಲ್ಲಿ ಉಪಕರಣವಿಲ್ಲ ಅಂತಃಕರಣ ಇದೆ. ತನ್ಮಯತೆ ಇದೆ. ಹಾಗಾಗಿ ಶಿವ ಒಲಿದ. ಹಾಗೆಯೇ ಶಂಕರಾಚಾರ್ಯರು ಮಾನಸ ಪೂಜೆ ಮಾಡಿದರಂತೆ ಅಲ್ಲಿಯೂ ಉಪಕರಣವಿರಲಿಲ್ಲ ಕೇವಲ ಅಂತಃಕರಣ ಇತ್ತು.

RELATED ARTICLES  ಕಮ್ಯುನಿಸ್ಟ್ ಒಂದು ಪಕ್ಷ ಮಾತ್ರ ಅಲ್ಲ, ಮಾನಸಿಕ ಸ್ಥಿತಿ ಯೂ ಕೂಡ.

ಪೂಜೆಯಿಂದ ಲಾಭ ನಮಗೆ. ಇದರ ಅರಿವು ನಮಗಿರಬೇಕು. ನಮ್ಮ ಪೂಜೆಯಿಂದ ದೇವರಿಗೆ ಆಗಬೇಕಾದದ್ದೇನಿಲ್ಲ. ಪೂಜೆ ನಮ್ಮಲ್ಲಿ ಪರಿವರ್ತನೆ ಯನ್ನುಂಟು ಮಾಡುತ್ತಿರುತ್ತದೆ. ಪೂಜೆಯ ಫಲ ಪ್ರಸಾದ. ಪೂಜೆಯ ನಂತರ ನಮ್ಮ ಮನಸ್ಸು ಪ್ರಸನ್ನವಾಗಬೇಕು. ವಿಷಾದ ಹೋಗಿ ಪ್ರಸಾದ ಬರಬೇಕು. ಪೂಜೆಯ ವೇಳೆಗೆ ಕೋಪ ಮಾಡಿಕೊಂಡರೆ ಅದೇ ಮೈಲಿಗೆ. ಹಾಗಾಗಿ ಪೂಜಾ ವೇಳೆಯಲ್ಲಿ ಒಳಗೂ ಹೊರಗೂ ನಿರ್ಮಲವಾಗಿರಬೇಕು. ನಾವು ನಿತ್ಯ ಮಾಡುತ್ತಿರುವುದೇನು ? ಅದು ಪೂಜೆಯಲ್ಲ ಅಭ್ಯಾಸ. ನಿಜವಾದ ಪೂಜೆಗೆ ಮಾಡುತ್ತಿರುವ ರೂಢಿ. ನಿಜವಾದ ಪೂಜೆಯ ಕಡೆ ನಮ್ಮ ಗುರಿ ಇರಲಿ. ಪೂಜೆಯ ವೇಳೆಯಲ್ಲಿ ಕ್ಷಣಮಾತ್ರವಾದರೂ ತನ್ಮಯತೆ ಬಂದಲ್ಲಿ ಆ ಪೂಜೆ ಸಾರ್ಥಕವಾಗುತ್ತದೆ. ಮನವೆಲ್ಲಿಯೋ ನಮನ ವಲ್ಲಿಗೆ ಹಾಗಾಗಿ ಪೂಜೆ ಮಾಡುವಾಗ ಮನಸ್ಸು ಅಲ್ಲೇ ಇರಲಿ. ಶಬರಿಯ ಪೂಜೆ ವಿಧುರನ ಪೂಜೆ ನೆನಪಿಸಿಕೊಳ್ಳಿ. ಅಂತಹ ಅಂತಃಕರಣ ಪೂಜೆ ಮಾಡುವ ಪ್ರಯತ್ನ ನಮ್ಮದಾಗಲಿ.

✍️ *ಡಾ.ರವೀಂದ್ರ ಭಟ್ಟ ಸೂರಿ.