ಬದುಕಿನ ಬಹುದೊಡ್ಡ ಬಾಧೆ ಯಾವುದು?…. ಬದುಕಿನಲ್ಲಿ ಭಯಕ್ಕಿಂತ ದೊಡ್ಡ ಬಾಧೆ ಯಾವುದೂ ಇಲ್ಲ. ಉದಾಹರಣೆಗೆ ಸಾವು ಒಂದು ಕ್ಷಣದ ವೇದನೆಯಾದರೂ ಸಾವಿನ ಭಯ ಜೀವನ ಪರ್ಯಂತ ಇರುವ ವೇದನೆ. ಹೀಗೆ ಭೀತಿಯಾದಾಗ ನಮ್ಮ ಸ್ವಾಭಾವಿಕ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತೇವೆ. ಮನೋಬಲ ಕುಸಿದಾಗ ಮಾಡಲು ಸಾಧ್ಯವಾದದ್ದನ್ನೂ ನಾವು ಮಾಡುವುದಿಲ್ಲ. ಒಬ್ಬ ವಿದ್ಯಾರ್ಥಿ ಪರೀಕ್ಷೆಗಾಗಿ ತುಂಬಾ ಓದಿರುತ್ತಾನೆ. ಪುಸ್ತಕವನ್ನು ಉರು ಹೊಡೆದಿರುತ್ತಾನೆ. ಆದರೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಲ್ಲಿ ವಿಫಲನಾಗುತ್ತಾನೆ. ಅದಕ್ಕೆ ಕಾರಣ ಪರೀಕ್ಷೆಯ ಬಗ್ಗೆ ಅವನಲ್ಲಿರುವ ಭಯ.

ಭಯ ಒಂದು ರೀತಿಯಲ್ಲಿ ಭಗವಂತನ ವರ ಆದರೆ ನಾವದನ್ನು ಶಾಪ ಅಂತ ತಿಳಿದಿದ್ದೇವೆ. ಸಿದ್ಧತೆಯ ಪ್ರಕ್ರಿಯೆಗೆ ಭಯವೆಂದು ಹೆಸರು. ಅದು ಮುಂಬರುವ ಅಪಾಯ ಎದುರಿಸಲು ನಮ್ಮನ್ನು ಸಿದ್ಧಪಡಿಸುತ್ತದೆ. ಭಯ ಹದದಲ್ಲಿ ಉಂಟಾಗಬೇಕು. ಆಗ ಮುಂದಿನದನ್ನು ಸ್ವೀಕರಿಸಲು ನಾವು ಸಿದ್ಧರಾಗುತ್ತೇವೆ. ಕೆಲವೊಂದು ಭಯಗಳು ನಮಗೆ ಒಳಿತನ್ನು ಉಂಟುಮಾಡುತ್ತವೆ. ನಮಗೆ ಪಾಪದ ಭಯ ಬೇಕು. ದುಷ್ಟರಿಗೆ, ಕ್ರೂರಿಗಳಿಗೆ, ಪಾಪಿಗಳಿಗೆ ಯಾವಾಗಲೂ ಭಯವಿರುತ್ತದೆ. ಯಾಕೆಂದರೆ ಪಾಪದ ಪಕ್ಕದಲ್ಲಿ ಭಯವಿರುತ್ತದೆ. ತಪ್ಪು ಮಾಡದವರಿಗೆ ಯಾವುದೇ ಭಯವಿಲ್ಲ. ಯಾಕೆಂದರೆ ಭಯ ವೆನ್ನುವುದು ತಪ್ಪಿನ ಮೂಲದಿಂದಲೇ ಬಂದಿದೆ.

