ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಗಣಪತಿ ಕೊಂಡದಕುಳಿ
ದಿನಾ breakfast ಮಾಡುವುದು, ಊಟ ಮಾಡುವುದು, ಮಲಗುವುದು, ಮಕ್ಕಳಾಡಿಸುವುದು, ತಮ್ಮ ತಮ್ಮ ಮಕ್ಕಳನ್ನು ಜಗತ್ತಿನಲ್ಲೇ ಮತ್ಯಾರು ಇಲ್ಲವೆಂಬಂತೆ ಹೊಗಳಿಕೊಳ್ಳುವುದು…? ಇಷ್ಟಕ್ಕೇ ಮನುಷ್ಯನ ಜೀವನ ಸೀಮಿತವಾಗಬಾರದು. ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಈ ಎಲ್ಲಾ ಆಸಕ್ತಿಗಳು ಜೀವನದುದ್ದಕ್ಕೂ ಮನುಷ್ಯನಿಗೆ ಉಲ್ಲಾಸ ಕೊಡುತ್ತವೆ. ಓದುವ ಆಸಕ್ತಿಯಂತೂ ಬೇಕೇ ಬೇಕು. ಬೇಸರಕ್ಕೊಂದು ದಿವ್ಯ ಔಷಧ ಅದು. ಹಾಗೆ ಓದುವಾಗೆಲ್ಲ ಅವರವರಿಗೆ ಇಷ್ಟವೆನಿಸುವ ಸಾಹಿತಿಗಳು ಮತ್ತು ಅವರಿಗೆ ಇಷ್ಟವಾಗುವ ಸಾಹಿತ್ಯ ಪ್ರಕಾರಗಳಿರುತ್ತವೆ. ಕೆಲವರಿಗೆ ಕಥೆ ಇಷ್ಟವಾದರೆ ಕೆಲವರಿಗೆ ಕವನ. ಮತ್ತೆ ಕೆಲವರಿಗೆ ನಾಟಕ. ಕಾದಂಬರಿ ಓದುವವರಂತೂ ಊಟ ತಿಂಡಿ ಬಿಟ್ಟು ಓದುವವರನ್ನೂ ಕಂಡಿದ್ದೇನೆ ನಾನು. ? ಇಂದು ನನ್ನ ಮೆಚ್ಚಿನ ಸಾಹಿತಿಯೋರ್ವರೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನಾಡಿನ ಶ್ರೇಷ್ಠ ಸಾಹಿತಿ ದಂಪತಿಗಳಿವರು. ಶ್ರೀ ಗಣಪತಿ ಕೊಂಡದಕುಳಿ ಇಂದಿನ ನನ್ನ ಅಕ್ಷರ ಅತಿಥಿ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೊಂಡದಕುಳಿಯವರಾದ ಗಣಪತಿ ಹೆಗಡೆಯವರು ವೃತ್ತಿಯಲ್ಲಿ ಒಬ್ಬ ವ್ಯಾಪಾರಸ್ಥರಾದರೂ ಪ್ರವೃತ್ತಿಯಲ್ಲಿ ಅಗಾಧ ಜ್ಞಾನವೇ ತುಂಬಿಕೊಂಡಿರುವ ಸಜ್ಜನ ಸಾಹಿತಿ. ಪದಗಳ ಮಾಲೆ ಪೋಣಿಸುವ ಅವರ ರೀತಿಗೆ ಎಂಥವರೂ ಬೆರಗಾಗಬೇಕು. ಒಂದು ಲೆಕ್ಕಕ್ಕೆ ಮರಿ ಡಿ.ವಿ.ಜಿ. ಅವರು. ? ತೂಕದ ಸಾಲುಗಳನ್ನು ಬರೆಯುವ ತೂಕವಿರುವ ಮನುಷ್ಯರು ನಮ್ಮ ಗಣಪತಿ ಕೊಂಡದಕುಳಿಯವರು.
