ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ರೇವಯ್ಯ ಹಿರೇಮಠ
ವ್ಯಕ್ತಿ ಬೇರೆ ಬೇರೆ ಪ್ರದೇಶಗಳ ಜನರ ಜೊತೆ ಒಡನಾಡಿದಾಗ ಬೇರೆ ಬೇರೆ ಭಾಷೆ, ಜನ ಜೀವನಗಳ ಪರಿಚಯವಾಗುತ್ತದೆ. ವ್ಯಕ್ತಿಗಳ ಜೊತೆಗೆ ನೂರು ವರುಷ ಜೊತೆಯಾಗಿರಬೇಕೆಂದಿಲ್ಲ… ಮೂರು ದಿನಗಳು ಜೊತೆಯಾದರೂ ಅಳಿಸದಂಥ ನೆನಪುಳಿಸುವವರಿದ್ದಾರೆ. ವ್ಯಕ್ತಿಯೋರ್ವ ಹೇಗಿರಬೇಕು ಎಂದರೆ ಆತ ಹತ್ತಿಪ್ಪತ್ತು ವರ್ಷಗಳ ನಂತರ ಮತ್ತೆ ಭೇಟಿಯಾದರೂ ಆನಂದದ ಕಣ್ಣೀರು ತನ್ನಿಂದ ತಾನೇ ಸುರಿಯಬೇಕು. ನನ್ನೊಲವಿನ ರೇವಣ್ಣನ ಬಗ್ಗೆ ಬರೆಯುವುದೆಂದರೆ ನನಗೆ ಗಣೇಶ ಚತುರ್ಥಿ ಹಬ್ಬ ಆಚರಿಸಿದಷ್ಟೇ ಸಂಭ್ರಮ.
ರೇವಯ್ಯ ಹಿರೇಮಠರಿರುವುದು ಚಿಕ್ಕೋಡಿ ಜಿಲ್ಲೆ ರಾಯಭಾಗ ತಾಲೂಕಿನ ಕಂಕಣವಾಡಿಯಲ್ಲಿ. ವೃತ್ತಿಯಲ್ಲಿ ಕೃಷಿಕರು ಅವರು. ನಮ್ಮಕ್ಕ ಸೇವೆ ಸಲ್ಲಿಸಿದ ಸ್ವಾಮಿತೋಟ ಶಾಲೆಯ ಪಕ್ಕದಲ್ಲೇ ಅವರ ಮನೆ ಇರುವುದು. ಅವರ ಮನೆಗೆ ಸ್ವಾಮಿಗಳ ಮನೆ ಅಂತ ಕರೆಯುತ್ತಾರೆ. ಹಾಗಂತ ಯಾವ ಸ್ವಾಮೀಜಿಗಳೂ ಇಲ್ಲ. ? ಹೆಸರಷ್ಟೇ. ಅವರ ತೋಟದೊಳಗೆ ಆ ಶಾಲೆ ಇರುವುದರಿಂದ ಅದು ಸ್ವಾಮಿ ತೋಟ.
