ಜಗತ್ತಿನಲ್ಲಿ ನೆಮ್ಮದಿಯೂ ಇಲ್ಲ… ಸುಖವೂ ಇಲ್ಲ. ಇದೆ ಅಂದರೆ ಅದು ಭ್ರಮೆ. ಈ ಲೋಕದಲ್ಲಿ ಮೂರು ತರದ ಜನರಿದ್ದಾರೆ. ಕೆಲವರು ತಮ್ಮ ಕಾಲ ಮೇಲೆ ತಾವು ತಿರುಗಿ ಪ್ರಪಂಚವೇ ತಿರುಗುತ್ತಿದೆ ಎಂಬ ಭ್ರಮೆಯಲ್ಲಿರುವವರು. ಇನ್ನು ಕೆಲವರು ಕನಸಿನ ಲೋಕದಲ್ಲಿ ಭ್ರಮಾಲೋಕದಲ್ಲಿ ಬದುಕುತ್ತಿರುವವರು. ಮತ್ತೆ ಕೆಲವರು ತಪ್ಪು ಸರಿಗಳ ಜಿಜ್ಞಾಸೆಯಲ್ಲಿ ,ಸಂಶಯದಲ್ಲಿ ಬದುಕುತ್ತಿರುವವರು. ಇದರಲ್ಲಿ ಮೊದಲೆರಡು ಭ್ರಮೆ ಮೂರನೆಯದು ಸಂಶಯ.
ಇಂದು ಬದುಕು ಎಂದರೆ ಭ್ರಮೆ….. ಬದುಕು ಎಂದರೆ ಸಂಶಯ ಎನ್ನುವಂತಾಗಿದೆ. ನಾವು ನಿಂತ ನೆಲ ಚಲಿಸುತ್ತಿದೆ ಆದರೆ ನಾವು ಅದರ ಅರಿವಿಲ್ಲದಂತೆ ಬದುಕುತ್ತಿದ್ದೇವೆ. ನಮ್ಮ ಸುತ್ತ ಪ್ರಪಂಚವಿದೆ, ಕುಟುಂಬವಿದೆ, ಸಂಬಂಧಿಕರಿದ್ದಾರೆ, ಗೆಳೆಯರಿದ್ದಾರೆ ಎಂದು ಭ್ರಮೆಯಲ್ಲಿದ್ದೇವೆ. ಆದರೆ ಸಂದರ್ಭ ಬಂದಾಗ ಯಾರೂ ನಮ್ಮ ಸುತ್ತ ಇಲ್ಲ ನಾನು ಏಕಾಂಗಿ ಎಂಬುದು ಅರಿವಿಗೆ ಬರುತ್ತದೆ. ನಾವು ಬದುಕಿನಲ್ಲಿ ನೆಮ್ಮದಿ ಸುಖ ಕಾಣಬೇಕೆಂದರೆ ನನ್ನ ಸುತ್ತ ಪ್ರಪಂಚ ಸುತ್ತುತ್ತಿದೆ ಎಂಬ ಭ್ರಮೆಯನ್ನು ಬಿಡಬೇಕು.
ಪ್ರಪಂಚದಲ್ಲಿ ಯಹೂದಿಗಳ ಸಂತತಿಯೇ ಇಲ್ಲದಂತೆ ಮಾಡುತ್ತೇನೆಂದು ಹೊರಟ ಹಿಟ್ಲರ್. ಆರು ಮಿಲಿಯನ್ ಯಹೂದಿಗಳನ್ನು ಕೊಂದ. ಯುಹೂದಿ ರಹಿತವಾದ ವಿಶ್ವ ನನ್ನ ಗುರಿ ಎಂಬ ಭ್ರಮಾಲೋಕದಲ್ಲಿ ತೇಲುತ್ತಿದ್ದ ಹಿಟ್ಲರನೇ ನಾಶವಾದ ಆದರೆ ಯಹೂದಿಗಳ ಸಂತತಿ ನಾಶವಾಗಿಲ್ಲ. ಇಸ್ರೇಲ್ ಎನ್ನುವ ಅದ್ಭುತ ರಾಷ್ಟ್ರವನ್ನು ಕಟ್ಟಿರುವ ಅವರು ಇಂದಿಗೂ ತಲೆಎತ್ತಿ ಬದುಕುತ್ತಿದ್ದಾರೆ. ಇದು ಭ್ರಮೆ ಎಂದೆಂದೂ ಸತ್ಯವಾಗಲಾರದು ಎಂಬುದನ್ನು ಹೇಳುತ್ತದೆ.