ನನ್ನ ಪುಸ್ತಕ ಮನೆಯಲ್ಲಿ ಲಕ್ಷಾಂತರ ಬೆಲೆಬಾಳುವ ಸಾವಿರಾರು ಪುಸ್ತಕಗಳಿವೆ. ಹೀಗೆ ಓದುವ ಹುಮ್ಮಸ್ಸಿನ ನಾನು ಪದೇ ಪದೇ ಓದಲು ಎತ್ತಿಕೊಳ್ಳುವ ಪುಸ್ತಕವೆಂದರೆ ಅದು ಕೊಂಡದಕುಳಿಯವರ ಮರುಳ ಮನುಜನ ಮರ್ಮರ. ಮರುಳ ಮನುಜ ಎಂಬ ಅಂಕಿತನಾಮದಲ್ಲಿ ಬರೆಯುವ ಗಣಪತಿ ಕೊಂಡದಕುಳಿಯವರು ಓದುಗರನ್ನು ಮರಳು ಮಾಡುವ ಮನುಜ ಖಂಡಿತ ಹೌದು.
ನಮ್ಮ ಆತ್ಮೀಯರಾದ ರವೀಂದ್ರ ಭಟ್ಟ ಸೂರಿಯವರು ಕಾರ್ಯಕ್ರಮ ನಿರೂಪಣೆ ಮಾಡುವಾಗೆಲ್ಲ ಮರುಳ ಮನುಜ, ಮರುಳ ಮನುಜ, ಎಂದು ಪದೇ ಪದೇ ಹೇಳುತ್ತಿದ್ದರು. ? ಅವರು ಹೇಳುತ್ತಿದ್ದ ಸಾಲುಗಳು ಹೃದಯಕ್ಕೆ ಆಪ್ತವೆನಿಸುತ್ತಿತ್ತು. ನನಗೇ ಅವರು ಮರುಳ ಮನುಜ ನೀನೂ ಹೀಗೆ ಬರೆಯೊ ಎಂದ ಹಾಗಿರುತ್ತಿತ್ತು…..ಅವರು ಹೇಳುವಾಗೆಲ್ಲಾ. ? ಅವರೇ ನನಗೊಮ್ಮೆ ಹೇಳಿದ್ದರು….ಇದು ಶ್ರೀ ಗಣಪತಿ ಕೊಂಡದಕುಳಿಯವರ ಸಾಲುಗಳು ಅಂತ. ಅವತ್ತೇ ನಿರ್ಧರಿಸಿದ್ದೆ ಒಮ್ಮೆ ಈ ಮರುಳ ಮನುಜನನ್ನು ಹುಡುಕಿಕೊಂಡು ಹೋಗಬೇಕು ಅಂತ. ಆದರೆ ದೇವರ ದಯದಿಂದ ಒಮ್ಮೆ ಆಕಸ್ಮಿಕವಾಗಿ ಅವರು ನನಗೆ ಕುಮಟಾದ ಚುಟುಕು ಸಮ್ಮೇಳನದಲ್ಲಿ ಭೇಟಿಯಾದರು. ಆಹಾ! ಅವರ ಸೌಜನ್ಯವೇ…..ಅತ್ಯಂತ ಪ್ರೀತಿ ಹಾಗೂ ವಿಶ್ವಾಸದಿಂದ ಅವರು ಮಾತನಾಡಿದ್ದು ನನಗೆ ಅತ್ಯಂತ ಖುಷಿ ನೀಡಿತು. ಗಣಪತಿ ಕೊಂಡದಕುಳಿ ಎಂಬ ಅಸಾಮಾನ್ಯ ಕವಿಯೋರ್ವ ನನ್ನಂಥ ಕಿರಿಯನಿಗೂ ಈ ಪರಿ ಗೌರವದಿಂದ ಮಾತನಾಡುವಾಗ ನನಗೇ ಒಮ್ಮೆ ನಾಚಿಕೆಯೆನಿಸಿದ್ದು.
ಗಣಪತಿ ಕೊಂಡದಕುಳಿ ಅವರ ಶ್ರೀಮತಿ ಕೂಡ ನಾಡಿನ ಶ್ರೇಷ್ಠ ಕವಯಿತ್ರಿ. ಶ್ರೀಮತಿ ಕಮಲಾ ಕೊಂಡದಕುಳಿಯವರು ಈಗಾಗಲೇ ಹತ್ತಕ್ಕೂ ಹೆಚ್ಚಿನ ವಿಭಿನ್ನ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದವರು. ದತ್ತಿ ಪ್ರಶಸ್ತಿಗೂ ಭಾಜನರಾದವರು. ಅವರ ಅನೇಕ ಭಾವಗೀತೆಗಳು ಜನಪ್ರಿಯವಾಗಿವೆ. ಸತಿ-ಪತಿಗಳಿಬ್ಬರ ಸಾಹಿತ್ಯ ಪ್ರೀತಿ ಅಪೂರ್ವವಾದದ್ದು. ಯಾವುದೇ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಜೊತೆಯಾಗೇ ಹೋಗುತ್ತಾರೆ.