ನಮ್ಮಕ್ಕ ಸ್ವಾಮಿತೋಟ ಶಾಲೆಗೆ ಸರ್ಕಾರಿ ನೌಕರಿ ಹಿಡಿದು ಹೊರಟಾಗ ಮನೆಯಲ್ಲಿ ಹೇಳಿದ ಮಾತೊಂದೆ. “ತಂಗಿ ಸಭ್ಯಸ್ಥನಾಗಿ ಮನೆಯ ಮರ್ಯಾದಿಗೆ ಧಕ್ಕೆ ಬಾರದಂತೆ ಬದುಕಬೇಕೆಂಬುದಾಗಿ. ನಾನಾಗ ಓದುತ್ತಿದ್ದುದರಿಂದ ಅಕ್ಕ ಒಬ್ಬಳೇ ದೂರದ ರಾಯಭಾಗಕ್ಕೆ ಹೊರಟು ನಿಂತಿದ್ದಳು. ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡುವವರೆಗೂ ಹುಬ್ಬಳ್ಳಿ ಎಂಬ ಹೆಸರನ್ನಷ್ಟೇ ಕೇಳಿದ್ದ ನಮಗೆ ಹುಬ್ಬಳ್ಳಿಯಾಚೆ ಮತ್ತೆ ಹುಬ್ಬಳ್ಳಿ ಹೋದಷ್ಟು ದೂರ ಅಕ್ಕನನ್ನು ಕಳುಹಿಸಿ ಕೊಡುವುದು ಸಂಕಟವಾಗಿತ್ತು. ಬಡತನದ ಬೇಗೆಗೆ ನೌಕರಿಯೂ ಅನಿವಾರ್ಯ ಆದುದರಿಂದ ನಮ್ಮ ತಂದೆಯವರ ಸಂಗಡ ಅವಳು ಹೊರಟು ನಿಂತಿದ್ದಳು. ನಮ್ಮಪ್ಪ ಅವಳ ಜೊತೆ ವಾರ ಉಳಿದು ಎಲ್ಲಾ ವ್ಯವಸ್ಥೆ ಮಾಡಿ ಹಿಂದಿರುಗಿದರು. ಅಪರಿಚಿತ ಜಾಗ, ಅಪರಿಚಿತ ಜನ, ಮೊಬೈಲ್ ಇಲ್ಲದ ಕಾಲ, S.T.D center ನಿಂದ ಅಕ್ಕ ಆಗಾಗ ಫೋನಾಯಿಸುತ್ತಿದ್ದಳು.
ಕಂಕಣವಾಡಿಯಿಂದ ಈ ಸ್ವಾಮಿತೋಟ ಸುಮಾರು 3 ಕಿ.ಮೀ ಆಗುತ್ತದೆ. ಅಕ್ಕ ಪ್ರತಿದಿನ ಜೀಪಿಗೆ ಹೋಗಿ ಬರುವವಳು. ಆ ಜೀಪಿನಲ್ಲಿ ಬಸ್ಸಿನಷ್ಟೇ ಜನ ಹಿಡಿಯುತ್ತಾರೆ. ಮೇಲೆ ಕೆಳಗೆ ಯಪ್ಪಾ ಮಜವೋ ಮಜಾ ? ಆದರೆ ಒಂದು, ಅಲ್ಲಿಯ ಜನ ಹೆಂಗಸರಿಗೆ ಗೌರವದಿಂದ ಸೀಟು ಬಿಟ್ಟು ಕೊಡುತ್ತಾರೆ. ನಿಲ್ಲಲು ಜಾಗವಿಲ್ಲದಿದ್ದರೆ top ಮೇಲಾದರೂ ಕುಳಿತು ಕೊಳ್ಳುತ್ತಾರೆ. ? ಒಂದು ದಿನ ನಮ್ಮಕ್ಕ ಶಾಲೆಯಿಂದ ಮರಳಿ ಮನೆಗೆ ಹೊರಡಬೇಕೆಂದರೆ ಜೀಪೇ ಬರಲಿಲ್ಲವಂತೆ. ಸಂಗಡ ಜಿರಿ ಜಿರಿ ಮಳೆಯೂ ಪ್ರಾರಂಭವಾದುದರಿಂದ ನಡೆದುಕೊಂಡೇ ಮನೆಯ ಕಡೆಗೆ ಹೆಜ್ಜೆ ಹಾಕಿದಳಂತೆ. ಸ್ವಲ್ಪ ದೂರ ನಡೆದು ಬಂದಿದ್ದೇ ರೇವಣ್ಣ ನಮ್ಮಕ್ಕನನ್ನು ನೋಡಿದ್ದಾರೆ. ಮನೆಯಿಂದಲೇ ಕೊಡೆ ತೆಗೆದುಕೊಂಡು ಹೋಗಲು ಕರೆದಿದ್ದಾರೆ. ನಮ್ಮಕ್ಕನಿಗೆ ನಮ್ಮಪ್ಪ, ಅಮ್ಮ ಮೊದಲೇ ಶಿಸ್ತಿನ ಪಾಠ ಮಾಡಿರುವದರಿಂದ ಕರೆದರೂ ಕೇಳದೆ ಹಾಡು ಹೇಳುತ್ತಾ…? ಮನೆಗೆ ಅತಿ ವೇಗದಲ್ಲಿ ಮುಟ್ಟಿದ್ದಾಳೆ. ಅದು ಯಾರ ಮನೆ?… ಅವರು ಯಾರು?….ಎಂತಹ ಜನ?….ಎನ್ನುವುದು ಗೊತ್ತಿಲ್ಲದಿರುವುದರಿಂದ ಅಕ್ಕನಿಗೆ ಭಯವಾಗಿದೆ.