ಎಲ್ಲಕ್ಕಿಂತ ದೊಡ್ಡ ಭಯ ಅದು ಸಾವಿನ ಭಯ. ಮರಣದಿಂ ಮುಂದೇನು..? ಪ್ರೇತವೋ? ಭೂತವೋ?.. ಪುನರ್ಜನ್ಮವೋ?… ಏನೋ ತಿರುಗಿ ಬಂದವರಿಲ್ಲ ವರದಿ ತಂದವರಿಲ್ಲ ಅದಕ್ಕಾಗಿಯೇ ನಮಗೆ ಸಾವಿನ ಭಯ. ಮರಣದ ನಂತರ ಏನು ಅಂತ ಗೊತ್ತಿಲ್ಲದಿರುವುದರಿಂದ ನಮಗೆ ಮರಣವೆಂದರೆ ಭಯ.
ನೆಲದ ಬೇಸಾಯ ತಾನ್ ಒಳಿತಾಗಿರೆ ನಿನಗೆ ಫಲವದೆಂತಹುದೆಂಬ ಶಂಕೆ ಗೆಡೆಯುಂಟೇ? ಎಂಬ ಈ ಕಗ್ಗದ ಸಾಲಿನಲ್ಲಿ ಎಲ್ಲ ಭಯಕ್ಕೂ ಸಮಾಧಾನವಿದೆ. ಬೇಸಾಯ ಸರಿಯಾಗಿ ಮಾಡಿದ್ದರೆ ಫಲದ ಬಗ್ಗೆ ಭೀತಿ ಇರುವುದಿಲ್ಲ. ಬೇಸಾಯ ಸರಿಯಾಗಿ ಮಾಡದಿದ್ದರೆ ಫಲದ ಬಗ್ಗೆ ಸದಾ ಭೀತಿ ಇರುತ್ತದೆ. ಹಾಗೆಯೇ ನಾವು ಬದುಕಿನಲ್ಲಿ ಸರಿಯಾದ ಕಾರ್ಯವೆಸಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ. ಬದುಕಿನಲ್ಲಿ ಸಲ್ಲದ ಕಾರ್ಯ ಮಾಡಿದ್ದರೆ ಮರಣದ ಭಯವೂ ಸದಾ ಕಾಡುತ್ತಿರುತ್ತದೆ. ಮರಣ ವೆನ್ನುವುದು ಪ್ರಮೋಷನ್ ಅಂತಾದರೆ ನಮಗೆ ಭಯವೆನ್ನುವ ಎಮೋಷನ್ ಇರುವುದಿಲ್ಲ ಬದುಕಿರುವಾಗ ಮಾಡಬೇಕಾದುದನ್ನು ಮಾಡದೆ ಇರುವುದರಿಂದಲೇ ನಮಗೆ ಸಾವಿನ ಭಯ.

RELATED ARTICLES  ಅಜಾತಶತ್ರು ಭಾವನಿಗೊಂದು ಅಶ್ರು ತರ್ಪಣ.

ಪರವೂರಿಗೆ ಕಾರ್ಯನಿಮಿತ್ತ ತೆರಳುತ್ತೇವೆ. ಬೆಳಿಗ್ಗೆ ಎಂಟಕ್ಕೆ ಹೋಗಿ ರಾತ್ರಿ ಹತ್ತಕ್ಕೆ ಮರಳಿ ಮನೆ ಸೇರುವುದು ಎಂಬ ಯೋಚನೆ ಯೋಜನೆ ಹಾಕಿಕೊಂಡಿರುತ್ತೇವೆ. ಆದರೆ ಹೋದ ಕೆಲಸ ಮಾಡದೆ ಸಮಯ ವ್ಯರ್ಥ ಮಾಡಿದರೆ ನಮಗೆ ಮನೆಗೆ ತೆರಳುವ ಸಮಯ ಬಂದಾಗ ಉದ್ವೇಗ ಉಂಟಾಗುತ್ತದೆ. ಆತಂಕ ಉಂಟಾಗುತ್ತದೆ. ಮನೆಗೆ ತೆರಳುವ ವಾಹನ ತಪ್ಪುತ್ತದೇನೋ ಎಂಬ ಆತಂಕವದು‌. ಅದೇ ಹೋದ ಕೆಲಸವನ್ನು ಸಮಯಕ್ಕಿಂತ ಮುಂಚಿತವಾಗಿ ಸಮರ್ಪಕವಾಗಿ ಮುಗಿಸಿದ್ದರೆ ನಾವು ಮುಂಚಿತವಾಗಿಯೇ ಬಂದು ವಾಹನಕ್ಕಾಗಿ ಕಾಯುತ್ತೇವೆ. ನಿರಾತಂಕವಾಗಿ ಮನೆ ಸೇರಿಕೊಳ್ಳುತ್ತೇವೆ. ಹಾಗೆಯೇ ನಾವು ಭೂಮಿಗೆ ಯಾತಕ್ಕಾಗಿ ಬಂದಿದ್ದೇವೆ?.. ನಮ್ಮ ಕೆಲಸವೇನು?…. ಮಾಡಬೇಕಾದುದೇನು ಮಾಡಬಾರದ್ದು ಏನು… ಎಂಬುದರ ಸ್ಪಷ್ಟ ಕಲ್ಪನೆ ಇರುವವರು ಸಾರ್ಥಕ ಜೀವನವನ್ನು ನಡೆಸುತ್ತಾರೆ. ಅಂಥವರಿಗೆ ಮೃತ್ಯುವಿನ ಭೀತಿ ಇರುವುದಿಲ್ಲ. ಅವರು ವಾಹನಕ್ಕೆ ಕಾದ ಹಾಗೇ ಸಾವಿಗಾಗಿ ಕಾಯುತ್ತಿರುತ್ತಾರೆ. ಸಾವಿನ ಪ್ರತೀಕ್ಷೆಯಲ್ಲಿರುತ್ತಾರೆ. ನಮ್ಮೆಲ್ಲರ ಪ್ರಧಾನ ದೌರ್ಬಲ್ಯವೆಂದರೆ ನಾವು ಯಾತಕ್ಕಾಗಿ ಭೂಮಿಗೆ ಬಂದಿದ್ದೇವೆ ಎಂಬುದನ್ನು ಮರೆತಿರುವುದು ಶರೀರ ಬಂದಿದ್ದು ಈ ಶರೀರ ಮತ್ತೆ ಬರದೇ ಇರುವಂತೆ ಮಾಡಿಕೊಳ್ಳಲು ಅಂದರೆ ಮುಕ್ತಿಗಾಗಿ. ಆದರೆ ಅದನ್ನು ಮರೆತು ನಾವು ಹೇಗೇಗೋ ವರ್ತಿಸುತ್ತಿದ್ದೇವೆ. ಭಗವಂತ ಕೊಟ್ಟ ಇಂತಹ ಅಪರೂಪದ ಜನ್ಮಕ್ಕೆ ಬಂದ ನಾವು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಸಾವಿನ ಭಯ ನಮಗೆ ಸದಾ ಕಾಡುತ್ತದೆ.

RELATED ARTICLES  ರಾಘವೇಶ್ವರ ಶ್ರೀಗಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರಕ್ಕೆ ಬ್ರೆಕ್!

