ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಸದ್ಗುರು ಭಟ್ಟ, ಮಂಚಿಕೇರಿ

ಸ್ನೇಹಿತರು ಕಾರಣಗಳಿಗಷ್ಟೇ ಜೊತೆಯಾದರೆ ನಿಶ್ಚಿತ ಕಾರಣ ಮುಗಿದ ನಂತರ ಕಾರಣ ಕೇಳದೇ ಹೊರಟು ಹೋಗುತ್ತಾರೆ. ಕೆಲವೊಮ್ಮೆ ಸ್ನೇಹಿತರು ವಿರುದ್ಧ ಲಿಂಗಗಳ ಬಲವಾದ ಆಕರ್ಷಣೆಯಿಂದ ಆಗುತ್ತಾರೆ. ಆದರೆ ಕೆಲವೊಬ್ಬರು ಮಾತ್ರ ಅವರು ದೇವರೇ ಕಳುಹಿಸಿಕೊಟ್ಟ ಸ್ನೇಹಿತರಂತೆ ಅನಿಸುತ್ತದೆ ನನಗೆ. ಜೀವನದ ನಡುಹಾದಿಯಲ್ಲಿ ಸಿಕ್ಕ ಆತ್ಮೀಯ ಗೆಳೆಯನೊಬ್ಬನನ್ನು ನಿಮ್ಮೆದುರು ಅನಾವರಣಗೊಳಿಸುವ ಮನಸ್ಸು ನನ್ನ ಅಕ್ಷರಕ್ಕೆ. ಸದ್ಗುರುವೇ ಸ್ನೇಹಿತನಾಗಿ ಸಿಕ್ಕ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಸದ್ಗುರು ಭಟ್ಟ ಉತ್ತರಕನ್ನಡ ಜಿಲ್ಲೆ ಯಲ್ಲಾಪುರದ ಮಂಚಿಕೇರಿಯವರು. ನಾರಾಯಣ ಶೇರಗಾರರ ಮುಖಾಂತರ ಮೊದಲು ಪರಿಚಿತರಾದ ಸದ್ಗುರು ಭಟ್ಟ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಅಮರವಾಣಿಗೆ ಸರಿಯಾದ ಅರ್ಥ ತುಂಬಿದವರು.
ಅವತ್ತೊಂದಿನ ‌ಮಂಚಿಕೇರಿಯ ಶಿಬಿರಕ್ಕಾಗಿ ಹೊರಟು ನಿಂತಿದ್ದೆ. ಯಾರ ಮುಖ ಪರಿಚಯವೂ ಇಲ್ಲದ ನನಗೆ ಹಾಸಣಗಿಯ ಹಾದಿ ಹೊಸದಾಗಿತ್ತು. ಹಾಸಣಗಿ ಶಾಲೆಯನ್ನು ತಲುಪಿದ್ದೇ ತಲುಪಿದ್ದು ಅಲ್ಲಿ ಮೊದಲೆದುರಾದವರು ನಾರಾಯಣ ಸರ್….ತಾವೇ ಸ್ವತಃ ಪರಿಚಯ ಮಾಡಿಕೊಂಡು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿ ಕರೆದೊಯ್ದ ಅವರು ಅಲ್ಲಿರುವ ಎಲ್ಲರನ್ನೂ ಪರಿಚಯಿಸಿದರು. ಯಾರಾದರೂ ಯಾಕೆ ಬರಬೇಕು?! ಅವರಿಂದ ನಾವೇನು ಕೇಳುವುದಿದೆ ಹೇಳಿ?! ಒಂದು ಲೆಕ್ಕಕ್ಕೆ ನೋಡಿದರೆ ಅವರಿಗ್ಯಾರಿಗೂ ನನ್ನ ಅವಶ್ಯಕತೆಯೇ ಇಲ್ಲ. ಆತ್ಮೀಯತೆ ಒಂದು ಬಿಟ್ಟರೆ ಅವರಿಗೆ ನನ್ನಿಂದ ತಿಳಿಯಬೇಕಾದ್ದು, ಆಗಬೇಕಾದ್ದು ಏನೂ ಇಲ್ಲ. ಆದರೂ ಅದೆಂತಹ ಪ್ರೀತಿ, ಅಭಿಮಾನ ಅವರಿಗೆ. ಅದು ಅವರ ಸಂಸ್ಕಾರ. ನನಗಿಂತ ದೊಡ್ಡವರು ಅವರು. ನನಗಿಂತ ದೊಡ್ಡವರು ಅವರು.
ಸದ್ಗುರು ಭಟ್ಟರು ಶಿಕ್ಷಕರಾಗಿ ಶಾಲೆಯ ನಾಲ್ಕು ಕೋಣೆಗಷ್ಟೇ ಸೀಮಿತವಾಗಿದ್ದರೆ ಅವರ ಪರಿಚಯ ನನಗಾಗುತ್ತಿರಲಿಲ್ಲವೇನೋ….ಆದರೆ ಅವರು ಅತ್ಯಂತ ಕ್ರಿಯಾಶೀಲರು. ತಾನು ತನ್ನ ನೆಲಕ್ಕೆ,‌ ತನ್ನೂರಿಗೆ, ತನ್ನೂರಿನ ಮಕ್ಕಳಿಗೆ ಏನಾದರೂ ಮಾಡಬೇಕೆಂಬ ಹಂಬಲವಿರುವವರು. ಅದಕ್ಕಾಗಿಯೇ ಮಕ್ಕಳ ಶಿಬಿರ ಏರ್ಪಡಿಸಿ ಬೇಸಿಗೆ ರಜೆಯಲ್ಲೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ನಿಸ್ವಾರ್ಥವಾಗಿ. ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ ಸದ್ಗುರು ಭಟ್ಟ ತಮ್ಮ ಶಾಲೆಯಲ್ಲೂ ವಿಜ್ಞಾನ ಜಾತ್ರೆಯೇ ಮೊದಲಾದ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡವರು. ಜೇನುಕೃಷಿ, ಗಿಡಗಳ ಸಂರಕ್ಷಣೆ ಹೀಗೆ ವಿಭಿನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಉತ್ಸಾಹಿ ಮಾದರಿ ಯುವಕರು. ಸದ್ಗುರು ಭಟ್ಟರು ವಿಭಿನ್ನ ಆಲೋಚನಾ ಶೈಲಿ ಹೊಂದಿದ ಸುಸಂಸ್ಕೃತ ವ್ಯಕ್ತಿಗಳೆಂಬುದರಲ್ಲಿ ಎರಡು ಮಾತೇ ಇಲ್ಲ.
ತಂದೆ ತಾಯಿಗಳೀರ್ವರೂ ಸದ್ಗುರು ಭಟ್ಟರನ್ನು ಬೆಳೆಸಿದ ರೀತಿಯೇ ಇದು. ಅವರ ಪ್ರೀತಿ ಪೂರ್ವಕ ಆದರಾತಿಥ್ಯ ಮರೆಯಲಾರದ್ದು. ಮಡದಿ, ಮುದ್ದಾದ ಮಗ ಶ್ರೀಷ ಸುಖೀ ಸಂಸಾರದ ಸದ್ಗುರು ಭಟ್ಟರಿಗೆ ತಮ್ಮ ತನವನ್ನು ಬೆಳೆಸಿಕೊಳ್ಳುವುದಕ್ಕೆ,ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶವಿದೆ. ಅವರು ಬೆಳೆಯಬೇಕು. ಇನ್ನಷ್ಟು ಮತ್ತಷ್ಟು.