ಇದಾದ ಸ್ವಲ್ಪ ದಿನಕ್ಕೆ ರೇವಣ್ಣನ ಮನೆಯವರ ಸಂಪೂರ್ಣ ಪರಿಚಯವಾಗಿದೆ. ತುಂಬಾ ಒಳ್ಳೆಯ ಜನ ಅವರು ಎನ್ನುವುದು ಖಾತ್ರಿ ಆದ ಮೇಲೆ ರೇವಣ್ಣನ ಮನೆ ನಮ್ಮಕ್ಕನಿಗೆ ಭದ್ರತಾ ಕೇಂದ್ರವಾದಂತೆ ಆಗಿ ಹೋಯ್ತು. ನಮ್ಮ ಕಡೆ ಮನೆಯಲ್ಲಿ ಮೂರು ಮತ್ತೊಂದು ಜನ ಇದ್ದರೆ ಹೆಚ್ಚು. ರೇವಣ್ಣನ ಮನೆಯಲ್ಲಿ ಆಚೀಚೆ ಸೇರಿ ಸುಮಾರು 35 ಜನರಿದ್ದಾರೆ. ? ಹೀಗಾಗಿ ಎಲ್ಲರ ಹೆಸರು ಬಾಯಿಪಾಠ ಹಾಕಿಕೊಂಡರೂ ಮರೆತು ಹೋಗುತ್ತದೆ. ರೇವಣ್ಣನ ಹೆಸರೊಂದನ್ನೇ ನಾವು ಕಂಠಸ್ಥಗೊಳಿಸಿಕೊಂಡು ಬಿಟ್ಟಿದ್ದೇವೆ. ಯಾಕೆಂದರೆ ರೇವಣ್ಣ ಮರೆತೂ ಮರೆಯದ ಹೃದಯವಂತ.
ನಾನು ಕಂಕಣವಾಡಿಗೆ ಹೋದ ಮೇಲೆ ರೇವಣ್ಣ ತುಂಬಾ ಹತ್ತಿರವಾದರು. ಹುಟ್ಟಿ ಬೆಳೆದ ಈವರೆಗೂ ಸಾಂಬಾರು ಊಟ ಮಾಡಿ ಅಭ್ಯಾಸವಿಲ್ಲದ ನನಗೆ…ಹಾಲು ತಂದುಕೊಟ್ಟು ಜೀವ ಉಳಿಸಿದ ಪುಣ್ಯಾತ್ಮ ನಮ್ಮ ರೇವಣ್ಣ. ಪ್ರತಿದಿನ ಬೆಳಿಗ್ಗೆ ರೇವಣ್ಣನ ಗಾಡಿಗೆ ನಾನು ಕಾಯುತ್ತಿದ್ದೆ. ರೇವಣ್ಣ ಡೇರಿಗೆ ಹಾಲು ಹಾಕಿ ನಮಗೊಂದಿಷ್ಟು ಹಾಲು ಕೊಟ್ಟು ಹೋಗುತ್ತಿದ್ದರು. ಅದಕ್ಕೆ ಅಳತೆಯೇ ಇಲ್ಲ. ಯಾಕೆಂದರೆ ಅಳತೆ ಹಾಕಿ ಹಾಲು ಕೊಟ್ಟವರಲ್ಲ ರೇವಣ್ಣ. ಕ್ಯಾನಿನಲ್ಲಿ ಒಂದಿಷ್ಟು ಉಳಿಸಿಕೊಂಡು ಬಂದು ನಮ್ಮ ಪಾತ್ರೆಗೆ ಹಾಕಿ ಹೋಗುವವರು. ಒಂದಿಷ್ಟು ಹೆಚ್ಚೇ ಕೊಟ್ಟು ಹೋಗುವವರೇ ವಿನಹ ಕಡಿಮೆ ಕೊಟ್ಟ ದಾಖಲೆಯೇ ಇಲ್ಲ. ಕೆಲವೊಂದು ಕಡೆ ಹಾಲು ತೆಗೆದುಕೊಂಡರೆ ಅದರೊಳಗೆ ನಮ್ಮ ಪ್ರತಿಬಿಂಬ ಸ್ಪಷ್ಟವಾಗಿ ಕಾಣುತ್ತದೆ. ಯಾಕೆಂದರೆ ಬಿಳಿಯ ನೀರಾಗಿರುತ್ತದೆ ಅದು. ? ಆದರೆ ನಮ್ಮ ರೇವಣ್ಣ ತಂದು ಕೊಡುವ ಹಾಲಿನಿಂದ ಮಾಡಿದ ಮೊಸರು ಚಾಕು ತೆಗೆದುಕೊಂಡು ಕತ್ತರಿಸುವ ಹಾಗಿರುತ್ತಿತ್ತು. ಅಷ್ಟೇ ಅಲ್ಲ ರೇವಣ್ಣನ ಮನೆಯಲ್ಲಿ ಮಾಡಿದ ಗಿಣ್ಣ, ಧೂಧ ಪೇಡಾ, ನಮಗೆ ಆಗಾಗ ಉಚಿತವಾಗಿ ಸಿಗುತ್ತಿತ್ತು. ರೇವಣ್ಣ ಯಾವತ್ತೂ ಇಷ್ಟು ಹಣ ಕೊಡಲೇಬೇಕೆಂದು ಕೇಳಿದವರೇ ಅಲ್ಲ. ಒಳ್ಳೆಯವರೆಂದರೆ ಹೀಗೂ ಇರುತ್ತಾರಾ?! ಖಂಡಿತ ಇರುತ್ತಾರೆ. ಅಂಥವರ ಪರಿಚಯ ನಮಗಾಗುವುದಕ್ಕೂ ದೇವರ ದಯ ಬೇಕು ಖಂಡಿತ. ಸುಳ್ಳು ಬಿಗಿದು…. ನಂಬಿಸಬೇಕಾದ ಯಾವ ಅನಿವಾರ್ಯತೆಯೂ ನನಗಿಲ್ಲದಿರುವದರಿಂದ ಮತ್ತು ರೇವಣ್ಣ ಮಾಡಿದ ಉಪಕಾರಕ್ಕೆ ನನ್ನಿಂದ ಅವನಿಗೆ ಏನೂ ಕೊಡಲ್ಪಡದೇ ಇರುವುದರಿಂದ ಈ ಲೇಖನ ಬರೆಯುತ್ತಿದ್ದೇನೆ.
