ಅದೊಂದು ಶಾಲೆ. ಅಲ್ಲೊಂದು ತರಗತಿ . ತರಗತಿಯಲ್ಲೊಂದು ಮಗು. ಆ ಮಗು ಶಾಲೆಯಲ್ಲೊಂದು ಕೌತುಕವನ್ನು ಗಮನಿಸಿತು. ಕೋಶದ ಒಳಗಿನಿಂದ ಹೊರಬರುತ್ತಿರುವ ಚಿಟ್ಟೆಯ ಮರಿಯೊಂದನ್ನು ಅದು ಕುತೂಹಲದಿಂದ ನೋಡಿತು. ಆ ಮರಿ ಕೋಶದ ಸಣ್ಣ ರಂಧ್ರದಿಂದ ಹೊರಬರಲು ಕಷ್ಟಪಡುತ್ತಿತ್ತು. ಅದನ್ನು ನೋಡಿದ ಮಗುವಿಗೆ ಕರುಣೆ ಬಂತು . ಪಾಪ…..ಅದನ್ನು ಹೊರತೆಗೆಯಬೇಕು ಎಂದು ಆ ಕೋಶವನ್ನು ಒಡೆದು ಚಿಟ್ಟೆಯ ಮರಿಯನ್ನು ಹೊರತೆಗೆಯಿತು. ಶಾಲೆಯ ಶಿಕ್ಷಕರು ಮಗುವಿನ ಚಟುವಟಿಕೆಯನ್ನು ಗಮನಿಸುತ್ತಿದ್ದರು. ಮಗುವಿನ ಬಳಿಗೆ ಬಂದ ಅವರು ಮಗುವನ್ನು ಉದ್ದೇಶಿಸಿ “ನೀನು ಚಿಟ್ಟೆಯ ಮರಿಗೆ ಉಪಕಾರ ಮಾಡಿದೆ ಎಂದು ಭಾವಿಸಬೇಡ. ನೀನು ಮಾಡಿದ್ದು ಘೋರ ಅನ್ಯಾಯ. ನಿನ್ನ ಈ ಕಾರ್ಯದಿಂದಾಗಿ ಇನ್ನು ಅದು ಜೀವಮಾನವಿಡೀ ಹಾರಲಾರದು. ಸಣ್ಣ ರಂಧ್ರದಿಂದ ಹೊರಬರುವಾಗ ಆಗುವ ಒತ್ತಡದಿಂದ ಅದರ ದೇಹ ಚಿಕ್ಕದಾಗಿ ಹಾರಲು ಅನುಕೂಲವಾಗುತ್ತಿತ್ತು. ಈಗ ನೀನು ಮಾಡಿದ ಕಾರ್ಯದಿಂದಾಗಿ ಅದು ತನ್ನ ಹಾರುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಸಹಜ ಪ್ರಕ್ರಿಯೆ ನಡೆಯಲು ನೀನು ಅಡ್ಡಿಯಾದೆ” ಎಂದರು ಒಮ್ಮೊಮ್ಮೆ ನಮ್ಮ ಜೀವನದಲ್ಲೂ ಹೀಗೇ ಆಗುತ್ತದೆ. ಒಳ್ಳೆಯದನ್ನು ಮಾಡಲು ಹೋಗಿ ಮತ್ತೇನನ್ನೋ ಮಾಡಿಬಿಡುತ್ತೇವೆ.

ಒಬ್ಬ ಬಡವ ತನ್ನ ಗುಡಿಸಲಿನಲ್ಲಿ ಇದ್ದುದರಲ್ಲಿಯೇ ನೆಮ್ಮದಿಯಾಗಿದ್ದ. ಯಾರೋ ಒಬ್ಬ ಬಂದು ಬಡವನಲ್ಲಿರುವ ಕೊರತೆಗಳನ್ನೆಲ್ಲ ಎತ್ತಿ ಹೇಳಿದನಂತೆ. ಇದರಿಂದಾಗಿ ಬಡವನ ನೆಮ್ಮದಿಯ ಒರತೆ ಬತ್ತಿ ಹೋಯಿತು. ನೆಮ್ಮದಿಯಿಂದಿದ್ದವನನ್ನು ಕೊರಗು ಆವರಿಸಿತು. ಜೀವನ ಪರ್ಯಂತ ಕೊರಗುತ್ತಲೇ ಇರುವಂತಾಯಿತು. ಇದು ಖಂಡಿತವಾಗಿ ಬಡವನ ಬಗ್ಗೆ ತೋರಿದ ಕರುಣೆಯಲ್ಲ. ಆತನ ನೆಮ್ಮದಿಯ ಬದುಕಿಗೆ ಬೆಂಕಿ ಇಟ್ಟಂತೆ ಎಂಬುದು ಸತ್ಯ. ಸಹಜವಾಗಿ ಬದುಕುತ್ತಿದ್ದವನಲ್ಲಿ ಅಸಹಜತೆಯ ಭಾವನೆ ಬಿತ್ತಿ ಆತನ ಬದುಕಿನ ನೆಮ್ಮದಿಯನ್ನು ಕಸಿದುಕೊಂಡಂತೆ ಇದು.

