ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಡಾ|| ಜಿ.ಕೆ.ಹೆಗಡೆ ( ಹರಿಕೇರಿ)

ಸತತ ಆರು ಗಂಟೆ ಕುಳಿತು ಪಾಠ ಕೇಳುವುದು ಸುಲಭದ ಮಾತಲ್ಲ. ಕೆಲವರ ಮಾತುಗಳನ್ನು ಆರು ನಿಮಿಷ ಕೇಳುವುದರೊಳಗೇ ಐದು ಆಕಳಿಕೆ ಬಂದು ಸಣ್ಣ ತಲೆನೋವು ಪ್ರಾರಂಭವಾಗುತ್ತದೆ ನಮಗೆ. ? ಇನ್ನು ನಮ್ಮ ಕೊರೆತವನ್ನು ವಿದ್ಯಾರ್ಥಿಗಳು ಸಹಿಸಿಕೊಳ್ಳುವುದು ಅದು ಸೋಜಿಗದ ಮಾತೆ. ಸಿಂಡರಿಸಿದ ನಮ್ಮ ಮುಖವನ್ನೇ ನಮಗೆ ಕನ್ನಡಿಯಲ್ಲಿ ನೋಡಿಕೊಳ್ಳಲಿಕ್ಕಾಗುವುದಿಲ್ಲ. ಇನ್ನು ಮಕ್ಕಳು ಹೇಗೆ ನೋಡಿಯಾರು. ಬೋಧನೆ ಒಂದು ಕಲೆ. ಅದು certificate ಪಡೆದವರಿಗೆಲ್ಲಾ ಒಲಿದಿರುತ್ತದೆಂದು ನಾನಂತೂ ಹೇಳುವುದಿಲ್ಲ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಪಾಠ ಮಾಡಿದ ನಮ್ಮ ಡಾ|| ಜಿ.ಕೆ.ಹೆಗಡೆಯವರನ್ನು ಮರೆತ ವಿದ್ಯಾರ್ಥಿಗಳೇ ಇರಲಾರರು.
ಡಾ|| ಜಿ.ಕೆ.ಹೆಗಡೆ ಹರಿಕೇರಿಯವರು ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ವಂದೂರಿನವರು. ಅಪ್ರತಿಮ ವಾಗ್ಮಿಗಳು, ಪ್ರಸಿದ್ಧ ತಬಲಾ ವಾದಕರು, ಪ್ರಖ್ಯಾತ ತಾಳಮದ್ದಲೆ ಅರ್ಥಧಾರಿಗಳು, ನಿವೃತ್ತ ಶಿಕ್ಷಕರು, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರೊಳಗೊಂದಾಗಿ ಬದುಕುವ ಸ್ನೇಹಜೀವಿಗಳು. ಅಸಾಮಾನ್ಯ ಯಕ್ಷಗಾನ ಕಲಾವಿದ ಕೆರೆಮನೆ ಮಹಾಬಲ ಹೆಗಡೆಯವರ ಜೀವನದ ಕುರಿತಾದ ಅವರ ಸಂಶೋಧನಾ ಗ್ರಂಥಕ್ಕೆ ಡಾಕ್ಟರೇಟ್ ಸಂದಿರುವುದು ಹೆಮ್ಮೆಯ ಸಂಗತಿ. ಯಕ್ಷಗಾನ-ಸಂಗೀತ ಕ್ಷೇತ್ರಗಳೆರಡರಲ್ಲೂ ತಮ್ಮ ಛಾಪು ಒತ್ತಿದ ಅಪರೂಪದ ಅನನ್ಯ ವ್ಯಕ್ತಿ ನಮ್ಮ ಗುರುಗಳು.