ರೇವಣ್ಣ ನನ್ನ ಆತ್ಮೀಯ ಗೆಳೆಯರಿದ್ದಂತೆ. ಅವರು ಬಂದಾಗ ಮಾತ್ರ ನಾನು ಗಂಟೆಗಟ್ಟಲೆ ಅವರ ಜೊತೆ ಸುದ್ದಿ ಹಂಚಿಕೊಳ್ಳುತ್ತಿದ್ದೆ. ರೇವಣ್ಣನ ತಮ್ಮ ಸಂಗಮೇಶನೂ ಆಗಾಗ ಹಾಲು ತರುತ್ತಿದ್ದುದರಿಂದ ಸಂಗಮೇಶನೂ ತುಸು ಪರಿಚಿತನಾಗಿದ್ದ. ನನ್ನನ್ನು ಮತ್ತು ಅಕ್ಕಳನ್ನೂ ಅತ್ಯಂತ ಕಾಳಜಿಯಿಂದ ನೋಡಿಕೊಂಡ ಅವರು ಇಂದಿಗೂ ನಮ್ಮ ಜೊತೆ ಅಷ್ಟೇ ಆತ್ಮೀಯತೆಯಿಂದ ಇದ್ದಾರೆ.
ರೇವಣ್ಣ ನನ್ನನ್ನು ಅವನ ಎತ್ತಿನ ಗಾಡಿಯ ಮೇಲೆ ಬೆಂಡವಾಡ ಜಾತ್ರೆಗೆ ಕರೆದುಕೊಂಡು ಹೋಗಿದ್ದ. ಜೀವಮಾನದಲ್ಲಿ ಅಷ್ಟು ದೂರ ಎತ್ತಿನ ಗಾಡಿಯ ಮೇಲೆ ಪ್ರಯಾಣ ಮಾಡಿದ್ದು ಅದೇ ಮೊದಲು…… ಅದೇ ಕೊನೆ. ? ಎತ್ತುಗಳು ನಾಗಾಲೋಟದಿಂದ ಓಡುತ್ತಿದ್ದರೆ…….ನನಗಾದ …….ನೋವು ಕಡಿಮೆಯಾಗುವುದಕ್ಕೆ ಹದಿನೈದು ದಿನ ಹಿಡಿಯಿತು. ?
ಬಯಲುಸೀಮೆಯ ಖಾರವೆಂದರೆ ನವ ರಂಧ್ರಗಳಲ್ಲೂ ನೀರು ಬರುತ್ತದೆ. ? ಅಂತಹುದರಲ್ಲಿ ಖಾರ ತಿನ್ನದ ನನಗೆ ಹಾಲು ಮೊಸರು ಕೊಟ್ಟ ರೇವಣ್ಣ ಬೆಣ್ಣೆಯಂಥ ಮನಸ್ಸಿನ ಸ್ನೇಹವನ್ನೂ ಕೊಟ್ಟರು. ರೇವಣ್ಣನಿಗೆ ಮಡದಿ ಮತ್ತು ಮುದ್ದಾದ ಮೂವರು ಮಕ್ಕಳಿದ್ದಾರೆ ಈಗ. ಸಂಗಮೇಶ ಸ್ವಂತ ದವಾಖಾನೆ ನಡೆಸುತ್ತಾನೆ. ಆ ಕಾಲಕ್ಕೆ ಅಲ್ಲಿನ ಪರಿಸರದ ಸಂಪೂರ್ಣ ಪರಿಚಯ ಮಾಡಿಕೊಡುತ್ತಿದ್ದ ರೇವಣ್ಣ ನನ್ನ ಕುತೂಹಲದ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಿದ್ದರು. ನಾನು ಅದ್ಯಾಕೆ ಹಾಗೆ?! ಇದ್ಯಾಕೆ ಹೀಗೆ?! ಎಂದು ಕೇಳಿದಾಗೆಲ್ಲ ಸ್ವಲ್ಪವೂ ಬೇಸರ ಇಲ್ಲದೆ ನನಗೆ ವಿವರಿಸುತ್ತಿದ್ದರು. ನಾವಿಬ್ಬರೂ ತಮಾಷೆ ಮಾಡಿ ನಕ್ಕ ದಿನಗಳದೆಷ್ಟೋ…….
