ದೇವನ ಸೃಷ್ಟಿಯಲ್ಲಿ ಯಾವುದೂ ಕೆಟ್ಟದ್ದಿಲ್ಲ. ಈ ಲೋಕದಲ್ಲಿ ಎಲ್ಲ ರೋಗಕ್ಕೂ ಔಷಧವಿದೆ. ಹಾಗೆಯೇ ಎಲ್ಲ ಕ್ಲೇಶಕ್ಕೆ ಪರಿಹಾರವಿದೆ . ಅದೇ ಕಾಲ. ಕಾಲವೆಂಬ ಔಷಧ…!
ಒಬ್ಬ ರಾಜನಿದ್ದ. ಆತ ಮಹಾಮೂರ್ಖ. ಆತನಿಗೆ ಯೋಗವಿತ್ತು ಯೋಗ್ಯತೆ ಇರಲಿಲ್ಲ ಆ ರಾಜನಿಗೆ ಮದುವೆಯಾಯಿತು. ಮಗುವೂ ಆಯ್ತು . ಹೆಣ್ಣು ಮಗು. ರಾಜ ಸಂತೋಷದಿಂದ ಮಗುವನ್ನು ನೋಡಲು ರಾಣಿ ಇರುವಲ್ಲಿಗೆ ಧಾವಿಸಿದ. ಮಗುವನ್ನು ನೋಡಿದ ಅವನಿಗೆ ಅನ್ನಿಸಿದ್ದು, ಇದೇನು..? ಮಗು. ಮಗುವಿಗೆ ಕೂದಲೂ ಇಲ್ಲ. ಹಲ್ಲೂ ಇಲ್ಲ. ತಕ್ಷಣ ರಾಜವೈದ್ಯನಿಗೆ ಕರೆ ಕಳುಹಿಸಿದ. ವೈದ್ಯರು ಬಂದರು “ಪ್ರಭು…. ಮಗು ಹುಟ್ಟಿದಾಗ ಇರುವುದೇ ಹೀಗೆ ಎಂದರು. ಆದರೆ ಆ ಮೂರ್ಖ ರಾಜನಿಗೆ ಅರ್ಥವಾಗಲಿಲ್ಲ. ವೈದ್ಯರಿಗೆ “ಮೂರು ದಿನ ಅವಕಾಶ ಕೊಡುತ್ತೇನೆ ಇದಕ್ಕೆ ಸೂಕ್ತ ಪರಿಹಾರ ಹೇಳದಿದ್ರೆ ತಲೆದಂಡ” ಅಂದ . ಆತಂಕಗೊಂಡ ವೈದ್ಯರಿಗೆ ಅವರ ಗುರುಗಳ ನೆನಪಾಯಿತು. ತಕ್ಷಣ ಗುರುಗಳ ಬಳಿ ನಡೆದು ಎಲ್ಲ ವೃತ್ತಾಂತವನ್ನು ಅರುಹಿದ. ರಾಜನ ಮೂರ್ಖತನವನ್ನು ವಿವರಿಸಿ ಕೇಳಿದ. ಗುರುಗಳು ನಿನ್ನ ಜೊತೆ ನಾನು ಬರುತ್ತೇನೆ ನಡೆ ಎಂದರು. ರಾಜನ ಆಸ್ಥಾನಕ್ಕೆ ಗುರುಗಳು ವೈದ್ಯರ ಜೊತೆ ಆಗಮಿಸಿದರು. ಮಗುವನ್ನು ಪರಿಶೀಲಿಸಿದಂತೆ ನಟಿಸಿದರು. ಮಗುವಿಗಿರುವ ಆರೋಗ್ಯ ಸಮಸ್ಯೆ ಅರ್ಥವಾಯಿತು ಎಂದರು. ರಾಜನಿಗೆ ಖುಷಿ ಈಗ ನಾನೇನು ಮಾಡಬೇಕು…? ಕೇಳಿದ ರಾಜ. ಗುರುಗಳು ಈ ಮಗುವನ್ನು ನೀನು ಸ್ವಲ್ಪ ಕಾಲ ನನ್ನ ಸುಪರ್ದಿಗೆ ಕೊಡಬೇಕು. ಈ ರೋಗಕ್ಕೆ ಸುದೀರ್ಘವಾದ ಉಪಚಾರಬೇಕು. ಸಂಪೂರ್ಣ ಗುಣವಾದ ಮೇಲೆ ಹೇಳಿ ಕಳುಹಿಸುತ್ತೇನೆ ಬಂದು ಕರೆದುಕೊಂಡು