ಸಹ್ರದಯಿ ನನ್ನ ಓದುಗರಲ್ಲಿ ನನ್ನ ಸವಿನಯ ವಿನಂತಿ.
ಮಾನ್ಯರೇ
ಓದುವುದು,ಬರೆಯುವುದು,ಓದಿರುವುದನ್ನು ಮನನ ಮಾಡಿಕೊಳ್ಳುವುದು, ಅಂತರಾವಲೋಕನದಲ್ಲಿರುವುದು ಹಾಗೆ
ಇದರಿಂದ ಹೊರಬಂದಾಗ ಅದೇನೊ ಹೊಸ ಬೆಳಕು ,ತೃಪ್ತಿ.ನನ್ನದಲ್ಲದ ಹೊಸದೊಂದನ್ನು ಅಳವಡಿಸಿಕೊಳ್ಳುವ ಪ್ರಯತ್ನ.
ಈ ನಿರಂತರ ಪ್ರಕ್ರಿಯೆಗೆ
ಗುರುಗಳು,ಜ್ಞಾನಿಗಳು,ಜ್ಞಾನಿಗಳಿಂದ ಹೊರಬಂದ ಬರಹಗಳು
ಸನ್ಮಾರ್ಗವನ್ನು ತೋರಿಸಬಲ್ಲವು.
ಬರೆಯಬೇಕು ಬರೆಯಬೇಕು ಎನ್ನುತ್ತಿರುವಾಗಲೇ ದಿನಗಳು ಉರುಳಿ ಹೋಗುತ್ತಿರುವಾಗ
ಡಾ.ರವೀಂದ್ರ ಭಟ್ಟ ಸೂರಿಯವರ ಕಬೀರರ ದೋಹೆ ನನ್ನ ಅಂತರಂಗದ ಅಭಿಲಾಷೆಗೆ ಪ್ರೇರಣೆಯಾಯಿತು.
ಹೊಸ ಬೆಳಕು ಚೆಲ್ಲಿತು.
ಕಾರಣ ಸರ್ ಅವರ ‘ಭಾವಜೀವಿ’
ಎಂಬ ಬರಹದ ಸೊಲ್ಲುಗಳನ್ನೇ
ಆಧಾರವಾಗಿಟ್ಟು ನನ್ನ ಅಂತರಂಗದ ಅನಿಸಿಕೆಯನ್ನು ಜೋಡಿಸುತ್ತ ಹೋಗುತ್ತೇನೆ.
ತಾವುಗಳು ಪರಿಶೀಲಿಸದೇ ನನ್ನ ಮಾತುಗಳನ್ನು ಒಪ್ಪಲೇ ಬೇಕೆಂತೆನೂ ಇಲ್ಲ.ಆದರೆ ತಮ್ಮ ಅರಿವಿಗೆ ಹೌದೆನಿಸಿದಲ್ಲಿ
ನಿಮ್ಮವಳಾದ ನನ್ನನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.
ತಮ್ಮ-ಸ್ನೇಹಜೀವಿ.
ಭಾವಜೀವಿಯ ಅಂತರಂಗ
ಒಡನಾಟ
ಒಂದೊಂದು ಮಳೆಹನಿಯು ಬಿದ್ದುಹೊಳೆಯಾಗುವುದು
ಮುಂದೆ ಅದು ಸೇರುವುದು ಶರಧಿಯನ್ನು
ಕುಂದು ಬರದದು ನಿನಗೆ ಜ್ಞಾನಿಗಳ ಒಡನಾಟ
ದಿಂದ ಶ್ರೇಯಸ್ಸಿಹುದು-ಭಾವಜೀವಿ.
ಒಂದೊಂದೇ ಮಳೆಹನಿಯು ಸೇರಿ ಸೇರಿ ನದಿಯಾಗಿ ಶರಧಿಯನ್ನು ಸೇರುವಂತೆ ಜ್ಞಾನಿಗಳ ಒಡನಾಟದಿಂದ ನಮಗೆ ಯಾವುದೇ ಕುಂದಿಲ್ಲ ಬದಲಾಗಿ ಶ್ರೇಯಸ್ಸೇ ಲಭಿಸುತ್ತದೆ ಎಂಬುದಾಗಿದೆ ಲೇಖಕರ ಭಾವದ ಅರಿವು.