ಶ್ರೀ ಕರಿಕಾನ ಪರಮೇಶ್ವರಿ ಪ್ರೌಢಶಾಲೆ ಅರೆಅಂಗಡಿಯಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯಗಳನ್ನು ಭೋದಿಸುತ್ತಿದ್ದ ಡಾ|| ಜಿ.ಕೆ ಹೆಗಡೆ ಸರ್…..ಅವಧಿಯೆಂದರೆ ಅದು ಎಲ್ಲರಿಗೂ ಅಚ್ಚುಮೆಚ್ಚು. ಅವರು ಯಾವಾಗ ಕ್ಲಾಸಿಗೆ ಬರುತ್ತಾರೆಂದು ನಾವು ಕಾಯುತ್ತಿದ್ದೆವು. ಪಕ್ಕದ ವರ್ಗದಲ್ಲಿ ನಗುವಿನ ಸಪ್ಪಳ ಕೇಳಿತೆಂದರೆ ಅವರಿಗೆ ಜಿ.ಕೆ.ಹೆಗಡೆ ಸರ್ ಅವಧಿಯೆಂದೇ ಅರ್ಥ. ಅವರು ಯಾವತ್ತೂ ಮುಖ ಸಿಂಡರಿಸಿ ಪಾಠ ಮಾಡಿದ್ದನ್ನು ನಾನು ವಿದ್ಯಾರ್ಥಿ ಜೀವನದಲ್ಲಿ ನೋಡಿಯೇ ಇಲ್ಲ.
ಜಿ.ಕೆ ಹೆಗಡೆ ಸರ್ ಎಂದರೆ ಅವರ ಉದ್ದ ಜುಬ್ಬಾ ನೆನಪಾಗುತ್ತದೆ. ಜಿ.ಕೆ.ಹೆಗಡೆ ಸರ್ ಎಂದರೆ ಅಷ್ಟೇನೂ ಬಾಚದ ಚೆನ್ನಾಗಿ ಕೊಬ್ಬರಿ ಎಣ್ಣೆ ಸವರಿದ ಅವರ ಕೂದಲು ನೆನಪಾಗುತ್ತದೆ. ಜಿ.ಕೆ ಹೆಗಡೆ ಸರ್ ಎಂದರೆ ಕನ್ನಡಕದೊಳಗಿಂದಲೇ ನೋಡುವ ಅವರ ಕಣ್ಣುಗಳು ನೆನಪಾಗುತ್ತವೆ. ಜಿ.ಕೆ.ಹೆಗಡೆ ಸರ್ ಎಂದರೆ ಅಸ್ಖಲಿತ ಅವರ ಭೋದನಾ ಶೈಲಿ ನೆನಪಾಗುತ್ತದೆ. ಜಿ.ಕೆ.ಹೆಗಡೆ ಸರ್ ಎಂದರೆ ಭಾವಪೂರ್ಣವಾಗಿ ಹೇಳುವ ಅವರ ತಾಳಮದ್ದಲೆ ಅರ್ಥ ನೆನಪಾಗುತ್ತದೆ. ಜಿ.ಕೆ.ಹೆಗಡೆ ಸರ್ ಎಂದರೆ ಬಿಡುವಿಲ್ಲದ ಸಂಸಾರದ ಜಂಜಾಟದಲ್ಲೂ…ವೃತ್ತಿಯ ಅವಸರದಲ್ಲೂ….ನಗು ನಗುತ್ತಲೇ ಇರಬೇಕೆಂಬುದು ನೆನಪಾಗುತ್ತದೆ.
