ಲೇಖನ -ಉಮೇಶ ಮುಂಡಳ್ಳಿ ಭಟ್ಕಳ
ಇಂದು ಜೂನ್ ೫ ಈ ದಿನವನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ವನಮಹೋತ್ಸವದ ದಿನ ಎಂದೂ ಕರೆಯುತ್ತಾರೆ. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ೧೯೭೪ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಈ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತದೆ. ನಮ್ಮ ರಾಜ್ಯ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡಗಳನ್ನು ನೆಡಲಾಗುತ್ತದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಪರಿಸರ ಜಾಗೃತ ದಿನವೆಂದು ಕರೆಯಲಾಗುತ್ತದೆ.
ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸುಂದರವಾದ ಭೂಮಿಯನ್ನು ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಲು ಈ ವಿಶ್ವ ಪರಿಸರ ದಿನ ಆಚರಣೆಯು ಎಲ್ಲರನ್ನು ಪ್ರೇರೇಪಿಸುತ್ತದೆ.
ಈ ಆಚರಣೆಯನ್ನು ಕೇವಲ ಒಂದು ದಿನಕ್ಕಾಗಿ ಮಾತ್ರ ಆಚರಿಸುವಂತಾಗದೆ ಇದರ ಸಂಪೂರ್ಣ ಆಗು ಹೋಗು ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಇವೆಲ್ಲವೂ ಅರಿಯುವುದು ಮುಖ್ಯವಾಗಿದೆ ಆ ದಿಸೆಯಲ್ಲಿ ಒಂದು ಸಣ್ಣ ಪಯತ್ನ ಈ ಲೇಖನ.
ನಮ್ಮ ಪರಿಸರದಲ್ಲಿ ಹರಿಯುವ ನೀರು, ಬೀಸುವ ಗಾಳಿ, ಹಣ್ಣು ಹಂಪಲು ನೀಡುವ ಸಸ್ಯಗಳು, ವಾಸಿಸಲು ಇರುವ ನೆಲ,ಗಿಡ- ಮರಗಳು ಬೆಳೆಯುವ ಹಣ್ಣು ಇವುಗಳೆಲ್ಲ ಇರುವುದು ನಮ್ಮ ಬಳಕೆಗಾಗಿ ನಿಜ. ಆದರೆ ಈ ಎಲ್ಲವನ್ನೂ ಚೆನ್ನಾಗಿಟ್ಟುಕೊಳ್ಳಬೇಕಾದುದು ಕೂಡ ನಮ್ಮ ಕರ್ತವ್ಯ ಎನ್ನುವುದನ್ನು ನಾವು ಎಂದೂ ಮರೆಯಬಾರದು.
ಈ ಭೂಮಿಯ ಮೇಲೆ ಪ್ರಕೃತಿಯೇ ನಿರ್ಮಿಸಿರುವ ಒಂದು ಆಹಾರ ಸರಪಳಿಯ ಕೊಂಡಿ ಇದೆ
ಸಸ್ಯಗಳು ಕೀಟಗಳಿಗೆ ಆಹಾರ,ಕೀಟಗಳು ಕಪ್ಪೆಗೆ ಆಹಾರ ಕಪ್ಪೆಗಳು ಹಾವುಗಳಿಗೆ, ಹಾವುಗಳು ಹದ್ದುಗಳಿಗೆ ಆಹಾರ. ಪ್ರಕೃತಿಯ ಜೀವಸರಪಳಿಯಲ್ಲಿ ಲಕ್ಷ ಲಕ್ಷ ಜೀವಿಗಳಿರುವಂತೆ ಮನುಷ್ಯನೂ ಒಂದು ಜೀವಿ ಅಷ್ಟೇ. ಈ ಎಲ್ಲ ಜೀವಿಗಳಂತೆ ಮಾನವಜೀವಿಯೂ ಪ್ರಕೃತಿ ನಿಯಮಗಳನ್ನು ಪಾಲಿಸಿದ್ದರೆ ಬಹುಶಃ ಯಾವದೇ ಸಮಸ್ಯೆಗಳು ಬರುತ್ತಿರಲಿಲ್ಲ ಆದರೆ ಬುದ್ದಿ ಜೀವಿ ಎಂದು ಕರೆಸಿಕೊಂಡ ಮನುಷ್ಯ ಪರಿಸರವನ್ನು ತನಗೆ ಬೇಕಾದ ರೀತಿಯಲ್ಲಿ ಪರಿವರ್ತನೆ ಮಾಡುತ್ತಾ ಬಂದಿದ್ದಾನೆ. ಕೇರಳದಲ್ಲಿ ಮೊನ್ನೆ ಗರ್ಭಿಣಿ ಆನೆಯೊಂದಕ್ಕೆ ಅನಾನಸ್ ಹಣ್ಣಿನಲ್ಲಿ ಪಟಾಕಿ ತಿನ್ನಿಸಿ ಭ್ರೂಣದ ಜೊತೆ ತಾಯಿ ಆನೆಯನ್ನು ಸಾಯಿಸಿದ ಮನುಷ್ಯನ ಅಮಾನುಷ ಕೃತ್ಯವೊಂದು ಜೀವ ಜಗತ್ತನ್ನು ತಲ್ಲಣ ಗೊಳಿಸಿದೆ.