ಇನ್ನು ಕೆಲವರಿಗೆ ಸಾಧನೆಯ ಹುಚ್ಚು. ಆದರೆ ಸಾಧಿಸಲು, ಕನಸನ್ನು ನನಸು ಮಾಡಲು ಬೇಕಾದ ಪ್ರಯತ್ನವನ್ನು ಅವರು ಮಾಡುವುದಿಲ್ಲ. ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ. ಎಲ್ಲಾ ಸಾಧನೆ ಮಾಡಿದ್ದೇನೆಂಬ ಭ್ರಮೆಯಲ್ಲಿರುತ್ತಾರೆ. ಅಂಥವರು ಜೀವನದಲ್ಲಿ ಏನನ್ನೂ ಸಾಧಿಸಲಾರರು.
ಮತ್ತೆ ಕೆಲವರು ಜೀವನ ಪರ್ಯಂತ ನಿರ್ಣಯ ತೆಗೆದುಕೊಳ್ಳಲಾರರು. ಹಾಗೋ ಹೀಗೋ ಎಂದು ತೂಕ ಹಾಕುವುದೇ ಬದುಕು ಎಂದುಕೊಂಡವರು. ಇಂಥವರು ಬದುಕಿನಲ್ಲಿ ಒಂದು ನಿರ್ಧಾರವನ್ನೇ ಮಾಡುವುದಿಲ್ಲ. ಸಂಶಯ ,ಜಿಜ್ಞಾಸೆ, ಗೊಂದಲ, ತರ್ಕ ಇವುಗಳಲ್ಲಿಯೇ ಕಾಲ ಕಳೆಯುತ್ತಾರೆ. ಕೊನೆಯವರೆಗೂ ವಿಮರ್ಶೆ ಮಾಡುತ್ತಲೇ ಇರುತ್ತಾರೆ.
ಒಮ್ಮೆ ಮೊಲವೊಂದಕ್ಕೆ ಸಹಸ್ರಪದಿಯ ಕುರಿತು ಜಿಜ್ಞಾಸೆ ಉಂಟಾಯಿತು. ತನಗೆ ನಾಲ್ಕೇ ಕಾಲು ಇದ್ದರೂ ನಡೆಯುವಾಗ ಯಾವುದನ್ನು ಮೊದಲು ಬಳಸಬೇಕು ಎಂದು ಗೊಂದಲವಾಗುತ್ತದೆ. ಆದರೆ ಈ ಸಹಸ್ರಪದಿಗೆ ಸಾವಿರ ಕಾಲು. ಅದು ಹೇಗೆ ಬಳಸುತ್ತದೆ? ಎಂದು . ಕುತೂಹಲ ತಡೆಯಲಾರದೆ ಸಹಸ್ರಪದಿಯನ್ನೇ ಕೇಳಿತಂತೆ.. ನಾನು ನಾಲ್ಕು ಕಾಲಿನಲ್ಲಿಯೇ ನಡೆಯುವಾಗ ಗೊಂದಲಕ್ಕೊಳಗಾಗುತ್ತೇನೆ. ಯಾವುದನ್ನು ಮೊದಲು ಇಡಲಿ ಎಂದು. ಆದರೆ ನೀನು ಸಹಸ್ರಪದಿ ಅದು ಹೇಗೆ ನಿರ್ಧಾರ ಕೈಗೊಳ್ಳುತ್ತಿ ? ಎಂದು. ಮೊಲದ ಮಾತು ಕೇಳಿ ಸಹಸ್ರಪದಿಯ ಮನಸ್ಸಿನಲ್ಲೂ ಗೊಂದಲ ಮೂಡಿತು. ನಂತರದಲ್ಲಿ ಇದೇ ಗೊಂದಲದಲ್ಲಿ ಅದು ನಡೆಯುವುದನ್ನು ಮರೆತು ಬಿಟ್ಟಿತಂತೆ. ನಮ್ಮ ಬದುಕಿನಲ್ಲೂ ಹಾಗೆ. ಯಾರು ಯಾರದ್ದೋ ಗೊಂದಲದ ಮಾತು ಕೇಳಿ ನಾವು ಗೊಂದಲಕ್ಕೊಳಗಾಗುತ್ತೇವೆ. ಬದುಕು ಪೂರ್ತಿ ಗೊಂದಲದಲ್ಲಿಯೇ ಮುಳುಗಿ ಹೋಗುತ್ತೇವೆ.
ನಾಯಿಯೊಂದಕ್ಕೆ ಮೂಳೆ ಸಿಕ್ಕಿದರೆ ಅದು ಬಹಳ ಹೊತ್ತು ನೆಕ್ಕುತ್ತಾ ಇರುತ್ತದೆ. ಯಾಕೆಂದರೆ ಮೂಳೆಯಿಂದ ರಕ್ತ ಬರುತ್ತದೆ ಎಂಬ ಭ್ರಮೆಯಲ್ಲಿ ಅದಿರುತ್ತದೆ. ನೆಕ್ಕಿ ನೆಕ್ಕಿ ಅದರ ನಾಲಗೆಯಿಂದ ರಕ್ತ ಬರಲು ಪ್ರಾರಂಭವಾಗುತ್ತದೆ. ಅದಕ್ಕೆ ಖುಷಿಯಾಗುತ್ತದೆ . ತನ್ನ ರಕ್ತವನ್ನು ತಾನೇ ಕುಡಿಯುತ್ತಾ ಮೂಳೆಯಿಂದ ರಕ್ತ ಬರುತ್ತಿದೆ ಎಂಬ ಭ್ರಮೆಯಲ್ಲಿ ಸಂತೋಷ ಪಡುತ್ತದೆ. ನಾವು ಹಾಗೆ ನಮ್ಮ ಸುಖವನ್ನು ಇತರೆ ವ್ಯಕ್ತಿ ವಸ್ತುಗಳ ಮೇಲೆ ಚೆಲ್ಲಿ ಅದನ್ನೇ ಅನುಭವಿಸುತ್ತಾ ನಮಗೆ ಸುಖ ವಾಯಿತು ಎಂದುಕೊಳ್ಳುತ್ತೇವೆ. ಇದು ಜಗತ್ತಿನ ಭ್ರಮೆ. ಇದನ್ನು ನಾವು ದಾಟಬೇಕು. ಭ್ರಮೆ, ಸಂಶಯವನ್ನು ದಾಟಿದರೆ ನಮಗೆ ಅರಿವು ಮೂಡುತ್ತದೆ. ಅದು ವಾಸ್ತವ ಜಗತ್ತು. ಅಲ್ಲಿ ಆನಂದವಿದೆ…. ನೆಮ್ಮದಿಯಿದೆ……. ತೃಪ್ತಿ ಇದೆ. ಎಲ್ಲಿಯವರೆಗೆ ನಮ್ಮಲ್ಲಿ ಭ್ರಮೆ ಇರುವುದೋ, ಸಂಶಯ ವಿರುವುದೋ ಅಲ್ಲಿಯವರೆಗೆ ದುಃಖ ಮುಗಿಯುವುದಿಲ್ಲ. ಹಾಗಾಗಿ ಭ್ರಮಾಲೋಕದಿಂದ ಹೊರಬರೋಣ. ವಾಸ್ತವದಲ್ಲಿ ಬದುಕೋಣ.
ಜ್ಞಾನಿಯಾದವನ ಮನದಲ್ಲಿ ಸಂಶಯವಿರುವುದಿಲ್ಲ. ಆತ ಹಗಲುಗನಸು ಕಾಣುವುದಿಲ್ಲ. ಇದು ಹೀಗೇ ಎಂಬ ಸ್ಪಷ್ಟ ನಿರ್ಣಯ ಅವನಲ್ಲಿರುತ್ತದೆ. ಅಲ್ಲಿ ಗೊಂದಲವಿರುವುದಿಲ್ಲ… ಸ್ಪಷ್ಟತೆ ಇರುತ್ತದೆ. ಅದು ನಾಲ್ಕನೇ ಅವಸ್ಥೆ. ಅದನ್ನು ನಾವು ತಲುಪಬೇಕು.
ಎಚ್ಚರಾವಸ್ಥೆ, ನಿದ್ರಾವಸ್ಥೆ, ಸ್ವಪ್ನಾವಸ್ಥೆ, ತುರಿಯಾವಸ್ಥೆ ಈ ನಾಲ್ಕು ಅವಸ್ಥೆಗಳು ನಾಲ್ಕು ಮಹಡಿಗಳ ಮನೆ ಇದ್ದಂತೆ. ಆದರೆ ನಾವು ನಾಲ್ಕನೇ ಮಹಡಿಯನ್ನೇ ನೋಡಿಲ್ಲ . ಅಲ್ಲಿ ಎಲ್ಲ ಸೌಲಭ್ಯವಿದೆ ಆದರೆ ಅನುಭವಿಸಲು ನಾವು ಅಲ್ಲಿಗೆ ತಲುಪಿಲ್ಲ. ಅಲ್ಲಿಗೆ ತಲುಪುವ ಪ್ರಯತ್ನ ಮಾಡೋಣ
✍️ ಡಾ.ರವೀಂದ್ರ ಭಟ್ಟ ಸೂರಿ.