ಇದೊಂದು ಆಡಿ ಪೂರೈಸಲಾಗದ , ಬರೆದು ಮುಗಿಸಲಾಗದ ವಿಷಯ. ಗುರುವಿನ ಮಹಿಮೆಯನ್ನು ವರ್ಣಿಸಲು ಮುಂದಾದವನೊಬ್ಬ ಹೇಳಿದನಂತೆ….
ಭೂಮಿಯನ್ನೇ ಕಾಗದ ವಾಗಿಟ್ಟುಕೊಂಡು, ಕಲ್ಪವೃಕ್ಷದ ಕೊಂಬೆಗಳನ್ನೇ ಲೇಖನಿ ಯಾಗಿಸಿಕೊಂಡು, ಸಾಗರಗಳನ್ನೇ ಮಸಿಯನ್ನಾಗಿಸಿ, ಸ್ವಯಂ ಶಾರದೆಯೇ ಬರೆಯಲು ಕುಳಿತರೂ ಗುರು ಮಹಿಮೆಯನ್ನು ಕಲ್ಪ- ಕಲ್ಪ ಗಳಲ್ಲೂ ಬರೆದು ಮುಗಿಸಲು ಸಾಧ್ಯವಾಗದು ಎಂದು. ಗುರು ಮಹಿಮೆಯ ವ್ಯಾಪ್ತಿ ಅಷ್ಟು ವಿಶಾಲವಾದುದು.

ಒಂದು ಮಹಾ ಪರ್ವತವನ್ನು ಒಂದೊಂದು ದಿಕ್ಕಿನಿಂದ ನೋಡಿದರೆ ಒಂದೊಂದು ರೀತಿಯಲ್ಲಿ ಕಾಣುತ್ತದೆ. ಕೆಳಗಿನಿಂದ ನೋಡಿದರೆ ಒಂದು ರೂಪ, ಮೇಲಿನಿಂದ ನೋಡಿದರೆ ಇನ್ನೊಂದು ರೂಪ. ಆದರೆ ಎಲ್ಲ ನೋಟದಲ್ಲಿ ಕಂಡಿದ್ದು ಅದೇ ಪರ್ವತವೇ. ಹಾಗೆಯೇ ಗುರು. ಗುರುವೆಂಬ ವಿರಾಟ ಪುರುಷ.

ಜ್ಯೋತಿಷ್ಯದಲ್ಲಿ ಗುರು ದೃಷ್ಟಿಗೆ ತುಂಬಾ ಮಹತ್ವವಿದೆ. ಎಲ್ಲ ದೋಷಗಳು ಗುರು ದೃಷ್ಟಿಯಿಂದ ಪರಿಹಾರ ಎನ್ನುವ ನಂಬಿಕೆ ಇದೆ. ಅಂತಹ ಅಮೃತ ದೃಷ್ಟಿ ಅದು. ದೃಷ್ಟಿ ಎನ್ನುವುದು ಅದೊಂದು ದಾರಿ ನಮ್ಮ ಒಳಗಿನ ಭಾವ ಅದರ ಮೂಲಕ ಹೊರಹೋಗುತ್ತದೆ ,ಹೊರಗಿನ ದೃಶ್ಯ ಒಳಗೆ ಬರುತ್ತದೆ. ಗುರುವಿನ ಅಂತರಂಗದಲ್ಲಿರುವ ಅಮೃತ ದೃಷ್ಟಿಯ ಮೂಲಕ ಹೊರಬಂದು ಶುಭವನ್ನುಂಟು ಮಾಡುವುದರಿಂದ ಗುರು ದೃಷ್ಟಿಗೆ ಅಂತಹ ಮಹತ್ವವಿದೆ.