ಹೋಗು ಎಂದರು. ರಾಜ ಒಪ್ಪಿದ. ಹನ್ನೆರಡು ವರ್ಷಗಳ ಕಾಲ ಗುರುಗಳು ರಾಜನಿಗೆ ಹೇಳಿ ಕಳಿಸಲೇ ಇಲ್ಲ. ಹನ್ನೆರಡು ವರ್ಷದ ನಂತರ ರಾಜನಿಗೆ ಬರುವಂತೆ ಸೂಚಿಸಿದರು. ರಾಜನಿಗೆ ಮಗಳನ್ನು ನೋಡಿ ಸಂತೋಷವಾಯ್ತು. ಉದ್ದ ಕೂದಲು, ಸುಂದರ ದಂತಪಂಕ್ತಿ ಯಿಂದ ಅವಳು ಸುಂದರಿಯಾಗಿ ಗೋಚರಿಸುತ್ತಿದ್ದಳು. ರಾಜ ಅತ್ಯಂತ ಸಂತೋಷದಿಂದ ಗುರುಗಳಿಗೆ ಉಡುಗೊರೆ ನೀಡಿ ಮಗಳನ್ನು ಕರೆದುಕೊಂಡು ಹೊರಟ. ಇಲ್ಲಿ ತಲೆದಂಡ ತಪ್ಪಿಸಿದ ಔಷಧ ಯಾವುದು ಎಂದರೆ ಅದೇ ಕಾಲ. ಕಾಲವೆಂಬ ಅದ್ಭುತ ಔಷಧ ಮೂರ್ಖ ರಾಜನನ್ನು ಸಮಾಧಾನಪಡಿಸಿತು. ಗುರು ಹಾಗೂ ರಾಜವೈದ್ಯರ ತಲೆದಂಡ ವಾಗದಂತೆ ತಡೆಯಿತು. ಅದಕ್ಕೇ ಕಾಲವನ್ನು ಎಲ್ಲ ಕ್ಲೇಶಕ್ಕೆ ದಿವ್ಯ ಔಷಧ ಎನ್ನುವುದು. ನಾವು ಗಮನಿಸದೇ ಇರುವ ಔಷಧ ಕಾಲ. ಎಷ್ಟೋ ರೋಗಕ್ಕೆ ಎಷ್ಟೋ ಕ್ಲೇಶಕ್ಕೆ ಕಾಲವೆಂಬುದು ಮದ್ದು ,ಪರಿಹಾರ ಎಲ್ಲವೂ ಹೌದು. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಎಂಬ ಮಾತು ಬಂದಿದ್ದು ಹೀಗೆ.
ಭಗವಾನ್ ಬುದ್ಧ ತನ್ನ ಶಿಷ್ಯರೊಂದಿಗೆ ಅರಣ್ಯ ಮಾರ್ಗದಲ್ಲಿ ಸಾಗಿ ಹೋಗುತ್ತಿದ್ದ. ದಾರಿಯಲ್ಲಿ ಶಿಷ್ಯನೊಬ್ಬ ಬುದ್ಧನಲ್ಲಿ ಕೇಳಿದನಂತೆ ಕದಡಿದ ಮನಸ್ಸು ನೊಂದ ಮನಸ್ಸು ಸರಿಯಾಗುವುದು, ತಿಳಿಯಾಗುವುದು ಹೇಗೆ? ಎಂದು. ಬುದ್ಧ ಉತ್ತರಿಸಲಿಲ್ಲ. ಸ್ವಲ್ಪ ಸಮಯದ ನಂತರ ಕೊಳವೊಂದರ ಸಮೀಪ ಬಂದಾಗ ಬುದ್ಧ ಅದೇ ಶಿಷ್ಯನಲ್ಲಿ ಕುಡಿಯಲು ನೀರು ತರುವಂತೆ ತಿಳಿಸಿದ. ಶಿಷ್ಯ ಎಲ್ಲಿಂದ ತರಲಿ ಎಂದ. ಆಗ ಬುದ್ಧ ಸಮೀಪದಲ್ಲಿದ್ದ ಕೊಳವನ್ನು ತೋರಿಸಿದ. ಶಿಷ್ಯ ಹೋಗಿ ನೋಡಿದರೆ ಆ ಕೊಳದ ನೀರು ಕದಡಿದ ನೀರಾಗಿತ್ತು. ಸಂಪೂರ್ಣ ರಾಡಿಯಾಗಿತ್ತು. ಬರಿಗೈಯಲ್ಲಿ ಶಿಷ್ಯ ಮರಳಿ ಬಂದ. ಮತ್ತೆ ಸ್ವಲ್ಪ ಸಮಯದ ನಂತರ ಶಿಷ್ಯನಲ್ಲಿ “ಈಗ ಹೋಗು ಕುಡಿಯಲು ನೀರು ತಾ” ಎಂದ ಅನುಮಾನದಿಂದಲೇ ಹೋದ ಶಿಷ್ಯನಿಗೆ ಕೊಳವನ್ನು ನೋಡಿ ಆಶ್ಚರ್ಯವಾಯಿತು. ಅಲ್ಲಿ ಸ್ಪಟಿಕ ಶುದ್ಧ ನೀರು. ತೆಗೆದುಕೊಂಡು ಬಂದ. ಆಗ ಬುದ್ಧ ಹೇಳಿದ “ನೀನು ಕೇಳಿದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿರಬಹುದು. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ. ರಾಡಿ ನೀರು ತಿಳಿಯಾದದ್ದು ಕಾಲದಿಂದ. ಹಾಗೆ ಕದಡಿದ ಮನಸ್ಸು , ನೊಂದ ಮನಸ್ಸು ತಿಳಿಯಾಗುವುದು ಕಾಲದಿಂದಲೇ” ಎಂದ. ಶಿಷ್ಯನಿಗೆ ಜ್ಞಾನೋದಯವಾಯಿತು.
ತರಚು ಗಾಯವನ್ನು ಹಾಗೆಯೇ ಬಿಟ್ಟರೆ ಕಾಲಕ್ರಮೇಣ ಅಲ್ಲಿಯೇ ಒಣಗುತ್ತದೆ. ಆದರೆ ಅದನ್ನು ಕೆರೆಯುತ್ತ ಕುಳಿತರೆ ಅದು ಹುಣ್ಣಾಗುತ್ತದೆ. ಅದನ್ನೇ ಕವಿ ವಾಣಿಯೊಂದು ಹೇಳಿದ್ದು… ತರಚುಗಾಯವ ಕೆರೆದು ಹುಣ್ಣಾಗಿಪುದು ಕೋತಿ ಎಂದು. ಇದರ ಭಾವಾರ್ಥ ವಿಷ್ಟೆ. ತರಚುಗಾಯದಂತಿರುವ ಜೀವನದ ಕೊರತೆಗಳನ್ನು ಹಾಗೆಯೇ ಬಿಟ್ಟರೆ ಒಂದಲ್ಲ ಒಂದು ದಿನ ಒರತೆ ಬರಬಹುದು. ಆದರೆ ಗಾಯವನ್ನು ಕೆರೆದಂತೆ ಕೊರತೆಯನ್ನು ಕುರಿತು ಚಿಂತಿಸುತ್ತ ಕುಳಿತರೆ ಜೀವನವೊಂದು ಹುಣ್ಣಾ ಗಬಹುದು…. ನಾವು ಮಣ್ಣಾ ಗಬಹುದು ಎಂದು.
ಸಹನೆ ವಜ್ರದ ಕವಚ ಸಹನೆಯಿದ್ದರೆ ಎಷ್ಟು ಕಷ್ಟಗಳು ಬಂದರೂ ಚೆನ್ನಾಗಿರಲು ಸಾಧ್ಯ. ಒಳ್ಳೆಯ ಕಾಲಕ್ಕಾಗಿ ಕಾಯಬೇಕು. ಆಗ ಕಾಯುವುದರಲ್ಲಿ ಒಂದು ರೀತಿಯ ಸುಖವಿರುತ್ತದೆ. ಅದಕ್ಕೆ ಪ್ರಾಜ್ಞರು ಹೇಳಿದ್ದು ಕೀಳ ಮೇಲಾಗಿಪುದು ಮೇಲ ಕೀಳಾಗಿಪುದು ಕಾಲ ಎಂದು.
✍️ ಡಾ.ರವೀಂದ್ರ ಭಟ್ಟ ಸೂರಿ.