ನರಿಗೆ ಕಕ್ಕೆಕಾಯಿ ಎಂದರೆ ಪಂಚಪ್ರಾಣ. ಎಷ್ಟಿದ್ದರೂ ಅದು ತಿನ್ನುತ್ತದೆ. ಮನುಷ್ಯನಿಗೆ ಕಹಿಯಾದ ಈ ಕಾಯಿ ನರಿಗೆ ಸಿಹಿ. ಮಿತಿಮೀರಿ ಇದನ್ನು ತಿನ್ನುವ ನರಿಗೆ ಹೊಟ್ಟೆ ನೋವು ಬರುತ್ತದೆ. ಹೊಟ್ಟೆ ನೋವು ಬಂದಾಗ ನರಿ ಕಕ್ಕೆಕಾಯಿಗೆ ಹಿಡಿ ಶಾಪ ಹಾಕುತ್ತದೆ. ಅದರಿಂದಲೇ ತನಗೆ ಹೊಟ್ಟೆ ನೋವು ಬಂತೆಂದು ಭಾವಿಸಿ ಅದು ಕಕ್ಕೆ ಕಾಯಿಗೆ ಮನಸ್ಸಿಗೆ ಬಂದಂತೆ ಬೈಯುತ್ತದೆ. ಆಗ ಪ್ರತಿಜ್ಞೆಯೊಂದನ್ನು ಮಾಡುತ್ತದೆ. ಇನ್ನು ಕಕ್ಕೆಕಾಯಿ ಇರುವ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ. ಇನ್ನೆಂದೂ ಇದನ್ನು ತಿನ್ನುವುದಿಲ್ಲ ಎಂದು. ನಂತರ ನಾರು -ಬೇರು ತಿಂದು ಹೊಟ್ಟೆ ನೋವು ಕಡಿಮೆ ಮಾಡಿಕೊಂಡು ಅದೇ ಸುಖ ಎಂದು ಭಾವಿಸುತ್ತದೆ. ಆಗ ಮತ್ತೆ ಅದಕ್ಕೆ ಕಕ್ಕೆಕಾಯಿಯ ನೆನಪಾಗುತ್ತದೆ. ಅದರ ಜೊತೆಗೆ ತಾನು ಮಾಡಿದ ಪ್ರತಿಜ್ಞೆಯೂ ನೆನಪಾಗುತ್ತದೆ. ನಿಧಾನವಾಗಿ ಅದರ ನಿರ್ಧಾರ ಬದಲಾಗುತ್ತಾ ಹೋಗುತ್ತದೆ. ಆ ಕಡೆಗೆ ತಿರುಗಿ ನೋಡಿದರೆ ತಪ್ಪೇನು? ಎನ್ನುತ್ತಾ ಆ ಪ್ರದೇಶಕ್ಕೆ ಹೋಗಬಾರದೆಂದೇನೂ ಇಲ್ಲ ಗಿಡದ ಸುತ್ತ ಸುತ್ತಿ ಬರೋಣ ಎನ್ನುತ್ತ ಮತ್ತೆ ಆ ಪ್ರದೇಶಕ್ಕೆ ಹೊರಡುತ್ತದೆ . ಅಲ್ಲಿಗೆ ಹೋದ ಮೇಲೆ ಅದಕ್ಕೆ ಅನ್ನಿಸಿದ್ದು ಮಿತಿಯಲ್ಲಿ ತಿಂದರೆ ಏನಾಗದು ಮಿತಿ ಮೀರಿ ತಿನ್ನದಿದ್ದರಾಯ್ತು ಎಂದು. ಹಾಗೆ ಎರಡು ,ನಾಲ್ಕು, ಎಂಟು ಎಂದು ತಿನ್ನುತ್ತಾ ಹೊಟ್ಟೆ ನೋವು ಬರುವವರೆಗೂ ತಿನ್ನುತ್ತದೆ. ಇದು ಕೇವಲ ನರಿಯ ಕಥೆಯಲ್ಲ ನರನ ಕಥೆಯೂ ಹೌದು. ನಮ್ಮೆಲ್ಲರ ಕಥೆಯೂ ಹೌದು.
ಕೂಲಿಗಳು ಮೂಟೆ ಕಂಡ ಕೂಡಲೇ ಓಡಿ ಬರುತ್ತಾರೆ. ಬಹಳ ಪ್ರೀತಿಯಿಂದ ಮಾತನಾಡಿಸಿ ಮೂಟೆಯನ್ನು ಸ್ವೀಕರಿಸಿ ಅದನ್ನು ಹೊತ್ತು ಬಹಳ ಸಂತೋಷದಿಂದ ಸಾಗುತ್ತಾರೆ . ಸ್ವಲ್ಪ ದೂರ ಹೋದ ಮೇಲೆ ಇನ್ನೆಷ್ಟು ದೂರ ಎನ್ನುತ್ತಾರೆ. ಬಾರ ಇಳಿಸುವ ತವಕ ಅವರಿಗೆ. ಮೊದಲು ಭಾರ ಹೊರುವುದರಲ್ಲಿ ಸುಖ ಈಗ ಭಾರ ಇಳಿಸುವುದರಲ್ಲಿ ಸುಖ ಅವರಿಗೆ. ನಾವೆಲ್ಲಾ ಸುಖವೆಂದು ಭಾವಿಸುವುದು ಇಷ್ಟನ್ನೇ….!.
ಮಕ್ಕಳಿಲ್ಲ ಅನ್ನುವವರಿಗೆ, ಅದೇ ಚಿಂತೆಯಲ್ಲಿದ್ದವರಿಗೆ ಸಂತಾನವಾದಾಗ….. ಮನೆ ಕಟ್ಟುವ ಚಿಂತೆಯಲ್ಲಿ ಇದ್ದವರಿಗೆ ಮನೆ ಕಟ್ಟಿ ಪೂರ್ತಿಯಾದಾಗ…. ಅದೇ ಸುಖ ಎನ್ನಿಸುತ್ತದೆ. ಇಂದು ನಾವು ಅಂತಹ ಸುಖಕ್ಕಾಗಿ ಉಸಿರಾಡುತ್ತಿದ್ದೇವೆ. ಕೆಲಸ ಮಾಡುತ್ತಿದ್ದೇವೆ. ಬದುಕುತ್ತಿದ್ದೇವೆ. ಆದರೆ ಅದು ನಿಜವಾದ ಸುಖವೇ…? ಶಾಶ್ವತ ಸುಖವೇ…? ಖಂಡಿತ ಅಲ್ಲ. ಹಾಗಾದರೆ ಸುಖ ಎಂದರೇನು? ಹೇಳುವುದು ತುಂಬಾ ಕಷ್ಟ.
ನಡೆಯುವವನಿಗೆ ಸೈಕಲ್ ಸುಖವೆಂದೆನ್ನಿಸುತ್ತದೆ. ಸೈಕಲ್ ಇದ್ದವನಿಗೆ ಬೈಕ್ ಸುಖವೆನಿಸುತ್ತದೆ. ಬೈಕಿದ್ದವರಿಗೆ ಕಾರು ಸುಖವೆಂದೆನಿಸುತ್ತದೆ. ಹೀಗೆ ಇದು ಮುಗಿಯದ ಸುಖದ ಕಥೆ . ಒಬ್ಬನಿಗೆ ಸುಖವೆಂದೆನಿಸಿದ್ದು ಇನ್ನೊಬ್ಬನಿಗೆ ದುಃಖವೆಂದು ಅನ್ನಿಸಬಹುದು. ಅದು ಅವರವರ ಮನಸ್ಥಿತಿಯನ್ನು ಅವಲಂಬಿಸಿದೆ. ಉದಾಹರಣೆಗೆ ಒಂದು ಹೆಣ್ಣಿನ ಶರೀರ ಸಾಮಾನ್ಯ ವಿಷಯಾ ಸಕ್ತನಿಗೆ ಕಾಮಿನಿಯಾಗಿ ಕಂಡರೆ ಒಬ್ಬ ಪರಿವ್ರಾಜಕನಿಗೆ ಒಳಗೆ ಚೇತನವಿರುವ ಪಂಚಭೂತಗಳ ಸಂಯೋಜನೆಯಂತೆ ಕಂಡುಬರುತ್ತದೆ.