RELATED ARTICLES  "ಸ್ಥಿತಪ್ರಜ್ಞ ಶ್ರೀರಾಮ" (‘ಶ್ರೀಧರಾಮೃತ ವಚನಮಾಲೆ’).

ನೆಲದಲ್ಲಿ ನೆಮ್ಮದಿಯಿಂದ ಮೈಮರೆತು ನಿದ್ರೆಯಲ್ಲಿದ್ದವನನ್ನು ಎಬ್ಬಿಸಿ ಹಾಸಿಗೆ ಹುಡುಕಿಕೋ ಎಂದರೆ ಅದು ಖಂಡಿತವಾಗಿ ಉಪಕಾರವಲ್ಲ. ಹಸಿ ಗಾಯಕ್ಕೆ ಹಾಕುವ ಉಪ್ಪು ಖಾರ ಇದ್ದ ಹಾಗೆ. ಸಹಜತೆಯಲ್ಲಿ ಸುಖವಿದೆ ಎಂಬುದನ್ನು ಅರಿಯದವರು ಮಾಡುವ ಕಾರ್ಯವಿದು.

ಗಂಡ ನಿದ್ದೆಯಲ್ಲಿ ಮಾತನಾಡುತ್ತಾನೆ ಎಂದು ಹೆಂಡತಿಯು ಆತನನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದಳಂತೆ . ಸಮಸ್ಯೆ ಕೇಳಿದ ವೈದ್ಯರು ಇದಕ್ಕೆ ಮತ್ತೆ ಯಾವ ಔಷಧವೂ ಇಲ್ಲ. “ನೀವು ಅವರಿಗೆ ಹಗಲು ಮಾತನಾಡಲು ಅವಕಾಶ ಕೊಟ್ಟರೆ ಅವರು ನಿದ್ದೆಯಲ್ಲಿ ಮಾತನಾಡುವುದಿಲ್ಲ” ಎಂದರಂತೆ. ಇದು ಹಾಸ್ಯ ಎಂದೆನ್ನಿಸಿದರೂ ಇದರಲ್ಲೊಂದು ಸತ್ಯ ಅಡಗಿದೆ. ಅದೆಂದರೆ ಸಹಜತೆಗೆ ಅವಕಾಶ ಸಿಗದಿದ್ದಾಗ ಅಸಹಜತೆಯ ವರ್ತನೆಗಳು ಕಾಣುತ್ತವೆ ಎಂದು.

ಕಗ್ಗ ಕವಿ ಇವೆಲ್ಲವುಗಳನ್ನು ಒಂದೇ ಸಾಲಿನಲ್ಲಿ ನಮ್ಮ ಮುಂದೆ ತೆರೆದಿಡುತ್ತಾನೆ ಒಳಿತ ನೆಸಗುವೆನೆಂದು ನೆಮ್ಮದಿಯ ನುಂಗದಿರು ಎಂಬುದೇ ಆ ಸಾಲು. ಪ್ರಕೃತಿ ಇದ್ದ ಹಾಗೆ ಇರಲು ಬಿಡಬೇಕು ಅದನ್ನು ವಿಕೃತಿ ಮಾಡಬಾರದು ಔಷಧ ನೀಡುತ್ತೇನೆಂದು ಕಾಯಿಲೆ ಹೆಚ್ಚಿಸಬಾರದು. ನಮ್ಮ ವೇದ ,ಸಂಸ್ಕೃತಿ, ಪರಂಪರೆ ಮುಂತಾದವನ್ನು ಬದಲಾಯಿಸುತ್ತೇವೆ ಎಂದು ಹೊರಡುವುದು ಮೂರ್ಖತನ ನಮ್ಮ ಪೂರ್ವಜರು ಅಜ್ಞಾನಿಗಳು ಎಂಬ ಭಾವನೆ ಬೇಡ ಅವರಲ್ಲೂ ಅಪಾರ ಜ್ಞಾನಿಗಳಿದ್ದರು. ಅವರು ರೂಪಿಸಿದ ,ನಿರೂಪಿಸಿದ ಎಲ್ಲ ವಿಷಯಗಳಲ್ಲೂ ಒಂದು ಅರ್ಥವಿದೆ, ಸಹಜತೆ ಇದೆ. ನಾವು ಅಸಹಜವಾದದ್ದು ಬಯಸಿದಾಗ ಅಲ್ಲಿ ಅಸಹಜವಾದ ಘಟನೆಗಳೇ ನಡೆಯುತ್ತವೆ. ಬದಲಾವಣೆ ಪರಿವರ್ತನೆ ಬೇಕು ಆದರೆ ಅಲ್ಲಿ ವಿವೇಚನೆಯೂ ಇರಬೇಕು ಅಂತಹ ಕಾರ್ಯ ವಾಗುವಾಗ ಅಲ್ಲಿ ಕಾಲದ ಕಲ್ಪನೆ ವಿಷಯದ ಪ್ರಜ್ಞೆಗೆ ಮಹತ್ವ ಕೊಡಬೇಕು.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ ೨೫)