ಶ್ರೇಯಸ್ಸು ಎಲ್ಲಿದೆ? ಎಂದು ಹುಡುಕ ಹೊರಟರೆ ಭೌತಿಕವಲ್ಲದ ಇದು ಕಣ್ಣಿಗೂ ಕಾಣಲಾರದು.ಮನಸ್ಸಿಗೆ ಮಾತ್ರ ತೃಪ್ತಿ-ಸಂತೃಪ್ತಿಯನ್ನು ಉಣಿಸಬಲ್ಲವು. ಜೀವಕ್ಕೆ ಚೈತನ್ಯ ನೀಡುವ,ಮನಸ್ಸಿಗೆ ಮರು ಜೀವ ನೀಡುವ ಅಗೋಚರ,ಅಮೃತಮಯ ಸಾಧನೆ ಇದು. ಒಂದು ಮಳೆಹನಿ ಪ್ರತಿಹನಿಗಳ ಒಡಗೂಡುವಿಕೆಯಿಂದ ತೊರೆಯಾಗಿ ಹರಿದು,ಝರಿಯಾಗಿ ಧುಮುಕಿ,ಹೊಳೆಯಾಗಿ ಕಂಡು
ನದಿಯಾಗಿ ಬೆಳೆದು ಸಾಗರದ ಅಗಾಧತೆಯನ್ನು ಪಡೆಯುವಂತೆ
ಜ್ಞಾನಿ,ಜ್ಞಾನಗಳ ಒಡಗೂಡುವಿಕೆಯಿಂದ ನಮ್ಮ ಜ್ಞಾನವು ಪರಿಪಕ್ವವಾಗುತ್ತದೆ.
ಹಾಗಾದರೆ ಜ್ಞಾನದ ಶೋಧನೆ ಎಲ್ಲಿ?
ನಿನ್ನಲ್ಲೇ ಇಹುದಯ್ಯ ಅರಸಬೇಕಯ್ಯ
ಅಗೆಬಗೆದು ಹೊರತೆಗೆದು ಪ್ರಚುರಪಡಿಸಯ್ಯ.
ಪ್ರತಿಯೊಬ್ಬನಲ್ಲಿಯೂ ಸದ್ಗುಣಗಳಿವೆ. ಅನನ್ಯತೆ ಇದೆ. ಈ ಗುಣಗಳೊಂದಿಗೆ ಒಡನಾಡಿದರೆ ಯಾವ ಕುಂದೂ ಬಾರದು.
ದೂರದಿರು ಯಾರನ್ನೂ ದುಷ್ಟನವನೆಂದು,
ಅರಿತಿಲ್ಲ ಎಂದು ಅರಿ ಶಿಷ್ಟನವನೆಷ್ಟೆಂದು!!
ಒಡನಾಡು ನೀನವನ ಸದ್ಗುಣಗಳೊಡನೆ,
ಶ್ರೇಯಸ್ಸಲ್ಲವೇ ನಿನಗೆ ಪ್ರತಿಜ್ಞಾನಿಯೊಡನೆ!!
ಹೀಗೆಯೇ ಜ್ಞಾನಿ,ಜ್ಞಾನ ಭಂಡಾರಗಳೊಡನೆ ಒಡನಾಡು.ಆಗ
ಜ್ಞಾನಸಾಗರದ ಅಗಾಧತೆಯ
ಶ್ರೇಯಸ್ಸು ಲಭಿಸುವುದು.
ಭಾವಜೀವಿಯವರ ಭಾವಕ್ಕೆಸಮರ್ಪಣೆ. – ಸ್ನೇಹಜೀವಿ.
ಬರಹ : ಗೀತಾ ಷಡಕ್ಷರಿ