ಯೋಗ್ಯತಾವಂತ ಗುರುಗಳನ್ನು ಪಡೆಯುವುದು ಅದು ಹಲವು ಜನ್ಮಗಳ ಪುಣ್ಯ. ಆಗೆಲ್ಲಾ ಈಗಿನ ಹಾಗೆ ನೃತ್ಯ ಮಾಡುತ್ತಾ ಕಲಿಸುವ ಪದ್ಧತಿಯಲ್ಲ. ಚಿತ್ರ ಪಟ, ಮಿಂಚು ಪಟ್ಟಿ, ಕಂಪ್ಯೂಟರ್, ಇಂಟರ್ನೆಟ್, ಯು ಟ್ಯೂಬ್, ಸ್ಮಾರ್ಟ ಕ್ಲಾಸ್, ಮಣ್ಣು, ಮಸಿ, ಬೂದಿ ಏನೂ ಇಲ್ಲ. ಕೈಲೊಂದು ಚಾಕ್ ಪೀಸ್ ಇದ್ದರೆ ಹೆಚ್ಚು. ಹಾಗಂತ ಈಗಿನ ಶಿಕ್ಷಣಕ್ಕಿಂತ 20 ಪಟ್ಟು ಉತ್ತಮ ಶಿಕ್ಷಣ ಬೋಧನೆ ಮತ್ತು ಕಲಿಕೆಯ ದಿನಗಳು. ಅದಕ್ಕೆ ಕಾರಣ ಇಷ್ಟೆ. ಕಲಿಸಬೇಕು ಎನ್ನುವ ಭಾವನೆ, ವೃತ್ತಿ ನಿಷ್ಠೆ ಹೊಂದಿದ ಶಿಕ್ಷಕರು. ಕಲಿಯಬೇಕು ಎನ್ನುವ ಉತ್ಸಾಹದಲ್ಲಿರುತ್ತಿದ್ದ ವಿದ್ಯಾಕಾಂಕ್ಷಿಗಳು. ಕಣ್ಣು ಬಿಟ್ಟರೆ ತುಟಿಕ್ ಪಿಟಿಕ್ ಎನ್ನದ ಮಕ್ಕಳು. ಭಯ ಭಕ್ತಿ ಹೊಂದಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ಮೊನ್ನೆ ಮೊನ್ನೆ ನನ್ನೆದುರಿನಲ್ಲೇ ತನ್ನ ಗುರುಗಳನ್ನು ಅವರು ಹೋಗ ಹೋಗುತ್ತಿದ್ದಂತೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಯೋರ್ವನನ್ನು ನೋಡಿ ಕರುಳು ಚುರುಕ್ ಎಂದಿತು. ಗುಣಾತ್ಮಕ ಶಿಕ್ಷಣ ಎತ್ತ ಸಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ ನನಗೆ. ?
ಡಾ|| ಜಿ.ಕೆ ಹೆಗಡೆ ಸರ್ ಬಿಡುವಿಲ್ಲದ ಮನುಷ್ಯರು. ಸಂಗೀತ, ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅವರು ಆತ್ಯಂತ busy ಯಾಗಿರುತ್ತಿದ್ದರು. ರಾತ್ರಿ ಬೆಳಗಿನ ತನಕ program ಮುಗಿಸಿ ಬಂದೂ ಶಾಲೆಯಲ್ಲಿ ಕಿಂಚಿತ್ತೂ ಉತ್ಸಾಹ ಕಡಿಮೆಯಾಗದಂತೆ ಪಾಠ ಮಾಡುತ್ತಿದ್ದರು. ಏನೋ…..ಯಂಟ್ರೊಣ್ಣ…… ಏನೋ ಸುಬ್ರಾಯ…… ಅರೆ ಹೊನ್ನಕ್ಕೊ…..ಹಿಂಗೆ ಅವರು ಸಂಬೋಧಿಸಿದರೆ ಸಾಕು ನಮಗೆ ನಗುವಿನ ಅಲೆಯೇ ಏಳುತ್ತಿತ್ತು. ಅವರು ಪಾಠ ಮುಗಿಸಿ ಕ್ಲಾಸಿನಿಂದ ಹೊರಗೆ ಹೋಗುವವರೆಗೂ ಬಾಯಿ ಮುಚ್ಚುವ ಕೆಲಸವೇ ಇಲ್ಲ. ಪ್ರಭುತ್ವ ಪೂರ್ಣವಾಗಿ ಪದ್ಯ ಗದ್ಯ ಎರಡನ್ನೂ ಭೋಧಿಸುವ ಅವರಿಗೆ ಅವರೇ ಸಾಟಿ.

RELATED ARTICLES  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ 'ದಿನಕರ'ರ ಪ್ರಭಾವ.