ಅಲ್ಲಿಯ ಭಾಷೆ ನನಗಷ್ಟಾಗಿ ಬರುತ್ತಿರಲಿಲ್ಲ. ನಮ್ಮಕ್ಕ ಭಾಷಾ ತಜ್ಞೆಯಾದುದರಿಂದ ಬಹು ಬೇಗ ಭಾಷೆ ಕಲಿತಿದ್ದಳು. ನಾನು ನನ್ನ ಭಾಷೆಯನ್ನೇ ಅವರಿಗೆ ಕಲಿಸುವ ಪ್ರಯತ್ನ ಮಾಡುತ್ತಿದ್ದೆ. ? ದೇವರೇ…….ಭಗವಂತ. ?
ರೇವಣ್ಣ ಸ್ವಚ್ಛ ಮನಸ್ಸಿನ ಸಿರಿವಂತ. ಹಾಗಾದುದರಿಂದಲೇ ಇಂದು ಆತ ಮುಟ್ಟಿದ್ದೆಲ್ಲ ಚಿನ್ನ. ಹತ್ತಾರು ಎಕರೆ ಜಮೀನಿನಲ್ಲಿ ಜೋಳ, ಕಬ್ಬು, ಮೆಣಸು, ಬೇಳೆ, ಕಾಳು ಬೆಳೆಯುವ ರೇವಣ್ಣ ಕಿರಾಣಿ ಅಂಗಡಿಯೊಂದನ್ನೂ ಹಾಕಿದ್ದಾನೆ. ತಮ್ಮಂದಿರೆಲ್ಲಾ ಈಗ ಕಷ್ಟಪಟ್ಟು ಓದಿ ನೌಕರಿ ಹಿಡಿದಿದ್ದಾರೆ. ಅಣ್ಣನಾಗಿ ಮಾಡುವ ಕರ್ತವ್ಯ ಮಾಡಿ ರೇವಣ್ಣ ಸಂಭ್ರಮದಿಂದ ಬಾಳ್ವೆ ಮಾಡುತ್ತಾರೆ.
ಆಗಾಗ ಫೋನಾಯಿಸುವ ನಾವು ಆ ಸ್ನೇಹವನ್ನು ಇಂದಿಗೂ ಇರಿಸಿಕೊಂಡಿದ್ದೇವೆ. Friendship ಎಂದರೆ mutual understanding ಮತ್ತು mutual fulfillment….ಅಂತ ಕೇಳಿದ್ದೇನೆ. ಆದರೆ ಕೆಲವರು ಹಾಗಲ್ಲ. ಕೊಡುವವರು ಕೊಡುತ್ತಲೇ ಇರಬೇಕು. ಪಡೆಯುವವರು ಪಡೆದು ಹೊರಟು ಹೋಗುತ್ತಾರೆ. ರೇವಣ್ಣ ನಮ್ಮ ಮನಸ್ಸಿನಿಂದ ಯಾವಾಗಲೂ ದೂರಾಗುವುದಿಲ್ಲ. ಅವನು ಅಯ್ಯೋ… ಎಂದ ಕಾಲಕ್ಕೆ ನಾನವನ ಜೊತೆ ನಿಲ್ಲಲು ಖಂಡಿತ ಧಾವಿಸುತ್ತೇನೆ. ಸಂತೋಷದಲ್ಲಿ ಅವನು ನನ್ನನ್ನು ಕರೆಯದಿದ್ದರೂ ನಡೆಯುತ್ತದೆ. ಬರಿದೆ ಬರೆಯುವುದಿಲ್ಲ.
ರೇವಣ್ಣನ ಮನೆಗೆ ಹೋದವರ್ಷ ಹೋಗಿ ಎಲ್ಲರನ್ನೂ ಕಂಡು ಖುಷಿಪಟ್ಟು ಬಂದಿದ್ದೇನೆ. ನಿಸ್ವಾರ್ಥವಾಗಿ ಕಂಡ ರೇವಣ್ಣ ನನ್ನೊಳಗಿನ ಸ್ವಾರ್ಥವನ್ನೂ ಕೊಂಚ ಕಡಿಮೆ ಮಾಡಿದ್ದಾನೆ. ಲೆಕ್ಕಚಾರವೇ ಬದುಕಲ್ಲ ಎಂದು ಬದುಕಿದವನಿಗೆ ಭಗವಂತನೂ ಇಂದು ಕೈತುಂಬಾ ನೀಡಿದ್ದಾನೆ. ನೀಡುತ್ತಲೇ ಇದ್ದಾನೆ.