ಸದ್ಗುರು ಭಟ್ಟರು ಒಮ್ಮೆ ಸಿಕ್ಕ ಮೇಲೆ ನಾವಿಬ್ಬರೂ ಮತ್ತೆ ದೂರವಾಗಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ಮಾತನಾಡುತ್ತಾ ಒಟ್ಟಾಗಿಯೇ ಬದುಕಿನ ದಾರಿಯನ್ನು ಕ್ರಮಿಸುತ್ತಿದ್ದೇವೆ. ಈರ್ಷೆ ಮತ್ಸರಗಳ ಮಾತೇ ಇಲ್ಲ ಇಲ್ಲಿ. ನನ್ನ ಜೊತೆ ಅವರು ಅವರ ಜೊತೆಗೆ ನಾನು. ಸಾಗಬೇಕು ಮತ್ತಷ್ಟು ದೂರ. ಇನ್ನಷ್ಟು ದೂರ.
ನನ್ನನ್ನು ಅಪಾರವಾಗಿ ಪ್ರೀತಿಸಿ ಗೌರವಿಸುವ ಸದ್ಗುರು ಭಟ್ಟರ ಮಗನ ಚೂಡಾಕರ್ಮಕ್ಕೂ ಹೋಗಿ ಉಪನ್ಯಾಸ ಬಿಗಿದು ಬಂದಿದ್ದೇನೆ. ಎಲ್ಲೆಲ್ಲಿಯ ಜನರು ಎಲ್ಲೆಲ್ಲಿಯೋ ಭೇಟಿಯಾಗುತ್ತಾರೆ. ಕೆಲವರಂತೂ ಮತ್ತೆ ಮರೆಯದ ಹಾಗೆ ಗಟ್ಟಿ ನಿಂತು ಬಿಡುತ್ತಾರೆ. ಮನುಷ್ಯರನ್ನು ಹಚ್ಚಿಕೊಂಡರೆ ತೀರಾ ಹಚ್ಚಿಕೊಂಡು ಬಿಡುತ್ತೇನೆ ನಾನು. ಒಂದು ಲೆಕ್ಕಕ್ಕೆ ಅತಿಯಾದ ವ್ಯಾಮೋಹವೂ ಅತಿಯಾದ ದುಃಖವನ್ನು ಕೊಡುತ್ತದೆ ಎಂಬುದು ತಿಳಿದಿದ್ದೂ ನನ್ನ ಸ್ನೇಹಿತರನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸಾಗುವುದಿಲ್ಲ.
Airtel sim ಗೆ Airtel network ಮಾತ್ರ connect ಆಗುತ್ತದೆ. BSNL sim ಗೆ BSNL network ಮಾತ್ರ connect ಆಗುತ್ತದೆ. ಹಾಗೆಯೇ ಸ್ನೇಹ ಕೂಡ. ಎಲ್ಲರ ಹೃದಯಗಳಿಗೂ ಎಲ್ಲಾ ಹೃದಯಗಳೂ ಇಷ್ಟವಾಗುವುದಿಲ್ಲ. ಕೆಲವೊಮ್ಮೆ network ಕೈಕೊಡುವುದೂ ಇರುತ್ತದೆ. ? ನಮ್ಮಿಬ್ಬರ sim card ಒಂದೇ ತರಹದ್ದು.
ಸದ್ಗುರು ಭಟ್ಟರ ಸ್ವಭಾವ ತುಂಬಾ ಆಪ್ತವಾದದ್ದು. ಕುಟುಂಬದವರ, ಬಂಧುಗಳ, ಸ್ನೇಹಿತರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ಬಹಳ ಅಪರೂಪದ್ದು. ವಿದ್ಯಾರ್ಥಿಗಳು ಎಂದರಂತೂ ಅವರಿಗೆ ಜೀವ. ಅರ್ಹವಾಗಿಯೇ ಅವರಿಗೆ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಅನೇಕ ಶೈಕ್ಷಣಿಕ ತರಬೇತಿಗಳಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
ನನ್ನ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸುವ ಸದ್ಗುರು ಭಟ್ಟರಿಗೆ ಒಳಿತಾಗಬೇಕೆಂದು ನಾನು ದಿನವೂ ಪ್ರಾರ್ಥಿಸುತ್ತೇನೆ. ಕೊಡುವುದೇನು ಕೊಂಬುದೇನು ಒಲವು, ಸ್ನೇಹ, ಪ್ರೇಮ ಎಂಬಂತೆ ನಮ್ಮ ಸ್ನೇಹ ವ್ಯಾವಹಾರಿಕತೆಯನ್ನು ಮೀರಿದ ಸ್ನೇಹ.
ಬದುಕೇ ಹಾಗೆ. ಕಳೆದವರ ಬಗ್ಗೆ ಎಂದೂ ದುಃಖಿಸಬೇಡಿ. ದೇವರು ನಿಮಗೆ ಅದಕ್ಕಿಂತ ಉತ್ತಮವಾದುದನ್ನೇ ಮುಂದೆ ಇಟ್ಟಿದ್ದಾನೆ ಎನ್ನುವ ಆಶಾವಾದದಲ್ಲಿ ಬದುಕಿ. ಪ್ರೀತಿ ಸ್ನೇಹಗಳ ನಾಟಕವಾಡಿ ನಮ್ಮಿಂದ ಬಹುಬೇಗ ದೂರಾಗುವ ಜನ ಎದೆಯಲ್ಲಿ ನೋವಿನ ಪಳೆಯುಳಿಕೆಗಳನ್ನಷ್ಟೇ ಬಿಟ್ಟು ಹೋಗುತ್ತಾರೆ. ಆದರೆ ಇಂತಹ ಜನ ಸುಟ್ಟ ಎದೆಯಂಗಳದಲ್ಲೂ ಸ್ನೇಹದ ಗಿಡ ಚಿಗುರಿಸಿ ಪ್ರೀತಿಯ ಹೂವರಳಿಸುತ್ತಾರೆ. ಸದ್ಗುರು ಭಟ್ಟರ ಅವಿಶ್ರಾಂತ ಕಾರ್ಯಚಟುವಟಿಕೆಗಳನ್ನು ನಾನು ಮನಸಾ ಪ್ರೋತ್ಸಾಹಿಸುತ್ತೇನೆ. ಶಾರೀರಿಕ ಅಂದ ಚಂದಗಳೆಲ್ಲ ಬಹಳ ಕಾಲ ನಿಲ್ಲುವುದಲ್ಲ. ಮನಸ್ಸಿನಿಂದ ಚಂದವಾಗಿರಬೇಕೆನ್ನುವವರಿಗೆ ವಯಸ್ಸಿನ ಮಿತಿಯೂ ಇಲ್ಲ. ಬಂಧವೂ ಇಲ್ಲ. ಅಯ್ಯೋ ಎಂದ ಕಾಲಕ್ಕೂ ಸದ್ಗುರು ಭಟ್ಟರಂಥ ಅಭಿಮಾನ ಪಡೆದಿದ್ದೇನೆಂದರೆ ಅದು ಬಹು ಜನ್ಮಗಳ ಪುಣ್ಯವೆಂದು ನಾನಾದರೂ ಭಾವಿಸುತ್ತೇನೆ. ಸದ್ಗುರುವಿನ ಸತ್ಕೀರ್ತಿ ದಿಗ್ದಿಗಂತ ಹರಡಲಿ. ಅವರ ಸತ್ಸಂಗ ನನ್ನಲ್ಲೂ ಹೊಸ ಉತ್ಸಾಹ ಚಿಮ್ಮಿಸುತ್ತಲೇ ಇರಲಿ.
ಸದ್ಗುರು ಶ್ರೀಧರರ ಆಶೀರ್ವಾದ ಸದ್ಗುರು ಭಟ್ಟ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಸಿನಿಮಾಕ್ಕೆ ಬಣ್ಣ ಹಚ್ಚಿದ ವೀರೇಂದ್ರ ಹೆಗ್ಗಡೆ..!

ಸದ್ಗುರು ಭಟ್ಟರಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 99453 71563

??????⚫⚪???????⚫⚪?????

RELATED ARTICLES  ಅಂಕೋಲಾದಲ್ಲಿ ಮೋದಿ ಮೋಡಿ..!