‌‌ಜಿ.ಕೆ. ಹೆಗಡೆಯವರ ಅಕ್ಕಂದಿರಾದ ಸರಸ್ವತಕ್ಕ, ಪಾರ್ವತಕ್ಕ, ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವರು. ಚೈತನ್ಯದ ಬುಗ್ಗೆಗಳೇ ಆದ ಅವರು ಮಕ್ಕಳ ಬಗೆಗೆ ತೋರುವ ವಾತ್ಸಲ್ಯ ಅದು ಮಾತಿಗೆ ಅಕ್ಷರಗಳಿಗೆ ನಿಲುಕದ್ದು. ಜಿ.ಕೆ.ಹೆಗಡೆಯವರ ಪತ್ನಿ ಸುಲೋಚನಕ್ಕ ಕೂಡ ಸುಸಂಸ್ಕೃತ ಪ್ರತಿಭಾ ಸಂಪನ್ನೆ. ಮಗ ಕೃಷ್ಣ ಬೆಂಗಳೂರಿನಲ್ಲಿ ಉದ್ಯೋಗಿ…..ಹವ್ಯಾಸಿ ಯಕ್ಷಗಾನ ಕಲಾವಿದ. ಅವರ ಇಡೀ ಕುಟುಂಬವೇ ಕಲಾ ತಪಸ್ವಿಗಳ ಕುಟುಂಬ. ಪ್ರತಿವರ್ಷ ತಮ್ಮ ತಂದೆಯವರ ಶ್ರಾದ್ಧದ ದಿನ ಇಡೀ ರಾತ್ರಿ ತಾಳಮದ್ದಲೆ ಏರ್ಪಡಿಸಿ ಪ್ರಖ್ಯಾತ ಕಲಾವಿದರುಗಳನ್ನು ಕರೆಸುವ ಡಾ|| ಜಿ.ಕೆ ಹೆಗಡೆಯವರು ಏಕಾದಶಿ ಸರಣಿ ತಾಳಮದ್ದಲೆ ಕೂಟಗಳನ್ನೂ ಅನೇಕ ವರ್ಷಗಳಿಂದ ಅಧ್ಯಕ್ಷರಾಗಿ ಯಶಸ್ವಿಯಾಗಿ ಸಂಘಟಿಸಿಕೊಂಡು ಬಂದಿದ್ದಾರೆ. ನಾನು ಮೆಚ್ಚುವ, ಗೌರವಿಸುವ ಗುರುಶ್ರೇಷ್ಠರು ಡಾ ಜಿ.ಕೆ.ಹೆಗಡೆ ಸರ್.
ಅವರ ಮಾತುಗಳನ್ನು ಕೇಳುವುದೇ ಮಜಾ….. ? ಬಾಯಿಗೆ ಬಂದ ಹಾಗೆ ಮಾತಾಡುವವರು ನಮಗೆ ಎಲ್ಲೆಡೆಯಲ್ಲೂ ಕಾಣ ಸಿಗುತ್ತಾರೆ. ಆದರೆ ನೋವಿನ ಕ್ಷಣಗಳನ್ನು ಮರೆಮಾಚಿಸಿ ನಲಿವಿನ ಕ್ಷಣಗಳಾಗಿ ಪರಿವರ್ತಿಸಬಲ್ಲ ಮಾಂತ್ರಿಕತೆ ನಮ್ಮ ಗುರುಗಳಿಗೆ ಸಿದ್ಧಿಸಿದೆ. ಸುತ್ತಮುತ್ತಲಿನ ಸದಭಿರುಚಿಯ ಕಾರ್ಯಕ್ರಮಗಳನ್ನು ಅವರೆಂದೂ ತಪ್ಪಿಸಿಕೊಳ್ಳುವುದಿಲ್ಲ. ಅವಶ್ಯವಾಗಿ ಹಾಜರಿದ್ದು ಎಲ್ಲರೊಳೊಂದಾಗುತ್ತಾರೆ. ಯಕ್ಷಗಾನವನ್ನು ಮುಂದೆ ಕುಳಿತು ಅವರು ಆಸ್ವಾದಿಸುವ ಪರಿ ಅಮೋಘ. ? ಕಲಾವಿದನಿಗೂ ಹುಮ್ಮಸ್ಸು ಬರಬೇಕು. ಹಾಗೆ ಕುಳಿತಲ್ಲಿಯೇ ಕುಣಿಯುವ ಕುಣಿಸುವ ನಮ್ಮ ಸರ್ ಅತ್ಯಂತ ಸರಳ ಸಾಮಾನ್ಯರಾಗಿ ಬದುಕಿ ಅಸಾಮಾನ್ಯರೆನಿಸಿದ್ದಾರೆ.
