ಒಂದು ಊರು ಅಲ್ಲೊಬ್ಬ ಜಮೀನ್ದಾರ. ಅಪಾರ ಧನ….. ಅನಂತ ಜನ….. ಅಪರಿಮಿತ ಪ್ರಭಾವ…. ಅಂದ ಮೇಲೆ ದರ್ಪ ದೌಲತ್ತುಗಳಿಗೇನು ಕಡಿಮೆ. ಆ ಜಮೀನ್ದಾರನಿಗೆ ಊರಿನ ಮೇಲೆ ಸಂಪೂರ್ಣ ಹಿಡಿತವಿತ್ತು. ಒಮ್ಮೆ ಅವನಿಗೆ ದೊಡ್ಡ ಕಷ್ಟ ಬಂತು. ಅದು ರೋಗದ ರೂಪದಲ್ಲಿ . ಯಾವ ವೈದ್ಯರಿಂದಲೂ ಯಾವ ರೋಗವೆಂದು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅವನಿಗೆ ಕಷ್ಟವಾಗತೊಡಗಿತು. ಯಾವಾಗಲೂ ಹಾಗೇ… ಹೊರಗಿನ ಶತ್ರುಗಳನ್ನು ಸುಲಭವಾಗಿ ಎದುರಿಸಬಹುದು ಒಳಗಿನ ಶತ್ರುಗಳನ್ನು ಎದುರಿಸುವುದು ಕಷ್ಟ ಯಾವ ಚಿಕಿತ್ಸೆಗೂ ಜಮೀನ್ದಾರನ ರೋಗ ಬಗ್ಗಲಿಲ್ಲ……. ಜಗ್ಗಲಿಲ್ಲ . ಆತ ಹಾಸಿಗೆ ಆಳಾದ. ಒಂದು ದಿನ ಮನೆಗೆ ಗುರುಗಳು ಬಂದರು. ಯೋಗಕ್ಷೇಮ ವಿಚಾರಿಸಿದರು. ಆಗ ಮನೆಯವರು ಎಲ್ಲವೂ ಸರಿಯಾಗಿದೆ ಆದರೆ ಯಜಮಾನರಿಗೆ ಆರೋಗ್ಯ ಸರಿಯಿಲ್ಲ ಹಾಸಿಗೆ ಹಿಡಿದಿದ್ದಾರೆ ಎಂದರು. ತಮ್ಮ ಒಳಗಣ್ಣಿನಿಂದ ಪರೀಕ್ಷಿಸಿದ ಗುರುಗಳಿಗೆ ಸಮಸ್ಯೆ ಅರ್ಥವಾಯಿತು. “ನಾನೊಂದು ಚಿಕಿತ್ಸೆ ಹೇಳುತ್ತೇನೆ ಮಾಡಿರಿ. ಚೇತರಿಸಿಕೊಳ್ಳುತ್ತಾರೆ.” ಎಂದರು. ಅವರು ಹೇಳಿದ ಚಿಕಿತ್ಸೆ ಹೀಗಿತ್ತು. “ಹಸಿರು ಬಣ್ಣ ಬಿಟ್ಟು ಬೇರೇನನ್ನೂ ನೋಡಬಾರದು ಈ ರೋಗ ವಾಸಿಯಾಗುತ್ತದೆ” ಎಂದು. ಗುರುಗಳು ತೆರಳಿದ ತಕ್ಷಣ ಜಮೀನುದಾರನಿರುವ ಕೋಣೆಗೆ ಅಲ್ಲಿರುವ ವಸ್ತುಗಳಿಗೆ ಹಸಿರು ಬಣ್ಣ ಬಳಿಯಲಾಯಿತು. ಸ್ವಲ್ಪ ದಿನದಲ್ಲೇ ಜಮೀನ್ದಾರ ಚೇತರಿಸಿಕೊಂಡ. ಈಗ ಅವನಿಗೆ ಇನ್ನೊಂದು ಕಷ್ಟ ಶುರುವಾಯ್ತು…. ಕೋಣೆ ಬಿಟ್ಟು ಹೊರಹೋಗುವ ಹಾಂಗಿರಲಿಲ್ಲ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ… ಇಡೀ ಮನೆ ಓಡಾಡಬೇಕು. ಏನು ಮಾಡಲಿ ? ಎಂದು ಆಲೋಚನೆ ಮಾಡಿ ಇಡೀ ಮನೆಗೆ ಹಸಿರು ಬಣ್ಣ ಬಳಿಸಿದ. ನಿಧಾನವಾಗಿ ಜಮೀನ್ದಾರ ಚೇತರಿಸಿಕೊಂಡ. ಈಗ ಊರು ತಿರುಗುವ ಬಯಕೆ ಪ್ರಾರಂಭವಾಯಿತು. ಮತ್ತೆ ಹಳೆಯ ಗತ್ತು ಬಂದಿತ್ತು. ಇಡೀ ಊರಿಗೆ ಆದೇಶ ಮಾಡಿದ. ಹಸಿರು ಬಣ್ಣ ಬಳಿಯ ಬೇಕೆಂದು . ಇಡೀ ಊರೇ ಹಸಿರಾಯ್ತು . ಆದರೆ ಊರಿನವರಿಗೆ ಕಷ್ಟವಾಯಿತು. ಜಮೀನ್ದಾರನ ಆರೋಗ್ಯ ಊರವರ ದೌರ್ಭಾಗ್ಯವಾಯ್ತು ಆತನ ಶರೀರದ ರೋಗ ಗುಣವಾಗಿತ್ತು ಆದರೆ ಊರಿನವರಿಗೆ ಮನೋರೋಗ ಬಂದಿತ್ತು. ಮತ್ತೊಮ್ಮೆ ಗುರುಗಳು ಆ ಊರಿಗೆ ಬಂದರು. ಈಗ ಉಳಿದವರೆಲ್ಲ ಗುರುಗಳನ್ನು ಮುತ್ತಿಕೊಂಡರು. ಸಮಸ್ಯೆ ಹೇಳಿದರು. ಕೇಳಿದ ಗುರುಗಳು ಜಮೀನ್ದಾರನ ಮನೆಗೆ ಹೋದರು. ಆದರಾತಿಥ್ಯ ಸ್ವೀಕರಿಸಿ ಜಮೀನುದಾರನಿಗೆ ಒಂದು ಪ್ರಶ್ನೆ ಕೇಳಿದರು…. “ಇಡೀ ಊರಿಗೆ ಯಾಕೆ ಕಷ್ಟಕೊಡುತ್ತಿ ? ಎಂದು. ಜಮೀನ್ದಾರ ಹೇಳಿದನಂತೆ “ನಾನಿದ್ದರೆ ಊರು” ಆಗ ಗುರುಗಳು ನೀನು ಆರೋಗ್ಯವಾಗಿರಬೇಕು ಊರಿನವರಿಗೂ ನೆಮ್ಮದಿ ಇರಬೇಕು ಅಂತಹ ಸೂತ್ರವೊಂದನ್ನು ಹೇಳುತ್ತೇನೆ ಎಂದರು. ಊರಿಗೆ ಹಸಿರು ಬಣ್ಣ ಹಚ್ಚಿಸುವ ಬದಲು ನೀನೇ ಹಸಿರು ಕನ್ನಡಕ ಹಾಕಿಕೋ…. ಊರನ್ನು ಬದಲಾಯಿಸಲು ಹೋಗದೆ ನಿನ್ನನ್ನು ನೀನು ಬದಲಿಸಿಕೊ….ಎಂದು ಸಲಹೆ ನೀಡಿದರು. ಇದರಿಂದಾಗಿ ಎಲ್ಲ ಸಮಸ್ಯೆ ಬಗೆಹರಿಯಿತು.

RELATED ARTICLES  ಜೀವನವೆಂಬ ಜಾತ್ರೆ

ಸೃಷ್ಟಿಯನ್ನು ಬದಲಿಸಲು ಸಾಧ್ಯವಿಲ್ಲ ನಾವು ನಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳಬೇಕು ನಾನು ಹೇಳಿದಂತೆ ನನ್ನ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕು ಎಂಬಲ್ಲಿಯೇ ಎಲ್ಲ ಸಮಸ್ಯೆಗಳು ಇರುವುದು. ನಮ್ಮ ಜೀವನದಲ್ಲಿ ಕ್ಲೇಶ ಪ್ರಾರಂಭವಾಗುವುದು ಹೀಗೆ. ಹಾಗಾಗಿ ನಮ್ಮನ್ನು ನಾವು ಬದಲಿಸಿಕೊಳ್ಳೋಣ. ಸ್ವೀಕಾರ ಮಾಡಲು ಸಿದ್ಧರಿಲ್ಲದಿದ್ದಾಗ ಅಲ್ಲಿ ಜಗಳ ,ಮನಸ್ತಾಪ, ಕೇಡು, ಯುದ್ಧ ಎಲ್ಲ ಪ್ರಾರಂಭವಾಗುತ್ತದೆ ಎಂಬ ಅರಿವು ನಿಮಗಿರಲಿ.

ನಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ಮಳೆ ಬರುವುದು ಬೇಡ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಇದು ಸಂಕುಚಿತ ಬುದ್ಧಿ. ನಮ್ಮ ಮನೆಯ ಕಾರ್ಯಕ್ರಮವಿದ್ದಾಗ ಇಡೀ ಊರಿಗೇ ಮಳೆ ಇಲ್ಲದಂತಾದರೆ ಸರಿಯೇ..? ನೆಪೋಲಿಯನ್ ನಿಗೆ ತಲೆಯಲ್ಲಿ ಕೂದಲಿರಲಿಲ್ಲವಂತೆ. ಅದಕ್ಕಾಗಿ ಆತ ಆದೇಶವೊಂದನ್ನು ಹೊರಡಿಸಿದ. ನನ್ನೆದುರು ಯಾರೇ ಬರುವುದಿದ್ದರೂ ತಲೆ ಬೋಳಿಸಿಕೊಂಡು ಬರಬೇಕು ಎಂದು. ಇದು ಎಲ್ಲವೂ ನನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂಬ ಮನೋಭಾವ. ಇದು ಸರಿಯಲ್ಲ . ನಾವು ಅಂದುಕೊಂಡಂತೆ ನಾವೇ ಇರಲು ಸಾಧ್ಯವಿಲ್ಲ ಎಂದ ಮೇಲೆ ಬೇರೆಯವರು ನಾವಂದುಕೊಂಡಂತೆ ಇರಬೇಕು ಎಂದು ನಿರೀಕ್ಷಿಸುವುದು ತಪ್ಪು. ನಮ್ಮ ಕಣ್ಣು ,ಮೂಗು, ಕಿವಿ ಹೀಗೆ ಯಾವುದೂ ನಾವು ಹೇಳಿದಂತೆ ಕೇಳುವುದಿಲ್ಲ ಹಾಗಾಗಿ ಇತರರಿಂದ ನಿರೀಕ್ಷೆ ಬೇಡ. ಸುಖದ ಮೂಲ ನೆಮ್ಮದಿಯ ಮೂಲ ನಮ್ಮ ಮನಸ್ಸು ಹಾಗಾಗಿ ಮನಃಸಾಕ್ಷಿ ಗನುಗುಣವಾಗಿ ಬದುಕಲು ಕಲಿಯೋಣ

ನಮ್ಮ ದೃಷ್ಟಿ ಸಕಾರಾತ್ಮಕವಾಗಿರಲಿ ನಕಾರಾತ್ಮಕವಾಗಿರುವುದು ಬೇಡ ಡಾಕ್ಟರ್ ರಾಧಾಕೃಷ್ಣನ್ ರವರು ಅರ್ಧ ಲೋಟ ನೀರಿಟ್ಟರೆ ಲೋಟ ಅರ್ಧ ತುಂಬಿದೆ ಎನ್ನುತ್ತಿದ್ದರಂತೆ. ಲೋಟ ಅರ್ಧ ಖಾಲಿ ಇದೆ ಎನ್ನುತ್ತಿರಲಿಲ್ಲ . ಜ್ಯೋತಿಷಿಯೊಬ್ಬ ರಾಜನಲ್ಲಿ “ನಿಮ್ಮ ಮುಂದೆ ನಿಮ್ಮ ಮನೆಯವರೆಲ್ಲಾ ಸಾಯ್ತಾರೆ” ಎಂದನಂತೆ ರಾಜನಿಗೆ ತುಂಬಾ ಕೋಪ ಬಂತು ಜ್ಯೋತಿಷಿಯನ್ನು ಹೊರಗಟ್ಟಿದ. ಮಾರನೇ ದಿನ ಅದೇ ಜ್ಯೋತಿಷಿ ಬೇರೆ ವೇಷದಲ್ಲಿ ಬಂದು ರಾಜನಿಗೆ ಹೇಳಿದ “ನಿಮ್ಮ ಮನೆಯಲ್ಲಿ ಎಲ್ಲರಿಗಿಂತ ನೀವು ಹೆಚ್ಚು ಬದುಕುತ್ತೀರಿ” ಎಂದು ಈಗ ರಾಜನಿಗೆ ಖುಷಿಯಾಯಿತು. ಹೇಳಿದ ವಿಷಯ ಒಂದೇ ಆದರೂ ಇದು ಸಕಾರಾತ್ಮಕ ದೃಷ್ಟಿ ಹಾಗಾಗಿ ರಾಜ ಸಂತೋಷ ಪಟ್ಟ . ಹೀಗೆ ನಾವು ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.

RELATED ARTICLES  'ಭರತನ ಆಗಮನ ರಾಮನ ಸಾಂತ್ವನ' (‘ಶ್ರೀಧರಾಮೃತ ವಚನಮಾಲೆ’).

ತಿದ್ದಿಕೊಳೊ ನಿನ್ನ ನಿನ್ ಜಗವ ತಿದ್ದುವದಿರಲಿ ಎಂಬ ಕಗ್ಗದ ಕವಿಯ ಸಾಲು ನಮಗೆ ಪ್ರೇರಣೆಯಾಗಬೇಕು. ಪರಿವರ್ತನೆಯಲ್ಲಿ ಸುಖವಿದೆ ಹಾಗಾಗಿ ನಮ್ಮಲ್ಲಿ ಮೊದಲು ಪರಿವರ್ತನೆ ಮಾಡಿಕೊಳ್ಳೋಣ ಸೃಷ್ಟಿಗೆ ಸರಿಯಾಗಿ ನಮ್ಮ ದೃಷ್ಟಿಯನ್ನು ಹೊಂದಾಣಿಕೆ ಮಾಡಿಕೊಳ್ಳೊಣ.

✍️ ಡಾ.ರವೀಂದ್ರ ಭಟ್ಟ ಸೂರಿ.