500 ಕೋಟಿ ವರುಷದ ಹಿಂದೆಯೇ ಹುಟ್ಟಿರುವ ಈ ಭೂಮಿಯ ಮೇಲೆ ಮಾನವಜೀವಿ ಆಸ್ತಿತ್ವಕ್ಕೆ ಬಂದದ್ದು ಸುಮಾರು 20 ಲಕ್ಷ ವರ್ಷಗಳ ಹಿಂದೆ ಅಷ್ಟೇ.
ಇಂದು ಜಗತ್ತಿನ ಮಾನವರ ಸಂಖ್ಯೆ 800 ಕೋಟಿ ಇರಬಹುದು. ಇವರೆಲ್ಲರ ಅಗತ್ಯ ವಸ್ತುಗಳು ಹಾಗೂ ಇತರ ಪದಾರ್ಥಗಳ ಪೂರೈಕೆಗಾಗಿ ಕಾಡನ್ನು ಕಡಿದು ಕೃಷಿಗೆ ಬಳಸಲಾಗುತ್ತಿದೆ. ಕಟ್ಟಡಗಳನ್ನು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ತಾಂತ್ರಿಕ ಅವಿಷ್ಕಾರಗಳಿಂದಾಗಿ ಗಣಿಗಳು, ಕಾರ್ಖಾನೆಗಳು ಹೆಚ್ಚುತ್ತಿವೆ. ಲೆಕ್ಕವಿಲ್ಲದ ವಾಹನಗಳ ಓಡಾಟದಿಂದ ಧೂಳು ತುಂಬಿದ ಗಾಳಿ ಎಲ್ಲೆಡೆ ಸೇರಿಕೊಳ್ಳುತ್ತಿದೆ. ಈ ಎಲ್ಲ ಕಾರಣಗಳಿಂದ ವಾಯುಮಾಲಿನ್ಯ ಜಲಮಾಲಿನ್ಯ ಶಬ್ದ ಮಾಲಿನ್ಯ, ವಿಕಿರಣ ಮಾಲಿನ್ಯಕ್ಕೆ ಇವು ದಾರಿಯಾಗಿದೆ.
ನಿಸರ್ಗದ ಮೇಲೆ ಮಾನವ ಇಂದು ಸತತವಾಗಿ ದಾಳಿ ಮಾಡುತ್ತಿದ್ದಾನೆ.
ಗ್ರಾಮೀಣ ಪ್ರದೇಶಲ್ಲಿ ವಾಸಿಸುವ ಲಕ್ಷಾಂತರ ಜನಕ್ಕೆ ಇಂದು ಕುಡಿಯುವ ಶುದ್ಧ ನೀರು ಇಲ್ಲ. ಒಳ್ಳೇಯ ಶೌಚಾಲಯ ವ್ಯವಸ್ಥೆ ಇಲ್ಲ. ಅರಣ್ಯ ಮಾಯವಾಗಿ ಮಳೆಯು ಕಡಿಮೆಯಾಗಿ ನದಿ, ಕೆರೆ ಜಲಾಶಯಗಳು ಹೂಳು ತುಂಬಿ ಹೊಸಹೊಸ ರೋಗರುಜೀನಗಳು ಜನರಲ್ಲಿ ಮನೆ ಮಾಡುತ್ತಿವೆ. ಇದಕ್ಕೆಲ್ಲ ಮೂಲ ಕಾರಣ ಪರಿಸರ ನಾಶ.
ಇಂಧನಗಳ ಬಳಕೆಯಿಂದ ಉತ್ಪತ್ತಿಯಾದ ಇಂಗಾಲಡೈಆಕ್ಸೈಡ್ ಮತ್ತು ಇಂಗಾಲದ ಮೋನಾಕ್ಸೈಡ ವಾಯು ಮಲಿನತೆಗೆ ಕಾರಣವಾಗಿದೆ. ಇದರಿಂದ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಉಂಟಾಗುತ್ತವೆ. ಇದನ್ನು ತಡೆಯಲು ಸಾಕಷ್ಟು ಪ್ರಮಾಣದ ಮರಗಿಡಗಳನ್ನು ಬೆಳೆಸಲೇಬೇಕು. ಇಲ್ಲವಾದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.
ನೀರಿನ ಬಳಕೆಯ ಮೇಲೆ ಹತೋಟಿ ತರಬೇಕಾದುದು ಅತ್ಯವಶ್ಯಕ. ಜಲಕ್ಷಾಮ ಉಂಟಾಗುವ ಕಾಲ ಸನ್ನಿಹಿತವಾಗುತ್ತಿದೆಯೋ ಏನೋ ಎನ್ನುಂತಾಗಿದೆ. ಅಗತ್ಯವಿರುವಷ್ಟು ಮಾತ್ರ ನೀರನ್ನು ಬಳಸಬೇಕು.