ದೃಷ್ಟಿಯಲ್ಲಿ ಒಳ್ಳೆಯ ದೃಷ್ಟಿ ಕೆಟ್ಟ ದೃಷ್ಟಿ ಎರಡೂ ಇದೆ. ಒಳ್ಳೆಯ ದೃಷ್ಟಿ ಬಿದ್ದಲ್ಲಿ ಒಳಿತು ಕೆಟ್ಟ ದೃಷ್ಟಿ ಬಿದ್ದಲ್ಲಿ ಕೆಡುಕು. ಅಂದು ದಶರಥ ಒಂದು ನಿರ್ಣಯ ಮಾಡಿದ. ರಾಮನಿಗೆ ಪಟ್ಟಾಭಿಷೇಕವೆಂದು. ಅದೇ ಕಾಲಕ್ಕೆ ಮಂಥರೆ ಅರಮನೆಯ ಉಪ್ಪರಿಗೆಯಿಂದ ಅಯೋಧ್ಯಾ ನಗರವನ್ನು ದೃಷ್ಟಿಸಿದಳಂತೆ. ಎಲ್ಲೆಲ್ಲೂ ಸಂಭ್ರಮ ಕೌಸಲ್ಯೆಯನ್ನೂ ನೋಡಿದಳು. ಅಲ್ಲೂ ಸಂಭ್ರಮ. ಆಗ ಮಂಥರೆಗೆ ಗೊತ್ತಾಗಿದ್ದು ನಾಳೆ ರಾಮನಿಗೆ ಪಟ್ಟಾಭಿಷೇಕ ವೆಂದು. ಮುಂದೆ ನಡೆದಿದ್ದು ದೊಡ್ಡ ಅನಾಹುತ. ಮಂಥರೆಯ ಆ ಒಂದು ದೃಷ್ಟಿಯಿಂದ ಅಯೋಧ್ಯೆ ಸ್ಮಶಾನವಾಗಿ ಹೋಯ್ತು. ಅದು ದಶರಥನ ಮರಣಕ್ಕೆ, ಕಿಷ್ಕಿಂಧೆಯ ಅರಸ ವಾಲಿಯ ಅವಸಾನಕ್ಕೆ, ಲಂಕೆಯ ಅಧಿಪತಿ ರಾವಣನ ಸಾವಿಗೆ ಕಾರಣವಾಯ್ತು. ಹೀಗೆ ಕೆಟ್ಟ ದೃಷ್ಟಿ ಅನಾಹುತಕ್ಕೆ ಕಾರಣವಾಗುತ್ತದೆ.
ಜಗತ್ತಿನಲ್ಲಿ ಅಂತರಂಗದಲ್ಲಿ ಅಮೃತವನ್ನು ತುಂಬಿಕೊಂಡು ತನ್ನ ನೋಟದಿಂದಲೇ ಒಳಿತು ಮಾಡುವ ಗುರು ದೃಷ್ಟಿಯೂ ಇದೆ…. ಅಂತರಂಗದಲ್ಲಿ ವಿಷವನ್ನು ತುಂಬಿಕೊಂಡು ತನ್ನ ನೋಟದಿಂದಲೇ ಕೆಡುಕು ಮಾಡುವ ಮಂಥರೆಯ ದೃಷ್ಟಿಯೂ ಇದೆ.

ಅದೊಂದು ಶಿಲ್ಪಶಾಲೆ . ಅಮರ ಶಿಲ್ಪಿ ಎಂದೇ ಖ್ಯಾತನಾಗಿದ್ದ ಶ್ರೇಷ್ಠ ಶಿಲ್ಪಿಯೊಬ್ಬ ಗುರುವಾಗಿದ್ದ. ಹಲವು ಶಿಷ್ಯರಿಗೆ ಕಲಿಸಿಕೊಡುತ್ತಿದ್ದ . ಅವರಲ್ಲಿ ಒಬ್ಬ ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದ. ಅವನಿಗೆ ಗುರುವನ್ನು ಮೀರಿಸಬೇಕೆಂಬ ಆಸೆ . ಆದರೆ ಎಷ್ಟೇ ಪ್ರಯತ್ನಿಸಿದರೂ ಗುರುವಿನಷ್ಟು ಉತ್ತಮ ಶಿಲ್ಪ ರಚನೆ ಅವನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಆತ ಗುರುವಿನಲ್ಲಿ ಕೇಳಿಯೇ ಬಿಟ್ಟ… “ನಾನು ಎಷ್ಟೇ ಪ್ರಯತ್ನಿಸಿದರೂ ನಿಮ್ಮಂತೆ ಶಿಲ್ಪ ರಚನೆ ಸಾಧ್ಯವಾಗುತ್ತಿಲ್ಲ. ನಿಮ್ಮ ಶಿಲ್ಪ ಸೌಂದರ್ಯದ ರಹಸ್ಯವೇನು..?” ಎಂದು. ಆಗ ಅಮರಶಿಲ್ಪಿ “ನೀನು ಕೆತ್ತ ನೆಗಾಗಿ ಬಂಡೆ ಆರಿಸಿಕೊಂಡು ನೋಡುವಲ್ಲಿ ಎಲ್ಲ ರಹಸ್ಯವಿದೆ. ನೀನು ಬಂಡೆಯನ್ನು ಆರಿಸಿಕೊಂಡಾಗ ಅದರಲ್ಲಿ ಯಾವ ಮೂರ್ತಿ ಕೆತ್ತನೆ ಮಾಡಬೇಕೋ ಆ ಮೂರ್ತಿ ನಿನ್ನ ಕಣ್ಣಿಗೆ ಕಾಣಬೇಕು. ಅಲ್ಲಿ ಮೂರ್ತಿಯಲ್ಲದ ಭಾಗವನ್ನು ತೆಗೆದುಹಾಕು. ಆಗ ನೀನು ಶ್ರೇಷ್ಠ ಶಿಲ್ಪಿಯಾಗುತ್ತೀಯಾ………..ಎಂದರಂತೆ ಹಾಗೆ ಬಂಡೆಯಲ್ಲಿ ಮೂರ್ತಿ ಕಾಣುತ್ತದೆಂದರೆ ಅದು ಖಂಡಿತವಾಗಿಯೂ ಮಹಾಚೇತನ ದೃಷ್ಟಿ. ಆ ದೃಷ್ಟಿಗೆ ಜಡಕ್ಕೆ ಚೈತನ್ಯ ತುಂಬುವ ಅಪಾರ ಶಕ್ತಿಯಿದೆ. ಗುರು ಒಬ್ಬ ವ್ಯಕ್ತಿಯ ಪಾಪ ಪುಣ್ಯ ಎರಡನ್ನೂ ನೋಡುತ್ತಾನೆ. ಪಾಪ ತೊಳೆದು ಪಾವನಗೊಳಿಸುವ ಶಕ್ತಿ ಗುರು ದೃಷ್ಟಿಯಿದೆ. ಅದಕ್ಕಾಗಿಯೇ ಗುರುವಿನ ಸನ್ನಿಧಿಯಲ್ಲಿ ಪಾಪಿಗಳಿಗೆ ಅವಕಾಶವಿದೆ. ಆಸ್ಪತ್ರೆ ಕಟ್ಟಿ ಅಲ್ಲಿಗೆ ರೋಗಿಗಳೇ ಬರಬಾರದೆಂದರೆ ಹೇಗೆ…? ಒಂದು ದೃಷ್ಟಿಯಿಂದ ಪಾಪಿಗಳು ಗುರುವಿನ ಸನ್ನಿಧಿಯನ್ನು ಹೆಚ್ಚು ಆಶ್ರಯಿಸಬೇಕು. ಗುರುವಿನ ಕರುಣಾ ದೃಷ್ಟಿ ಅವರ ಮೇಲೆ ಬಿದ್ದರೆ ಅವರ ಪಾಪ ತೊಳೆದು ಜೀವನ ಪಾವನವಾಗಲು ಸಾಧ್ಯ. ಅದಕ್ಕೇ ಗುರುದೃಷ್ಟಿಯ ಕುರಿತು ಕವಿವಾಣಿಯೊಂದು ಹೇಳಿದ್ದು ಹೀಗೆ ಮರುಕ ತುಂಬಿದ ಕಣ್ಣನೋಟದಲ್ಲಿದ್ದೀತು ಬಿರು ನುಡಿಯಲಿರದ ಒಂದು ಕೂರಲಗು… ಅಂತ.