ಗಣಪತಿ ಕೊಂಡದಕುಳಿಯವರ ಕುಟುಂಬ ಯಕ್ಷಗಾನ ಹಿನ್ನೆಲೆ ಹೊಂದಿರುವ ಪ್ರಖ್ಯಾತ ಕುಟುಂಬ. ಶ್ರೀಯುತ ರಾಮಚಂದ್ರ ಹೆಗಡೆ ಕೊಂಡದಕುಳಿಯವರ ಸ್ವಂತ ಸಹೋದರರಾಗಿರುವ ಇವರ ಮನೆಯಲ್ಲಿ ಕಲೆ ರಕ್ತಗತವಾಗಿಯೇ ಪ್ರವಹಿಸುತ್ತದೆಯೆನಿಸುತ್ತದೆ ನನಗೆ. ಶ್ರೀಮತಿ ಅಶ್ವಿನಿ ಕೊಂಡದಕುಳಿ ಯಕ್ಷಗಾನ ಅಕಾಡೆಮಿಯ ಸದಸ್ಯೆ ಮಾತ್ರವಲ್ಲ ರಾಷ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವ ಯುವಪ್ರತಿಭೆ. ಅವರ ಮನೆಯ ಸದಸ್ಯರೇ ಆಗಿರುವ ಶ್ರೀಯುತ ಲಕ್ಷ್ಮೀಕಾಂತ ಕೊಂಡದಕುಳಿ ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳು. ಗಣಪತಿ ಕೊಂಡದಕುಳಿಯವರ ಮಕ್ಕಳೂ ಭವಿಷ್ಯದ ಕಲಾ ಕುಸುಮಗಳು. ಹೀಗೆ ನೋಡುವಾಗ ಅವರ ಕುಟುಂಬಕ್ಕೆ ಕಲಾ ಸರಸ್ವತಿಯೇ ಒಲಿದಿದ್ದು ಸುಳ್ಳಲ್ಲ.
ಸಾಹಿತಿಯೋರ್ವರ ಮನೆಯನ್ನು ನಾನೇ ಹುಡುಕಿಕೊಂಡು ಹೋಗಿ ಅವರ ಜೊತೆ ಮಾತನಾಡಿ ಮನಸ್ಸು ತುಂಬಿಕೊಂಡಿದ್ದು ಜೀವನದಲ್ಲೇ ಪ್ರಥಮ. ಹೀಗೊಮ್ಮೆ ಅವರ ಮನೆಗೆ ಹೋದಾಗ ದಂಪತಿಗಳು ತೋರಿದ ಪ್ರೀತಿ ಆತಿಥ್ಯ ಮರೆಯಲಾರದ್ದು. ನಾನು ಹೀಗೆ ಹೋದಾಗ ಅವರು ನನ್ನ ಕೈಗೆ ತಮ್ಮ ಪುಸ್ತಕಗಳನ್ನು ನೀಡಿದರು. ನಾನು ಮೆಚ್ಚಿದ ಸಾಹಿತಿಯ ಮನೆಗೆ ಹೋಗಿ ಪುಸ್ತಕಗಳನ್ನು ಪೈಸಾ ನೀಡದೆ ಎತ್ತಿಕೊಂಡು ಬರುವ ಮನಸಾಗಲಿಲ್ಲ ನನಗೆ. ಆದರೆ ಅವತ್ತಿನ ದಿನ ನೋಟ್ ಬ್ಯಾನ್ ಮಾಡಿದ ಸಂದರ್ಭ ಆದುದರಿಂದ ನನ್ನ ಕಿಸೆಯಲ್ಲಿ ATM card ಇತ್ತೇ ವಿನಹ ಸತ್ಯವಾಗಿ ಹೇಳುವುದಾದರೆ ಅವರ ಪುಸ್ತಕಕ್ಕೆ ನೀಡುವಷ್ಟೂ ಹಣವಿರಲಿಲ್ಲ. ? ಸುಳ್ಳು ಹೇಳಲು ಹಿಂಜರಿಯುವ ನಾನು ಸತ್ಯವನ್ನೇ ಅವರ ಜೊತೆ ಹಂಚಿಕೊಂಡು ಅಲ್ಲಿಯೇ ಹತ್ತಿರದ ATM ಗೆ ಹೋಗಿ ಮತ್ತೆ ಬರುವುದಾಗಿ ಹೇಳಿದೆ. ಆದರೆ ಅವರು ಅಗತ್ಯವಿದ್ದರೆ ತಾವೇ ಬೇಕಾದರೂ ಅರ್ಜೆಂಟಿಗೆ ಹಣ ನೀಡುವುದಾಗಿ ಹೇಳಿದರು. ಮುಜುಗರವಾಗಿ ಹೋಯ್ತು ನನಗೆ. ಅವರ ಪುಸ್ತಕಕ್ಕೆ ಇಂದಿಗೂ ಬೆಲೆ ಕಟ್ಟಲಾರೆ ನಾನು. ಅದು ನನ್ನ ಜೀವನದುದ್ದಕ್ಕೂ ಬಡ್ಡಿ ಬರುತ್ತಲೇ ಇರುವ ಎಫ್.ಡಿ.
ಗಣಪತಿ ಕೊಂಡದಕುಳಿಯವರು ಯಕ್ಷಗಾನ ಕಲಾವಿದರು ಕೂಡ. ಅತ್ಯುತ್ತಮ ಪಾತ್ರ ನಿರ್ವಹಣೆ, ಮತ್ತು ನಿರರ್ಗಳವಾಗಿ ಮಾತನಾಡುವ ಅವರು ತಮ್ಮ ವೃತ್ತಿಯ ಅವಸರದ ನಡುವೆಯೂ ಆಗಾಗ ಪ್ರವೃತ್ತಿಯನ್ನು ಬಿಟ್ಟು ಕೊಡುವುದಿಲ್ಲ. ಅವರ ಉಪನ್ಯಾಸವನ್ನು ಕೂಡ ನಾನು ಸಾಹಿತ್ಯ ಸಮ್ಮೇಳನದಲ್ಲಿ ಆಸ್ವಾದಿಸಿದ್ದೇನೆ. ಕಿರುಚಿತ್ರದಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಬಹುಮುಖ ಪ್ರತಿಭೆಯ ಗಣಪತಿ ಕೊಂಡದಕುಳಿಯವರಲ್ಲಿ ಅವರ ಸರಳತೆ ಮತ್ತು ಸಜ್ಜನಿಕೆ ನನಗೆ ತುಂಬಾ ಇಷ್ಟವಾಗುತ್ತದೆ. ತೇಲುವ ಪದಗಳ ಕವಿತೆಗಳಲ್ಲ ಅವರದು. ಇಳಿದಷ್ಟೂ ಆಳ.
ಅವರ ಚೌಪದಿಗಳು ಬಾಯಿಯಲ್ಲಿ ಇಟ್ಟುಕೊಂಡು ಚಪ್ಪರಿಸಬೇಕೆನಿಸುವ ಸವಿ ಸವಿ ಪೆಪ್ಪರಮಿಂಟುಗಳಿದ್ದ ಹಾಗೆ. ಅವುಗಳಲ್ಲಿ ಕೆಲವೊಂದನ್ನು ನಾನು ನಿಮ್ಮ ಮುಂದೆ ಉದಾಹರಿಸಬೇಕು.
- ತುಂಬದಿರು ಮನೆಯ ನೀ ವಸ್ತು ಒಡವೆಗಳಿಂದ……
ತುಂಬು ಸಂಬಂಧಗಳ ಸಂಭ್ರಮವನಿಲ್ಲಿ……
ನಂಬಿಕೆಯು ಮಮತೆ ವಾತ್ಸಲ್ಯ ಪ್ರೀತಿಯ ಜೊತೆಗೆ….
ತುಂಬು ನಗೆಯಲೆಯಿಂದ ಮರುಳ ಮನುಜ…… - ನಗುವಿಟ್ಟ ಮಾನವಗೆ ನಗಲೆನಿತೊ ಬಗೆಯಿಟ್ಟ…..
ನಗುವೊಂದನರಳಿಸಲು ನೂರು ನೋವಿಟ್ಟ……
ನಗು ನೋವ ಮರೆತು ನೂರೇನು ಸಾವಿರವಿರಲಿ…….
ನಗು ನೋವೆ ಬಳಲೊ ತೆರ ಮರುಳ ಮನುಜ…….. - ಅಳೆದು ಸುರಿದರು ಹೊನ್ನ ಸರಿದ ಸಮಯವು ಬರದು…..
ಅಳಿದ ಯೌವ್ವನ ಕಾಯ ತಿರುಗಿ ಬರಲರಿದು……
ಇಳಿದು ಕಡಲೊಳಗಳಿದ ಹೊಳೆ ಹೊರಳಿ ಮರಳುವುದೆ….
ಬಳಿಕ ಮೊಗ್ಗಹುದೆ ಹೂ ಮರುಳ ಮನುಜ………. - ಮೆದುಳಿನಲೆ ಬದುಕುವರು ಎಲ್ಲೆಲ್ಲು ತುಂಬಿಹರು…..
ಹೃದಯದಲಿ ಬದುಕುವರು ವಿರಳವದು ಸರಳ……
ಜಗದ ಕ್ರೌರ್ಯಗಳೆಲ್ಲ ಮೆದುಳಿನುತ್ಪನ್ನಗಳೊ……
ಹೃದಯ ಕರುಣೆಯ ಗೂಡೊ ಮರುಳ ಮನುಜ…….. ಹೀಗೆ ಒಂದಕ್ಕಿಂದ ಒಂದು ಚಂದವಾದ ಚೌಪದಿಗಳು ನಿರೂಪಕರಿಗೆ, ಕವನಾಸಕ್ತರಿಗೆ ಅವರು ನೀಡಿದ ಮಾಣಿಕ್ಯಗಳೇ ಎಂದರೆ ಅತಿಶಯೋಕ್ತಿಯಲ್ಲ.
ಕಷ್ಟಪಟ್ಟು ಮೇಲೆ ಬಂದವರು. ಕಷ್ಟವೇನೆಂದು ಗೊತ್ತಿದ್ದವರು. ಕಷ್ಟಕ್ಕೆ ಸ್ಪಂದಿಸುವ ಗುಣವಿದ್ದವರು, ಕಷ್ಟದಲ್ಲೂ ನಗುತ್ತಾ ನೋವ ನುಂಗುವವರು, ಬೇರೆಯವರ ಕಷ್ಟ ಮರೆಸುವ ಸಾಹಿತ್ಯ ನೀಡುವವರು, ಇಷ್ಟಪಟ್ಟು ಬದುಕುವವರಿಗಾಗಿ ಇಷ್ಟಾದರೂ ಬರೆಯಬೇಕೆನಿಸಿತು.
ಬರೆದಂತೆ ಬದುಕದಿರೆ ಬರೆದುದಕೆ ಬೆಲೆಯೇನು?!….
ಬರಿದೆ ಬರೆದೊರೆದು ಬದುಕಿದರೇನು ಬಂತು……
ಬರೆದಂತೆ ಬದುಕಿದವರಲ್ಲಲ್ಲಿ ಕೆಲರುಂಟು……
ಬರೆ ಬದುಕು ದೊಡ್ಡದನೆ ಮರುಳ ಮನುಜ……….
ಅವರ ಮಾರ್ಗದರ್ಶನ ನಮ್ಮಂಥ ಕಿರಿಯರಿಗೆ ಸದಾ ಸಿಗುತ್ತಲೇ ಇರಬೇಕು. ಅವರು ನಿತ್ಯ ಸುಖಿಯಾಗಿ ನೂರ್ಕಾಲ ಬಾಳಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಗಣಪತಿ ಕೊಂಡದಕುಳಿ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಗಣಪತಿ ಕೊಂಡದಕುಳಿ ದಂಪತಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 99808 88268
??????⚫⚪???????⚫⚪?????