ಜಿ.ಕೆ.ಹೆಗಡೆ ಸರ್ ಅತ್ಯುತ್ತಮ ಕೃಷಿಕರು ಕೂಡ. ಹೀಗಾಗಿ ಅವರಿಗೆ ಸೋಮಾರಿಯಾಗಿ ಬದುಕಿ ಅಭ್ಯಾಸವೇ ಇಲ್ಲ. ಪುತ್ರಿಯರೀರ್ವರೂ ಯೋಗ್ಯತಾವಂತರು. ಹೀಗೆ ಬದುಕಿಗೊಂದು ಯೋಗ್ಯ ಅರ್ಥ ಕೊಟ್ಟ ಅವರ ಜೀವನ ಆದರ್ಶವಾದದ್ದು. ಮಾದರಿಯಾದದ್ದು.
ಒಬ್ಬ ಶಿಕ್ಷಕನಾಗಿ ನಾನು ಅವರಿಂದ ಕಲಿಯಬೇಕಾದ್ದು ಅನೇಕ. ತಮಾಷೆ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತದೆ. ಒಂದು ಪಾಠದ ಕುರಿತಾಗಿ ವಿವರಣೆ ನೀಡುವಾಗ ನಮ್ಮ ಸ್ವಂತದ್ದನ್ನೂ ಅದಕ್ಕೆ ಸೇರಿಸಬೇಕು. ಮಕ್ಕಿ ಕಾ ಮಕ್ಕಿ ಇದ್ದದ್ದನ್ನು ಇದ್ದಂಗೇ ವಾಕ್ಯಗಳನ್ನು ಓದುವುದಕ್ಕೆ ಮಕ್ಕಳಿಗೂ ಬರುತ್ತದೆ. ಹಾಗೆ ವಿವರಿಸುವಾಗ ನಮಗೆ ಆಳವಾದ ಅಧ್ಯಯನ ಬೇಕು. ಟ್ಯಾಂಕಿನಲ್ಲಿ ನೀರಿರದಿದ್ದರೆ ನಲ್ಲಿಯಲ್ಲಿ ನೀರು ಬರುವುದಿಲ್ಲ. ??
ಕೈಗೆ ಸಿಕ್ಕ ಕೊಡಪಾನದಲ್ಲೂ ಧ್ವನಿ ತೆಗೆಯುವ ಸರ್…..ನಮ್ಮ ವ್ಯಕ್ತಿತ್ವದ ಬೆಳವಣಿಗೆಗೂ ಕಾರಣರಾಗಿದ್ದಾರೆ. ನಿಮ್ಮ ಲೇಖನ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ನನಗೆ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಜಟಿಲವಾದ ಜನ ಗುರುಗಳಾಗಿ ಸಿಕ್ಕದ್ದೇ ಕಡಿಮೆ ಆದುದರಿಂದ ನನ್ನ ಭಾಷೆಯೂ ಸರಳ ಭಾವವೂ ಸರಳ.
ಸದ್ಗುರು ಶ್ರೀಧರರ ಆಶೀರ್ವಾದ ಡಾ|| ಜಿ.ಕೆ.ಹೆಗಡೆ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.

ಜಿ.ಕೆ.ಹೆಗಡೆ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94499 56314

??????⚫⚪???????⚫⚪?????