RELATED ARTICLES  ಅನ್ಯೋನ್ಯ- ಔದಾರ್ಯ

ವಿತ್ತಾಪಹಾರಕ ನಿಜವಾದ ಗುರುವಲ್ಲ…..ಚಿತ್ತಾಪಹಾರಕ ನಿಜವಾದ ಗುರು. ಹಂಸ ಕ್ಷೀರ ನ್ಯಾಯವನ್ನು ಒದಗಿಸುವುದು ಗುರುವಿನ ದೃಷ್ಟಿ. ಬಂಡೆಯನ್ನು ಮೂರ್ತಿಯನ್ನಾಗಿಸುವುದು ಗುರುದೃಷ್ಟಿ. ಗುರು ದೃಷ್ಟಿಗೇನು ಕೊಂಬಿದೆಯೇ…? ಎಂದು ಕೇಳಿದನಂತೆ ಒಬ್ಬ . ಹೌದು ಎರಡು ಕೊಂಬಿದೆ ಎಂದನಂತೆ ಮತ್ತೊಬ್ಬ. ಹೇಗೆ…? ಎಂದಾಗ ‘ಗುರು’ ಶಬ್ದದಲ್ಲೇ ಎರಡು ಕೊಂಬಿದೆ. ಕೊಂಬು ತೆಗೆದರೆ ‘ಗರ’ ವಾಗುತ್ತದೆ. ‘ಗರ’ ವೆಂದರೆ ‘ವಿಷ’ ಎಂದನಂತೆ. ಎಂಥ ಮಾರ್ಮಿಕ ಉತ್ತರವಲ್ಲವೇ..?

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ನಮ್ಮ ಬದುಕಿನಲ್ಲಿ ಬೇಡವಾದದ್ದು ಹೋಗಬೇಕೆಂದರೆ ಗುರು ದೃಷ್ಟಿ ನಮ್ಮ ಮೇಲೆ ಬೀಳಬೇಕು. ಒಂದು ತೋಟದಲ್ಲಿ ಕಳೆ ಕಳೆದು ಬೆಳೆ ಬೆಳೆದಂತೆ ಜೀವನವೆಂಬ ತೋಟದಲ್ಲಿ ಪಾಪವೆಂಬ ಕಳೆ ಕಳೆದು ಪುಣ್ಯವೆಂಬ ಬೆಳೆ ಬೆಳೆಯಬೇಕಾದರೆ ಗುರು ದೃಷ್ಟಿ ಅವಶ್ಯ
ಗುರು ದೃಷ್ಟಿಯಿಂದ ಎಲ್ಲರ ಬದುಕು ನಂದನವನವಾಗಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.