ಹಾಲು ಮಾರುವವನ ಹಾಗೂ ಕೊಂಬವನ ಸಂಬಂಧವನ್ನು ನಾಡಿನ ಜನ ಓದಬೇಕು. ನಾಡಿ ಮಿಡಿತ ಇರುವವರೆಗೂ ರೇವಣ್ಣನ ಸಜ್ಜನಿಕೆ ಮರೆಯಲಾರದ್ದು. ವ್ಯವಹಾರಕ್ಕಷ್ಟೇ ಸಂಬಂಧ ಸೀಮಿತವಾಗಿದ್ದರೆ ಇಂದು ಅವರ್ಯಾರೋ……! ನಾವ್ಯಾರೋ…..! ಶ್ರೀಧರ ಸ್ವಾಮಿಗಳ ದಿವ್ಯಾನುಗ್ರಹ ನಮಗೆ ಸ್ವಾಮಿಗಳ ಮನೆಯನ್ನೇ ತೋರಿಸಿತು. ರೇವಣ್ಣನ ರೂಪದಲ್ಲಿ ಸದ್ಗುರು ಶ್ರೀಧರರು ದಯೆ ತೋರಿದರು. ಹೊಗಳುವುದಿಲ್ಲ. ಬಾಯ್ಮಾತಿಗೆ ಬಣ್ಣನೆ ಮಾಡಿ ನನ್ನ ಲೇಖನಗಳ ಸಂಖ್ಯೆ ಹೆಚ್ಚು ಮಾಡಬೇಕೆಂಬ ಯಾವ ದುರುದ್ದೇಶವೂ ನನಗಿಲ್ಲ. ಬರೆಯುವುದಕ್ಕೆ ಸಾವಿರ ವಿಷಯಗಳಿವೆ. ಆದರೆ ರೇವಣ್ಣನ ಬಗೆಗೆ ಬರೆಯದೇ ಹೋದರೆ ನಾನು ಕೃತಘ್ನನಾದೇನು.
ಅವರ ಮನೆಯ ಆಯಿ, ಹಾಗೂ ಎಲ್ಲಾ ಸಹೋದರ ಸಹೋದರಿಯರನ್ನೂ ನಾನು ಸ್ಮರಿಸುತ್ತೇನೆ. ಈರಣ್ಣನಿಗೂ ನನ್ನ ಶುಭಾಶಯಗಳು. ನಗುತ್ತಾ ಇರಿ. ಹಬ್ಬವಾಗಲಿ ನಿಮಗೆ. ದಿನವೂ ಹುಗ್ಗಿ ಮಾಡುವ ಸಂಬ್ರಮ ನಿಮ್ಮದಾಗಲಿ. ನಿಮಗಾಗಿ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಮನಸ್ಸು ಕೂಡ ಪದೇ ಪದೇ ನಿಮ್ಮನ್ನು ಹಂಬಲಿಸುತ್ತದೆ. ನಿಮ್ಮಂಥವರನ್ನು ನನ್ನ ಜೀವನದಲ್ಲಿ ಪರಿಚಯಿಸಿ ನನ್ನ ದಿನಗಳನ್ನು ಬಂಗಾರವಾಗಿಸಿದ ಭಗವಂತನಿಗೆ ನಾನೆಷ್ಟು ಬಾರಿ ಕೃತಜ್ಞತೆ ಹೇಳಲಿ?!
ಸದ್ಗುರು ಶ್ರೀಧರರ ಆಶೀರ್ವಾದ ರೇವಣ್ಣ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ರೇವಣ್ಣನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 99458 76805
??????⚫⚪???????⚫⚪?????