ಧರ್ಮ ಎನ್ನುವ ಪದ ನಾವು ತಪ್ಪು ಮಾಡದಂತೆ ತಡೆಯುತ್ತದೆ. ಒಬ್ಬ ರಾಜ ಪುರೋಹಿತರಿದ್ದರು. ಅವರಿಗೆ ಮಗ ಹುಟ್ಟಿದ. ಅವನ ಜಾತಕ ನೋಡಿದಾಗ ರಾಜ ಪುರೋಹಿತರಿಗೆ ಆತಂಕವಾಯಿತು. ಮಗನಿಗೆ ದೊಡ್ಡ ಕಳ್ಳನಾಗುವ ಯೋಗವಿತ್ತು. ಏನು ಮಾಡಬೇಕೆಂದು ತಿಳಿಯದೆ ಒಂದು ನಿರ್ಧಾರಕ್ಕೆ ಬಂದರು ರಾಜಪುರೋಹಿತರು. ಮಗನಿಗೆ ಪ್ರತಿನಿತ್ಯ ಒಂದೇ ವಿಷಯ ಪಾಠ ಮಾಡುವುದೆಂದು. ಯಾವ ಯಾವ ಕಳ್ಳತನಕ್ಕೆ ಯಾವ ಯಾವ ಶಿಕ್ಷೆ ನರಕದಲ್ಲಿ ಕಾದಿದೆ ಎಂದು ಪ್ರತಿನಿತ್ಯ ಪಾಠ ಮಾಡುತ್ತಾ ಬಂದರು. ದೊಡ್ಡವನಾದ ಮಗ ಒಂದು ದಿನ ಕಳ್ಳತನ ಮಾಡಿಯೇ ಬಿಟ್ಟ. ಅದು ರಾಜನ ಕೋಶದಲ್ಲಿ. ದೊಡ್ಡ ಸುದ್ದಿಯಾಯಿತು. ರಾಜ ಬಂದು ಕೋಶ ನೋಡಿದರೆ ಎಲ್ಲ ವಸ್ತುಗಳು ಸ್ಥಾನ ಪಲ್ಲಟವಾಗಿದ್ದವು. ಆದರೆ ಯಾವುದೂ ಕಳ್ಳತನ ವಾಗಿರಲಿಲ್ಲ. ಆದರೆ ಕೋಶದ ಒಂದು ಮೂಲೆಯಿಂದ ಬೀರಿದ್ದ ಬೂದಿ ಒಂದು ದಾರಿಯನ್ನು ಸೃಷ್ಟಿಸಿತ್ತು. ಆ ದಾರಿ ರಾಜಪುರೋಹಿತರ ಮನೆಗೆ ತಲುಪಿತ್ತು. ಪುರೋಹಿತರ ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಹೇಳಿದ ಇದು ನನ್ನ ಅಪ್ಪನ ಕರ್ಮ….! ನಾನು ಯಾವುದನ್ನು ಕಳ್ಳತನ ಮಾಡಬೇಕೆಂದುಕೊಂಡರೂ ಅಪ್ಪನ ಪಾಠ ನೆನಪಾಗುತ್ತಿತ್ತು. ಇದನ್ನು ಕದ್ದರೆ ಇಂಥ ಶಿಕ್ಷೆ ನರಕದಲ್ಲಿ ಎಂದಿದ್ದು . ಕೊನೆಗೆ ಹತಾಶೆಯಲ್ಲಿ ಮೂಲೆಯಲ್ಲಿದ್ದ ಬೂದಿ ಚೀಲ ಹೊತ್ತು ಸಾಗಿದೆ ಎಂದ. ರಾಜನಿಗೆ ತನ್ನ ಪುರೋಹಿತರ ಬಗ್ಗೆ ತುಂಬಾ ಗೌರವ ಬಂತು. ಅವರ ಬೋಧನಾ ಕುಶಲತೆಯನ್ನು ಕೊಂಡಾಡಿದ. ಕಾನೂನು ಮಾಡದ ಕೆಲಸವನ್ನು ಧರ್ಮ ಮಾಡುತ್ತದೆ….ಪಾಪ ಪ್ರಜ್ಞೆ ಮಾಡುತ್ತದೆ. ಆ ಕುರಿತು ಜಾಗೃತಿ ಮೂಡಿಸಬೇಕು ಅಷ್ಟೆ. ಮಾಡಬೇಕಾದ ಕೆಲಸ ಮಾಡು….ಮಾಡಬಾರದ ಕೆಲಸವನ್ನು ಮಾಡಬೇಡ ಎಂಬುದನ್ನು ಧರ್ಮ ಸಾರಿ ಹೇಳುತ್ತದೆ ಕೇಳುವ ಮನ ನಮ್ಮದಾಗಿರಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.