ಪ್ರಹ್ಲಾದ ಸದಾ ಹರಿ-ಹರಿ ಎನ್ನುತ್ತಿದ್ದ. ಅದು ಸಹಜವಾಗಿ ಅವನಲ್ಲಿ ಬಂದ ಗುಣ. ಹಿರಣ್ಯ ಕಶ್ಯಪು ಅದನ್ನು ತಿದ್ದಲು ಹೋದ. ಹರ-ಹರ ಎನ್ನು ಎಂದು ಒತ್ತಾಯಿಸಿದ, ಹೆದರಿಸಿದ ,ಬೆದರಿಸಿದ ಕೊನೆಗೆ ಅವನೇ ಹರಹರವಾಗಿ ಹೋದ. ಪ್ರಹ್ಲಾದನ ಸಹಜತೆಗೆ ಕುಂದು ಬರಲಿಲ್ಲ. ಸಹಜತೆಯನ್ನು ಬದಲಿಸ ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ಹಿಂದೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುವಾಗ ಮನೆಯಲ್ಲಿ ಒಂದು ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಒಂದು ಕೋಣೆ. ಅಲ್ಲಿ ಒಂದಷ್ಟು ಪರಿಕರಗಳು. ಕೃಷಿ ಉಪಕರಣ, ಸಂಗೀತ ಉಪಕರಣ ,ಯುದ್ಧದ ಉಪಕರಣ ಇತ್ಯಾದಿಗಳನ್ನು ಆ ಕೋಣೆಯಲ್ಲಿ ಇಡಲಾಗುತ್ತಿತ್ತು. ನಂತರ ಮಗುವನ್ನು ಆ ಕೋಣೆಯೊಳಗೆ ಬಿಡಲಾಗುತ್ತಿತ್ತು. ಮಗು ಅದರಲ್ಲಿ ಯಾವುದರ ಬಗ್ಗೆ ಆಸಕ್ತಿ ತೋರುತ್ತದೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಅದನ್ನು ಪರಿಗಣಿಸಿ ಅದಕ್ಕೆ ಸಂಬಂಧಿಸಿದ ವಿದ್ಯೆ ಕಲಿಸಲಾಗುತ್ತಿತ್ತು. ಇಲ್ಲಿ ಒಂದು ರೀತಿಯ ಸಹಜತೆ ಇದೆ. ಮಗುವಿನ ಆಸಕ್ತಿ…. ಆ ಶಕ್ತಿ ಯಾವುದರಲ್ಲಿ ಎಂದು ಗುರುತಿಸಿ ಬೆಳೆಸಲಾಗುತ್ತಿತ್ತು. ಹಾಗಾಗಿ ಅಲ್ಲಿ ಕಲಿಕಾ ಪ್ರಕ್ರಿಯೆ ಸಹಜವಾಗಿರುತ್ತಿತ್ತು. ಮಗುವಿನ ಸಹಜ ಬೆಳವಣಿಗೆಗೆ ಅಲ್ಲಿ ಅವಕಾಶವಿತ್ತು. ಆದರೆ ಇಂದು…….?.

ಅದಕ್ಕೆ ಕವಿವಾಣಿಯೊಂದು ಹೇಳಿದ್ದು ದುಡುಕದಿರು ತಿದ್ದಿಕೆಗೆ ಎಂದು. ಬದುಕನ್ನು ಇದ್ದಕ್ಕಿದ್ದಂತೆ ಸ್ವೀಕರಿಸೋಣಬಡವಾ ನೀ ಮಡಗಿದಂಗಿರು” ಎಂಬ ಮಾತು ಸದಾ ನಮ್ಮ ಅರಿವಲ್ಲಿರಲಿ. ಮೊದಲು ನಾವು ಸರಿ ಆಗೋಣ ಆಗ ಜಗತ್ತು ತನ್ನಿಂದ ತಾನೇ ಸರಿಯಾಗುತ್ತದೆ. ಅಸಹಜತೆಗಿಂತ ಸಹಜವೇ ಸಮಂಜಸ ಎಂಬ ಸತ್ಯದ ಅರಿವು ನಮ್ಮೆಲ್ಲರಿಗಾಗಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.