ನಿತ್ಯ ಕಾಲ್ನಡಿಗೆಯಲ್ಲಿ ಸಾಗುವವರಿಗೆ ಅದೇ ಸುಖ. ನಿತ್ಯ ಕಾರಿನಲ್ಲಿ ಸಂಚರಿಸುವವರಿಗೆ ಅದೇ ನಿಜವಾದ ಸುಖ. ಇಬ್ಬರೂ ಒಂದೇ ರೀತಿಯ ಸುಖ ಅನುಭವಿಸುತ್ತಿದ್ದಾರೆ. ಅದು ಅವರವರ ಮನಸ್ಥಿತಿ. ಕಾಲ್ನಡಿಗೆಯಲ್ಲಿ ಸಾಗುವವರಿಗೆ ಆರೋಗ್ಯದ ಸುಖ….. ಕಾರಿನಲ್ಲಿ ಸಂಚರಿಸುವವರಿಗೆ ಬೇಗ ತಲುಪುವ ಸುಖ. ಹಾಗಾಗಿ ಸುಖ ಎಂಬುದು ಅವರವರ ದೃಷ್ಟಿಕೋನದಲ್ಲಿದೆ. ಸುಖವನ್ನು ಹುಡುಕಿಕೊಂಡು ಯಾವುದೋ ವಸ್ತುವಿನ ಹಿಂದೆ ಹೋಗಬಾರದು ಯಾಕೆಂದರೆ ಅದು ಯಾವುದೇ ವಸ್ತುವಿನಲ್ಲಿಲ್ಲ. ಬದಲಾಗಿ ಅದು ನಮ್ಮ ಮನಸ್ಥಿತಿಯಲ್ಲಿದೆ. ಸುಖವೆನ್ನುವುದು ನಮ್ಮ ಮನಸ್ಥಿತಿ
ನಮಗಿಂತ ಕೆಳಗಿನ ಸ್ಥಿತಿಯಲ್ಲಿ ರುವವರನ್ನು ಹೋಲಿಸಿಕೊಂಡಾಗ ಸುಖ ವೆನಿಸುತ್ತದೆ. ನಮಗಿಂತ ಮೇಲಿನ ಸ್ಥಿತಿಯಲ್ಲಿ ರುವವರನ್ನು ಹೋಲಿಸಿಕೊಂಡಾಗ ದುಃಖ ವೆನಿಸುತ್ತದೆ. ಇಬ್ಬರು ಸ್ನೇಹಿತರಿದ್ದರು . ಬಹಳ ಕಾಲದ ನಂತರ ಒಬ್ಬರನ್ನೊಬ್ಬರು ಭೇಟಿಯಾದರು. ಸ್ನೇಹಿತರಲ್ಲೊಬ್ಬ ದೊಡ್ಡ ಮನೆ ಕಟ್ಟಿಕೊಂಡು ಸುಖವಾಗಿದ್ದ. ಗೆಳೆಯನಲ್ಲಿ ಬೇರೆ ವಿಷಯವೇ ಇಲ್ಲ . ಬರೀ ಮನೆಯ ಸುದ್ದಿ. ಕೇಳಿದ ಗೆಳೆಯನಿಗೂ ಸಂತೋಷವಾಯಿತು. ಅದಾಗಿ ಸ್ವಲ್ಪ ಕಾಲದ ನಂತರ ಅದೇ ಗೆಳೆಯ ಮತ್ತೊಮ್ಮೆ ಅಲ್ಲಿಗೆ ಹೋದ. ಆದರೆ ಈ ಬಾರಿ ಆತ ಮೂಲೆ ಸೇರಿದ್ದ. ಮನೆಯ ವಿಷಯವನ್ನೇ ಪ್ರಸ್ತಾಪಿಸಲಿಲ್ಲ. ಆತನ ಹೆಂಡತಿಯಲ್ಲಿ ಕೇಳಿದ… ಏನಾಯ್ತು…? ಏನಾದರೂ ತೊಂದರೆಯಾಯಿತೇ…? ಎಂದು. ಅವಳು ಇಲ್ಲ ಎಲ್ಲವೂ ಹಾಗೆಯೇ ಇದೆ ಆದರೆ ಪಕ್ಕದಲ್ಲಿ ಯಾರೋ ಇದಕ್ಕಿಂತ ದೊಡ್ಡ ಮನೆ ಕಟ್ಟಿದ್ದಾರೆ ಎಂದಳು. ಆಗ ಸ್ನೇಹಿತನಿಗೆ ಪರಿಸ್ಥಿತಿ ಅರ್ಥವಾಯಿತು. ಸುಖ ವೆನ್ನುವುದು ದೊಡ್ಡ ಮನೆಯಲ್ಲಿಲ್ಲ ದೊಡ್ಡ ಮನದಲ್ಲಿದೆ ಎಂದು. ನಮ್ಮ ಮನಸ್ಸನ್ನು ನಮಗೆ ಬೇಕಾದಂತೆ ಇಟ್ಟುಕೊಳ್ಳಲು ಬಂದರೆ ಸದಾ ಸುಖ. ಯಾರಿಗೆ ಕಳೆದುಕೊಳ್ಳಲು ಏನಿಲ್ಲವೋ ಅವನಷ್ಟು ಶ್ರೀಮಂತ ಯಾರೂ ಇಲ್ಲ ಅಥವಾ ಕಳೆದುಕೊಳ್ಳದುದನ್ನು ಯಾರು ಪಡೆದುಕೊಳ್ಳುತ್ತಾನೋ ಅವನು ಪರಮ ಸುಖಿ. ಹಾಗಾಗಿ ಅಂತಹ ಮನಸ್ಥಿತಿ ನಮ್ಮದಾಗಲಿ. ನಮ್ಮ ಮನಸ್ಸಿಗೆ ಅಂತಹ ಪಾಠ ಹೇಳೋಣ. ಇರುವುದರಲ್ಲಿಯೇ ತೃಪ್ತಿ ಯಿಂದಿರಲು ಕಲಿಸೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.