ನಮ್ಮ ದೇಶದಲ್ಲಿ ಕೈಗಾರಿಕೆಗಳು ಬೃಹತ್ ವಿದ್ಯುತ್ ಸ್ಥಾವರಗಳಿವೆ ಈ ಕೈಗಾರಿಗೆಗಳು ಉಗುಳುವ ದಟ್ಟ ಹೊಗೆ ಹಾಗೂ ಅಣು ವಿದ್ಯುತ್ ಸ್ಥಾವರದಿಂದ ಹೊರಬರುವ ಕಲ್ಲಿದ್ದಲು ಸುಟ್ಟ ಹೊಗೆ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವೂ ಹೌದು.
ಪರಿಸರ ಸಂರಕ್ಷಣೆ ಎಲ್ಲಾ ನಾಗರಿಕರ ಕರ್ತವ್ಯ ಪ್ರಜ್ಞಾವಂತನಾದವನು ಪರಿಸರ ಸಮಸ್ಯೆಗಳನ್ನು ತಡೆಗಟ್ಟುವ ಕಾರ್ಯದಲ್ಲಿ ತೋಡಗಲೇಬೇಕು.
ಈ ಬಗ್ಗೆ ಜನಸಾಮಾನ್ಯನಿಗೂ ತಿಳುವಳಿಕೆಯ ಅರಿವು ಮೂಡಿಸುವುದು ಇಂದಿನ ಅನಿವಾರ್ಯ. ಶೈಕ್ಷಣಿಕ ಕಾರ್ಯಕ್ರಮಗಳನ್ನು ಇದರ ಸಲುವಾಗಿ ರೂಪಿಸಬಹುದು. ಪರಿಸರ ಕುರಿತು ಭಾಷಣ ಚರ್ಚೆ ಏರ್ಪಡಿಸಬಹುದು. ವಿಚಾರ ಸಂಕೀರಣಗಳನ್ನು ನಡೆಸಬಹುದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಬಹುದು. ಪರಿಸರ ಮಾಲಿನ್ಯ ದಿಂದಾಗುವ ದುಷ್ಪರಿಣಾಮಗಳನ್ನು ಕುರಿತ ಚಲನಚಿತ್ರ ತಯಾರಿಸಿ ಪ್ರದರ್ಶಿಸಬಹುದು. ಬೀದಿ ನಾಟಕಗಳ ಮೂಲಕ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮ ನಡೆಸಬಹುದು. ಇವೆಲ್ಲವುಗಳ ಪರಿಣಾಮಕಾರಿ ಅನುಷ್ಠಾನದಿಂದ ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಪರಿಸರ ಸಂಬಂಧಿತ ಸಂಗತಿಗಳ ಬಗ್ಗೆ ಜನತೆ ಸದಾ ಜಾಗೃತರಾಗಿರಬೇಕು. ಪರಿಸರ ಸಂರಕ್ಷಣೆಗೆ ಎಲ್ಲಾ ರಾಜ್ಯ ಸರಕಾರಗಳು ಕಂಕಣಬದ್ಧವಾಗಬೇಕು. ನಮ್ಮ ಪರಿಸರ ನಾವೇ ನಿರ್ಮೂಲನೆಗೊಳಿಸಿದರೆ ಮುಂದಿನ ಪೀಳಿಗೆ ನಮ್ಮನ್ನ ಶಪಿಸದೇ ಇರಲಾರದು. ಪರಿಸರ ಸಂರಕ್ಷಣೆ ಒಂದು ವಿಧದಲ್ಲಿ ನಮ್ಮ ಸಂರಕ್ಷಣೆಯೇ ಆಗಿದೆ. ಅಂದಮೇಲೆ ನಾವೆಲ್ಲಾ ಕೂಡಿ ಪರಿಸರ ಕಾಪಾಡೋಣ ಪರಿಸರ ಸಂರಕ್ಷಣೆಗೆ ನಮ್ಮ ಕೈಲಾದಷ್ಟು ನೆರವಾಗೋಣ. ಕೊನೆ ಪಕ್ಷ ನಮ್ಮ ನಮ್ಮ ಮನೆಯ ಸುತ್ತಮುತ್ತಲಾದರೂ ಸದಾ ಸ್ವಚ್ಛ ವಾಗಿರುವಂತೆ ನೋಡಿಕೊಳ್ಳೊಣ. ನಮ್ಮ ಪರಿಸರದಲ್ಲಾದರೂ ಗಿಡಗಳನ್ನು ನೆಟ್ಟು ಸಂರಕ್ಷಿಸೋಣ. ಹೊಸ ಕೆರೆ ನಿರ್ಮಿಸಲು ಸಾಧ್ಯವಾಗದೇ ಇದ್ದರೂ ಸಹ ಇದ್ದ ಕೆರೆಗಳ ಹೂಳು ಎತ್ತಿ ಕೆರೆಗಳನ್ನು ಸಂರಕ್ಷಣೆ ಮಾಡೋಣ. ಈ ದಿಸೆಯಲ್ಲಿ ನಾವೆಲ್ಲ ಕೈಜೋಡಿಸುವ ಸಂಕಲ್ಪ ಮಾಡುವ ಮೂಲಕ ವಿಶ್ವ ಪರಿಸರ ದಿನದ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗೋಣ.